Monday, December 24, 2012

ಮದುವೆ ಮನೆ

ಮದುವೆ ಮನೆ ಅಂದರೆ ಅದೇನು ಸಂಭ್ರಮ, ಸಡಗರ.. ಎರಡು ಮೂರು ದಿನ ಮುಂಚಿತವಾಗಿ ಹತ್ತಿರದ ನೆಂಟರಿಷ್ಟರೆಲ್ಲಾ ಮದುವೆ ಮನೆಯಲ್ಲಿ ಸೇರುತ್ತಿದ್ದರು. ಮನೆಯವರಿಗಷ್ಟೇ ಅಲ್ಲ ಬಂದ ಎಲ್ಲರಿಗೂ ಒಂದೇ ತೆರನಾದ ಸಡಗರದಲ್ಲಿ, ಮದುವೆ ಹೇಗಾಗುತ್ತದೋ? ಬೀಗರ ಉಪಚಾರದಲ್ಲಿ ಏನಾದರೂ ಕಡಿಮೆ ಆಗುವುದೋ? ಎಂಬ ಆತಂಕ ಇರುತ್ತಿತ್ತು. ಎಲ್ಲರೂ ತಮ್ಮ ಕೈಲಾಗುವ ಕೆಲಸಗಳನ್ನು ಗಡಿಬಿಡಿಯಲ್ಲಿ ಮಾಡುತ್ತಿದ್ದರು.

ಗಂಡಸರು ಮನೆಯ ಅಂಗಳದಲ್ಲಿ ಚಪ್ಪರ ಹಾಕುವುದು, ಅಂಗಳದ ನೆಲ ಮಟ್ಟಸ ಮಾಡುವುದು ಹೀಗೆ ಮುಂತಾಗಿ ಕೆಲಸದಲ್ಲಿ ತೊಡಗಿರುತ್ತಿದ್ದರು. ಅದು ಹೇಗೋ ಮದುವೆ ಮನೆ ಅಂದಾಕ್ಷಣ ಕೆಲಸಗಳೆಲ್ಲವೂ ಬಾಕಿ ಇದ್ದೇ ಇರುತ್ತವೆ. ಉಟಕ್ಕೆ ಬಾಳೆ ಎಲೆ ಕೊಯ್ಯುವುದು, ವೀಳ್ಯದೆಲೆ ಕೊಯ್ಯುವುದು ಮುಂತಾದ ಕೆಲಸಗಳಿಗೆ ಕೆಲವರು ನಿಷ್ಣಾತರು ಮುಂದಾಗಿ ಒಟ್ಟಾದ ಹುಡುಗರನ್ನು ಕರೆದುಕೊಂಡು ತೋಟಕ್ಕೆ ಹೋಗುತ್ತಿದ್ದರು. ಒಟ್ಟಾಗಿ ಇಂತಹ ಕೆಲಸ ಕಾರ್ಯಗಳಲ್ಲಿ ತೊಡಗಿರುವಾಗ ಹೇಳುವ ಹಾಸ್ಯ ಚಟಾಕಿಗಳು, ಕಥೆಗಳು, ಕೆಲವೊಮ್ಮೆ ಆ ಕ್ಷಣದಲ್ಲಿ ಉಂಟಾದ ಹಾಸ್ಯ ಪ್ರಸಂಗ ತುಂಬಾ ಮಜವಾಗಿರುತ್ತಿದ್ದವು. ವಯಸ್ಸಿನಲ್ಲಿ ಹಿರಿಯರಾದವರು ಅವರ ಯೌವ್ವನದಲ್ಲಿ ನಡೆದ ಯಾವುದೋ ಮದುವೆಯ ಕಥೆಯನ್ನು ಬಿಡಿಸಿ ಬಿಡಿಸಿ ಹೇಳುತ್ತಿದ್ದರು. ಇಂತಹ ಸಮಯದಲ್ಲಿ ಇಡೀ ಮನೆಯೇ ಏಕೆ ಊರೇ ಸಂತೋಷದ ಅನುಭವಕ್ಕೀಡಾಗುತ್ತಿರುತ್ತದೆ.

ಹೆಂಗಸರು ಕಜ್ಜಾಯದ ತಯಾರಿ, ಪನಿವಾರದ ತಯಾರಿಯಲ್ಲಿ ತೊಡಗಿರುತ್ತಾರೆ. ಹಲವು ಹೆಂಗಸರು ಒಟ್ಟೊಟ್ಟಿಗೆ ಮಾತನಾಡುತ್ತ, ನಗುತ್ತಿರುತ್ತಾರೆ. ಹಾಗಾಗಿ ಅಲ್ಲಿಯೂ ಸಂತೋಷ ಇದ್ದೇ ಇರುತ್ತದೆ ಎನ್ನಬಹುದು. ಸೇರಿರುವ ಮಕ್ಕಳಂತೂ ಕಂಬ ಕಂಬ ಆಟ, ಡಬ್ಬಾ ಡುಬ್ಬಿ ಆಟ ಮುಂತಾದ ಮಕ್ಕಳ ಸಂಕ್ಯೆಯನ್ನು ಬಯಸುವ ಆಟಗಳನ್ನು ಆಡುತ್ತಿದ್ದರು.

ಅಂಗಳದ ಚಪ್ಪರಕ್ಕೆ ಮೇಲ್ಗಟ್ಟು ಕಟ್ಟುವುದು ಮಾತ್ರ ಮದುವೆಯ ಹಿಂದಿನ ರಾತ್ರಿಯೇ. ಅದೊಂದು ಶಾಸ್ತ್ರವೋ ಎಂಬಷ್ಟು ಚಾಲ್ತಿಯಲ್ಲಿತ್ತು. ಮೇಲ್ಗಟ್ಟಿಗೆ ಗುಂಡು ಸೂಜಿ ಚುಚ್ಚುವುದು, ಸೀರೆಯಲ್ಲಿ ಹೂವು ಮಾಡುವುದು ಎಲ್ಲ ಸ್ವಲ್ಪ ತಾಳ್ಮೆ ಮತ್ತು ಕೌಶಲ್ಯ ಬಯಸುವ ಕಲೆ. ಅದಕ್ಕೆಂದೇ ಬಂದ ತಜ್ಞರು ಉಮೆದುವಾರರಿಗೆ ಹೇಳಿಕೊಡುತ್ತ ರಾತ್ರಿಯೆಲ್ಲಾ ಮೇಲ್ಗಟ್ಟು ಕಟ್ಟುತ್ತಿದ್ದರು. ಮೇಲ್ಗಟ್ಟು ಕಟ್ಟಲು ಸೀರೆ ಒಟ್ಟು ಮಾಡುವಾಗ ಅಂತೂ ಅನೇಕ ಮಾಂಸಹಾರಿ ಹಾಸ್ಯ ಚಟಾಕಿಗಳನ್ನು ಕೇಳಿ ಪಾವನವಾಗಬಹುದಿತ್ತು.

ಬೆಂಗಳೂರಿಗೆ ಬಂದು ೬ ವರ್ಷವಾಯಿತು. ಈ ಸಮಯದಲ್ಲಿ ನನ್ನ ಮದುವೆ ಒಂದನ್ನು ಬಿಟ್ಟು ಬೇರೆ ಯಾವ ಮದುವೆ ಮನೆಯನ್ನೂ ನೋಡಿಲ್ಲ. ಮೊನ್ನೆ ಮೊನ್ನೆ ನಡೆದ ನನ್ನ ಆತ್ಮೀಯ ಸ್ನೇಹಿತನ ಮದುವೆಗೂ ಒಂದೇ ದಿನ ನಾನು ಹೋಗಿದ್ದು, ಅದೂ ಕಲ್ಯಾಣ ಮಂಟಪಕ್ಕೆ. "ನಿನ್ನ ಮದುವೆಯಲ್ಲಿ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ" ಎಂದು ಯಾವಾಗಲೋ ಮಾತಾಡಿಕೊಂಡಿದ್ದು ಅವತ್ತು ಮದುವೆಯಲ್ಲಿ ನನ್ನ ಕಿವಿಯೊಳಗೆ ಮತ್ತೆ ಮತ್ತೆ ಕೇಳಿಸುತ್ತಿತ್ತು.

ಈಗಿನ ಮದುವೆ ಮನೆಗಳೂ ನಾನು ಮೇಲೆ ಹೇಳಿದಂತೆ ಇರದೇ ಇರಬಹುದು. ಪರಿಸ್ಥಿತಿಯ, ಈಗಿನ ಕಾಲಮಾನದ ಜಂಜಾಟಗಳ ಹೊಡೆತಕ್ಕೆ ಸಿಕ್ಕಿ ಅವೂ ಸೊರಗಿ ಹೋಗಿವೆ. ಆದರೆ ನಾನು ಹೋಗಿ ಮದುವೆ ಮನೆಯಲ್ಲಿ ಭಾಗಿಯಾಗಿದ್ದರೆ ಸಮಾಧಾನವಾದರೂ ಇರುತ್ತಿತ್ತು. ಈಗಿನ ಕಲ್ಯಾಣ ಮಂಟಪದ ಮದುವೆಗಳಲ್ಲಿ ಊಟದ ಸಮಯದಲ್ಲೊಂದು ಜನರಿರುತ್ತಾರೆ, ಮುಂಚೂ ಇರುವುದಿಲ್ಲ ಕೊನೆಗೂ ಇಲ್ಲ.

ಇನ್ನು ಹೇಗಾದರೂ ಮಾಡಿ ಪುರುಸೊತ್ತು ಮಾಡಿಕೊಂಡು ಆತ್ಮೀಯರ ಮದುವೆಗೆ ಹೋಗಬೇಕೆಂದು ನಿರ್ಧರಿಸಿದ್ದೇನೆ.

Wednesday, December 12, 2012

ಅಂಚೆ ಮತ್ತು ತಂತಿ


ಪಕ್ಕದ ಮನೆಯಲ್ಲೇ ಪೋಸ್ಟ್ ಆಫೀಸ್ ಇರುವುದರಿಂದ ಪೋಸ್ಟ್ ಆಫೀಸಿನ, ಪೋಸ್ಟ್ ಮಾಸ್ಟರ, ಪೋಸ್ಟ್ ಮ್ಯಾನ್ ನ ಗಂಭೀರತೆಗಳೇ ನನಗೆ ಅರ್ಥವಾಗಿರಲಿಲ್ಲ. ನನ್ನ ಮೂಲಭೂತ ಪ್ರಶ್ನೆಯೇನಾಗಿತ್ತು  ಅಂದರೆ "ನಮ್ಮಸುತ್ತಲಿನ ಊರಿನ  ಪೋಸ್ಟ್ ನವಿಲ್ಗಾರ ಆಗಿತ್ತು. ಆದರೆ ಪೋಸ್ಟ್ ಆಫೀಸ್ ಇರುವುದು ಸುತ್ಮನೆಯಲ್ಲಿ" ಇದು ಹೇಗೆ ಸಾಧ್ಯ? ಸಮಾಧಾನಕರ  ಉತ್ತರ ಇವತ್ತಿಗೂ ಸಿಕ್ಕಿಲ್ಲ. ಮೊದಲಿನ ಪೋಸ್ಟ್ ಮ್ಯಾನ್ ನ ಹತ್ತಿರ ಇದೇ ಪ್ರಶ್ನೆ ಕೇಳಿದಾಗ "ಹಿ ಹಿ, ಅದು ಹಾಂಗೆಯ, ನಿಂಗೆ ಗೊತ್ತಾಗ್ತಿಲ್ಲೆ" ಎಂಬ ಉತ್ತರ!!

ಪಕ್ಕದಮನೆಯ ಶಿರಬಳೆಗೆ ಪೋಸ್ಟ್ ಬಾಕ್ಸ್ ತೂಗುಹಾಕಿದ್ದರೂ, ಯಾರೂ ಅದರಲ್ಲಿ ಪತ್ರ ಹಾಕಿದ್ದನ್ನು ನೋಡಿಲ್ಲ. ಪತ್ರಗಳಿದ್ದರೆ ಅದನ್ನು ಪಕ್ಕದ ಮನೆಯವನೆ ಆದ ಪೋಸ್ಟ್ ಮಾಸ್ತರನ ಹತ್ತಿರ ಕೊಟ್ಟು ಹೋಗುವರು. ಪೋಸ್ಟ್ ಮ್ಯಾನ್ ಆಗಿದ್ದು ಈಗ ನಿವೃತ್ತಿ ಆಗಿರುವ ಹಳೆಯ ಪೋಸ್ಟ್ ಮ್ಯಾನ್, ಯಾವತ್ತೂ ಆ ಡಬ್ಬಿಯನ್ನು ತೆಗೆದು ನೋಡಿದ್ದಿಲ್ಲ. ಕೆಲವೊಮ್ಮೆ ಅನುಮಾನದಿಂದ ಅಲುಗಿಸಿ ನೋಡಿ, ಪತ್ರಗಳಿಲ್ಲವೆಂದು ಹಾಗೇ ಬಿಟ್ಟದ್ದಿದೆ. ಬೆಳಿಗ್ಗೆ ನಾವು ಶಾಲೆಗೆ ಹೊರಡುವಾಗ ಕೇಳುವ "ಟಕ್ ಟಕ್  ಟಕ್ " ಎಂಬ ಪತ್ರಗಳಿಗೆ ಚಪ್ಪೆ ಹೊಡೆಯುವ ಸದ್ದು ಏನೋ ಕುತೂಹಲ ಕೆರಳಿಸುತ್ತಿತ್ತು. ಪತ್ರಗಳ ಚೀಲಕ್ಕೆ ಅರಳಿನ ಸೀಲ್ ಹಾಕುವುದನ್ನು ನೋಡಲು ಏನೋ ಒಂತರಾ ಕುತೂಹಲ.

ಮರದ ಪೆಟ್ಟಿಗೆ, ಒಂದು ಮೇಜು, ಕುರ್ಚಿ ಇವೇ ಅಂಚೆ ಮತ್ತು ತಂತಿ ಕಛೇರಿಯ ಆಸ್ತಿ. ಮರದ ಪೆಟ್ಟಿಗೆಯಲ್ಲಿ ಒಂದು ಸಣ್ಣ ತಕ್ಕಡಿ (ಪತ್ರಗಳನ್ನು ತೂಗುವುದಕ್ಕೆ, ಅದು ಎಷ್ಟು ಸಣ್ಣದಿರಬಹುದೆಂದು ಊಹಿಸಿ), ಚಪ್ಪೆಯ ಅಕ್ಷರಗಳ ಮೊಳೆಗಳು, ಹಳೆಯ ಸಣ್ಣ ಗೋಣಿಚೀಲ ಇವು ಹಿಡಿಯಲಾರದೆ ಹಿಡಿದಿರುತ್ತಿದ್ದವು. ಪೋಸ್ಟ್ ಮಾಸ್ತರನೆನಾದರೂ ಅದನ್ನು ತೆಗೆದನೆಂದರೆ ಧೂಳಿನ ಮೋಡ ನೋಡಬಹುದಿತ್ತು.

ನಾವು ಶಾಲೆಗೆ ಹೋಗುವಾಗ ಮದ್ಯಾಹ್ನ  ೧೧.೩೦ ಕ್ಕೆ ಊಟಕ್ಕೆ ಬಿಡುತ್ತಿದ್ದರು. ಸರಿಯಾಗಿ ಆ ಸಮಯಕ್ಕೆ ಪೋಸ್ಟ್ ಮ್ಯಾನ್ ಹಾಜರಾಗಿ ಪತ್ರಗಳ ಬಟವಾಡೆ ಮಾಡುತ್ತಿದ್ದ. ಅನೇಕ ಹುಡುಗರು ನಮ್ಮೂರಿಗೆ ಪತ್ರಗಳಿವೆಯೇ ಎಂದು ಕೇಳಿ ಕೇಳಿ ತೆಗೆದುಕೊಳ್ಳುತ್ತಿದ್ದರು. ಅವರ ಊರಿಗೆ ಪತ್ರಗಳಿಲ್ಲ ಎಂದರೆ ಅದೇನೋ ಉದಾಸೀನತೆ. ಪತ್ರಗಳನ್ನು ಮನೆಗೆ ತೆಗೆದುಕೊಂಡು ಹೋಗುವುದು ಒಂದು ಜವಾಬ್ದಾರಿಯುತ ಕೆಲಸವೆಂದೇ ನಮ್ಮೆಲ್ಲರ ಭಾವನೆಯಾಗಿತ್ತು. ನನಗೆ ಪತ್ರಗಳನ್ನು ತೆಗೆದುಕೊಂಡು ಮನೆಗೆ ಹೋಗುವ ಅವಕಾಶವಿಲ್ಲವೆಂದು ಎಷ್ಟು ಸಲ ಬೇಸರ ಮಾಡಿಕೊಂಡಿದ್ದೆ. ಶಾಲೆ ಬಿಡುವ ಸಮಯಕ್ಕೆ ಪೋಸ್ಟ್ ಮ್ಯಾನ್ ಬರದಿದ್ದರೆ ಎಲ್ಲರೂ ಆಶ್ಚರ್ಯ ಪಡುತ್ತಿದ್ದರು.

ದೂರದ ಊರಿಗೆ ಪತ್ರಗಳಿದ್ದರೆ ಅದರ ಬಟವಾಡೆ ಪೋಸ್ಟ್ ಮ್ಯಾನ್ ನ ಸಂಸಾರ ತಾಪತ್ರಯಗಳನ್ನವಲಂಬಿಸಿರುತ್ತಿತ್ತು. ಅವನಿಗೆ ಪುರುಸೊತ್ತಿದ್ದಾಗ, ಸೈಕಲ್ ತುಳಿಯುವ ಶಕ್ತಿಯಿದ್ದಾಗ ಹೋಗಿ ತಲುಪುತ್ತಿತ್ತು. ಜನರೂ ಪತ್ರ ಒಂದೆರಡು ದಿನ ತಡವಾಗಿ ಬಂದಿದ್ದು ಗೊತ್ತಾದರೂ ಅದೇನೂ ವಿಶೇಷ ಅಲ್ಲವೆಂದೇ ಭಾವಿಸುತ್ತಿದ್ದರು, ಒಗ್ಗಿಹೋಗಿದ್ದರು. ಶಾಲೆಯ ಮಕ್ಕಳನ್ನು ಪತ್ರ ಬಟವಾಡೆಗೆ ಅವನು ಎಷ್ಟು ಅವಲಂಬಿಸಿದ್ದ ಎಂದರೆ, ಶಾಲೆಯೇ ಇಲ್ಲದಿದ್ದರೆ ಸ್ವಯಂ ನಿವೃತ್ತಿ ತೆಗೆದುಕೊಂಡುಬಿಡುತ್ತಿದ್ದನೇನೋ?

ಸೊಸೈಟಿಯ ನೋಟಿಸುಗಳಿಂದ, ಫೋನ್ ಬಿಲ್ಲಿನಿಂದ, ಒಂದೆರಡು ಉಳಿತಾಯ ಖಾತೆಗಳಿಂದ ಹಾಗೂ ಅಂಚೆ ವಿಮೆಗಳಿಂದ ಅದು ಹೇಗೋ ನಮ್ಮೂರಿನ ಅಂಚೆ ಮತ್ತು ತಂತಿ ಕಛೇರಿ ಬದುಕುಳಿದಿದೆ. ಈಗಂತೂ ಯಾರೂ ಪತ್ರವನ್ನು ಬರೆಯುವುದೂ ಇಲ್ಲ, ಬರೆದರೆ ತಲೆ ಸೋಜಿಲ್ಲ ಎಂದೇ ಪರಿಭಾವಿಸುತ್ತಾರೆ.

ಈಗಿನ ಕಂಪ್ಯೂಟರ್ ಯುಗದಲ್ಲೂ ಉದ್ದುದ್ದ ಪಟ್ಟಿಯಲ್ಲಿ ಏನೇನೋ ಬರೆದು, ಅದನ್ನು ಪರಮ ರಹಸ್ಯದಂತೆ ಕಾಪಾಡುವುದನ್ನು ನೋಡುವುದೇ ಒಂದು ಸೋಜಿಗ. ಕೆಂಪು ಶಾಯಿಯ ಪೆನ್ನಿನಲ್ಲಿ ಒಂದಿಷ್ಟು, ನೀಲಿ ಶಾಯಿಯ ಪೆನ್ನಿನಲ್ಲಿ ಒಂದಿಷ್ಟು ಬರೆದು, ಬರೆದುದನ್ನು ಕನ್ನಡಕದ ಅಂಚಿನಲ್ಲಿ ನೋಡಿ, ತಪ್ಪಾಗಿದ್ದರೆ, ಮಗಳಿಗೋ ಮಗನಿಗೋ ಕಿಲಾಡಿ ಮಾಡ್ತೀರಿ ಎಂದು ಒಂದು ಸಲ ಬಯ್ದು ತಿದ್ದುವುದನ್ನು ನೋಡಿದರೆ ನೀವು ನಗದೆ ಇರಲಾರಿರಿ.

ಊರಿಗೊಂದು ಪೋಸ್ಟ್ ಆಫೀಸು ಇರುವುದನ್ನು ನೋಡಿ ಸುಮ್ಮನಿರುವುದು ಬಿಟ್ಟು ಹೀಗೆ ಟೀಕೆ ಮಾಡುವುದು ಸರಿಯೇ?

Friday, November 23, 2012

ನಿದ್ರೆ


"ನಿದ್ರೆ" ಇದು ಎಷ್ಟು ಆಪ್ಯಾಯಮಾನ. ಯಾರಾದರೂ ನನಗೆ ನಿದ್ರೆ ಬೇಡವೇ ಬೇಡ ಎಂದವರಿದ್ದಾರೆಯೇ? ವೈದ್ಯರೂ ಹೇಳುತ್ತಾರೆ "ಊಟ, ನಿದ್ರೆ, ಬಹಿರ್ದೆಸೆ" ಸರಿಯಾಗಿ ಆದರೆ ಮನುಷ್ಯ ಆರೋಗ್ಯವಾಗಿರುತ್ತಾನೆ ಎಂದು. ನಿದ್ರೆಗೆ ಅದರದ್ದೇ ಆದ ಪ್ರಾಮುಖ್ಯತೆ ಇದ್ದೇ ಇದೆ. ಎರಡು ದಿನ ನಿದ್ದೆಗೆಟ್ಟರೆ ಮನುಷ್ಯನ ವ್ಯಕ್ತಿತ್ವವೇ ಬದಲಾಗಿ ಹೋಗುತ್ತದೆ. ಓಣಿವಿಘ್ನೇಶ್ವರ ತೇರಿನ ಓಕಳಿ ದಿನ ಸಾಧು ಶಾಂತ ಸ್ವಭಾವದ ಗಣಪತಿ ಅಣ್ಣನೂ ಅಲವರಿಕೆಯ ತುತ್ತ ತುದಿಯಲ್ಲಿರುತ್ತಾನೆ.

ಪುರಾಣ ಕಾಲದಿಂದಲೂ ಪ್ರತಿಮೆಗಳ ಮೂಲಕ ನಿದ್ರೆಯ, ಮಲಗುವುದರ ಮಹತ್ವವನ್ನ ನಾನಾರೀತಿಯಲ್ಲಿ ಹೇಳುತ್ತಾ ಬಂದಿದ್ದಾರೆ. ವಿಷ್ಣುವು ಸರ್ಪದ ಮೇಲೆ ಮಲಗಿರುತ್ತಾನೆ. ಭೀಷ್ಮನು ಬಾಣದ ಹಾಸಿಗೆಯಮೆಲೂ ಮಲಗೇ ಇರುತ್ತಾನೆ, ಕುಳಿತಿರುವುದಿಲ್ಲ. ಪಾಂಡವರು ಮಲಗಿರುವಾಗಲೇ ಅರಗಿನ ಮನೆಗೆ ಬೆಂಕಿಯನ್ನಿಡಲಾಗುತ್ತದೆ. ಇವೆಲ್ಲವುಗಳಿಂದ ನಾವು ನಿದ್ರೆಯ ಮಹತ್ವವನ್ನ ಮನಗಾಣಬೇಕು.

ನಿದ್ರೆಯಲ್ಲಿರುವಾಗ ಬೀಳುವ ಕನಸುಗಳು ಅತಿರೋಚಕವಾಗಿರುತ್ತವೆ. ಕೆಲವರಿಗೆ ತಾವು ಮೇಲಿನಿಂದ ಬೀಳುತ್ತಿರುವಂತೆಯೂ, ದೊಡ್ಡ ಬಂಡೆ ಉರುಳಿ ಬರುತ್ತಿರುವಂತೆಯೂ, ಹಾವು ಕಚ್ಚಲು ಬಂದಂತೆಯೂ, ದೊಡ್ಡ ಮರುಭೂಮಿಯಲ್ಲಿ ಒಬ್ಬನೇ ಕಳೆದು ಹೋದಂತೆಯೂ ಕನಸುಗಳು ಬೀಳುತ್ತವೆ. ನನಗೆ ಎತ್ತರದಿಂದ ಕೆಳಗೆ ನೋಡಿದರೆ ಹೆದರಿಕೆ ಆಗುತ್ತದೆ. ಕನಸಿನಲ್ಲೂ ಮೇಲಿಂದ ಕೆಳಗೆ ನೋಡಿದಂತೆ ಕನಸು ಬೀಳಬೇಕೆ. ಒಂದು ರಾತ್ರಿಯಂತೂ ಬೆಳೆನಳ್ಳಿ ಶಾಲೆಗೆ ಉಪನ್ಯಾಸ ಕೊಡಲು ಹೋದಂತೆ ಕನಸು ಬಿದ್ದಿತ್ತು.

ಕೆಲವು ಸಲ ಈ ನಿದ್ರೆ ವಂಶಪಾರಂಪರ್ಯವೇ ಎಂಬ ಗುಮಾನಿಯೂ ಬಂದದ್ದಿದೆ. ನೋಡಿ ನಮ್ಮ ಪೂರ್ವಜರೆಲ್ಲರೂ ಮಲಗುತ್ತಿದ್ದರು ಹಾಗೂ ನಿದ್ರೆ ಮಾಡುತ್ತಿದ್ದರು. ಬಹುಷಃ ಹಾಗಾಗೆ ನಾವೂ ಮಾಡುತ್ತಿದ್ದೇವೆಯೋ? ಕೆಲವುಸಲ ಇದು  ಸಾಂಕ್ರಾಮಿಕ ಇರಬಹುದೇ ಎಂದೂ ಅನಿಸುತ್ತದೆ. ಯಾರಾದರೂ ಮಲಗಿದ್ದರೆ ಕುಳಿತಿರುವವರಿಗೆ ನಿದ್ರೆ ಬರುತ್ತದೆ. ಒಂದೋ ಅವರೂ ಮಲಗುತ್ತಾರೆ ಇಲ್ಲವೇ ಮಲಗಿದವರನ್ನು ಎಬ್ಬಿಸುತ್ತಾರೆ. ಕೆಲವರಿಗೆ ನಿದ್ರೆಯಿಂದ ಎಚ್ಚರ ಆದ ತಕ್ಷಣ ಎಬ್ಬಿಸಿದವರನ್ನು ಒದ್ದು ಹಾರಿಸಿಬಿಡಬೇಕೆಂಬ ಸಿಟ್ಟು ಬರುತ್ತದೆ.

ನಿದ್ರೆ ಮಾಡುವುದರಲ್ಲಿಯೂ ವೈಶಿಷ್ಟ್ಯವಿದೆ. ಕೆಲವರಿಗೆ ನಿದ್ದೆ ಸೂಕ್ಷ್ಮ, ಇವರಿಗೆ ಸಣ್ಣ ಶಬ್ದವಾದರೂ ಎಚ್ಚರ ಆಗಿಬಿಡುತ್ತದೆ. ಇನ್ನು ಕೆಲವರಿಗೆ ಗಾಢ ನಿದ್ರೆ, ಕೊನೆಗೌಡನ ದೋಟಿಯಿಂದ ಎಳೆದರೂ ಎಚ್ಚರ ಆಗುವುದಿಲ್ಲ. ಕೆಲವರು ಕೂತಲ್ಲೇ ತೂಕಡಿಸಿ ತೂಕಡಿಸಿ ನಿದ್ರೆ ಮುಗಿಸಿಬಿಡುತ್ತಾರೆ. ಕೆಲವರಿಗೆ ಮಲಗುವ ವ್ಯವಸ್ಥೆಗಳೇ ಸರಿ ಆಗುವುದಿಲ್ಲ. ಬೆಳಕು ಬರಬಾರದು, ಗಾಳಿ ಪಶ್ಚಿಮದಿಂದ ದಕ್ಷಿಣಕ್ಕೆ ಬೀಸುತ್ತಿದೆ ಹೀಗೆ ಹತ್ತು ಹಲವು ತೊಂದರೆಗಳು. ನಮ್ಮೂರಿನಲ್ಲೊಬ್ಬರು ಹತ್ತರಗಿ ಬಸ್ಸು ಹತ್ತಿ ಟಿಕೆಟ್ ತೆಗೆದುಕೊಂಡು ಕಣ್ಣು ಮುಚ್ಚಿದರೆ ಸಿರಸಿಯ ಐದು ಕತ್ರಿಯಲ್ಲಿ ಪಿಳಕ್ಕನೆ ಕಣ್ಣು ಬಿಡುತ್ತಾರೆ. ಇಂತಹವರಿಗೆ ನಿದ್ರೆಯೆಂದರೆ ವೀಳ್ಯದೆಲೆ ಶರಿ ತೆಗೆದಷ್ಟು ಸಲೀಸು.

ಒಂದು ಮನುಷ್ಯನಿಗೆ ಎಷ್ಟು ಗಂಟೆ ನಿದ್ರೆ ಬೇಕು ಎಂಬ ವಿಷಯದಲ್ಲಿ ಯಾವಾಗಲೂ ಒಮ್ಮತ ಮೂಡಿದ್ದಿಲ್ಲ ನಮ್ಮೊಳಗಿನ ಚರ್ಚೆಗಳಲ್ಲಿ. ಕೆಲವರು ಆರು ಗಂಟೆ, ಕೆಲವರು ಎಂಟು ಗಂಟೆ ಹೀಗೆ ಅವರವರ ಅಭ್ಯಾಸವನ್ನು ಹೇಳುತ್ತಾರೆ. ನನ್ನ ಕೇಳಿದರೆ ರಾತ್ರಿಯಿಂದ ಬೆಳಗಿನವರೆಗೆ ಎನ್ನುತ್ತೇನೆ. ಕೆಲವರಿಗೆ ಹತ್ತುಗಂಟೆಗೆ ರಾತ್ರಿಯಾಗುತ್ತದೆ, ನನ್ನಂತವರಿಗೆ ಮತ್ತೂ ಸ್ವಲ್ಪ ತಡ. ಬೆಳಗೂ ಹಾಗೆಯೇ. ಕೆಲವರಿಗೆ ಐದು ಗಂಟೆ, ಹಲವರಿಗೆ ಸ್ವಲ್ಪ ತಡ. ಹಾಗಾಗಿ ರಾತ್ರಿಯಿಂದ ಬೆಳಗಿನವರೆಗೆ ನಿದ್ರೆ ಅನಿವಾರ್ಯ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ನಾವು ನಿದ್ರೆಯ ಪ್ರಾಮುಖ್ಯತೆಯನ್ನು ಅರಿತುಕೊಂಡು ನಮ್ಮ ಮುಂದಿನ ಪೀಳಿಗೆಗೆ ಜೋಪಾನವಾಗಿ ವರ್ಗಾಯಿಸಬೇಕೆಂದು ಹೇಳುತ್ತಾ... ಆಹ್!! ಆಕಳಿಕೆ.. ಆಹ್!! ಒವೊವ್.. ಆಹ್!!

Wednesday, November 21, 2012

ಆಸರಿಗೆ ಅವಾಂತರ


ನೆಂಟರ ಮನೆಗೆ ಹೋಗಿ ಆಸರಿಗೆ ಕುಡಿಯುವುದೆಂದರೆ ಸಲೀಸು ಎಂದು ತಿಳಿದುಕೊಂಡಿದ್ದರೆ ಅದು ಮೂರ್ಖತನ ಆದೀತು. ನನಗೂ ಈಗಿತ್ತಲಾಗಿ ಸತ್ಯದ ಅರಿವಾಯಿತು. ಮಂಗಳ ಕಾರ್ಯಗಳಿಗೆ ಆಮಂತ್ರಣ ನೀಡಲು ಹೋದಾಗ ಎಲ್ಲರ ಮನೆಯಲ್ಲೂ ಆಸರಿಗೆ ಕೆಳುವರಾದರೂ ತಪ್ಪಿಸಿಕೊಳ್ಳುವ ಅವಕಾಶವಿರುತ್ತದೆ. ಪರಿಚಯವಿಲ್ಲದವರ ಮನೆಯಲ್ಲಂತೂ ಸುಲಭವಾಗಿ ಆಸರಿಗೆ ಕುಡಿಯದೆ ಮನೆಯಿಂದ ಹೊರಬೀಳಬಹುದು. ಕೆಲವುಕಡೆ ಎಲೆ ಅಡಿಕೆ ಹಾಕಿ, ಸಕ್ಕರೆ ಬಾಯಿಗೆ ಹಾಕಿಕೊಂಡು, ನೀರುಕುಡಿದು ಬಚಾವಾಗಬಹುದು.

ಮದುವೆಯಾದಮೇಲೆ ಪತ್ನಿಸಮೇತನಾಗಿ ಆಸರಿಗೆ ಕುಡಿಯುವುದನ್ನು ತಪ್ಪಿಸಿಕೊಳ್ಳುವುದು ಬಹುಷಃ ಅಸಾಧ್ಯ. ಬಿಸಿ ಬಿಸಿ ಕಷಾಯ ತಣಿಯುವುದೂ ಇಲ್ಲ ಕುಡಿದು ಲೋಟವನ್ನು ಒಗೆಯುವ ಹಾಗೂ ಇಲ್ಲ. ಹೋದಲ್ಲೆಲ್ಲ ವಿಶೇಷ ಅಡುಗೆ ಅಂತೂ ಇದ್ದೆ ಇರುತ್ತದೆ. ಎಷ್ಟು ಅಂತ ತಿನ್ನಬಹುದು?

ಅವರ ಮನೆಗೆ ಹೋಗಿ ಒಂದು ಬಿಡಿಯ ತೀರಿತಲ್ಲ ಅಂದುಕೊಳ್ಳುವುದರೊಳಗೆ "ನಮ್ಮನೆಯಲ್ಲಿ ಉಳಿದುಕೊಂಡೇ ಇಲ್ಲ" ಎಂಬ ಪುಕಾರು, ಸರಿಯಾಗಿ ಊಟ, ಆಸರಿಗೆ ಮಾಡಿಲ್ಲ ಎಂಬ ಇನ್ನೊಂದು ಪುಕಾರು. ಒತ್ತಾಯದ ಪರಮಾವಧಿ ನೋಡಬಹುದು.

ಹಬ್ಬಕ್ಕೆ ಒಂದು ವಾರ ರಜಾ ಸಿಕ್ಕ ಸಂತೋಷ, ಊರಿಗೆ ಹೋಗಿ ಬರುವುದರೊಳಗೆ ಟುಸ್ಸ್ ಆಗುವುದನ್ನು ಕಣ್ಣಾರೆ ನೋಡಬಹುದು. ಮನೆಯಲ್ಲಿರಲು ಒಂದು ಹೊತ್ತಿನ ಪುರುಸೊತ್ತು ಇಲ್ಲದ ಹಾಗೆ ಓಡಾಟದ ಪಟ್ಟಿ. ಹೋದ ಎಂಟು ದಿನದಲ್ಲಿ ಏನಿಲ್ಲವೆಂದರೂ ೧೦ ಮನೆಯಲ್ಲಿ ಊಟ ಮಾಡಿದ್ದೇವೆ ಆಸರಿಗೆ ಅಂತೂ ಬಿಡಿ.

ಮದುವೆಯಾದವರ ಮೇಲೂ ಈ ರೀತಿಯ ಉಭಯಸಂಕಟವನ್ನು ತಂದೊಡ್ಡುವುದನ್ನು ನಾನು ವಿರೋಧಿಸುತ್ತೇನೆ. ಕೆಲವು ಜನ ಅದು ಹೇಗೆ ಎರಡನೇ ಮದುವೆ ಆಗುತ್ತಾರೋ? ಅವರಿಗೆ "ಕಬ್ನಳ್ಳಿ ರತ್ನ"ವನ್ನು ಕೊಡಬೇಕೆಂದು ಬಲವಾಗಿ ಪ್ರತಿಪಾದಿಸುತ್ತೇನೆ.

Tuesday, May 22, 2012

ಒಂದು ಅನಿಸಿಕೆ

ವಿನಾಯಕ ಭಟ್ ಮೂರೂರು ಅವರೇ,

ನಿನ್ನೆ ನಿಮ್ಮ "ಜುಗಲ್ ಬಂದಿ" ಕಾರ್ಯಕ್ರಮವನ್ನು ನೋಡಿದೆ. ನಿಮ್ಮ ಅಭಿಪ್ರಾಯವನ್ನು ನೀವು ಹೇಳಿದ ರೀತಿ ಇಷ್ಟವಾಗಲಿಲ್ಲ. ನೀವು ಹೇಳಿದಿರಿ "ಆಹಾರ ಪದ್ಧತಿ ಒಬ್ಬನ ಖಾಸಗಿ ವಿಷಯ, ಯಾವುದನ್ನು ತಿನ್ನಬೇಕು, ಬಿಡಬೇಕು ಎನ್ನುವುದನ್ನು ಅವನೇ ತೀರ್ಮಾನಿಸಿಕೊಳ್ಳುತ್ತಾನೆ. ಯಾರೂ ಕಟ್ಟು ಹಾಕುವ ಅವಶ್ಯಕತೆಯಿಲ್ಲ"  ಎಂದು.

ಹಾಗಾದರೆ "ಗೋವಧೆ"ಯನ್ನು ನಿಷೇಧಿಸಬೇಕು, ಗೋಮಾಂಸ ಭಕ್ಷಣೆಯನ್ನು  ನಿಷೇಧಿಸಬೇಕೆಂದು ಏಕೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ? ಗೋಮಾಂಸವನ್ನು ತಿನ್ನಬೇಕೋ ಬಿಡಬೇಕೋ ಎನ್ನುವುದು ಒಬ್ಬನ ಖಾಸಗಿ ವಿಷಯ, ಅದಕ್ಕೇಕೆ ಕಟ್ಟು ಹಾಕಲು ಬೊಬ್ಬೆ ಹೊಡೆಯಲಾಗುತ್ತಿದೆ?

ಮಾಧ್ಯಮಗಳಲ್ಲಿ ಯಾವುದನ್ನು ನೋಡಬೇಕು, ಬಿಡಬೇಕು ಎನ್ನುವುದನ್ನು ಖಾಸಗಿ ಮನುಷ್ಯ ತೀರ್ಮಾನಿಸಿಕೊಳ್ಳುತ್ತಾನೆ. ಅದಕ್ಕೇಕೆ ಸೆನ್ಸಾರ್ ಬೋರ್ಡ್ ಮಾಡಿಕೊಳ್ಳಲಾಗಿದೆ? ನೈತಿಕ ನಿಯಮಗಳನ್ನೇಕೆ ಹೇರಲಾಗುತ್ತಿದೆ?

ನಾನು ಸಹಪಂಕ್ತಿ ಭೋಜನದ ಪರವಾಗಿಯೂ ಮಾತನಾಡುತ್ತಿಲ್ಲ, ವಿರೋಧವಾಗಿಯೂ ಅಲ್ಲ. ನೀವು ಹೇಳಿದ ಮಾತುಗಳಿಗಷ್ಟೇ ನನ್ನ ಆಕ್ಷೇಪಣೆ. ನೀವು ಹೇಳಬೇಕೆಂದಿರುವ ವಿಷಯವನ್ನು ಬೇರೆ ರೀತಿಯಲ್ಲಿ ಹೇಳಬಹುದಾಗಿತ್ತೇನೋ? ಯೋಚಿಸಿ.

Thursday, March 22, 2012

"ಆನೆ"

ಜೀವನದಲ್ಲಿ ಎಲ್ಲರಿಗೂ "ಆನೆ" ಇರಬೇಕಂತೆ. "ಆ" ಅಂದರೆ "ಆರೋಗ್ಯ", "ನೆ" ಅಂದರೆ "ನೆಮ್ಮದಿ". ಮೊನ್ನೆ ಕನ್ನಡದ ಕೋಟ್ಯಾಧಿಪತಿ ನೋಡುವಾಗ ಯಾರೋ ಸ್ಫರ್ದಿ ಹೇಳಿದ ಮಾತಿದು. ಉಂಡು ಮಲಗಿದಾಗ ನನಗೂ ಅನ್ನಿಸಿತು, ಎಲ್ಲರಿಗೂ "ತುತು" ಇರಬೇಕೆಂದು. "ತು" ಅಂದರೆ "ತುಂಬುಹೊಟ್ಟೆ", "ತು" ಅಂದರೆ "ತುರಿಕೆ". ಯಾರಿಗಾದರೂ ಕೇಳಿನೋಡಿ ನಿನ್ನ ಸಂತೋಷದ ಕ್ಷಣ ಯಾವುದು ಎಂದು. ನಾನು ಪರೀಕ್ಷೆ ಪಾಸಾಗಿದ್ದು ಎಂತಲೋ, ಪಕ್ಕದ ಊರಿನ ಕೂಸಿನ ಮದುವೆಯಲ್ಲಿ ಮದುಮಗನ ಜೊತೆ ಫೋಟೋ ತೆಗೆಸಿಕೊಂಡದ್ದು ಎಂತಲೋ ಯೋಚನೆ ಮಾಡಿ ಹೇಳುತ್ತಾರೆ. ಆದರೆ ಬೆನ್ನಿನ ಮೇಲೆ ಕೈ ಮುಟ್ಟದ ಜಾಗ ತುರಿಸಿದಾಗ ಎರಡೂ ಕೈಯಲ್ಲಿ ಜನಿವಾರವನ್ನು ಆಡಿಸಿ, ಅಥವಾ ಗೋಡೆಯ ಅಂಚಿಗೆ ಬೆನ್ನು ತಿಕ್ಕಿ ತುರಿಕೆಯನ್ನು ನಿವಾರಿಸಿಕೊಂಡಾಗ ಆಗುವ ಸಂತೋಷವನ್ನು ಯಾರೂ ಹೇಳುವುದಿಲ್ಲ. ಆ ಕ್ಷಣ ತುಂಬಾ ಸಂತೋಷವನ್ನ ಆನಂದವನ್ನ ಅನುಭವಿಸಿರುತ್ತೇವೆ. ಹೌದೋ ಅಲ್ಲವೋ?

Friday, February 17, 2012

ಚಳಿಗಾಲದ ಸ್ನಾನ

ಚಳಿಗಾಲದ ಚುಮು ಚುಮು ಚಳಿಯಲ್ಲಿ ಬೆಳಿಗ್ಗೆ ಕತ್ತಲಲ್ಲಿ ಬಿಸಿ ನೀರು ಸ್ನಾನ ಮಾಡುವುದೆಂದರೆ  ನನಗೆ ಬಹಳ ಇಷ್ಟ. ಊರಿನಲ್ಲಿ ಬೆಳಿಗ್ಗೆ ಬೇಗ ನೀರು ಕಾಯಿಸುತ್ತಾರೆ. ಬೆಳಿಗ್ಗೆ ಬೇಗ ಎದ್ದು ಬಿಸಿ ಬಿಸಿ ನೀರನ್ನು ತಲೆಯಮೇಲೆ ಹೊಯ್ದುಕೊಂಡರೆ ಏನೋ ಒಂಥರಾ ಖುಷಿ, ಮಜಾ. ಅದೆಷ್ಟು ಬಾರಿ ನಾನು ಹೀಗೆ ಮಜಾತೆಗೆದುಕೊಳ್ಳಲು ಹೋಗಿ ಅರ್ಧ ಮುಕ್ಕಾಲು ಗಂಟೆ ಸ್ನಾನ ಮಾಡಿದ್ದಿದೆ ಮತ್ತು ಅರ್ಧ ಹಂಡೆಗಿಂತಲೂ ಜಾಸ್ತಿ ನೀರನ್ನು ಖರ್ಚು ಮಾಡಿದ್ದಿದೆ. ಚಿಕ್ಕಪ್ಪನವರು, ಬಚ್ಚಲಮನೆಯಲ್ಲೇ ನಿದ್ದೆ ಹೋದೆಯೇನೋ? ಎಂದು ಬಯ್ದದ್ದಿದೆ. ನನ್ನ ನಂತರ ಸ್ನಾನಕ್ಕೆ ಬರುವವರಿಗೆ ಬಿಸಿ ನೀರು ಖಾಲಿ ಆಯ್ತೆಂದು ಬಯ್ಸಿಕೊಂಡದ್ದಿದೆ. ಆದರೂ ಅದರ ಹುಚ್ಚು ಬಿಟ್ಟಿಲ್ಲ. ಮೊನ್ನೆ ಊರಿಗೆ ಹೋದಾಗಲೂ ಮತ್ತೆ ಹೀಗೆ ಸ್ನಾನ ಮಾಡಿ ಖುಷಿ ಪಟ್ಟೆ.


ಬಿಸಿ ನೀರು ಸ್ನಾನ ಮಾಡುವುದೆಂದರೆ ಬರ ಬರನೆ ನೀರನ್ನು ಹೊಯ್ದುಕೊಳ್ಳುವುದಲ್ಲ. ಚೊಂಬಿನಲ್ಲಿ ನೀರನ್ನು ಮೊಗೆದುಕೊಂಡು ನಿಧಾನವಾಗಿ ತಲೆಯಮೇಲೆ ಸುರಿದುಕೊಳ್ಳಬೇಕು. ನೀರು ಹೊಯ್ದುಕೊಂಡ ಶಬ್ಧವೂ ಬರಬಾರದು ಅಷ್ಟು ನಿಧಾನವಾಗಿ. ಪೂರ್ತಿ ಬೆಳಗಾಗಿರಬಾರದು, ಕತ್ತಲೆ ಕತ್ತಲೆ ಇರಬೇಕು, ಬಚ್ಚಲಮನೆಯ ದೀಪವನ್ನೂ ಹಾಕಬಾರದು. ಆಗ ಆ ನಿಶ್ಯಬ್ಧದಲ್ಲಿ ಕಣ್ಣು ಮುಚ್ಚಿಕೊಂಡು ನಿಧಾನವಾಗಿ ಬಿಸಿ ನೀರನ್ನು ಹೊಯ್ದುಕೊಂಡಾಗ ಸಿಗುವ ಮಜವಿದೆಯಲ್ಲ ಅದು ಅನಿರ್ವರ್ಣನೀಯ.


ಬೆಂಗಳೂರಿನಲ್ಲಿ ಎಷ್ಟು ಗಡಿಬಿಡಿಯಲ್ಲಿ ಸ್ನಾನಮಾಡುತ್ತೇವೆಂದರೆ ಬೆನ್ನ ಮೇಲಿನ ಕೊಳೆಯೂ ಪೂರ್ತಿ ಹೋಗಿರುವುದಿಲ್ಲ. ಇನ್ನು ಇಂತಹ ಮಜಾ ತೆಗೆದುಕೊಳ್ಳುವ ಮಾತೆಲ್ಲಿಂದ ಬಂತು. ಇದೆ ರೀತಿ ಅದೆಷ್ಟು ಚಿಕ್ಕ ಚಿಕ್ಕ ಖುಶಿಗಳನ್ನು ನಾವು ಕಳೆದು ಕೊಂಡಿದ್ದೇವೆ, ಕಳೆದುಕೊಳ್ಳುತ್ತಲಿದ್ದೇವೆ. ಚಳಿಗಾಲದ ಬೆಳಿಗ್ಗೆ ಹೊಂಬಿಸಿಲನ್ನು ಕಾಯಿಸುವುದು, ಕಣಜದ ಮೇಲೆ ಅಡಿಕೆಯನ್ನು ಹರಗುವಾಗ ಬರುವ ಜರಬರ ಶಬ್ದ, ತೊಗರೊಲೆಯ ಬೆಂಕಿ,  ಚಾಲಿ ಕಣದ ಹರಟೆ, ತೋಟದಲ್ಲಿ ಗೋಟು ಆರಿಸುವಾಗಿನ ಅಪ್ಪನ ಹಾಸ್ಯ ಚಟಾಕಿಗಳು.. ಅದೆಷ್ಟು ಅಂತ ಹೇಳಲಿ..


ಹಾಗಂತ ನಾವು ಬಹಳ ಖುಶಿಗಳನ್ನು ಕಳೆದುಕೊಂಡುಬಿಟ್ಟಿದ್ದೇವೆ ಎಂದು ಚಿಂತಿಸುತ್ತಾ ಕುಳಿತುಕೊಳ್ಳುವುದು ಸರಿಯಲ್ಲ. ಈಗ ಇಲ್ಲಿರುವ ಸಣ್ಣ ಪುಟ್ಟ ಖುಶಿಗಳನ್ನು ಹುಡುಕಬೇಕು. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಬಹಳಷ್ಟು ಕಳೆದುಕೊಳ್ಳಬೇಕಾಗುತ್ತದೆ. ನಾವು ಹೊಂದಿಕೊಳ್ಳಲೇಬೇಕು. ಹಾಗಾಗಿ ನಾವು ನಮ್ಮ ಇಲ್ಲಿನ ಸಾಧನೆಗಳ ಸಂತೋಷವನ್ನ, ಸಾರ್ಥಕ್ಯವನ್ನ ವಿಷಾದಪೂರ್ವಕವಾಗಿ ಅನುಭವಿಸಬೇಕಾಗುತ್ತದೆ, ಹಂಚಿಕೊಳ್ಳಬೇಕಾಗುತ್ತದೆ. ಏನಂತೀರಾ?

Wednesday, February 15, 2012

ವಿದ್ಯುತ್

"ವಿದ್ಯುತ್" ಎನ್ನುವುದು ನನಗೊಂದು ಆಶ್ಚರ್ಯ ಇವತ್ತಿಗೂ. ಒಂದೊಂದು ಸಲ ದೇವರು ಇದ್ದಾನೆ ಎನ್ನುವುದಕ್ಕೂ ಇದೇ ಸಾಕ್ಷ್ಯ ಅನ್ನಿಸಿಬಿಡುತ್ತದೆ. ಕಣ್ಣಿಗೆ ಕಾಣುವುದಿಲ್ಲ ಆದರೆ ಮುಟ್ಟಿದರೆ ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಶಾಕ್ ಹೊಡೆಯುತ್ತದೆ. ಕ್ಷಣಮಾತ್ರದಲ್ಲಿ ಇಲ್ಲಿ ಸ್ವಿಚ್ ಒತ್ತಿದರೆ ಅಲ್ಲೆಲ್ಲೋ ಬೆಳಕಾಗುತ್ತದೆ. ಸಣ್ಣ ತಂತಿಯಲ್ಲಿ ಏನೇನನ್ನೋ ತಿರುಗಿಸಬಹುದಾದಷ್ಟು, ಸುಡುವಷ್ಟು ಪ್ರಮಾಣದ ವಿದ್ಯುತ್ ಹರಿದು ಹೋಗುತ್ತದೆ. ತಂತಿಯಲ್ಲಿ ಹರಿಸಬಹುದಾದರೂ ಗಾಳಿಯಲ್ಲಿ ಬೆರೆಯುವುದಿಲ್ಲ, ಆರಿಹೊಗುವುದಿಲ್ಲ. ಉಪಯೋಗಿಸದಿದ್ದರೆ ಕರ್ಚು ಆಗುವುದಿಲ್ಲ. ಅದೇನೋ ವಾಹಕವಂತೆ ಅದರಲ್ಲಿ ಮಾತ್ರ ವಿದ್ಯುತ್ ಹರಿಯುತ್ತದಂತೆ. ಅದಕ್ಕೆ ಹೇಗೆ ಗೊತ್ತಾಗುತ್ತದೋ ಇದು ವಾಹಕ, ನಾನು ಇದರಲ್ಲಿ ಹರಿಯಬಹುದು. ಇದು ವಾಹಕವಲ್ಲ ಇದರಲ್ಲಿ ನಾನು ಪ್ರವಹಿಸಲಾರೆ ಎಂದು.

ವಿದ್ಯುತ್ತಿಗೆ ಕಾಗೆಗಳಮೇಲೆ ಮೃದು ಧೋರಣೆಯಿದೆ . ನಾವು ಯಾರೇ ಮುಟ್ಟಿದರೂ ಹಿಂದೂ ಮುಂದು ಯೋಚಿಸದೆ ಶಾಕ್ ಹೊಡೆಯುತ್ತದೆ ಆದರೆ ಕಾಗೆಗಳು ಸಾಲಾಗಿ ತಂತಿಯ ಮೇಲೆ ಕುಳಿತುಕೊಂಡರೂ ಏನೂ ಆಗುವುದಿಲ್ಲ. ಅವು ತಂತಿಯ ಮೇಲೆ ಕುಳಿತುಕೊಂಡು ಅವರ ಕೊಕ್ಕು ಚೂಪಾಗಿಸಿಕೊಳ್ಳುವುದೋ, ಎಲ್ಲಿಂದಲೋ ಹೊತ್ತು ತಂದ ಸತ್ತು ಕೊಳೆತು ನಾರುತ್ತಿರುವ ಇಲಿಯ ದೇಹವನ್ನು ಹಂಚಿಕೊಳ್ಳುವುದೋ ಮಾಡುತ್ತಿರುತ್ತವೆ. ಆಗ ಅವು ನಮ್ಮತ್ತ ತಿರುಗಿ ನೋಡಿದಾಗ ನಮ್ಮನ್ನು ಹೀಯಾಳಿಸಲೆಂದೇ ನೋಡುತ್ತಿರುವಂತೆನಿಸುತ್ತದೆ.

ಜನರ ಮತ್ತು ನನ್ನ ನಂಬಿಕೆ ಏನೆಂದರೆ ವಿದ್ಯುತ್ ಅಪಾಯಕಾರಿ, ಅದನ್ನು ದೂರವಿಡಬೇಕೆಂದು. ವಿಚಿತ್ರವೆಂದರೆ ವೈದ್ಯಕೀಯ ಪದ್ಧತಿಯಲ್ಲಿ ಶಾಕ್ ಕೊಡುವುದೂ ಒಂದು ರೀತಿಯ ಚಿಕಿತ್ಸೆ ಕೆಲವು ಮಾನಸಿಕ ರೋಗಗಳಿಗೆ. ಇಂತಹ ಚಿಕಿತ್ಸೆಯಲ್ಲಿ ಕಡಿಮೆ ಪ್ರಮಾಣದ ವಿದ್ಯುತ್ತನ್ನು ದೇಹದೊಳಗೆ ಹರಿಸುತ್ತಾರಂತೆ.  ಅವರಿಗೇನಾದರೂ ಮಾನಸಿಕ ಸ್ಥಿಮಿತ ಇದ್ದಿದ್ದರೆ ವಿದ್ಯುತ್ ಹಾಯಿಸಲು ಒಪ್ಪುತ್ತಿದ್ದರೆ? ಖಂಡಿತ ಇಲ್ಲ. ಮಾನಸಿಕ ಸ್ಥಿಮಿತ ಇರುವವರಿಗೆ ವೈದ್ಯರೂ ವಿದ್ಯುತ್ತನ್ನು ಹಾಯಿಸುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎನ್ನಿ.

ಬಹಳ ದಿನಗಳ ಹಿಂದೆ ನನ್ನ ಪರಮಾಪ್ತನಿಗೆ ಏನೋ ವಿವರಿಸುವಾಗ "ಉದಾಹರಣೆಗೆ ವಿದ್ಯುತ್ ತಂತಿಯನ್ನು ತೆಗೆದುಕೋ" ಅಂತ ಹೇಳಿದ್ದೆ. "ಉದಾಹರಣೆಗಲ್ಲ ಯಾವುದಕ್ಕೂ ವಿದ್ಯುತ್ ತಂತಿಯನ್ನು ತೆಗೆದುಕೊಂಡು ಹಿಡಿಯುವುದಿಲ್ಲ. ತಲೆ ಸರಿ ಇರುವವರಾರೂ ವಿದ್ಯುತ್ ತಂತಿಯನ್ನು ಹಿಡಿದುಕೊಳ್ಳುವುದಿಲ್ಲ." ಎಂದು ನನ್ನ ಕಾಲೆಳೆದಿದ್ದ. ಈಗಲೂ ಆಗಾಗ ನೆನಪಿಸುತ್ತಿರುತ್ತಾನೆ.

Saturday, January 28, 2012

ದ್ವಂದ್ವ

ನನ್ನನ್ನು ಸಮಾಜ ನಾನು ಹುಟ್ಟಿದ ಮೇಲೆ ನೋಡಲಾರಂಭಿಸಿದೆ. ನಾನು ಹುಟ್ಟಿದಾರಭ್ಯ ಸಮಾಜವನ್ನು ನೋಡುತ್ತಿದ್ದೇನೆ. ಯಾರು ಒಬ್ಬರನ್ನೊಬ್ಬರು ಜಾಸ್ತಿ ನೋಡಿದ ಹಾಗಾಯಿತು?

ಓದು

ಓದುವುದು ಏತಕ್ಕೆ? ಓದಿದ್ದನ್ನ ನೆನಪಿರಿಸಿಕೊಳ್ಳುವುದಕ್ಕೋ ಅಥವಾ ಅರ್ಥಮಾಡಿಕೊಳ್ಳುವುದಕ್ಕೋ? ಅರ್ಥಮಾಡಿಕೊಂಡರೆ ಓದಿದ್ದು ನೆನಪಿನಲ್ಲಿ ಉಳಿಯುವುದು ಸತ್ಯವಾದರೂ ನಾವು ಓದುವುದು ನೆನಪಿರಿಸಿಕೊಳ್ಳುವುದಕ್ಕೆ. ಓದಿ ನೆನಪಿರಿಸಿಕೊಂಡರೆ ವಿಷಯ ಅರ್ಥವಾಗುವುದೇ?

Tuesday, January 24, 2012

ಚಾರಣದ ಹೂರಣ - ೧

ರಾತ್ರಿ ಹೊರಡಬೇಕು ಎಂಬ ಕಾರಣಕ್ಕೆ ದಿನವಿಡೀ ಕೆಲಸಕ್ಕೆ ರಜೆ ಹಾಕಿ ಮಲಗಿದ್ದೇ ಆಯಿತು ಶುಕ್ರವಾರ. ಭಾಸ್ಕರನು ಎರಡು ಸರ್ತಿ ವಾಹನದ ಡ್ರೈವರನಿಗೆ ಫೋನಾಯಿಸು ಎಂದು ನೆನಪಿಸಿದಮೇಲೆ ಅವನಿಗೆ ಫೋನು ಮಾಡಿ ಸಂಜೆ ಅಂದರೆ ರಾತ್ರಿ ಹೊರಡುವ ಸಮಯವನ್ನು ಖಾತ್ರಿ ಪಡಿಸಿದೆ. ಯಥಾ ಪ್ರಕಾರ, ತೆಗೆದುಕೊಂಡು ಹೋಗುವ ವಸ್ತುಗಳನ್ನು ಬ್ಯಾಗ್ನಲ್ಲಿ ಗಡಿಬಿಡಿಯಲ್ಲಿ ತುರುಕಿಕೊಂಡು ಚಾರಣಕ್ಕೆ ಅವಶ್ಯವಿರುವ ಪ್ರಥಮ ಚಿಕಿತ್ಸಾ ಔಷಧಿಗಳನ್ನು ಹಿಡಿಸಲು ಪ್ರಯತ್ನಿಸಿದೆ. ಹೇಗೂ ಇರಲಿ ಎಂದು ಥಂಡಿ, ಜ್ವರ, ಜುಲಾಬು ಮುಂತಾದ ಸಣ್ಣಪುಟ್ಟ ತೊಂದರೆಗಳಿಗೆ ಗುಳಿಗೆಗಳನ್ನೂ ತೆಗೆದು ತುಂಬಿಕೊಂಡೆ.

ಇಷ್ಟೊಂದು ಕೆಲಸಗಳ ಮಧ್ಯದಲ್ಲೇ ಪಿ ಬಿ ನಾನು ಬರುತ್ತೇನೆಂದ ಎಂಬುದನ್ನು ಭಾಸ್ಕರ ಹೇಳಿದ. ಅವನಿಗೆ ಬರುವಂತೆ ತಿಳಿಸಿ ಅವನು ಬಂದರೆ ತೊಂದರೆ ಏನೂ ಇಲ್ಲವೆಂಬುದನ್ನು ಕೇಳಿ ತಿಳಿದು ಭಾಸ್ಕರನಿಗೆ ಹೇಳಿದೆ. ಇಲ್ಲೇ ಹೇಳಿಬಿಡುತ್ತೇನೆ, ಭಾಸ್ಕರ ನನ್ನ ಆಪ್ತ ಗೆಳೆಯ. ಪಿ ಬಿ ಯೂ ಸಹ ಮತ್ತೊಬ್ಬ ಆಪ್ತ. ಆಮೇಲೆ ನೀವು ಭಾಸ್ಕರ ಯಾರು? ಪಿ ಬಿ ಯಾರು ಎಂದು ಗೊಂದಲದಲ್ಲಿ ಬೀಳುವುದು ಬೇಡ. ಪಿ ಬಿ ಯು ಉಮ್ಮಚಗಿ ಸಂಸ್ಕತ ಪಾಠಶಾಲೆಯಲ್ಲಿ ವಿದ್ವತ್ತನ್ನು ಓದುತ್ತಿದ್ದಾನೆ. ಅವನು ಸಿರಸಿಯಿಂದ ಬರುವ ಇನ್ನೆರಡು ಜನರ ಜೊತೆ ಬರುವಂತೆ ಭಾಸ್ಕರ ವ್ಯವಸ್ಥೆ ಮಾಡಿದ.

ಯಾವತ್ತಿನಂತೆ ನಿಗದಿತ ವೇಳೆಗಿಂತ ತಡವಾಗಿ ಹೋಗಬಾರದೆಂದು ಬಿಸಿ ಅನ್ನಕ್ಕೆ ತಂಪು ಮಜ್ಜಿಗೆ ಹಾಕಿಕೊಂಡು ಲಗುಬಗೆಯಿಂದ ಉಂಡು ಗೊತ್ತಾದ ಸ್ಥಳಕ್ಕೆ ಹೋಗಿ ನಿಂತೆ. ಉಳಿದವರಿಗೂ ಬರುವಂತೆ ಫೋನಾಯಿಸಿದೆ. ಸ್ವಲ್ಪ ತಡವಾಗಿಯಾದರೂ ಗೊತ್ತುಮಾಡಿದ್ದ ವಾಹನ ಬಂದೆ ಬಿಟ್ಟಿತು. ನಾವು ವಾಹನವನ್ನೆರಿದ್ದು ರಾಜಾಜಿನಗರದಲ್ಲಿ. ಇನ್ನೆರಡು ಕಡೆ ಬರುವವರು ಕಾಯುತ್ತಿದ್ದರು. ಅವರೆಲ್ಲರನ್ನೂ ಕರೆದುಕೊಂಡು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಮಾತ್ರ ತಡವಾಗಿ ಅಂದರೆ ಕೇವಲ ಒಂದೂವರೆ ಗಂಟೆ ತಡವಾಗಿ ಬೆಂಗಳೂರನ್ನ ಬಿಟ್ಟು ಹೊರಟೆವು.

ಒಟ್ಟು ಹದಿನೆಂಟು ಜನ. ಅರ್ಧದಷ್ಟು ಜನರಿಗೆ ಒಬ್ಬರಿಗೊಬ್ಬರು ಪರಿಚಯವಿರಲಿಲ್ಲ. ಅದಕ್ಕೆ ನಾನು ಒಂದು ಸ್ವ ಪರಿಚಯದ ಒಂದು ಸಣ್ಣ ಕಾರ್ಯಕ್ರಮ ಮಾಡೋಣ ಎಂದು ಸೂಚಿಸಿದೆ. ವಿಡಂಬನೆಯೆಂದರೆ ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಟ್ಟಮೇಲೂ ನನ್ನ ನೆನಪಿನಲ್ಲಿದ್ದದ್ದು ಮೊದಲು ಗುರುತಿದ್ದವರ ಹೆಸರುಗಳು ಮಾತ್ರ! ಹೆಸರುಗಳನ್ನು ನೆನಪಿಟ್ಟುಕೊಳ್ಳುವುದರಲ್ಲಿ ನಾನು ಬಡವ. ಆದರೂ ನಾನೇನೂ ಹೆದರುವುದಿಲ್ಲ. ಮುಖಕ್ಕೆ ಒಂದು ಮೂರ್ನಾಲ್ಕು ಹೆಸರುಗಳನ್ನು ಇತ್ತು ನೋಡಿ ಹೊಂದಾಣಿಕೆಯಾಗುವ ಒಂದು ಹೆಸರನ್ನು ಕೂಗುವುದರಲ್ಲಿ ನಾನು ನಿಸ್ಸೀಮ. ಮುಖಕ್ಕೆ ಹೆಸರು ಹೇಗೆ ಹೊಂದಾಣಿಕೆಯಾಗುತ್ತದೆ ಎಂದು ಮಾತ್ರ ಕೇಳಬೇಡಿ. ಅದೊಂದು ಕಲೆ!

ವಾಹನದ ಮೇಲೆ ನಾನು, ಭಾಸ್ಕರ, ಗಣು ಒಟ್ಟಾಗಿ ಕುಳಿತು ಹರಟುತ್ತಾ ಇರುವುದನ್ನು ನೋಡಿದ ನನ್ನ "ಮನದನ್ನೆ"ಯಾದ ವಿನುತಾಳು ನಮ್ಮನ್ನು ಬೇರೆಪಡಿಸುವ ಪ್ರಯತ್ನಕ್ಕೆ ಮುಂದಾದಳು. ಅವಳದ್ದು ಮೊದಲೇ ಹೇಳಿಕೆಯಾಗಿತ್ತು. ಯಾರೂ ಗುಂಪುಗಾರಿಕೆ ಮಾಡಬಾರದು, ಎಲ್ಲರ ಜೊತೆಗೂ ಬೆರೆಯಬೇಕು ಎಂದು. ವಾಹನದ ಸೀಟುಗಳು ಆರಾಮದಾಯಕವಾಗಿ ಇರಲಿಲ್ಲವೆಂದು ಕೆಲವರಿಗೆ ನಿದ್ದೆಯೇ ಬರಲಿಲ್ಲ. ನಾನೋ ಸ್ವಲ್ಪ ಹೊತ್ತು ತೂಕಡಿಸಿ, ಸ್ವಲ್ಪ ಹೊತ್ತು ವಿನುತಾಳ ಜೊತೆ ಹರಟಿ, ಡ್ರೈವರನ ಜೊತೆ ಮಾತಾಡಿ ಕಾಲ ಕಳೆದೆ. ನಿದ್ದೆ ಮಾಡುವಾಗ ಬೇಗ ಮೂಡುವ ಬೆಳಕು ಅವತ್ತೇಕೋ ಜಾಸ್ತಿ ಸಮಯ ತೆಗೆದುಕೊಂಡಿತು. ಪೇಪರಿಲ್ಲದ ಬೆಳಗು ಆಗೇಬಿಟ್ಟಿತು.

ಚುಮು ಚುಮು ಚಳಿಯಲ್ಲಿ "ಮತ್ತಿಮನೆ"ಯನ್ನು ಹುಡುಕಿ ಮನೆಯ ಮುಂದೆ ಹೋದಾಗ ನೋಡುತ್ತೇನೆ, ನಮ್ಮ ಚಾರಣದ ಗೈಡ್ ಒಂದು ಬನಿಯನ್ ಹಾಕಿಕೊಂಡು ಅಂಗಳದಲ್ಲಿ ನಿಂತಿದ್ದಾನೆ. ಉರಿ ಮದ್ಯಾಹ್ನದ ಹೊತ್ತಿನಲ್ಲಿ ಬರಿಮೈನಲ್ಲಿ ಅಂದರೆ ಬರೆ ಒಂದು ಪಂಜಿ ಉಟ್ಟುಕೊಂಡು ತಲೆಗೆ ಒಂದು ಟೊಪ್ಪಿ ಹಾಕಿಕೊಂಡು ಅಂಗಿಯನ್ನೆನೂ ಹಾಕಿಕೊಳ್ಳದೆ ಸೈಕಲ್ ಹೊಡೆದುಕೊಂಡು ಹೋಗುವವನನ್ನು ನನ್ನ ಕಾಲೇಜು ದಿನಗಳಲ್ಲಿ ನೋಡಿರುವುದರಿಂದ ಮತ್ತು ಚಳಿಗಾಲದ ಬೆಳಿಗ್ಗೆ ಬರಿಮೈನಲ್ಲಿ ದೇವಸ್ತಾನಕ್ಕೆ ನಡೆದುಕೊಂಡು ಹೋಗುವವನನ್ನು ನೋಡಿರುವುದರಿಂದ ಅಷ್ಟೇನೂ ಆಶ್ಚರ್ಯವಾಗಲಿಲ್ಲ. ಮುಖತಃ ಅವನ ಜೊತೆ ಪರಿಚಯಿಸಿಕೊಂಡು ಉಭಯಕುಶಲೋಪರಿ ಆದಮೇಲೆ ಬೇಗ ಎಲ್ಲರು ಮುಖ ತೊಳೆದು ತಿಂಡಿ ತಿಂದು ತಯಾರಾಗಬೇಕೆಂದೂ, ಬೇಗ ಹೊರಟರೆ ಒಳ್ಳೆಯದೆಂದೂ ಹೇಳಿದ. ಮುಟ್ಟಿದರೆ ಶಾಕ್ ಹೊಡೆಯುವಂತ ತಣ್ಣೀರಿನಲ್ಲಿ ಮುಖತೊಳೆದು ಉಳಿದವರಿಗೆ ಗಡಬಡೆ ಮಾಡಹತ್ತಿದೆ. ಇವೆಲ್ಲದರ ಮಧ್ಯದಲ್ಲಿ ಚಾಣದಲ್ಲಿ ಮರದ ಕುಂಟೆಯ ಚಕ್ಕೆ ಒಡೆಯುವ ಕೈಚಳಕವನ್ನು ನಾನು ಭಾಸ್ಕರ ನೋಡಿ ಆನಂದಿಸಿದೆವು.


ಹೊಟ್ಟೆತುಂಬ ದೋಸೆ. ಬನ್ಸ್ ತಿಂದು ಬಿಸಿ ಬಿಸಿ ಚಹಾವನ್ನು ಆಸ್ವಾದಿಸಿ ಹುಮ್ಮಸ್ಸಿನಲ್ಲೇ ತಯಾರಾದೆವು. ಈ ಸಮಯದಲ್ಲಿ ಸಿರಸಿಯಿಂದ ಬಂದ ಸಂತೋಷಣ್ಣ, ಪ್ರಶಾಂತಣ್ಣ ಪರಿಚಯವಾದರು. ಪಿ ಬಿ ಯ ಜೊತೆಯೂ ಲೋಕಕಲ್ಯಾಣಾರ್ಥವಾಗಿ ಒಂದೆರಡು ಕುಶಾಲು ಆದವು. ಪಂಡಿತ್ ಅವರಿಂದ ಚಾರಣದ ಪ್ರಾಸ್ತಾವಿಕ ಭಾಷಣವಾದಮೇಲೆ ಎಲ್ಲರೂ ತಮ್ಮ ತಮ್ಮ ಮಧ್ಯಾಹ್ನದ ಬುತ್ತಿಯನ್ನು ಹಿಡಿದುಕೊಂಡು ಹೊರೆಟೇಬಿಟ್ಟೆವು. ಬಹುಷಃ ಆ ಸಮಯದಲ್ಲಿ ಪಂಡಿತರೇ ನಿಲ್ಲಿ ಎಂದರೂ ನಿಲ್ಲುವ ಮನಸ್ಥಿತಿ ನಮ್ಮದಾಗಿರಲಿಲ್ಲ.


 ಮುಂದಿನ ಕಥೆಯನ್ನು ಒಂದೇವಾಕ್ಯದಲ್ಲಿ ಹೇಳಿಮುಗಿಸಬಹುದಾದರೂ ಅದು ತರವಲ್ಲ. ಒಂದು ಇಡೀ ದಿನ ಕೊಡಚಾದ್ರಿ  ಬೆಟ್ಟವನ್ನು ಹತ್ತಿದೆವು, ಮರುದಿನ ಇಳಿದೆವು. ಆದರೆ ಬೆಟ್ಟ ಹತ್ತುವುದರಲ್ಲಿ, ಹತ್ತುವಾಗ ನಮ್ಮ ಮಾತುಕತೆ, ಸುತ್ತಲಿನ ಪರಿಸರ ಇವುಗಳ ಮಜವೇ ಬೇರೆ. ಅದನ್ನು ಒಂದುವಾಕ್ಯದಲ್ಲಿ ಹೇಳುವುದು ಸಾಧ್ಯವಿಲ್ಲ. ನಾಲ್ಕು ಗಾಲಿಯ ವಾಹನ ಹೋಗುವಷ್ಟು ಅಗಲದ ರಸ್ತೆಯಲ್ಲಿ (ನೆನಪಿಡಿ, ನಾಲ್ಕು ಗಾಲಿಯ ವಾಹನ ಹೋಗುವಷ್ಟು ಅಗಲದ ಎಂದು ಹೇಳಿದೆ. ಹೋಗುವಂತಹ ರಸ್ತೆ ಎಂದು ಹೇಳಿಲ್ಲ) ಪ್ರಾರಂಭವಾಗಿ, ಮನುಷ್ಯ ಮಾತ್ರದ ಜೀವ ಹೋಗುವಂತಹ ದಾರಿಯಲ್ಲಿ ನಮ್ಮ ಪ್ರಯಾಣ ಸಾಗಿತು. ಮೊದಲು ಪಂಡಿತ ಅವರ ಜೊತೆ ನಾನು, ಭಾಸ್ಕರ, ಪಿ ಬಿ, ಗಣು ಮುಂದೆ ಮುಂದೆ ಹೋದೆವು. ಹೋಗುವಾಗ ಪಂಡಿತ್ ಅವರ ಜೊತೆ ಪಿ ಬಿ ಸುಮಾರು ಹರಟಿದ. ಅವರು ಪಿ ಬಿ ಯ ಮಾತಿಗೆ ಮೋಡಿಗೊಳಗಾದರು. ಪಿ ಬಿ ಯ ಆಶೀರ್ವಚನವೋ ವರ್ಣಿಸಲಸದಳ. ಸುಮಾರು ಅಪರಾಹ್ನದ ಸಮಯಕ್ಕೆ ಹಿಡ್ಲುಮನೆ ಜಲಪಾತವನ್ನ ತಲುಪಿದೆವು.

ಸೂರ್ಯ ನೆತ್ತಿಯಮೇಲೆ ಇರುವಂತಹ ಸಮಯದಲ್ಲಿ ಬಿಸಿಲು ನೆಲ ತಾಕದಷ್ಟು ಒತ್ತೊತ್ತಾಗಿದ್ದವು ಮರಗಳು. ಅವುಗಳ ಮಧ್ಯದಲ್ಲಿ ಬಂಡೆಯ ಮೇಲಿಂದ ಜಿಗಿಯುತ್ತಿತ್ತು ನೀರಿನ ತೊರೆ. ಅಷ್ಟೇನೂ ದೊಡ್ಡ ಜಲಪಾತವಲ್ಲದಿದ್ದರೂ ಸುಂದರವಾಗಿತ್ತು. ಜಲಪಾತದ ಕೆಳಗೆ ಹೋಗಿ ನಿಲ್ಲುವ ಅವಕಾಶವಿತ್ತು. ದೂರದಿಂದ ಒಂದೆರಡು ಫೋಟೋ ಕ್ಲಿಕ್ಕಿಸಿ, ನೀರಿಗೆ ಇಳಿದೇಬಿಟ್ಟೆವು. ಜಲಪಾತದ ಕೆಳಗೆ ಹೋಗಿ ನಿಂತರೆ, ನಿಜ ಹೇಳುತ್ತೇನೆ, ಐಸ್ ಮಧ್ಯದಿಂದ ತೆಗೆದ ಕೊಡೆ ಕಡ್ಡಿ ಚುಚ್ಚಿದಂತಾಗುತ್ತಿತ್ತು, ಮಜವೂ ಆಗುತ್ತಿತ್ತು. ಭಾಸ್ಕರ ಆದರ್ಶನನ್ನು ಎಳೆದು ನೀರಿನ ಕೆಳೆಗೆ ನಿಲ್ಲಿಸಿ ಮಜವಾಗುತ್ತದೆ ಎಂದಾಗ "ಇವನಿಗೆ ಏನೋ ಕಚ್ಚಿದೆ" ಎಂದು ಆದರ್ಶನು ನಿಷ್ಪಕ್ಷವಾದ ತೀರ್ಮಾನ ತೆಗೆದುಕೊಂಡುಬಿಟ್ಟ.
 ಒದ್ದೆ ಮೈನಲ್ಲೇ ಜಲಪಾತದ ಮೇಲ್ಬದಿಗೆ ಹೋಗಿ, ಮದ್ಯಾಹ್ನದ ಬುತ್ತಿಯನ್ನು ತಿಂದೆವು. ಹಸಿವಾಗಿದ್ದಕ್ಕೋ ಏನೋ ಮತ್ತಿಮನೆಯ ಚಪಾತಿ, ಕಾಯಿ ಹೂರಣ ಬಾಯಿಗೆ, ಹೊಟ್ಟೆಗೆ ಮ್ರಷ್ಟಾನ್ನವಾಗಿತ್ತು. ಅದರ ನಿಜವಾದ ರುಚಿ ಹೇಗಿತ್ತೆಂದು ಹೇಳಲು ಸಾದಾ ದಿನ ತಿಂದು ನೋಡಬೇಕು. ಊಟವಾದ ತಕ್ಷಣ ಮತ್ತೆ ಮೇಲೆ ಹತ್ತಲು ಶುರು. ಕಡಿದಾದ ಬೆಟ್ಟದ ದಾರಿ, ಉಂಡ ಹೊಟ್ಟೆ, ಮುಷ್ಕರ ಹೂಡುತ್ತಿರುವ ಕಾಲುಗಳು, ಮುಚ್ಚದ ಪಂಡಿತರ ಬಾಯಿ, ನೆಲದಮೇಲಿರುವಾಗ ಮಲ್ಲಿಗೆಯಷ್ಟು ಹಗುರವಾಗಿಯೂ, ಬೆನ್ನಿಗೆ ಹಾಕಿಕೊಂಡಾಗ ಮಣ ಭಾರವೆನ್ನಿಸುವ ಬ್ಯಾಗ್ ಆಹಾ ಏನು ಕೇಳುತ್ತೀರಾ ಇವುಗಳ ಕೂಡುವಿಕೆಯನ್ನ.


"ಭೂಮಿ ಗುಂಡಗಿದೆ ಎಂದು ಶಾಲೆಯಲ್ಲಿ ಓದಿ ತಿಳಿದಿದ್ದೆ ಆದರೆ ಇಷ್ಟೊಂದು ಎತ್ತರವೂ ಇದೆ ಎಂಬುದು ಗೊತ್ತಿರಲಿಲ್ಲ" ಇದು ಸಂತೋಷಣ್ಣನ ಅಂಬೋಣ. ಹೇಗೋ ಹೇಗೋ ನಡೆದು ಕೊಡಚಾದ್ರಿಯ ದೇವಸ್ಥಾನದ ಹತ್ತಿರವಿರುವ ಐ ಬಿ ಗೆ ಬಂದೆವು.
ನಾಲ್ಕು ಗಂಟೆ ಸುಮಾರಿಗೇ ನಮ್ಮ ಅಳಿದುಳಿದ ಶಕ್ತಿ ನಶಿಸುತ್ತಾ ಬಂದಿತ್ತು. ಬೆನ್ನಿಗಿರುವ ಬ್ಯಾಗ್ ತಗೆದಿಟ್ಟು, ನೀರಿನಲ್ಲಿ ಮುಖ ತೊಳೆದುಕೊಂಡು, ನೀರು ಕುಡಿದು ಕುಳಿತು ಸುಧಾರಿಸಿಕೊಂಡೆವು. ಬೆಟ್ಟವೇರುವುದು ಎಷ್ಟೇ ಕಷ್ಟವಾಗಿದ್ದರೂ ಸುತ್ತಲಿನ ನೋಟ ಮಾತ್ರ ಚೇತೋಹಾರಿಯಾಗಿತ್ತು. ಮೇಲೇರಲು ಅದು ಮೌನವಾಗಿ ಕೊಟ್ಟ ಉತ್ಸಾಹವೇ ಕಾರಣ ಜೊತೆಗೆ ಸಂತೋಷಣ್ಣ, ಪ್ರಶಾಂತಣ್ಣ, ಪಿ ಬಿ ಯವರ ಸಮಯೋಚಿತ ಅಧಿಕ ಪ್ರಸಂಗಗಳು.


ಇಲ್ಲಿಗೆ ಬೆಟ್ಟವೇರುವುದು ಒಂದು ಹಂತಕ್ಕೆ ಬಂತು ಇನ್ನು ಸ್ವಲ್ಪ ಮೇಲೆ ಹೋದರೆ ಸರ್ವಜ್ಞ ಪೀಠ ಸಿಕ್ಕುತ್ತದೆ ಎಂದು ಪಂಡಿತ್ ಜಿ ಹೇಳಿದರಾದರೂ "ಸ್ವಲ್ಪ ಮೇಲೆ ಹೋದರೆ" ಎನ್ನುವುದನ್ನು ಯಾರೂ ನಂಬಲಿಲ್ಲ. ವಿನುತಾಳು ಮೊದಲು ಸರ್ವಜ್ಞ ಪೀಠವನ್ನು ನೋಡಿದ್ದಾಳೆ ಎಂದು ಅವಳ ಮುಂದಾಳತ್ವದಲ್ಲಿ ಸರ್ವಜ್ಞ ಪೀಠಕ್ಕೆ ಹೊರಟೆವು. ಕಳೆದ ವರ್ಷ ತಲಕಾವೇರಿ ಪಕ್ಕಕ್ಕಿರುವ ಬೆಟ್ಟ ಹತ್ತುತ್ತಿರುವಾಗ "ಇನ್ನೂ ಸ್ವಲ್ಪ ಮೇಲೆ ಹೋದರೆ ನಾವು ನಮ್ಮ ಪೂರ್ವಜರನ್ನು ಮಾತನಾಡಿಸಿಕೊಂಡು ಬರಬಹುದೇನೋ" ಎಂದು ಗಣು ಹೇಳಿದ್ದ. ಅದನ್ನು ನೆನಪಿಸಿಕೊಂಡು ನಕ್ಕೆವು. ಸೂರ್ಯ ಮುಳುಗಲು ಇನ್ನೇನು ಕೆಲವೇ ನಿಮಿಷಗಳಿದ್ದವು.

                                       --ಓದುಗರ ಅಭಿಪ್ರಾಯ ತಿಳಿದು ಮುಂದಿನ ಭಾಗ ಬರೆಯುವುದೋ ಬೇಡವೋ ನಿರ್ಧರಿಸುತ್ತೇನೆ.

Monday, January 23, 2012

ರೈಲ್ವೆ ಮಹಿಮೆ!

ಕಳೆದ ವರ್ಷ ನಾನು ವಾಸಿಸುತ್ತಿದ್ದ ಮನೆ ರೈಲ್ವೆ ಹಳಿಯ ಸಮೀಪದಲ್ಲಿತ್ತು. ರಾತ್ರಿ ಮಲಗಿ ಇನ್ನೇನು ನಿದ್ರೆ ಬಂತು ಎನ್ನುವಾಗ "ಕೂ" ಎಂದು ಕೂಗುತ್ತಾ ರೈಲು ಹೋಗುತ್ತಿತ್ತು. ಒಮ್ಮೊಮ್ಮೆ ಆಶ್ಚರ್ಯ ಆಗುತ್ತಿತ್ತು,ನಾನು ಮಲಗಲು ಅನುವಾಗುವುದು ಈ ರೈಲ್ವೆ ಇಲಾಖೆಯವರಿಗೆ ಹೇಗೆ ಗೊತ್ತಾಗುತ್ತದೆ? ಎಂದು. ಎದುರುಗಡೆಯಿಂದ ಇನ್ನೊಂದು ರೈಲು ಬರುವುದಿಲ್ಲ, ಮುಂದೆ ಹೋಗುತ್ತಿರುವ ರೈಲಿಗೆ ದಾರಿ ಬಿಡಿ ಎಂದು ಕೇಳುವ ಪ್ರಮೇಯವಿಲ್ಲ. ಆದರೂ ಈ ರೈಲಿಗೆಕೆ ಕರೆಗಂಟೆ ಇರುತ್ತದೆಯೋ ಎಂದು ಸಿಟ್ಟು ನೆತ್ತಿಗೆರುತ್ತಿತ್ತು. ಹೆಚ್ಚುಕಡಿಮೆ ಶಬ್ದ ಮಾಡದೆ ಓಡಾಡುವ ವಾಹನಗಳು ರಸ್ತೆಯ ಮೇಲೆ ತುಂಬಿ ತುಳುಕುತ್ತಿರುವಾಗ ಯಾವ ತಂತ್ರಜ್ಞನೂ ಶಬ್ದರಹಿತವಾದ ರೈಲನ್ನೇಕೆ ಕಂಡುಹಿಡಿಲ್ಲವೋ ದೇವರಿಗೆ ಗೊತ್ತು. ಕೆಲವೊಮ್ಮೆ ಈ "ಇಂಜಿನೀಯರುಗಳು" ವಿಪರೀತ ಭೇದ ಮಾಡುತ್ತಾರೆ ಅನಿಸುತ್ತದೆ.

ನನಗೇಕೋ ರೈಲಿನಮೇಲೆ ವಿಶ್ವಾಸವೇ ಇಲ್ಲ. ರೈಲ್ವೆ ಚಾಲಕನು ಪಕ್ಕದ ಹಳಿಯಮೇಲೆ ಎದುರಾಗಿ ಬರುತ್ತಿರುವ ರೈಲನ್ನು ನೋಡಿ ಹೆದರಿ ಗಾಬರಿಗೊಂಡು ಎಲ್ಲಾದರೂ ತಾನು ಹೋಗುತ್ತಿರುವ ರೈಲಿನ ದಿಕ್ಕನ್ನು ಬದಲಿಸಿದ ಎಂತಾದರೆ, ಪ್ರಯಾಣಿಕರೆಲ್ಲರಿಗೂ ಒಂದೇ ಸಲ ಮುಕ್ತಿ ದೊರಕುತ್ತದೆ. ರೈಲಿನ ಹಳಿ ಬೇರೆ ಕಬ್ಬಿಣದ್ದು. ರೈಲಿನ ಗಾಲಿಗಳೂ ಕಬ್ಬಿಣದ್ದು. ಎಲ್ಲಾದರೂ ಮಳೆಗಾಲದಲ್ಲಿ "ಸಿಡಿಲು" ಹೊಡೆಯಿತು ಎಂತಾದರೆ... ಬಚಾವಾಗುವ ಪ್ರಶ್ನೆಯೇ ಇಲ್ಲಾ. ಸುಟ್ಟು ಕರಕಲಾಗುವುದೊಂದೇ ದಾರಿ.

ಸಾಕಪ್ಪ ಸಾಕು ಈ ರೈಲಿನ ಸಹವಾಸ..

Thursday, January 19, 2012

ಗೋಳಾಕೃತಿ!!

ಉರುಳಿಸು ಎನ್ನುವ ಶಬ್ದ ಮೊದಲು ಹುಟ್ಟಿತೋ ಅಥವಾ ಗೋಳಾಕೃತಿ ಮೊದಲೋ ಎನ್ನುವುದು ಕೋಳಿ ಮೊದಲೋ ಮೊಟ್ಟೆಯೋ ಎನ್ನುವಷ್ಟೇ ಕ್ಲಿಷ್ಟ. ಏಕೆಂದರೆ ಆಕೃತಿಯಲ್ಲಿ ಗೊಳವಾಗಿರುವುದನ್ನು ಮಾತ್ರ ಉರುಳಿಸಲು ಸಾಧ್ಯ. ಚೌಕವೋ, ತ್ರಿಕೊನವೋ ಆದರೆ ಗೋಳವನ್ನು ಉರುಳಿಸಿದಷ್ಟು ಸಲೀಸಾಗಿ ಉರುಳಿಸಲಸಾಧ್ಯ. ಷಟ್ಭುಜ, ಅಷ್ಟಭುಜ ಆಕೃತಿಗಳು ಗೊಳಕ್ಕೆ ಹತ್ತಿರದ ಆಕ್ರುತಿಗಳೇ ಆದರೂ ಗೋಳ ಗೋಳವೇ.

ತ್ರಿಕೊನಾಕ್ರತಿಯನ್ನೂ ಸಲೀಸಾಗಿ ಉರುಳಿಸಬಹುದು ಎಂದಾಗಿದ್ದರೆ, ಕಲ್ಪಿಸಿಕೊಳ್ಳಿ, ಎತ್ತಿನಗಾಡಿಗೆ ತ್ರಿಕೋನಾಕಾರದ ಗಾಲಿ!!!

ದೇವರು ದೊಡ್ಡವನು. ದೇವರಿಗೆ ಕಲಾ ಪ್ರಜ್ಞೆಯಿದೆ.ಸಧ್ಯ!!

ಕೊಡಚಾದ್ರಿ ಚಾರಣ

ಕಳೆದ ವರ್ಷದಂತೆ ಈ ವರ್ಷವೂ ಪ್ರವಾಸಕ್ಕೆ ಹೋಗುವ ವಿಚಾರ ಬಂದಾಗ ಬೇಡವೆಂದೆ ಹೇಳಿದ್ದೆ. ಏಕೆಂದರೆ ಪ್ರವಾಸಕ್ಕೆ ಹೋಗುವ ಗುಂಪು ನನ್ನ ಯಾವತ್ತಿನ ಗುಂಪಾಗಿರಲಿಲ್ಲ. ಆಮೇಲೆ ಹೇಗಾದರಾಗಲಿ ಎಂದು ಒಪ್ಪಿಕೊಂಡೆ. ಹೋಗುವ ಸ್ಥಳದ ಬಗ್ಗೆ ಚೌಕಾಶಿ ನಡೆಯುತ್ತಿರುವಾಗ ಎಷ್ಟು ಜನ ಹೋಗುವವರು ಎಂದೇನೂ ನನಗೆ ಗೊತ್ತಿರಲಿಲ್ಲ. "ನರಸಿಂಹ ಪರ್ವತ", "ಕುಮಾರ ಪರ್ವತ" ಏನೇನೋ ಕಾರಣಗಳಿಂದ ಹಿಂದೆ ಸರಿದಾಗ "ಕೊಡಚಾದ್ರಿ" ಎಂದು ಸೂಚಿಸಲ್ಪಟ್ಟಿತು. ನನಗೂ ಅಲ್ಲಿ ಊಟ ವಸತಿ ಏರ್ಪಾಡು ಮಾಡುವವರ ಸಂಪರ್ಕ ಸಿಕ್ಕಿತು. ದಿನವೂ ನಿಗದಿಯಾಯಿತು. ಆಗ ಗೊತ್ತಾದದ್ದು ಬರುವವರ ಸಂಖ್ಯೆ ಇಪ್ಪತ್ತರ ಮೇಲಿದೆ ಎಂದು. ಅದರಲ್ಲೂ ಹೆಂಗಳೆಯರೇ ಜಾಸ್ತಿ ಎಂದು. ಪ್ರವಾಸದಿಂದ ಹಿಂದೆ ಸರಿಯಲೇ ಎಂಬ ಯೋಚನೆಯೂ ಬಂದಿತ್ತು. ನನ್ನ ಬಾಲ್ಯ ಸ್ನೇಹಿತ ಮತ್ತು ಅತ್ಯಂತ ಆಪ್ತ ಸ್ನೇಹಿತನು ಬರುತ್ತಿರುವಾಗ ನಾನು ಹಿಂದೆ ಸರಿಯಬಾರದೆಂದು ಹೊರಡಲು ಅನುವಾದೆ.


ಕೊಡಚಾದ್ರಿಗೆ ಬರುವವರು ಇಪ್ಪತ್ತೊಂದು ಜನರೆಂದು ನಿಗದಿಯಾದ ಮೇಲೆ ಯೋಚಿಸಿದಾಗ ಅರ್ಧದಷ್ಟು ಜನ ನನಗೆ ಪರಿಚಯವೇ ಇಲ್ಲವೆಂದು ತಿಳಿಯಿತು. ಆಗ ನಾನು ಪ್ರವಾಸದ ಮೋಜು, ಮಸ್ತಿಯ ಆಸೆಯನ್ನೇ ಬಿಟ್ಟುಬಿಟ್ಟೆ. ಒಪ್ಪಿಕೊಂಡಾಗಿದೆ, ಹೋಗಿಬರುವುದು ಎಂದಷ್ಟೇ ಭಾವಿಸಿದೆ. ಹೇಗೂ ಇಷ್ಟು ಜನ ಬರುತ್ತಿದ್ದಾರೆ ನಾನೂ ಮತ್ತೊಬ್ಬನನ್ನು ಕರೆತರುವೆ ಎಂದು ಯೋಚಿಸಿ ಊರಿನಲ್ಲೇ ಇರುವ ಮತ್ತೊಬ್ಬ ನನ್ನ ಆತ್ಮೀಯನಿಗೆ ಫೋನಾಯಿಸಿದೆ. ಅವನು ಬರುವ ಉತ್ಸಾಹವನ್ನೇನೋ ತೋರಿಸಿದ ಆದರೆ ಬರುವ ಬಗ್ಗೆ ಹಿಂಜರಿದ. ಕೊನೆಗೆ ಹೊರಡುವ ಹಿಂದಿನ ದಿನ ಬರುವುದಾಗಿ ತಿಳಿಸಿ ಬಂದೆ ಬಿಟ್ಟ.


ಈಗ ಯೋಚಿಸಿದರೆ ಪ್ರವಾಸದ ಯಶಸ್ಸು, ಬಂದವರಲ್ಲಿ ಯಾರೊಬ್ಬರು ಇಲ್ಲದಿದ್ದರೂ ಸಾಧ್ಯವಾಗುತ್ತಿರಲಿಲ್ಲ ಎಂದೇ ಅನಿಸುತ್ತದೆ. ವೈಯಕ್ತಿಕವಾಗಿ ನನಗೆ ಇಬ್ಬರು ಹೊಸ ಗೆಳೆಯರು ಸಿಕ್ಕಿದರೆಂದೇ ಹೇಳಬಹುದು. ಎಲ್ಲರೂ ಎಷ್ಟು ಚೆನ್ನಾಗಿ ಬೆರೆತರು, ಒಬ್ಬರಿಗೊಬ್ಬರು ಸಹಾಯ ಮಾಡಿದರು, ಪ್ರವಾಸದ ಮೋಜನ್ನು ಹೆಚ್ಚಿಸಿದರು. ಪ್ರವಾಸ ಇಷ್ಟೊಂದು ಚೆನ್ನಾಗಿ ಆಗುವುದೆಂದು ಕಲ್ಪನೆಯನ್ನೂ ಮಾಡಿರಲಿಲ್ಲ.


ಒಟ್ಟಿನಲ್ಲಿ ವರ್ಷಕ್ಕೊಂದೆರಡು ಬಾರಿ ಪ್ರವಾಸ ಮಾಡುವುದು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದೆಂದು ಕಂಡುಕೊಂಡೆ. "ಕೊಡಚಾದ್ರಿ" ಎನ್ನುವುದೊಂದು ಪ್ರತಿಮೆ. ಪ್ರವಾಸವೆನ್ನುವುದು ಉಲ್ಲಾಸ ತಂದುಕೊಡುತ್ತದೆ. ಬಹುಷಃ ಯಾವ ಜಾಗಕ್ಕೇ ಹೋದರೂ ಇದೇ ರೀತಿಯ ಸಂತೋಷವಾಗುತ್ತಿತ್ತೇನೋ.

Tuesday, January 10, 2012

ಬದಲಾವಣೆ

            ಬದಲಾವಣೆ ಜಗದ ನಿಯಮ. ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ. ಈ ವಿಷಯ ಯಾರಿಗೆ ಗೊತ್ತಿಲ್ಲ. ಯಾರೂ ಈ ವಿಷಯವನ್ನು ಹೇಳಬೇಕಾಗಿಲ್ಲ. ಜನರೂ ಸಹಾ ಬದಲಾವಣೆಗೆ ತಹತಹಿಸುತ್ತಿರಿತ್ತಾರೆ. ನಮಗೆ ಹೊಸ ತಂತ್ರಜ್ಞಾನ ಮೊಬೈಲ್ ನಲ್ಲಿ, ಟಿ ವಿ ನಲ್ಲಿ, ಎಲ್ಲದರಲ್ಲೂ ಬೇಕೇ ಬೇಕು. ಹಳೆಯ ತಂತ್ರಜ್ಞಾನ ಯಾರಿಗೂ ಬೇಡ.

         ಉದಾಹರಣೆಗೆ ಒಂದು ವಸ್ತು ಇರುವ ರೂಪ, ಗಾತ್ರ, ವಿಶೇಷತೆ ಮತ್ತು ಅದರ ಋಣಾತ್ಮಕ ಅಂಶಗಳೊಂದಿಗೆ ಯಾವಾಗಲೂ ಇದ್ದರೆ ಜನರು ಅದನ್ನು ಇಷ್ಟ ಪಡುವರೆ? ಕಂಪ್ಯೂಟರ್ ಅದರ ಮೊದಲಿನ ಗಾತ್ರದಲ್ಲೇ ಇದ್ದರೆ ಈಗಿನ ಪರಿಸ್ತಿತಿ ಹೇಗಿರುತ್ತಿತ್ತು.

          ಕಾಲದೊಂದಿಗೆ ಎಲ್ಲವೂ ಬದಲಾಗುತ್ತವೆ, ಬದಲಾಗಲೇ ಬೇಕು. ಅದು ಚಲನಶೀಲತೆಯ ಲಕ್ಷಣ. ಮನುಷ್ಯರೂ ಸಹ ಇದ್ದ ಹಾಗೆ ಯಾವಾಗಲೂ ಇರುವುದಿಲ್ಲ. ಅವರ ಅಭಿರುಚಿಯಿಂದ ಹಿಡಿದು ಆಲೋಚನಾ ವಿಧಾನ, ಪ್ರಾಮುಖ್ಯತೆಗಳು ಬದಲಾಗುತ್ತ ಹೋಗುತ್ತವೆ. ಅವರು ಬದುಕುತ್ತಿರುವ ಪರಿಸರ, ಸುತ್ತಲಿನ ಜನರು ಇವೆಲ್ಲವೂ ಬದಲಾವಣೆಯ ಮೇಲೆ ಪ್ರಭಾವ ಬೀರುವುದು ಹೌದಾದರೂ ಬದಲಾವಣೆ ಸಹಜ.

         ಆದರೆ ನಾವೇಕೆ ಸುತ್ತಲಿನ ಜನರು ಬದಲಾಗುವುದನ್ನು ಸಹಿಸುವುದಿಲ್ಲವೋ ಅರ್ಥವಾಗುವುದಿಲ್ಲ. "ಅವನು ಮೊದಲು ಹಾಗಿದ್ದ, ಹೀಗಿದ್ದ. ಈಗ ಹೇಗೋ ಇದ್ದಾನೆ. ಬದಲಾಗಿ ಬಿಟ್ಟಿದ್ದಾನೆ" ಎಂದೆಲ್ಲ ಅಲವತ್ತುಕೊಳ್ಳುತ್ತೇವೆ.
ಜನರು ಬದಲಾಗುವುದನ್ನು ಸಹಿಸಲಾಗುವುದಿಲ್ಲವೋ ಅಥವಾ ಒಪ್ಪಿಕೊಳ್ಳಲು ಕಷ್ಟವೋ? ಈಗ ಅವನಲ್ಲಿರುವ ಧನಾತ್ಮಕ ಅಂಶಗಳನ್ನು ನೋಡಿ ನಾವೇಕೆ ಮೆಚ್ಚಬಾರದು?

Saturday, January 7, 2012

ಜೀವನ!

ಜೀವನ ಎನ್ನುವುದು ಸುಂದರ! ಇಷ್ಟಕ್ಕೂ ಜೀವನ ಎಂದರೆ ಏನು? ನಾವು ಬದುಕುವ ರೀತಿಯೇ? ಪದ್ಧತಿಯೇ? ನಮಗುಂಟಾಗುವ ನಾನಾ ರೀತಿಯ ಅನುಭವಗಳೇ? ಏನು? ಸುಮ್ಮನೆ ಉಸಿರಾಡುತ್ತಾ ಬದುಕುವುದು ಜೀವನವೇ? ನಮಗೆ ಸಂತೋಷ ಆಗುವ ರೀತಿಯಲ್ಲಿ ಆಸಕ್ತಿದಾಯಕ ಕೆಲಸಗಳನ್ನು ಮಾಡುತ್ತಾ ಜೊತೆಗಿರುವವರಿಗೆ ಸಂತೋಷವನ್ನು ಹಂಚುತ್ತಾ ಬದುಕುವುದು ಜೀವನವೇ?

ಹೆರೆಮಣೆ

ಗೆಳೆಯನೊಬ್ಬ ಕೆಲ ದಿನಗಳ ಹಿಂದೆ ಒಂದು ಪ್ರಶ್ನೆ ಕೇಳಿದ್ದ. ಕಾಯಿ ತುರಿಯುವ ಅಥವಾ ಹೆರೆಯುವ ಮಣೆಗೆ "ಹೆರೆಮಣೆ" ಎಂದು ಹೇಳುವುದು ವಾಡಿಕೆ. ಆದರೆ ಆ ಮಣೆ ಏನು ಮನೆಯ ಹೊರಗಿರುತ್ತದೋ? ಇಲ್ಲ. ಹಾಗಿದ್ದರೆ ಹೆರೆಮಣೆ ಎಂದೇಕೆ ಕರೆಯುತ್ತಾರೆ? ಇದು ತುಂಬಾ ಪ್ರಸ್ತುತ ಪ್ರಶ್ನೆ.