Tuesday, October 20, 2015

ಓದು!!

ನಮ್ಮನೆಗಿಂತ ಮೊದಲು ಟಿವಿ ಬಂದಿದ್ದು ಪಕ್ಕದಮನೆಯಲ್ಲಿ. ಹೊಸತರಲ್ಲಿ ಅದೇನು ಆಶ್ಚರ್ಯ, ಉತ್ಸಾಹ.. ಆಗ ಬರುತ್ತಿದ್ದದ್ದು ಡಿಡಿ೧ ಮಾತ್ರ. ಎತ್ತರದ ಮರದ ತುದಿಗೆ ಎಂಟೆನಾ ಕಟ್ಟಿದ್ದರು. ಸ್ವಲ್ಪ ಗಾಳಿ ಬೀಸಿದರೆ ಅದು ತಿರುಗಿ ಹೋಗುತ್ತಿತ್ತು. ಆಗ ಮರ ಹತ್ತಿ ಎಂಟೆನಾ ಸರಿ ಮಾಡಿ ಟಿವಿ ಯಲ್ಲಿ ಚಿತ್ರ ಬರುವಂತೆ ಮಾಡುವ ಪ್ರಹಸನ ಬಲು ಮಜವಾಗಿರುತ್ತಿತ್ತು. ಒಬ್ಬನು ಮರ ಹತ್ತಿ ಎಂಟೆನಾವನ್ನು ಸ್ವಲ್ಪ ಸ್ವಲ್ಪವಾಗಿ ತಿರುಗಿಸುತ್ತಾ ಹೋಗುವುದು, ಇನ್ನೊಬ್ಬವ ಟಿವಿ ಯಲ್ಲಿ ಚಿತ್ರ ಬರುತ್ತಿದೆಯಾ ಎಂದು ನೋಡಿ ಕೂಗಿ ಹೇಳುವುದು. ಮರದ ಮೆಲಿರುವವನ ಹಾಗು ಟಿವಿ ಮುಂದಿರುವವನ ಮದ್ಯೆ ಸಂವಹನ ನಡೆಸಲು ನಾಕಾರು ಹುಡುಗರು.

ಪ್ರತಿ ಆದಿತ್ಯವಾರ ಮದ್ಯಾಹ್ನದ ಮೇಲೆ ೪ ಗಂಟೆಗೆ ಕನ್ನಡ ಸಿನಿಮಾ ಬರುತ್ತಿತ್ತು. ಹಾಗಾಗಿ ಬೆಳಿಗ್ಗೆಯೇ ಮರ ಹತ್ತಿ ಎಂಟೆನಾವನ್ನು ಪರೀಕ್ಷಿಸಿ, ಟಿವಿಯಲ್ಲಿ ಚಿತ್ರ ಸರಿಯಾಗಿ ಬರುತ್ತಿರುವಂತೆ ನೋಡಿಕೊಳ್ಳುತ್ತಿದ್ದರು. ೪ ಗಂಟೆಗೆ ಸರಿಯಾಗಿ ಎರಡು ಮನೆಯ ಹುಡುಗರು, ಹೆಂಗಸರಾದಿಯಾಗಿ ಎಲ್ಲರು ಟಿವಿಯ ಮುಂದೆ ಹಾಜರು. ಪಕ್ಕದಮನೆಯ ಉದ್ದ ಜಗುಲಿಯ ತುಂಬಾ ಜನರು. ಮುಂದೆ ಕುಳಿತ ಹುಡುಗರ ಗಲಾಟೆಯಲ್ಲಿ, ಹೆಂಗಸರ ಸುದ್ದಿಯ ಗೌಜಿನ ಮಧ್ಯೆ ಹಿಂದೆ ಇದ್ದವರು ಚಿತ್ರ ನೋಡುವುದೊಂದೇ ಆಗುತ್ತಿತ್ತು. ಆದಿತ್ಯವಾರ ಬಂತೆಂದರೆ ಸಿನಿಮಾ ನೋಡುವ ಉತ್ಸಾಹ ಈಗ ಸೋಜಿಗವೆನಿಸುತ್ತದೆ.

ಭಾರತದಲ್ಲಿ ನಡೆಯುವ ಕ್ರಿಕೆಟ್ ಮ್ಯಾಚ್ಗಳನ್ನು ಡಿ ಡಿ ೧ ರಲ್ಲಿ ನೋಡಬಹುದಾಗಿತ್ತು. ಅದ್ಯಾವುದೋ ಮಾಯದಲ್ಲಿ ಮ್ಯಾಚ್ ಇದ್ದ ದಿನ ಎಂಟೆನಾ ತಿರುಗಿಯೇ ಹೋಗುತ್ತಿತ್ತು. ಎಂಟೆನಾ ಸರಿ ಮಾಡುವ ಪ್ರಹಸನದ ನಂತರ ಎಲ್ಲರೂ ಒಟ್ಟಾಗಿ ಮ್ಯಾಚ್ ನೋಡುವುದೇ ಒಂದು ಸುಂದರ ಅನುಭವ. ನಾಗವಳ್ಳಿ ಎಲೆಯ ರಸಗವಳ ಬಾಯಿ ತುಂಬಿ ಹೋದರೂ ತುಪ್ಪಲು ಎದ್ದುಹೊದರೆ ಕುಳಿತಿರುವ ಜಾಗವನ್ನು ಇನ್ನೊಬ್ಬರು ಒಬಳಿಸಿಯಾರು ಎಂದು ಕುಳಿತಲ್ಲಿಂದ ಹಂದಾಡುತ್ತಿರಲಿಲ್ಲ ಚಿಕ್ಕಪ್ಪಂದಿರು. ಅದ್ಯಾವುದೋ ಪಾಕಿಸ್ತಾನದ ವಿರುದ್ಧದ ಮ್ಯಾಚ್ ನಲ್ಲಿ ಭಾರತ ಗೆದ್ದಾಗ ಚಿಕ್ಕಪ್ಪನೊಬ್ಬ ಜಾಗಟೆ ಬಾರಿಸಿ ಅಜ್ಜನಿಂದ ಬೈಸಿಕೊಂಡಿದ್ದ.

ನಮ್ಮನೆಯಲ್ಲಿ ಟಿವಿ ಬರುವವರುಗೂ ಪಕ್ಕದಮನೆಯಲ್ಲಿ ನೋಡುತ್ತಿದ್ದೆ. ನಮ್ಮನೆಗೆ ಟಿವಿ ಬಂದಮೇಲೆ ಟಿವಿಯ ಹುಚ್ಚು ಜೋರಾಯಿತು. ಶಾಲೆಯಿಂದ ಬರುತ್ತಿದ್ದಂತೆ ಸಾಧನೆ ಎಂಬ ಧಾರವಾಹಿ ನೋಡುತ್ತಿದ್ದೆ. ಹೀಗೆ ಟಿವಿಯಲ್ಲಿ ಏನೇನು ಬರುತ್ತಿತೋ ಎಲ್ಲವನ್ನು ನೋಡುತ್ತಿದ್ದೆ. ನನ್ನ ಟಿವಿ ಹುಚ್ಚನ್ನು ನೋಡಿದ "ಅಣ್ಣ" ನನಗೆ ತಿಳಿ ಹೇಳಲು ಪ್ರಾರಂಭಿಸಿದ. ಸುಮ್ಮನೆ ಟಿವಿಯಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ನೋಡಬೇಡ. ಚೆನ್ನಾಗಿರುವ ಒಂದೋ ಎರಡೋ ಕಾರ್ಯಕ್ರಮಗಳನ್ನು ನೋಡು. ಟಿವಿ ನೋಡುವ ಸಮಯದಲ್ಲಿ ಏನಾದರೂ ಓದು. ಓದುವುದರಿಂದ ಏನೋ ವಿಷಯ ತಿಳಿಯುತ್ತದೆ. ದಿನಪತ್ರಿಕೆಯಾದರೂ ಸರಿ, ಸುಧಾ ತರಂಗ ಗಳಾದರೂ ಸರಿ ಒಟ್ಟಿನಲ್ಲಿ ಓದು. ಎಂದು ನನಗೆ ಹೇಳಿ ಹೇಳಿ ನನ್ನ ಟಿವಿಯ ಹುಚ್ಚನ್ನು ಕಡಿಮೆ ಮಾಡಿ ಓದುವ ಹವ್ಯಾಸವನ್ನು ಅಭ್ಯಾಸ ಮಾಡಿಸಿದ್ದೆ ಅವಾ.

ಅವನು ದಿನಾ ಪೇಪರ್ ಓದುವುದನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ಮೊದಲ ಅಕ್ಷರದಿಂದ ಹಿಡಿದು ಕೊನೆಯ ಅಕ್ಷರದವರೆಗೂ ಓದುತ್ತಿದ್ದ. ನಮ್ಮನೆಯಲ್ಲಿ ಒಟ್ಟು ಕುಟುಂಬವಾಗಿದ್ದರಿಂದ ಅವನ ಕೈಗೆ ಅವತ್ತಿನ ಪೇಪರ್ ಮರುದಿನ ಸಿಗುತ್ತಿತ್ತು. ಹಾಗಾಗಿ ಅವನು ಪ್ರತಿದಿನ ಹಿಂದಿನ ದಿನದ ಪೇಪರ್ ಓದುತ್ತಿದ್ದ. ನಾನು ಕಾಲೇಜ್ಗೆ ಹೋಗುವಾಗ ಲೈಬ್ರರಿಯಿಂದ ಕಾದಂಬರಿಗಳನ್ನು ತಂದು ಓದುತ್ತಿದ್ದೆ. ಎಷ್ಟೋ ಕಾದಂಬರಿಗಳನ್ನು ಅವನೂ ಓದುತ್ತಿದ್ದ. ಓದುವುದರ ಮಹತ್ವ ಗೊತ್ತಿದ್ದ ಅವನು ಅಜ್ಜನ ಕೊನೆಯ ಕಾಲದಲ್ಲಿ, ಹಾಸಿಗೆಯ ಮೇಲೇ ಇರುತ್ತಿದ ಅಜ್ಜನ ಹತ್ತಿರ ಏನಾದರೂ ಓದಲು ಹೇಳುತ್ತಿದ್ದ.

ಈಗ ಅವನಿಗೇ ಓದುವ ಮನಸ್ಸಿಲ್ಲ...

Sunday, April 5, 2015

ಹಾವಿನ ಪ್ರಹಸನ

ಮಳೆ ನಾಡಿನಲ್ಲಿ ಹಾವುಗಳಿಗೆ ಬರಗಾಲವೇ? ನಾನಾ ತರಹದ ಹಾವುಗಳನ್ನು ಅಲ್ಲಿ ನೋಡಬಹುದು. ಗಿಡಗಳಮೇಲೆ ಎಲೆಯಬಣ್ಣ ಇರುವ ಹಸುರು ಹಾವು, ಕೊಳೆಯುವ ವಿಷವಿರುವ ಕುದುರ್ಬೆಳ್ಳ, ಗೋಧಿ ಬಣ್ಣದಲ್ಲಿ ಸುಂದರವಾಗಿರುವ ಸರ್ಪ ಹೀಗೆ ಅನೇಕ ಜಾತಿಯ ಹಾವುಗಳು ಅಲ್ಲಿವೆ. ಕೆರೆ ಹಾವುಗಳಿಗಂತೂ ಬರಗಾಲವೇ ಇಲ್ಲ.

ನನ್ನ ವಾರಗೆಯ ನಮ್ಮೂರಿನ ಇಬ್ಬರಿಗೆ ಹಾವುಗಳೆಂದರೆ ವಿಪರೀತ ಹೆದರಿಕೆ. ಮಳೆ ನಾಡಿನವರಾದರೂ ಅಷ್ಟೊಂದು ಹೇಗೆ ಹೆದರುತ್ತಾರೋ ಗೊತ್ತಿಲ್ಲ. ಹಾವುಗಳು ಯಾವುದಕ್ಕೂ ಬೇಕಾಗದ ಅನವಶ್ಯಕ ಜೀವಜಂತುಗಳೆಂದು ಅವರಿಬ್ಬರೂ ಠರಾವು ಪಾಸು ಮಾಡಿಯಾಗಿದೆ. ಹಾವು ಎಂದರೆ ಸಾಕು ಎಲ್ಲಿ ಎಂದು ಕೇಳುತ್ತ ಮೂರು ತುಂಡುಗುಪ್ಪಣ ಹೊಡೆಯುತ್ತಾರೆ.

ಇದೇ ತರಹ ಹೆದರುಪುಕ್ಕಲನಾದ ಪಕ್ಕದಮನೆಯ ಚಿಕ್ಕಪ್ಪನ ಮನೆಗೆ ಒಮ್ಮೆ ಹಾವು ಬಂದಿತ್ತು. ಪಕ್ಕದೂರಿನಲ್ಲಿ ಒಮ್ಮೆ ಕಾಳಿಂಗ ಬಂದಾಗ ಅಜಮಾಸು ನಾಲ್ಕು ಫರ್ಲಾಂಗು ದೂರ ನಿಂತುಕೊಂಡೇ ಕೂಗಿದ ಅಸಾಮಿ ಆವಾ. ಹಳೆಯ ಕಾಲದ ಮಣ್ಣು ಗೋಡೆಯ ದೇವರ ಮನೆಯೊಳಗೆ ದೊಡ್ಡ ದೇವರ ಪೀಠ ಇದೆ. ಆ ದೇವರ ಪೀಠಕ್ಕೂ ಗೋಡೆಗೂ ಮದ್ಯೆ ಇರುವ ಸಂದಿನಲ್ಲಿ ಯಾವುದೋ ಹೊಸ ಜಾತಿಯ ಹಾವು ಸೇರಿಕೊಂಡಿತ್ತು. ಹಗಲಿನಲ್ಲೂ ಬೆಳಕಿನ ಸೆಲೆ ಇಲ್ಲದ ದೇವರ ಮನೆಯಲ್ಲಿ ಪೂಜೆ ಮಾಡುತ್ತಿದ್ದ ಚಿಕ್ಕಪ್ಪನಿಗೆ ಹಾವು ಕಣ್ಣಿಗೆ ಬಿತ್ತು. ಅರ್ಧಂಬರ್ಧ ಬಿಚ್ಚಿದ ಮಡಿಯೊಳಗೆ ಹೊರಗೆ ಓಡಿ ಬಂದು ಹಾವು ಹಾವು ಎಂದು ಕಿರುಚಿದಕೂಡಲೇ ಹೆಚ್ಚಿನ ಜನರು ಯಾವುದೋ ಕೆರೆ ಹಾವು ನೋಡಿ ಹೆದರಿದ್ದಾನೆ ಎಂದೇ ಭಾವಿಸಿದರು.

ಅವನ ಸಮಾಧಾನಕ್ಕೋಸ್ಕರ ನಾನು ಮತ್ತಿಬ್ಬರು ಚಿಕ್ಕಪ್ಪಂದಿರು ಪವರ್ ಫುಲ್ ಬ್ಯಾಟರಿ ತೆಗೆದುಕೊಂಡು ದೇವರ ಮನೆಗೆ ಹೋಗಿ ಹಾವನ್ನು ಹುಡುಕಿದಾಗ ಕಂಡಿತು. ಏನೇ ಸಪ್ಪಳ ಮಾಡಿದರೂ ಸಂದಿಯಿಂದ ಹೊರಗೆ ಬರುತ್ತಿರಲಿಲ್ಲ. ಹೊಸ ಜಾತಿಯ ಹಾವಾಗಿದ್ದರಿಂದ ಯಾರೂ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ತೀರ್ಮಾನವಾಗಿ ಅದನ್ನು ಹೊರಗೆ ಹಾಕುವುದು ಹೇಗೆ ಎಂಬ ಸಮಸ್ಯೆಗೆ ಎಲ್ಲರಿಗೂ ನೆನಪಾಗಿದ್ದು ಮಂಜಣ್ಣ.

ಮಂಜಣ್ಣ ನಮ್ಮ ಸುತ್ತಮುತ್ತಲಿನ ಊರುಗಳಲ್ಲಿ ಹಾವು ಹಿಡಿಯುವುದರಲ್ಲಿ ಎತ್ತಿದ ಕೈ. ಅಮಾವಾಸ್ಯೆಯ ಕತ್ತಲಿನಲ್ಲೂ ಕೈಯಲ್ಲಿ ಬ್ಯಾಟರಿ ಇದ್ದರೂ ಕಪ್ಪಿನಲ್ಲೇ ನಡೆದುಕೊಂಡು ಹೋಗುವಂತ ಧೈರ್ಯವಂತ. ಅವನಿಗೆ ಫೋನಾಯಿಸಿದಾಗ ಬರುತ್ತೇನೆಂದ. ಅವನು ಬರುವ ವರೆಗೆ ಹಾವು ಅಲ್ಲೇ ಇರುವಂತೆ ನೋಡಿಕೊಳ್ಳಬೇಕು. ಅದೇನಾದರೂ ಅಲ್ಲಿಂದ ಹೊರಬಿದ್ದು ನಾಗಂತಿಕೆ ಮೇಲಿದ್ದ ಕರಡಿಗೆಗಳ ಮಧ್ಯೆ ಸೇರಿಕೊಂಡು ಬಿಟ್ಟಿತೆಂದರೆ ಅದನ್ನು ಹುಡುಕುವುದು ಹವ್ಯಕ ಮಾಣಿಗೆ ಕೂಸು ಹುಡುಕುವುದಕ್ಕಿಂತ ಕಷ್ಟ. ಎಲ್ಲರೂ ಸೇರಿ ನನಗೆ ಸಂದಿಯಲ್ಲಿ ಬ್ಯಾಟರಿ ಬಿಟ್ಟು ಬೆಳಕು ಮಾಡಿಕೊಂಡಿರು ಎಂದು ಹುಕುಂ ಮಾಡಿದರು. ನನಗೆ ಏಕೆ ಹೇಳಿದರೆಂದರೆ ಅವರ್ಯಾರಿಗೂ ಅಲ್ಲಿ ನಿಂತುಕೊಳ್ಳುವಷ್ಟು ಧೈರ್ಯವಿರಲಿಲ್ಲ.

ಮಂಜಣ್ಣ ಬಂದವನೇ ಹಾವನ್ನು ನೋಡಿ "ಊ ಹು" ಎಂಬ ಉದ್ಗಾರ ತೆಗೆದ. ಅವನ ಅದ್ಗಾರಗಳಿಗೆ ಅವನೇ ಅರ್ಥ ಹೇಳಬೇಕು. ಅದೊಂದು ವಿಷವಿಲ್ಲದ ಸಾಮಾನ್ಯ ಹಾವು ಎಂದು ಆ ಉದ್ಗಾರವೋ ಅಥವಾ ಅದು ಭಯಂಕರ ವಿಷವಿರುವ ಕಾರ್ಕೋಟಕ ಎಂದು ಆ ಉದ್ಗಾರವೋ ನರ ಮನುಷ್ಯರಾದ ನಮಗೆ ಹೇಗೆ ತಿಳಿಯಬೇಕು. ಅಡುಗೆ ಮನೆಗೆ ಹೋಗಿ ಇಕ್ಕಳ ತೆಗೆದುಕೊಂಡು ಬಂದು "ನಾನು ಹಾವನ್ನು ಸಂದಿಯಿಂದ ಜಗ್ಗಿ ತೆಗೆಯುತ್ತೇನೆ. ನೀವು ದೊಣ್ಣೆಯಿಂದ ಜಪ್ಪಿ ಸಾಯಿಸಿರಿ" ಎಂದ. ನಾವು ಮೂವರೂ ಕೈಯಲ್ಲಿ ಒಂದೊಂದು ದೊಣ್ಣೆ ಹಿಡಿದುಕೊಂಡು ತಯಾರಾಗಿ ನಿಂತೆವು. ಮಂಜಣ್ಣನು ಇಕ್ಕಳವನ್ನು ಸಂದಿಯ ಹತ್ತಿರ ತೆಗೆದುಕೊಂಡು ಹೋಗಿದ್ದೇ ತಡ ದೊಣ್ಣೆ ಹಿಡಿದಿದ್ದ ಇಬ್ಬರೂ ಶೀದ ಅಂಗಳದಲ್ಲಿ. ಸಂದಿಯಿಂದ ಹಾವನ್ನು ಹೊರಗೆ ಎಳೆದು ನೆಲದ ಮೇಲೆ ಹಾಕಿ, ಮಂಜಣ್ಣನೂ ಒಂದು ದೊಣ್ಣೆ ತೆಗೆದುಕೊಂಡು ಹಾವನ್ನು ಜಪ್ಪಿದ. ನಾವಿಬ್ಬರೂ ಹಾವನ್ನು
ಸಾಯಿಸಿದಮೇಲೆ ಮಂಜಣ್ಣ ದೊಣ್ಣೆಯಲ್ಲಿ ಹಾವನ್ನು ಹೊರಗೆ ತೆಗೆದುಕೊಂಡು ಹೋದಮೇಲೆ ಚಿಕ್ಕಪ್ಪಂದಿರು ಸಹಜವಾಗಿ ಉಸಿರಾಡಿದರು. ಅದು ಯಾವ ಜಾತಿಯ ಹಾವು ಎಂದು ಕೇಳಿದ್ದಕ್ಕೆ "ಸುರಗನ್ದಡಿಯ" ಎಂದು ಹೇಳಿದ ಮಂಜಣ್ಣ. ನಾನು ಮೊದಲ ಬಾರಿಗೆ ಆ ಹೆಸರನ್ನು ಕೇಳಿದ್ದೆ. ಮರುದಿನದಿಂದ ಪೂಜೆಗೆ ಕುಳಿತುಕೊಳ್ಳುವಾಗ ದೊಡ್ಡ ಗ್ಯಾಸ್ ಲೈಟ್ ಹಚ್ಚಿಕೊಂಡೆ ಕುಳಿತುಕೊಳ್ಳುತಿದ್ದ ಚಿಕ್ಕಪ್ಪ. ಅವನ ಹೆದರಿಕೆಗೆ ಯಾರೂ ಅರ್ಧ ಅಡಕೆಯ ಕಿಮ್ಮತ್ತೂ ಕೊಡಲಿಲ್ಲ.