Monday, December 24, 2012

ಮದುವೆ ಮನೆ

ಮದುವೆ ಮನೆ ಅಂದರೆ ಅದೇನು ಸಂಭ್ರಮ, ಸಡಗರ.. ಎರಡು ಮೂರು ದಿನ ಮುಂಚಿತವಾಗಿ ಹತ್ತಿರದ ನೆಂಟರಿಷ್ಟರೆಲ್ಲಾ ಮದುವೆ ಮನೆಯಲ್ಲಿ ಸೇರುತ್ತಿದ್ದರು. ಮನೆಯವರಿಗಷ್ಟೇ ಅಲ್ಲ ಬಂದ ಎಲ್ಲರಿಗೂ ಒಂದೇ ತೆರನಾದ ಸಡಗರದಲ್ಲಿ, ಮದುವೆ ಹೇಗಾಗುತ್ತದೋ? ಬೀಗರ ಉಪಚಾರದಲ್ಲಿ ಏನಾದರೂ ಕಡಿಮೆ ಆಗುವುದೋ? ಎಂಬ ಆತಂಕ ಇರುತ್ತಿತ್ತು. ಎಲ್ಲರೂ ತಮ್ಮ ಕೈಲಾಗುವ ಕೆಲಸಗಳನ್ನು ಗಡಿಬಿಡಿಯಲ್ಲಿ ಮಾಡುತ್ತಿದ್ದರು.

ಗಂಡಸರು ಮನೆಯ ಅಂಗಳದಲ್ಲಿ ಚಪ್ಪರ ಹಾಕುವುದು, ಅಂಗಳದ ನೆಲ ಮಟ್ಟಸ ಮಾಡುವುದು ಹೀಗೆ ಮುಂತಾಗಿ ಕೆಲಸದಲ್ಲಿ ತೊಡಗಿರುತ್ತಿದ್ದರು. ಅದು ಹೇಗೋ ಮದುವೆ ಮನೆ ಅಂದಾಕ್ಷಣ ಕೆಲಸಗಳೆಲ್ಲವೂ ಬಾಕಿ ಇದ್ದೇ ಇರುತ್ತವೆ. ಉಟಕ್ಕೆ ಬಾಳೆ ಎಲೆ ಕೊಯ್ಯುವುದು, ವೀಳ್ಯದೆಲೆ ಕೊಯ್ಯುವುದು ಮುಂತಾದ ಕೆಲಸಗಳಿಗೆ ಕೆಲವರು ನಿಷ್ಣಾತರು ಮುಂದಾಗಿ ಒಟ್ಟಾದ ಹುಡುಗರನ್ನು ಕರೆದುಕೊಂಡು ತೋಟಕ್ಕೆ ಹೋಗುತ್ತಿದ್ದರು. ಒಟ್ಟಾಗಿ ಇಂತಹ ಕೆಲಸ ಕಾರ್ಯಗಳಲ್ಲಿ ತೊಡಗಿರುವಾಗ ಹೇಳುವ ಹಾಸ್ಯ ಚಟಾಕಿಗಳು, ಕಥೆಗಳು, ಕೆಲವೊಮ್ಮೆ ಆ ಕ್ಷಣದಲ್ಲಿ ಉಂಟಾದ ಹಾಸ್ಯ ಪ್ರಸಂಗ ತುಂಬಾ ಮಜವಾಗಿರುತ್ತಿದ್ದವು. ವಯಸ್ಸಿನಲ್ಲಿ ಹಿರಿಯರಾದವರು ಅವರ ಯೌವ್ವನದಲ್ಲಿ ನಡೆದ ಯಾವುದೋ ಮದುವೆಯ ಕಥೆಯನ್ನು ಬಿಡಿಸಿ ಬಿಡಿಸಿ ಹೇಳುತ್ತಿದ್ದರು. ಇಂತಹ ಸಮಯದಲ್ಲಿ ಇಡೀ ಮನೆಯೇ ಏಕೆ ಊರೇ ಸಂತೋಷದ ಅನುಭವಕ್ಕೀಡಾಗುತ್ತಿರುತ್ತದೆ.

ಹೆಂಗಸರು ಕಜ್ಜಾಯದ ತಯಾರಿ, ಪನಿವಾರದ ತಯಾರಿಯಲ್ಲಿ ತೊಡಗಿರುತ್ತಾರೆ. ಹಲವು ಹೆಂಗಸರು ಒಟ್ಟೊಟ್ಟಿಗೆ ಮಾತನಾಡುತ್ತ, ನಗುತ್ತಿರುತ್ತಾರೆ. ಹಾಗಾಗಿ ಅಲ್ಲಿಯೂ ಸಂತೋಷ ಇದ್ದೇ ಇರುತ್ತದೆ ಎನ್ನಬಹುದು. ಸೇರಿರುವ ಮಕ್ಕಳಂತೂ ಕಂಬ ಕಂಬ ಆಟ, ಡಬ್ಬಾ ಡುಬ್ಬಿ ಆಟ ಮುಂತಾದ ಮಕ್ಕಳ ಸಂಕ್ಯೆಯನ್ನು ಬಯಸುವ ಆಟಗಳನ್ನು ಆಡುತ್ತಿದ್ದರು.

ಅಂಗಳದ ಚಪ್ಪರಕ್ಕೆ ಮೇಲ್ಗಟ್ಟು ಕಟ್ಟುವುದು ಮಾತ್ರ ಮದುವೆಯ ಹಿಂದಿನ ರಾತ್ರಿಯೇ. ಅದೊಂದು ಶಾಸ್ತ್ರವೋ ಎಂಬಷ್ಟು ಚಾಲ್ತಿಯಲ್ಲಿತ್ತು. ಮೇಲ್ಗಟ್ಟಿಗೆ ಗುಂಡು ಸೂಜಿ ಚುಚ್ಚುವುದು, ಸೀರೆಯಲ್ಲಿ ಹೂವು ಮಾಡುವುದು ಎಲ್ಲ ಸ್ವಲ್ಪ ತಾಳ್ಮೆ ಮತ್ತು ಕೌಶಲ್ಯ ಬಯಸುವ ಕಲೆ. ಅದಕ್ಕೆಂದೇ ಬಂದ ತಜ್ಞರು ಉಮೆದುವಾರರಿಗೆ ಹೇಳಿಕೊಡುತ್ತ ರಾತ್ರಿಯೆಲ್ಲಾ ಮೇಲ್ಗಟ್ಟು ಕಟ್ಟುತ್ತಿದ್ದರು. ಮೇಲ್ಗಟ್ಟು ಕಟ್ಟಲು ಸೀರೆ ಒಟ್ಟು ಮಾಡುವಾಗ ಅಂತೂ ಅನೇಕ ಮಾಂಸಹಾರಿ ಹಾಸ್ಯ ಚಟಾಕಿಗಳನ್ನು ಕೇಳಿ ಪಾವನವಾಗಬಹುದಿತ್ತು.

ಬೆಂಗಳೂರಿಗೆ ಬಂದು ೬ ವರ್ಷವಾಯಿತು. ಈ ಸಮಯದಲ್ಲಿ ನನ್ನ ಮದುವೆ ಒಂದನ್ನು ಬಿಟ್ಟು ಬೇರೆ ಯಾವ ಮದುವೆ ಮನೆಯನ್ನೂ ನೋಡಿಲ್ಲ. ಮೊನ್ನೆ ಮೊನ್ನೆ ನಡೆದ ನನ್ನ ಆತ್ಮೀಯ ಸ್ನೇಹಿತನ ಮದುವೆಗೂ ಒಂದೇ ದಿನ ನಾನು ಹೋಗಿದ್ದು, ಅದೂ ಕಲ್ಯಾಣ ಮಂಟಪಕ್ಕೆ. "ನಿನ್ನ ಮದುವೆಯಲ್ಲಿ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ" ಎಂದು ಯಾವಾಗಲೋ ಮಾತಾಡಿಕೊಂಡಿದ್ದು ಅವತ್ತು ಮದುವೆಯಲ್ಲಿ ನನ್ನ ಕಿವಿಯೊಳಗೆ ಮತ್ತೆ ಮತ್ತೆ ಕೇಳಿಸುತ್ತಿತ್ತು.

ಈಗಿನ ಮದುವೆ ಮನೆಗಳೂ ನಾನು ಮೇಲೆ ಹೇಳಿದಂತೆ ಇರದೇ ಇರಬಹುದು. ಪರಿಸ್ಥಿತಿಯ, ಈಗಿನ ಕಾಲಮಾನದ ಜಂಜಾಟಗಳ ಹೊಡೆತಕ್ಕೆ ಸಿಕ್ಕಿ ಅವೂ ಸೊರಗಿ ಹೋಗಿವೆ. ಆದರೆ ನಾನು ಹೋಗಿ ಮದುವೆ ಮನೆಯಲ್ಲಿ ಭಾಗಿಯಾಗಿದ್ದರೆ ಸಮಾಧಾನವಾದರೂ ಇರುತ್ತಿತ್ತು. ಈಗಿನ ಕಲ್ಯಾಣ ಮಂಟಪದ ಮದುವೆಗಳಲ್ಲಿ ಊಟದ ಸಮಯದಲ್ಲೊಂದು ಜನರಿರುತ್ತಾರೆ, ಮುಂಚೂ ಇರುವುದಿಲ್ಲ ಕೊನೆಗೂ ಇಲ್ಲ.

ಇನ್ನು ಹೇಗಾದರೂ ಮಾಡಿ ಪುರುಸೊತ್ತು ಮಾಡಿಕೊಂಡು ಆತ್ಮೀಯರ ಮದುವೆಗೆ ಹೋಗಬೇಕೆಂದು ನಿರ್ಧರಿಸಿದ್ದೇನೆ.

1 comment:

  1. ನೀವಂದಿದ್ದು ಬಹುಮಟ್ಟಿಗೆ ನಿಜ..
    ಈಗಿನ ಮದುವೆ ಮನೆಯಲ್ಲಿ ಉತ್ಸಾಹದ ಕಳೆ ಕಾಣುವುದಿಲ್ಲ. ಯಾಕೆಂದರೆ ಎಲ್ಲರೂ ಅವರವರ ಪ್ರಪಂಚದಲ್ಲಿ ಮುಳುಗಿಬಿಡುತ್ತಾರೆ. ಅದರಲ್ಲೂ ನಗರ ಪ್ರದೇಶದ ಮದುವೆಯೆಂದರೆ ಊಟದ ಸಮಯಕ್ಕೆ ಬಂದು ಮೊದಲ ಪಂಕ್ತಿಯಲ್ಲೇ ಉಂಡು, ಬಾಳೆ ಎಲೆ ತೆಗೆಯುವ ಮುನ್ನ ಹೊರಟು ಹೋಗುವ ಪರಿಪಾಠ. ಏನೂ ಮಾಡುವಂತಿಲ್ಲ.
    ಕಾಲಾಯ ತಸ್ಮೈ ನಮಃ

    ReplyDelete