Friday, November 23, 2012

ನಿದ್ರೆ


"ನಿದ್ರೆ" ಇದು ಎಷ್ಟು ಆಪ್ಯಾಯಮಾನ. ಯಾರಾದರೂ ನನಗೆ ನಿದ್ರೆ ಬೇಡವೇ ಬೇಡ ಎಂದವರಿದ್ದಾರೆಯೇ? ವೈದ್ಯರೂ ಹೇಳುತ್ತಾರೆ "ಊಟ, ನಿದ್ರೆ, ಬಹಿರ್ದೆಸೆ" ಸರಿಯಾಗಿ ಆದರೆ ಮನುಷ್ಯ ಆರೋಗ್ಯವಾಗಿರುತ್ತಾನೆ ಎಂದು. ನಿದ್ರೆಗೆ ಅದರದ್ದೇ ಆದ ಪ್ರಾಮುಖ್ಯತೆ ಇದ್ದೇ ಇದೆ. ಎರಡು ದಿನ ನಿದ್ದೆಗೆಟ್ಟರೆ ಮನುಷ್ಯನ ವ್ಯಕ್ತಿತ್ವವೇ ಬದಲಾಗಿ ಹೋಗುತ್ತದೆ. ಓಣಿವಿಘ್ನೇಶ್ವರ ತೇರಿನ ಓಕಳಿ ದಿನ ಸಾಧು ಶಾಂತ ಸ್ವಭಾವದ ಗಣಪತಿ ಅಣ್ಣನೂ ಅಲವರಿಕೆಯ ತುತ್ತ ತುದಿಯಲ್ಲಿರುತ್ತಾನೆ.

ಪುರಾಣ ಕಾಲದಿಂದಲೂ ಪ್ರತಿಮೆಗಳ ಮೂಲಕ ನಿದ್ರೆಯ, ಮಲಗುವುದರ ಮಹತ್ವವನ್ನ ನಾನಾರೀತಿಯಲ್ಲಿ ಹೇಳುತ್ತಾ ಬಂದಿದ್ದಾರೆ. ವಿಷ್ಣುವು ಸರ್ಪದ ಮೇಲೆ ಮಲಗಿರುತ್ತಾನೆ. ಭೀಷ್ಮನು ಬಾಣದ ಹಾಸಿಗೆಯಮೆಲೂ ಮಲಗೇ ಇರುತ್ತಾನೆ, ಕುಳಿತಿರುವುದಿಲ್ಲ. ಪಾಂಡವರು ಮಲಗಿರುವಾಗಲೇ ಅರಗಿನ ಮನೆಗೆ ಬೆಂಕಿಯನ್ನಿಡಲಾಗುತ್ತದೆ. ಇವೆಲ್ಲವುಗಳಿಂದ ನಾವು ನಿದ್ರೆಯ ಮಹತ್ವವನ್ನ ಮನಗಾಣಬೇಕು.

ನಿದ್ರೆಯಲ್ಲಿರುವಾಗ ಬೀಳುವ ಕನಸುಗಳು ಅತಿರೋಚಕವಾಗಿರುತ್ತವೆ. ಕೆಲವರಿಗೆ ತಾವು ಮೇಲಿನಿಂದ ಬೀಳುತ್ತಿರುವಂತೆಯೂ, ದೊಡ್ಡ ಬಂಡೆ ಉರುಳಿ ಬರುತ್ತಿರುವಂತೆಯೂ, ಹಾವು ಕಚ್ಚಲು ಬಂದಂತೆಯೂ, ದೊಡ್ಡ ಮರುಭೂಮಿಯಲ್ಲಿ ಒಬ್ಬನೇ ಕಳೆದು ಹೋದಂತೆಯೂ ಕನಸುಗಳು ಬೀಳುತ್ತವೆ. ನನಗೆ ಎತ್ತರದಿಂದ ಕೆಳಗೆ ನೋಡಿದರೆ ಹೆದರಿಕೆ ಆಗುತ್ತದೆ. ಕನಸಿನಲ್ಲೂ ಮೇಲಿಂದ ಕೆಳಗೆ ನೋಡಿದಂತೆ ಕನಸು ಬೀಳಬೇಕೆ. ಒಂದು ರಾತ್ರಿಯಂತೂ ಬೆಳೆನಳ್ಳಿ ಶಾಲೆಗೆ ಉಪನ್ಯಾಸ ಕೊಡಲು ಹೋದಂತೆ ಕನಸು ಬಿದ್ದಿತ್ತು.

ಕೆಲವು ಸಲ ಈ ನಿದ್ರೆ ವಂಶಪಾರಂಪರ್ಯವೇ ಎಂಬ ಗುಮಾನಿಯೂ ಬಂದದ್ದಿದೆ. ನೋಡಿ ನಮ್ಮ ಪೂರ್ವಜರೆಲ್ಲರೂ ಮಲಗುತ್ತಿದ್ದರು ಹಾಗೂ ನಿದ್ರೆ ಮಾಡುತ್ತಿದ್ದರು. ಬಹುಷಃ ಹಾಗಾಗೆ ನಾವೂ ಮಾಡುತ್ತಿದ್ದೇವೆಯೋ? ಕೆಲವುಸಲ ಇದು  ಸಾಂಕ್ರಾಮಿಕ ಇರಬಹುದೇ ಎಂದೂ ಅನಿಸುತ್ತದೆ. ಯಾರಾದರೂ ಮಲಗಿದ್ದರೆ ಕುಳಿತಿರುವವರಿಗೆ ನಿದ್ರೆ ಬರುತ್ತದೆ. ಒಂದೋ ಅವರೂ ಮಲಗುತ್ತಾರೆ ಇಲ್ಲವೇ ಮಲಗಿದವರನ್ನು ಎಬ್ಬಿಸುತ್ತಾರೆ. ಕೆಲವರಿಗೆ ನಿದ್ರೆಯಿಂದ ಎಚ್ಚರ ಆದ ತಕ್ಷಣ ಎಬ್ಬಿಸಿದವರನ್ನು ಒದ್ದು ಹಾರಿಸಿಬಿಡಬೇಕೆಂಬ ಸಿಟ್ಟು ಬರುತ್ತದೆ.

ನಿದ್ರೆ ಮಾಡುವುದರಲ್ಲಿಯೂ ವೈಶಿಷ್ಟ್ಯವಿದೆ. ಕೆಲವರಿಗೆ ನಿದ್ದೆ ಸೂಕ್ಷ್ಮ, ಇವರಿಗೆ ಸಣ್ಣ ಶಬ್ದವಾದರೂ ಎಚ್ಚರ ಆಗಿಬಿಡುತ್ತದೆ. ಇನ್ನು ಕೆಲವರಿಗೆ ಗಾಢ ನಿದ್ರೆ, ಕೊನೆಗೌಡನ ದೋಟಿಯಿಂದ ಎಳೆದರೂ ಎಚ್ಚರ ಆಗುವುದಿಲ್ಲ. ಕೆಲವರು ಕೂತಲ್ಲೇ ತೂಕಡಿಸಿ ತೂಕಡಿಸಿ ನಿದ್ರೆ ಮುಗಿಸಿಬಿಡುತ್ತಾರೆ. ಕೆಲವರಿಗೆ ಮಲಗುವ ವ್ಯವಸ್ಥೆಗಳೇ ಸರಿ ಆಗುವುದಿಲ್ಲ. ಬೆಳಕು ಬರಬಾರದು, ಗಾಳಿ ಪಶ್ಚಿಮದಿಂದ ದಕ್ಷಿಣಕ್ಕೆ ಬೀಸುತ್ತಿದೆ ಹೀಗೆ ಹತ್ತು ಹಲವು ತೊಂದರೆಗಳು. ನಮ್ಮೂರಿನಲ್ಲೊಬ್ಬರು ಹತ್ತರಗಿ ಬಸ್ಸು ಹತ್ತಿ ಟಿಕೆಟ್ ತೆಗೆದುಕೊಂಡು ಕಣ್ಣು ಮುಚ್ಚಿದರೆ ಸಿರಸಿಯ ಐದು ಕತ್ರಿಯಲ್ಲಿ ಪಿಳಕ್ಕನೆ ಕಣ್ಣು ಬಿಡುತ್ತಾರೆ. ಇಂತಹವರಿಗೆ ನಿದ್ರೆಯೆಂದರೆ ವೀಳ್ಯದೆಲೆ ಶರಿ ತೆಗೆದಷ್ಟು ಸಲೀಸು.

ಒಂದು ಮನುಷ್ಯನಿಗೆ ಎಷ್ಟು ಗಂಟೆ ನಿದ್ರೆ ಬೇಕು ಎಂಬ ವಿಷಯದಲ್ಲಿ ಯಾವಾಗಲೂ ಒಮ್ಮತ ಮೂಡಿದ್ದಿಲ್ಲ ನಮ್ಮೊಳಗಿನ ಚರ್ಚೆಗಳಲ್ಲಿ. ಕೆಲವರು ಆರು ಗಂಟೆ, ಕೆಲವರು ಎಂಟು ಗಂಟೆ ಹೀಗೆ ಅವರವರ ಅಭ್ಯಾಸವನ್ನು ಹೇಳುತ್ತಾರೆ. ನನ್ನ ಕೇಳಿದರೆ ರಾತ್ರಿಯಿಂದ ಬೆಳಗಿನವರೆಗೆ ಎನ್ನುತ್ತೇನೆ. ಕೆಲವರಿಗೆ ಹತ್ತುಗಂಟೆಗೆ ರಾತ್ರಿಯಾಗುತ್ತದೆ, ನನ್ನಂತವರಿಗೆ ಮತ್ತೂ ಸ್ವಲ್ಪ ತಡ. ಬೆಳಗೂ ಹಾಗೆಯೇ. ಕೆಲವರಿಗೆ ಐದು ಗಂಟೆ, ಹಲವರಿಗೆ ಸ್ವಲ್ಪ ತಡ. ಹಾಗಾಗಿ ರಾತ್ರಿಯಿಂದ ಬೆಳಗಿನವರೆಗೆ ನಿದ್ರೆ ಅನಿವಾರ್ಯ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ನಾವು ನಿದ್ರೆಯ ಪ್ರಾಮುಖ್ಯತೆಯನ್ನು ಅರಿತುಕೊಂಡು ನಮ್ಮ ಮುಂದಿನ ಪೀಳಿಗೆಗೆ ಜೋಪಾನವಾಗಿ ವರ್ಗಾಯಿಸಬೇಕೆಂದು ಹೇಳುತ್ತಾ... ಆಹ್!! ಆಕಳಿಕೆ.. ಆಹ್!! ಒವೊವ್.. ಆಹ್!!

1 comment:

  1. ನಿದ್ದೆಯ ಬಗೆಗಿನ ಜಿಜ್ಞಾಸೆಯ ಬಗ್ಗೆ ನನ್ನ ಹೆಂಡತಿಯ ಅಭಿಪ್ರಾಯ ಕೇಳಲೂ ಆಗದಂಥ ದುರಂತ ಪರಿಸ್ಥಿತಿಗೆ ನನ್ನನ್ನು ತಂದೊಡ್ಡು ತ್ತೀ ಎಂದು ಭಾವಸಿರಲಿಲ್ಲ.
    ಇಷ್ಟು ದಿನ ಯಾವ ರೆಫೆರೆನ್ಸೂ ಇಲ್ಲದೆ ಬಯ್ಯುತ್ತಿದ್ದ ನನ್ನ ಹೆಂಡತಿ, ಆ ಸುರೇಶನ0ತವರ ಬ್ಲಾಗ್ ಓದಿ ಈ ಥರ ನಿದ್ದೆ ಮಾಡುತ್ತೀರೆಂದೂ , ಇನ್ನು ಮುಂದೆ ಈ ತರಹ ಬ್ಲಾಗು ಗಳನ್ನ ಬ್ಲಾಕ್ ಮಾಡಬೇಕೆಂದೂ ಫರ್ಮಾನು ಹೊರಡಿಸಿದ್ದಾಳೆ.
    ಜಿಜ್ಞಾಸೆಯ ಬರಹಗಳು ಸದ್ಯದಲ್ಲೇ ವಿವಾದಾತ್ಮಕ ಬರಹಗಳಾಗಬಹುದು ಎಂಬ ಸಂಶಯ ಕಾಡ ತೊಡಗಿದೆ.

    ReplyDelete