"ವಿದ್ಯುತ್" ಎನ್ನುವುದು ನನಗೊಂದು ಆಶ್ಚರ್ಯ ಇವತ್ತಿಗೂ. ಒಂದೊಂದು ಸಲ ದೇವರು ಇದ್ದಾನೆ ಎನ್ನುವುದಕ್ಕೂ ಇದೇ ಸಾಕ್ಷ್ಯ ಅನ್ನಿಸಿಬಿಡುತ್ತದೆ. ಕಣ್ಣಿಗೆ ಕಾಣುವುದಿಲ್ಲ ಆದರೆ ಮುಟ್ಟಿದರೆ ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಶಾಕ್ ಹೊಡೆಯುತ್ತದೆ. ಕ್ಷಣಮಾತ್ರದಲ್ಲಿ ಇಲ್ಲಿ ಸ್ವಿಚ್ ಒತ್ತಿದರೆ ಅಲ್ಲೆಲ್ಲೋ ಬೆಳಕಾಗುತ್ತದೆ. ಸಣ್ಣ ತಂತಿಯಲ್ಲಿ ಏನೇನನ್ನೋ ತಿರುಗಿಸಬಹುದಾದಷ್ಟು, ಸುಡುವಷ್ಟು ಪ್ರಮಾಣದ ವಿದ್ಯುತ್ ಹರಿದು ಹೋಗುತ್ತದೆ. ತಂತಿಯಲ್ಲಿ ಹರಿಸಬಹುದಾದರೂ ಗಾಳಿಯಲ್ಲಿ ಬೆರೆಯುವುದಿಲ್ಲ, ಆರಿಹೊಗುವುದಿಲ್ಲ. ಉಪಯೋಗಿಸದಿದ್ದರೆ ಕರ್ಚು ಆಗುವುದಿಲ್ಲ. ಅದೇನೋ ವಾಹಕವಂತೆ ಅದರಲ್ಲಿ ಮಾತ್ರ ವಿದ್ಯುತ್ ಹರಿಯುತ್ತದಂತೆ. ಅದಕ್ಕೆ ಹೇಗೆ ಗೊತ್ತಾಗುತ್ತದೋ ಇದು ವಾಹಕ, ನಾನು ಇದರಲ್ಲಿ ಹರಿಯಬಹುದು. ಇದು ವಾಹಕವಲ್ಲ ಇದರಲ್ಲಿ ನಾನು ಪ್ರವಹಿಸಲಾರೆ ಎಂದು.
ವಿದ್ಯುತ್ತಿಗೆ ಕಾಗೆಗಳಮೇಲೆ ಮೃದು ಧೋರಣೆಯಿದೆ . ನಾವು ಯಾರೇ ಮುಟ್ಟಿದರೂ ಹಿಂದೂ ಮುಂದು ಯೋಚಿಸದೆ ಶಾಕ್ ಹೊಡೆಯುತ್ತದೆ ಆದರೆ ಕಾಗೆಗಳು ಸಾಲಾಗಿ ತಂತಿಯ ಮೇಲೆ ಕುಳಿತುಕೊಂಡರೂ ಏನೂ ಆಗುವುದಿಲ್ಲ. ಅವು ತಂತಿಯ ಮೇಲೆ ಕುಳಿತುಕೊಂಡು ಅವರ ಕೊಕ್ಕು ಚೂಪಾಗಿಸಿಕೊಳ್ಳುವುದೋ, ಎಲ್ಲಿಂದಲೋ ಹೊತ್ತು ತಂದ ಸತ್ತು ಕೊಳೆತು ನಾರುತ್ತಿರುವ ಇಲಿಯ ದೇಹವನ್ನು ಹಂಚಿಕೊಳ್ಳುವುದೋ ಮಾಡುತ್ತಿರುತ್ತವೆ. ಆಗ ಅವು ನಮ್ಮತ್ತ ತಿರುಗಿ ನೋಡಿದಾಗ ನಮ್ಮನ್ನು ಹೀಯಾಳಿಸಲೆಂದೇ ನೋಡುತ್ತಿರುವಂತೆನಿಸುತ್ತದೆ.
ಜನರ ಮತ್ತು ನನ್ನ ನಂಬಿಕೆ ಏನೆಂದರೆ ವಿದ್ಯುತ್ ಅಪಾಯಕಾರಿ, ಅದನ್ನು ದೂರವಿಡಬೇಕೆಂದು. ವಿಚಿತ್ರವೆಂದರೆ ವೈದ್ಯಕೀಯ ಪದ್ಧತಿಯಲ್ಲಿ ಶಾಕ್ ಕೊಡುವುದೂ ಒಂದು ರೀತಿಯ ಚಿಕಿತ್ಸೆ ಕೆಲವು ಮಾನಸಿಕ ರೋಗಗಳಿಗೆ. ಇಂತಹ ಚಿಕಿತ್ಸೆಯಲ್ಲಿ ಕಡಿಮೆ ಪ್ರಮಾಣದ ವಿದ್ಯುತ್ತನ್ನು ದೇಹದೊಳಗೆ ಹರಿಸುತ್ತಾರಂತೆ. ಅವರಿಗೇನಾದರೂ ಮಾನಸಿಕ ಸ್ಥಿಮಿತ ಇದ್ದಿದ್ದರೆ ವಿದ್ಯುತ್ ಹಾಯಿಸಲು ಒಪ್ಪುತ್ತಿದ್ದರೆ? ಖಂಡಿತ ಇಲ್ಲ. ಮಾನಸಿಕ ಸ್ಥಿಮಿತ ಇರುವವರಿಗೆ ವೈದ್ಯರೂ ವಿದ್ಯುತ್ತನ್ನು ಹಾಯಿಸುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎನ್ನಿ.
ಬಹಳ ದಿನಗಳ ಹಿಂದೆ ನನ್ನ ಪರಮಾಪ್ತನಿಗೆ ಏನೋ ವಿವರಿಸುವಾಗ "ಉದಾಹರಣೆಗೆ ವಿದ್ಯುತ್ ತಂತಿಯನ್ನು ತೆಗೆದುಕೋ" ಅಂತ ಹೇಳಿದ್ದೆ. "ಉದಾಹರಣೆಗಲ್ಲ ಯಾವುದಕ್ಕೂ ವಿದ್ಯುತ್ ತಂತಿಯನ್ನು ತೆಗೆದುಕೊಂಡು ಹಿಡಿಯುವುದಿಲ್ಲ. ತಲೆ ಸರಿ ಇರುವವರಾರೂ ವಿದ್ಯುತ್ ತಂತಿಯನ್ನು ಹಿಡಿದುಕೊಳ್ಳುವುದಿಲ್ಲ." ಎಂದು ನನ್ನ ಕಾಲೆಳೆದಿದ್ದ. ಈಗಲೂ ಆಗಾಗ ನೆನಪಿಸುತ್ತಿರುತ್ತಾನೆ.
:) :) Chanda lekhana... sureshanna..
ReplyDelete