Friday, February 17, 2012

ಚಳಿಗಾಲದ ಸ್ನಾನ

ಚಳಿಗಾಲದ ಚುಮು ಚುಮು ಚಳಿಯಲ್ಲಿ ಬೆಳಿಗ್ಗೆ ಕತ್ತಲಲ್ಲಿ ಬಿಸಿ ನೀರು ಸ್ನಾನ ಮಾಡುವುದೆಂದರೆ  ನನಗೆ ಬಹಳ ಇಷ್ಟ. ಊರಿನಲ್ಲಿ ಬೆಳಿಗ್ಗೆ ಬೇಗ ನೀರು ಕಾಯಿಸುತ್ತಾರೆ. ಬೆಳಿಗ್ಗೆ ಬೇಗ ಎದ್ದು ಬಿಸಿ ಬಿಸಿ ನೀರನ್ನು ತಲೆಯಮೇಲೆ ಹೊಯ್ದುಕೊಂಡರೆ ಏನೋ ಒಂಥರಾ ಖುಷಿ, ಮಜಾ. ಅದೆಷ್ಟು ಬಾರಿ ನಾನು ಹೀಗೆ ಮಜಾತೆಗೆದುಕೊಳ್ಳಲು ಹೋಗಿ ಅರ್ಧ ಮುಕ್ಕಾಲು ಗಂಟೆ ಸ್ನಾನ ಮಾಡಿದ್ದಿದೆ ಮತ್ತು ಅರ್ಧ ಹಂಡೆಗಿಂತಲೂ ಜಾಸ್ತಿ ನೀರನ್ನು ಖರ್ಚು ಮಾಡಿದ್ದಿದೆ. ಚಿಕ್ಕಪ್ಪನವರು, ಬಚ್ಚಲಮನೆಯಲ್ಲೇ ನಿದ್ದೆ ಹೋದೆಯೇನೋ? ಎಂದು ಬಯ್ದದ್ದಿದೆ. ನನ್ನ ನಂತರ ಸ್ನಾನಕ್ಕೆ ಬರುವವರಿಗೆ ಬಿಸಿ ನೀರು ಖಾಲಿ ಆಯ್ತೆಂದು ಬಯ್ಸಿಕೊಂಡದ್ದಿದೆ. ಆದರೂ ಅದರ ಹುಚ್ಚು ಬಿಟ್ಟಿಲ್ಲ. ಮೊನ್ನೆ ಊರಿಗೆ ಹೋದಾಗಲೂ ಮತ್ತೆ ಹೀಗೆ ಸ್ನಾನ ಮಾಡಿ ಖುಷಿ ಪಟ್ಟೆ.


ಬಿಸಿ ನೀರು ಸ್ನಾನ ಮಾಡುವುದೆಂದರೆ ಬರ ಬರನೆ ನೀರನ್ನು ಹೊಯ್ದುಕೊಳ್ಳುವುದಲ್ಲ. ಚೊಂಬಿನಲ್ಲಿ ನೀರನ್ನು ಮೊಗೆದುಕೊಂಡು ನಿಧಾನವಾಗಿ ತಲೆಯಮೇಲೆ ಸುರಿದುಕೊಳ್ಳಬೇಕು. ನೀರು ಹೊಯ್ದುಕೊಂಡ ಶಬ್ಧವೂ ಬರಬಾರದು ಅಷ್ಟು ನಿಧಾನವಾಗಿ. ಪೂರ್ತಿ ಬೆಳಗಾಗಿರಬಾರದು, ಕತ್ತಲೆ ಕತ್ತಲೆ ಇರಬೇಕು, ಬಚ್ಚಲಮನೆಯ ದೀಪವನ್ನೂ ಹಾಕಬಾರದು. ಆಗ ಆ ನಿಶ್ಯಬ್ಧದಲ್ಲಿ ಕಣ್ಣು ಮುಚ್ಚಿಕೊಂಡು ನಿಧಾನವಾಗಿ ಬಿಸಿ ನೀರನ್ನು ಹೊಯ್ದುಕೊಂಡಾಗ ಸಿಗುವ ಮಜವಿದೆಯಲ್ಲ ಅದು ಅನಿರ್ವರ್ಣನೀಯ.


ಬೆಂಗಳೂರಿನಲ್ಲಿ ಎಷ್ಟು ಗಡಿಬಿಡಿಯಲ್ಲಿ ಸ್ನಾನಮಾಡುತ್ತೇವೆಂದರೆ ಬೆನ್ನ ಮೇಲಿನ ಕೊಳೆಯೂ ಪೂರ್ತಿ ಹೋಗಿರುವುದಿಲ್ಲ. ಇನ್ನು ಇಂತಹ ಮಜಾ ತೆಗೆದುಕೊಳ್ಳುವ ಮಾತೆಲ್ಲಿಂದ ಬಂತು. ಇದೆ ರೀತಿ ಅದೆಷ್ಟು ಚಿಕ್ಕ ಚಿಕ್ಕ ಖುಶಿಗಳನ್ನು ನಾವು ಕಳೆದು ಕೊಂಡಿದ್ದೇವೆ, ಕಳೆದುಕೊಳ್ಳುತ್ತಲಿದ್ದೇವೆ. ಚಳಿಗಾಲದ ಬೆಳಿಗ್ಗೆ ಹೊಂಬಿಸಿಲನ್ನು ಕಾಯಿಸುವುದು, ಕಣಜದ ಮೇಲೆ ಅಡಿಕೆಯನ್ನು ಹರಗುವಾಗ ಬರುವ ಜರಬರ ಶಬ್ದ, ತೊಗರೊಲೆಯ ಬೆಂಕಿ,  ಚಾಲಿ ಕಣದ ಹರಟೆ, ತೋಟದಲ್ಲಿ ಗೋಟು ಆರಿಸುವಾಗಿನ ಅಪ್ಪನ ಹಾಸ್ಯ ಚಟಾಕಿಗಳು.. ಅದೆಷ್ಟು ಅಂತ ಹೇಳಲಿ..


ಹಾಗಂತ ನಾವು ಬಹಳ ಖುಶಿಗಳನ್ನು ಕಳೆದುಕೊಂಡುಬಿಟ್ಟಿದ್ದೇವೆ ಎಂದು ಚಿಂತಿಸುತ್ತಾ ಕುಳಿತುಕೊಳ್ಳುವುದು ಸರಿಯಲ್ಲ. ಈಗ ಇಲ್ಲಿರುವ ಸಣ್ಣ ಪುಟ್ಟ ಖುಶಿಗಳನ್ನು ಹುಡುಕಬೇಕು. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಬಹಳಷ್ಟು ಕಳೆದುಕೊಳ್ಳಬೇಕಾಗುತ್ತದೆ. ನಾವು ಹೊಂದಿಕೊಳ್ಳಲೇಬೇಕು. ಹಾಗಾಗಿ ನಾವು ನಮ್ಮ ಇಲ್ಲಿನ ಸಾಧನೆಗಳ ಸಂತೋಷವನ್ನ, ಸಾರ್ಥಕ್ಯವನ್ನ ವಿಷಾದಪೂರ್ವಕವಾಗಿ ಅನುಭವಿಸಬೇಕಾಗುತ್ತದೆ, ಹಂಚಿಕೊಳ್ಳಬೇಕಾಗುತ್ತದೆ. ಏನಂತೀರಾ?

No comments:

Post a Comment