Tuesday, January 24, 2012

ಚಾರಣದ ಹೂರಣ - ೧

ರಾತ್ರಿ ಹೊರಡಬೇಕು ಎಂಬ ಕಾರಣಕ್ಕೆ ದಿನವಿಡೀ ಕೆಲಸಕ್ಕೆ ರಜೆ ಹಾಕಿ ಮಲಗಿದ್ದೇ ಆಯಿತು ಶುಕ್ರವಾರ. ಭಾಸ್ಕರನು ಎರಡು ಸರ್ತಿ ವಾಹನದ ಡ್ರೈವರನಿಗೆ ಫೋನಾಯಿಸು ಎಂದು ನೆನಪಿಸಿದಮೇಲೆ ಅವನಿಗೆ ಫೋನು ಮಾಡಿ ಸಂಜೆ ಅಂದರೆ ರಾತ್ರಿ ಹೊರಡುವ ಸಮಯವನ್ನು ಖಾತ್ರಿ ಪಡಿಸಿದೆ. ಯಥಾ ಪ್ರಕಾರ, ತೆಗೆದುಕೊಂಡು ಹೋಗುವ ವಸ್ತುಗಳನ್ನು ಬ್ಯಾಗ್ನಲ್ಲಿ ಗಡಿಬಿಡಿಯಲ್ಲಿ ತುರುಕಿಕೊಂಡು ಚಾರಣಕ್ಕೆ ಅವಶ್ಯವಿರುವ ಪ್ರಥಮ ಚಿಕಿತ್ಸಾ ಔಷಧಿಗಳನ್ನು ಹಿಡಿಸಲು ಪ್ರಯತ್ನಿಸಿದೆ. ಹೇಗೂ ಇರಲಿ ಎಂದು ಥಂಡಿ, ಜ್ವರ, ಜುಲಾಬು ಮುಂತಾದ ಸಣ್ಣಪುಟ್ಟ ತೊಂದರೆಗಳಿಗೆ ಗುಳಿಗೆಗಳನ್ನೂ ತೆಗೆದು ತುಂಬಿಕೊಂಡೆ.

ಇಷ್ಟೊಂದು ಕೆಲಸಗಳ ಮಧ್ಯದಲ್ಲೇ ಪಿ ಬಿ ನಾನು ಬರುತ್ತೇನೆಂದ ಎಂಬುದನ್ನು ಭಾಸ್ಕರ ಹೇಳಿದ. ಅವನಿಗೆ ಬರುವಂತೆ ತಿಳಿಸಿ ಅವನು ಬಂದರೆ ತೊಂದರೆ ಏನೂ ಇಲ್ಲವೆಂಬುದನ್ನು ಕೇಳಿ ತಿಳಿದು ಭಾಸ್ಕರನಿಗೆ ಹೇಳಿದೆ. ಇಲ್ಲೇ ಹೇಳಿಬಿಡುತ್ತೇನೆ, ಭಾಸ್ಕರ ನನ್ನ ಆಪ್ತ ಗೆಳೆಯ. ಪಿ ಬಿ ಯೂ ಸಹ ಮತ್ತೊಬ್ಬ ಆಪ್ತ. ಆಮೇಲೆ ನೀವು ಭಾಸ್ಕರ ಯಾರು? ಪಿ ಬಿ ಯಾರು ಎಂದು ಗೊಂದಲದಲ್ಲಿ ಬೀಳುವುದು ಬೇಡ. ಪಿ ಬಿ ಯು ಉಮ್ಮಚಗಿ ಸಂಸ್ಕತ ಪಾಠಶಾಲೆಯಲ್ಲಿ ವಿದ್ವತ್ತನ್ನು ಓದುತ್ತಿದ್ದಾನೆ. ಅವನು ಸಿರಸಿಯಿಂದ ಬರುವ ಇನ್ನೆರಡು ಜನರ ಜೊತೆ ಬರುವಂತೆ ಭಾಸ್ಕರ ವ್ಯವಸ್ಥೆ ಮಾಡಿದ.

ಯಾವತ್ತಿನಂತೆ ನಿಗದಿತ ವೇಳೆಗಿಂತ ತಡವಾಗಿ ಹೋಗಬಾರದೆಂದು ಬಿಸಿ ಅನ್ನಕ್ಕೆ ತಂಪು ಮಜ್ಜಿಗೆ ಹಾಕಿಕೊಂಡು ಲಗುಬಗೆಯಿಂದ ಉಂಡು ಗೊತ್ತಾದ ಸ್ಥಳಕ್ಕೆ ಹೋಗಿ ನಿಂತೆ. ಉಳಿದವರಿಗೂ ಬರುವಂತೆ ಫೋನಾಯಿಸಿದೆ. ಸ್ವಲ್ಪ ತಡವಾಗಿಯಾದರೂ ಗೊತ್ತುಮಾಡಿದ್ದ ವಾಹನ ಬಂದೆ ಬಿಟ್ಟಿತು. ನಾವು ವಾಹನವನ್ನೆರಿದ್ದು ರಾಜಾಜಿನಗರದಲ್ಲಿ. ಇನ್ನೆರಡು ಕಡೆ ಬರುವವರು ಕಾಯುತ್ತಿದ್ದರು. ಅವರೆಲ್ಲರನ್ನೂ ಕರೆದುಕೊಂಡು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಮಾತ್ರ ತಡವಾಗಿ ಅಂದರೆ ಕೇವಲ ಒಂದೂವರೆ ಗಂಟೆ ತಡವಾಗಿ ಬೆಂಗಳೂರನ್ನ ಬಿಟ್ಟು ಹೊರಟೆವು.

ಒಟ್ಟು ಹದಿನೆಂಟು ಜನ. ಅರ್ಧದಷ್ಟು ಜನರಿಗೆ ಒಬ್ಬರಿಗೊಬ್ಬರು ಪರಿಚಯವಿರಲಿಲ್ಲ. ಅದಕ್ಕೆ ನಾನು ಒಂದು ಸ್ವ ಪರಿಚಯದ ಒಂದು ಸಣ್ಣ ಕಾರ್ಯಕ್ರಮ ಮಾಡೋಣ ಎಂದು ಸೂಚಿಸಿದೆ. ವಿಡಂಬನೆಯೆಂದರೆ ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಟ್ಟಮೇಲೂ ನನ್ನ ನೆನಪಿನಲ್ಲಿದ್ದದ್ದು ಮೊದಲು ಗುರುತಿದ್ದವರ ಹೆಸರುಗಳು ಮಾತ್ರ! ಹೆಸರುಗಳನ್ನು ನೆನಪಿಟ್ಟುಕೊಳ್ಳುವುದರಲ್ಲಿ ನಾನು ಬಡವ. ಆದರೂ ನಾನೇನೂ ಹೆದರುವುದಿಲ್ಲ. ಮುಖಕ್ಕೆ ಒಂದು ಮೂರ್ನಾಲ್ಕು ಹೆಸರುಗಳನ್ನು ಇತ್ತು ನೋಡಿ ಹೊಂದಾಣಿಕೆಯಾಗುವ ಒಂದು ಹೆಸರನ್ನು ಕೂಗುವುದರಲ್ಲಿ ನಾನು ನಿಸ್ಸೀಮ. ಮುಖಕ್ಕೆ ಹೆಸರು ಹೇಗೆ ಹೊಂದಾಣಿಕೆಯಾಗುತ್ತದೆ ಎಂದು ಮಾತ್ರ ಕೇಳಬೇಡಿ. ಅದೊಂದು ಕಲೆ!

ವಾಹನದ ಮೇಲೆ ನಾನು, ಭಾಸ್ಕರ, ಗಣು ಒಟ್ಟಾಗಿ ಕುಳಿತು ಹರಟುತ್ತಾ ಇರುವುದನ್ನು ನೋಡಿದ ನನ್ನ "ಮನದನ್ನೆ"ಯಾದ ವಿನುತಾಳು ನಮ್ಮನ್ನು ಬೇರೆಪಡಿಸುವ ಪ್ರಯತ್ನಕ್ಕೆ ಮುಂದಾದಳು. ಅವಳದ್ದು ಮೊದಲೇ ಹೇಳಿಕೆಯಾಗಿತ್ತು. ಯಾರೂ ಗುಂಪುಗಾರಿಕೆ ಮಾಡಬಾರದು, ಎಲ್ಲರ ಜೊತೆಗೂ ಬೆರೆಯಬೇಕು ಎಂದು. ವಾಹನದ ಸೀಟುಗಳು ಆರಾಮದಾಯಕವಾಗಿ ಇರಲಿಲ್ಲವೆಂದು ಕೆಲವರಿಗೆ ನಿದ್ದೆಯೇ ಬರಲಿಲ್ಲ. ನಾನೋ ಸ್ವಲ್ಪ ಹೊತ್ತು ತೂಕಡಿಸಿ, ಸ್ವಲ್ಪ ಹೊತ್ತು ವಿನುತಾಳ ಜೊತೆ ಹರಟಿ, ಡ್ರೈವರನ ಜೊತೆ ಮಾತಾಡಿ ಕಾಲ ಕಳೆದೆ. ನಿದ್ದೆ ಮಾಡುವಾಗ ಬೇಗ ಮೂಡುವ ಬೆಳಕು ಅವತ್ತೇಕೋ ಜಾಸ್ತಿ ಸಮಯ ತೆಗೆದುಕೊಂಡಿತು. ಪೇಪರಿಲ್ಲದ ಬೆಳಗು ಆಗೇಬಿಟ್ಟಿತು.

ಚುಮು ಚುಮು ಚಳಿಯಲ್ಲಿ "ಮತ್ತಿಮನೆ"ಯನ್ನು ಹುಡುಕಿ ಮನೆಯ ಮುಂದೆ ಹೋದಾಗ ನೋಡುತ್ತೇನೆ, ನಮ್ಮ ಚಾರಣದ ಗೈಡ್ ಒಂದು ಬನಿಯನ್ ಹಾಕಿಕೊಂಡು ಅಂಗಳದಲ್ಲಿ ನಿಂತಿದ್ದಾನೆ. ಉರಿ ಮದ್ಯಾಹ್ನದ ಹೊತ್ತಿನಲ್ಲಿ ಬರಿಮೈನಲ್ಲಿ ಅಂದರೆ ಬರೆ ಒಂದು ಪಂಜಿ ಉಟ್ಟುಕೊಂಡು ತಲೆಗೆ ಒಂದು ಟೊಪ್ಪಿ ಹಾಕಿಕೊಂಡು ಅಂಗಿಯನ್ನೆನೂ ಹಾಕಿಕೊಳ್ಳದೆ ಸೈಕಲ್ ಹೊಡೆದುಕೊಂಡು ಹೋಗುವವನನ್ನು ನನ್ನ ಕಾಲೇಜು ದಿನಗಳಲ್ಲಿ ನೋಡಿರುವುದರಿಂದ ಮತ್ತು ಚಳಿಗಾಲದ ಬೆಳಿಗ್ಗೆ ಬರಿಮೈನಲ್ಲಿ ದೇವಸ್ತಾನಕ್ಕೆ ನಡೆದುಕೊಂಡು ಹೋಗುವವನನ್ನು ನೋಡಿರುವುದರಿಂದ ಅಷ್ಟೇನೂ ಆಶ್ಚರ್ಯವಾಗಲಿಲ್ಲ. ಮುಖತಃ ಅವನ ಜೊತೆ ಪರಿಚಯಿಸಿಕೊಂಡು ಉಭಯಕುಶಲೋಪರಿ ಆದಮೇಲೆ ಬೇಗ ಎಲ್ಲರು ಮುಖ ತೊಳೆದು ತಿಂಡಿ ತಿಂದು ತಯಾರಾಗಬೇಕೆಂದೂ, ಬೇಗ ಹೊರಟರೆ ಒಳ್ಳೆಯದೆಂದೂ ಹೇಳಿದ. ಮುಟ್ಟಿದರೆ ಶಾಕ್ ಹೊಡೆಯುವಂತ ತಣ್ಣೀರಿನಲ್ಲಿ ಮುಖತೊಳೆದು ಉಳಿದವರಿಗೆ ಗಡಬಡೆ ಮಾಡಹತ್ತಿದೆ. ಇವೆಲ್ಲದರ ಮಧ್ಯದಲ್ಲಿ ಚಾಣದಲ್ಲಿ ಮರದ ಕುಂಟೆಯ ಚಕ್ಕೆ ಒಡೆಯುವ ಕೈಚಳಕವನ್ನು ನಾನು ಭಾಸ್ಕರ ನೋಡಿ ಆನಂದಿಸಿದೆವು.


ಹೊಟ್ಟೆತುಂಬ ದೋಸೆ. ಬನ್ಸ್ ತಿಂದು ಬಿಸಿ ಬಿಸಿ ಚಹಾವನ್ನು ಆಸ್ವಾದಿಸಿ ಹುಮ್ಮಸ್ಸಿನಲ್ಲೇ ತಯಾರಾದೆವು. ಈ ಸಮಯದಲ್ಲಿ ಸಿರಸಿಯಿಂದ ಬಂದ ಸಂತೋಷಣ್ಣ, ಪ್ರಶಾಂತಣ್ಣ ಪರಿಚಯವಾದರು. ಪಿ ಬಿ ಯ ಜೊತೆಯೂ ಲೋಕಕಲ್ಯಾಣಾರ್ಥವಾಗಿ ಒಂದೆರಡು ಕುಶಾಲು ಆದವು. ಪಂಡಿತ್ ಅವರಿಂದ ಚಾರಣದ ಪ್ರಾಸ್ತಾವಿಕ ಭಾಷಣವಾದಮೇಲೆ ಎಲ್ಲರೂ ತಮ್ಮ ತಮ್ಮ ಮಧ್ಯಾಹ್ನದ ಬುತ್ತಿಯನ್ನು ಹಿಡಿದುಕೊಂಡು ಹೊರೆಟೇಬಿಟ್ಟೆವು. ಬಹುಷಃ ಆ ಸಮಯದಲ್ಲಿ ಪಂಡಿತರೇ ನಿಲ್ಲಿ ಎಂದರೂ ನಿಲ್ಲುವ ಮನಸ್ಥಿತಿ ನಮ್ಮದಾಗಿರಲಿಲ್ಲ.


 ಮುಂದಿನ ಕಥೆಯನ್ನು ಒಂದೇವಾಕ್ಯದಲ್ಲಿ ಹೇಳಿಮುಗಿಸಬಹುದಾದರೂ ಅದು ತರವಲ್ಲ. ಒಂದು ಇಡೀ ದಿನ ಕೊಡಚಾದ್ರಿ  ಬೆಟ್ಟವನ್ನು ಹತ್ತಿದೆವು, ಮರುದಿನ ಇಳಿದೆವು. ಆದರೆ ಬೆಟ್ಟ ಹತ್ತುವುದರಲ್ಲಿ, ಹತ್ತುವಾಗ ನಮ್ಮ ಮಾತುಕತೆ, ಸುತ್ತಲಿನ ಪರಿಸರ ಇವುಗಳ ಮಜವೇ ಬೇರೆ. ಅದನ್ನು ಒಂದುವಾಕ್ಯದಲ್ಲಿ ಹೇಳುವುದು ಸಾಧ್ಯವಿಲ್ಲ. ನಾಲ್ಕು ಗಾಲಿಯ ವಾಹನ ಹೋಗುವಷ್ಟು ಅಗಲದ ರಸ್ತೆಯಲ್ಲಿ (ನೆನಪಿಡಿ, ನಾಲ್ಕು ಗಾಲಿಯ ವಾಹನ ಹೋಗುವಷ್ಟು ಅಗಲದ ಎಂದು ಹೇಳಿದೆ. ಹೋಗುವಂತಹ ರಸ್ತೆ ಎಂದು ಹೇಳಿಲ್ಲ) ಪ್ರಾರಂಭವಾಗಿ, ಮನುಷ್ಯ ಮಾತ್ರದ ಜೀವ ಹೋಗುವಂತಹ ದಾರಿಯಲ್ಲಿ ನಮ್ಮ ಪ್ರಯಾಣ ಸಾಗಿತು. ಮೊದಲು ಪಂಡಿತ ಅವರ ಜೊತೆ ನಾನು, ಭಾಸ್ಕರ, ಪಿ ಬಿ, ಗಣು ಮುಂದೆ ಮುಂದೆ ಹೋದೆವು. ಹೋಗುವಾಗ ಪಂಡಿತ್ ಅವರ ಜೊತೆ ಪಿ ಬಿ ಸುಮಾರು ಹರಟಿದ. ಅವರು ಪಿ ಬಿ ಯ ಮಾತಿಗೆ ಮೋಡಿಗೊಳಗಾದರು. ಪಿ ಬಿ ಯ ಆಶೀರ್ವಚನವೋ ವರ್ಣಿಸಲಸದಳ. ಸುಮಾರು ಅಪರಾಹ್ನದ ಸಮಯಕ್ಕೆ ಹಿಡ್ಲುಮನೆ ಜಲಪಾತವನ್ನ ತಲುಪಿದೆವು.

ಸೂರ್ಯ ನೆತ್ತಿಯಮೇಲೆ ಇರುವಂತಹ ಸಮಯದಲ್ಲಿ ಬಿಸಿಲು ನೆಲ ತಾಕದಷ್ಟು ಒತ್ತೊತ್ತಾಗಿದ್ದವು ಮರಗಳು. ಅವುಗಳ ಮಧ್ಯದಲ್ಲಿ ಬಂಡೆಯ ಮೇಲಿಂದ ಜಿಗಿಯುತ್ತಿತ್ತು ನೀರಿನ ತೊರೆ. ಅಷ್ಟೇನೂ ದೊಡ್ಡ ಜಲಪಾತವಲ್ಲದಿದ್ದರೂ ಸುಂದರವಾಗಿತ್ತು. ಜಲಪಾತದ ಕೆಳಗೆ ಹೋಗಿ ನಿಲ್ಲುವ ಅವಕಾಶವಿತ್ತು. ದೂರದಿಂದ ಒಂದೆರಡು ಫೋಟೋ ಕ್ಲಿಕ್ಕಿಸಿ, ನೀರಿಗೆ ಇಳಿದೇಬಿಟ್ಟೆವು. ಜಲಪಾತದ ಕೆಳಗೆ ಹೋಗಿ ನಿಂತರೆ, ನಿಜ ಹೇಳುತ್ತೇನೆ, ಐಸ್ ಮಧ್ಯದಿಂದ ತೆಗೆದ ಕೊಡೆ ಕಡ್ಡಿ ಚುಚ್ಚಿದಂತಾಗುತ್ತಿತ್ತು, ಮಜವೂ ಆಗುತ್ತಿತ್ತು. ಭಾಸ್ಕರ ಆದರ್ಶನನ್ನು ಎಳೆದು ನೀರಿನ ಕೆಳೆಗೆ ನಿಲ್ಲಿಸಿ ಮಜವಾಗುತ್ತದೆ ಎಂದಾಗ "ಇವನಿಗೆ ಏನೋ ಕಚ್ಚಿದೆ" ಎಂದು ಆದರ್ಶನು ನಿಷ್ಪಕ್ಷವಾದ ತೀರ್ಮಾನ ತೆಗೆದುಕೊಂಡುಬಿಟ್ಟ.
 ಒದ್ದೆ ಮೈನಲ್ಲೇ ಜಲಪಾತದ ಮೇಲ್ಬದಿಗೆ ಹೋಗಿ, ಮದ್ಯಾಹ್ನದ ಬುತ್ತಿಯನ್ನು ತಿಂದೆವು. ಹಸಿವಾಗಿದ್ದಕ್ಕೋ ಏನೋ ಮತ್ತಿಮನೆಯ ಚಪಾತಿ, ಕಾಯಿ ಹೂರಣ ಬಾಯಿಗೆ, ಹೊಟ್ಟೆಗೆ ಮ್ರಷ್ಟಾನ್ನವಾಗಿತ್ತು. ಅದರ ನಿಜವಾದ ರುಚಿ ಹೇಗಿತ್ತೆಂದು ಹೇಳಲು ಸಾದಾ ದಿನ ತಿಂದು ನೋಡಬೇಕು. ಊಟವಾದ ತಕ್ಷಣ ಮತ್ತೆ ಮೇಲೆ ಹತ್ತಲು ಶುರು. ಕಡಿದಾದ ಬೆಟ್ಟದ ದಾರಿ, ಉಂಡ ಹೊಟ್ಟೆ, ಮುಷ್ಕರ ಹೂಡುತ್ತಿರುವ ಕಾಲುಗಳು, ಮುಚ್ಚದ ಪಂಡಿತರ ಬಾಯಿ, ನೆಲದಮೇಲಿರುವಾಗ ಮಲ್ಲಿಗೆಯಷ್ಟು ಹಗುರವಾಗಿಯೂ, ಬೆನ್ನಿಗೆ ಹಾಕಿಕೊಂಡಾಗ ಮಣ ಭಾರವೆನ್ನಿಸುವ ಬ್ಯಾಗ್ ಆಹಾ ಏನು ಕೇಳುತ್ತೀರಾ ಇವುಗಳ ಕೂಡುವಿಕೆಯನ್ನ.


"ಭೂಮಿ ಗುಂಡಗಿದೆ ಎಂದು ಶಾಲೆಯಲ್ಲಿ ಓದಿ ತಿಳಿದಿದ್ದೆ ಆದರೆ ಇಷ್ಟೊಂದು ಎತ್ತರವೂ ಇದೆ ಎಂಬುದು ಗೊತ್ತಿರಲಿಲ್ಲ" ಇದು ಸಂತೋಷಣ್ಣನ ಅಂಬೋಣ. ಹೇಗೋ ಹೇಗೋ ನಡೆದು ಕೊಡಚಾದ್ರಿಯ ದೇವಸ್ಥಾನದ ಹತ್ತಿರವಿರುವ ಐ ಬಿ ಗೆ ಬಂದೆವು.
ನಾಲ್ಕು ಗಂಟೆ ಸುಮಾರಿಗೇ ನಮ್ಮ ಅಳಿದುಳಿದ ಶಕ್ತಿ ನಶಿಸುತ್ತಾ ಬಂದಿತ್ತು. ಬೆನ್ನಿಗಿರುವ ಬ್ಯಾಗ್ ತಗೆದಿಟ್ಟು, ನೀರಿನಲ್ಲಿ ಮುಖ ತೊಳೆದುಕೊಂಡು, ನೀರು ಕುಡಿದು ಕುಳಿತು ಸುಧಾರಿಸಿಕೊಂಡೆವು. ಬೆಟ್ಟವೇರುವುದು ಎಷ್ಟೇ ಕಷ್ಟವಾಗಿದ್ದರೂ ಸುತ್ತಲಿನ ನೋಟ ಮಾತ್ರ ಚೇತೋಹಾರಿಯಾಗಿತ್ತು. ಮೇಲೇರಲು ಅದು ಮೌನವಾಗಿ ಕೊಟ್ಟ ಉತ್ಸಾಹವೇ ಕಾರಣ ಜೊತೆಗೆ ಸಂತೋಷಣ್ಣ, ಪ್ರಶಾಂತಣ್ಣ, ಪಿ ಬಿ ಯವರ ಸಮಯೋಚಿತ ಅಧಿಕ ಪ್ರಸಂಗಗಳು.


ಇಲ್ಲಿಗೆ ಬೆಟ್ಟವೇರುವುದು ಒಂದು ಹಂತಕ್ಕೆ ಬಂತು ಇನ್ನು ಸ್ವಲ್ಪ ಮೇಲೆ ಹೋದರೆ ಸರ್ವಜ್ಞ ಪೀಠ ಸಿಕ್ಕುತ್ತದೆ ಎಂದು ಪಂಡಿತ್ ಜಿ ಹೇಳಿದರಾದರೂ "ಸ್ವಲ್ಪ ಮೇಲೆ ಹೋದರೆ" ಎನ್ನುವುದನ್ನು ಯಾರೂ ನಂಬಲಿಲ್ಲ. ವಿನುತಾಳು ಮೊದಲು ಸರ್ವಜ್ಞ ಪೀಠವನ್ನು ನೋಡಿದ್ದಾಳೆ ಎಂದು ಅವಳ ಮುಂದಾಳತ್ವದಲ್ಲಿ ಸರ್ವಜ್ಞ ಪೀಠಕ್ಕೆ ಹೊರಟೆವು. ಕಳೆದ ವರ್ಷ ತಲಕಾವೇರಿ ಪಕ್ಕಕ್ಕಿರುವ ಬೆಟ್ಟ ಹತ್ತುತ್ತಿರುವಾಗ "ಇನ್ನೂ ಸ್ವಲ್ಪ ಮೇಲೆ ಹೋದರೆ ನಾವು ನಮ್ಮ ಪೂರ್ವಜರನ್ನು ಮಾತನಾಡಿಸಿಕೊಂಡು ಬರಬಹುದೇನೋ" ಎಂದು ಗಣು ಹೇಳಿದ್ದ. ಅದನ್ನು ನೆನಪಿಸಿಕೊಂಡು ನಕ್ಕೆವು. ಸೂರ್ಯ ಮುಳುಗಲು ಇನ್ನೇನು ಕೆಲವೇ ನಿಮಿಷಗಳಿದ್ದವು.

                                       --ಓದುಗರ ಅಭಿಪ್ರಾಯ ತಿಳಿದು ಮುಂದಿನ ಭಾಗ ಬರೆಯುವುದೋ ಬೇಡವೋ ನಿರ್ಧರಿಸುತ್ತೇನೆ.

4 comments: