Friday, November 15, 2013

ಅನಿರೀಕ್ಷಿತ ಭೇಟಿಗಳು..

ಕೆಲವು ಸಲ ಅನಿರೀಕ್ಷಿತವಾಗಿ ಅಪರೂಪದವರು ಸಿಕ್ಕಿದರೆ ಅದೆಷ್ಟು ಗೊಂದಲವಾಗುತ್ತದೆ ಅನ್ನುವುದನ್ನು ಅನುಭವಿಸಿದ್ದೀರಾ? ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಅನ್ನುವುದು ಗೊತ್ತಾಗದೆ ಒದ್ದಾಡುವುದು, ನಗು ಬರದಿದ್ದರೂ ನಗುವುದು ಇವನ್ನೆಲ್ಲ ಅನುಭವಿಸಿಯೇ ನೋಡಬೇಕು. ಬಹುಷಃ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಇದರ ಅನುಭವ ಆಗಿಯೇ ಇರುತ್ತದೆ. ಕೆಲವರು ತಡಬಡಾಯಿಸಿದರೆ ಕೆಲವರು ಹೇಗೋ ನಿಭಾಯಿಸಿಬಿಡುತ್ತಾರೆ. ಬೇಡದ ಜಾಗದಲ್ಲಿ, ಬೇಡದ ಸಂದರ್ಭದಲ್ಲಿ ಸಿಕ್ಕರಂತು ಮುಖ ಹುಳ್ಳಗಾಗುವುದನ್ನು ತಪ್ಪಿಸಿಕೊಳ್ಳಲಾಗದು.

ನಮ್ಮ ಸುತ್ತಲಿನ ಊರಿಗೆಲ್ಲ ಹೆಸರುವಾಸಿಯಾದ ಮನೆಯೊಂದಿದೆ. ಪುಂಖಾನುಪುಂಖವಾಗಿ ಯಾವ ವಿಷಯದ ಬಗ್ಗೆಯಾದರೂ ಯಾರಿಗೆ ಬೇಕಾದರೂ ಕಂಡಕಂಡಲ್ಲಿ ಭಾಷಣ ಬಿಗಿಯುವುದರಲ್ಲಿ ಅವರು ನಿಸ್ಸೀಮರು. ಮದುವೆ ಮುಂಜಿಗೆ ಆಮಂತ್ರಣ ಕೊಡಲು ಅವರ ಮನೆಗೆ ಹೋಗೋಣವೆಂದರೆ ಕೆಲವರು ಅದನ್ನು ತಮ್ಮ ಕೊಲೆಯ ಸಂಚೆನೋ ಅನ್ನುವಂತೆ ಬೆಚ್ಚುತ್ತಾರೆ. ಯಾರಾದರೂ ಅವರ ಮನೆಗೆ ಹೋದರೆ ಸಾಕು, ಕುದಿಯುತ್ತಿರುವ ಚಹಾ ಎದುರಿಗಿಟ್ಟು ಅದು ಆರುವವರೆಗೂ ಇಡೀ ಮನೆಯವರೆಲ್ಲ ಸೇರಿ ಮೆದುಳಿಗೆ ಕೈ ಹಾಕಿ ಕಲಸಿಬಿಡುತ್ತಾರೆ. ಅಲ್ಲಿಂದ ಹೊರಬಂದಮೇಲೆ ಜಗತ್ತಿನ ವೈಶಾಲ್ಯ ಹಾಗು ಶಾಂತತೆಯ ಪರಿಚಯ ಸರಿಯಾಗಿ ಆಗಿ ಅವುಗಳ ಮಹತ್ವ ತಿಳಿಯುತ್ತದೆ.

ಹಿಂದಿನವಾರ ನನ್ನ ಗೆಳೆಯನೊಬ್ಬನಿಗೆ "ಆ" ಮನೆಯವರಿಬ್ಬರು ಬೆಂಗಳೂರಿನಲ್ಲಿ ಸಿಕ್ಕಿದ್ದರಂತೆ. ರಸ್ತೆಯಲ್ಲೆಲ್ಲೋ ಇವನು ಹೋಗುತ್ತಿರುವಾಗ ಅಚಾನಕ್ಕಾಗಿ ಅವರಿಬ್ಬರೂ ಎದುರಿಗೆ ಪ್ರತ್ಯಕ್ಷವಾದಾಗ ಎನುಮಾಡುವುದೆಂದು ತಿಳಿಯದೆ ಕಕ್ಕಾಬಿಕ್ಕಿಯಾದನಂತೆ. ಒಂದೇ ಊರಿನವರು ಆದದ್ದರಿಂದ ಎದುರಿಗೆ ಸಿಕ್ಕಾಗ ಮಾತನಾಡಿಸುವು ಸೌಜನ್ಯ. ಉಭಯಕುಶಲೋಪರಿ ಮಾತುಕತೆಯಾದಮೇಲೆ ಮನೆಯೆಲ್ಲಿ ಇದೆ ಎಂದು ಅವರು ಕೇಳಿದಾಗಲೇ ಪರಿಸ್ಥಿತಿಯ ಗಹನತೆ ಅವನ ಅರಿವಿಗೆ ಬಂದಿದ್ದು. ಯಾವುದೋ ಮಾತಿನ ಭರದಲ್ಲಿ ಮನೆಯ ವಿಳಾಸವನ್ನು ಹೇಳದೆ, ತಲೆಹೋಗುವಂತ ಕೆಲಸವನ್ನೇನೋ ಆರೋಪಿಸಿಕೊಂಡು ಅಲ್ಲಿಂದ ಕಾಲ್ಕಿತ್ತನಂತೆ. ಅಂತಹ ಸಂದರ್ಭದಲ್ಲೂ ಸಹ ಅವನಿಗೆ ನನ್ನ ಮನೆಯ ವಿಳಾಸವನ್ನು ಕೊಡುವ ಆಲೋಚನೆ ಬಂದಿತ್ತಂತೆ. ನಾನು ತೀರ್ಮಾನಿಸಿದ್ದೇನೆ, ಯಾರಿಗೂ ನನ್ನ ಮನೆಯ ವಿಳಾಸವನ್ನು ಮಾತ್ರಾ ಕೊಡಬಾರದೆಂದು.

ಕೆಲವುಸಲ ಅಪರೂಪಕ್ಕೆ ಸಿಕ್ಕವರ ಹೆಸರು ನೆನಪಿನಲ್ಲಿರುವುದಿಲ್ಲ. ಆಗ ನೆನಪಿಸಿಕೊಳ್ಳುವುದಕ್ಕೆ ಒದ್ದಾಡಬೇಕು. ಆಗ ಹೆಂಡತಿಯನ್ನು ಕರೆದು "ಇಲ್ಲಿ ನೋಡು ಯಾರು ಸಿಕ್ಕಿದ್ದಾರೆಂದು!!" ಹೇಳಿ ಅವಳಿಗೆ ಏನಾದರು ಸಿಕ್ಕವರ ಹೆಸರು ಗೊತ್ತಿದೆಯೋ ಎಂದು ಕೇಳುವುದು. "ಅರೆ ನೀನು!! ನಿನ್ನನ್ನು ಮರೆಯುವುದಕ್ಕೆ ಸಾಧ್ಯವಾ.." ಎಂದು ಹುಳಿ ಹುಳಿ ನಗೆಯಾಡುವುದು, ಇಂತಹ ಚೇಷ್ಟೆಗಳು ಸಾಮಾನ್ಯ. ನಾನಂತೂ ಸಿಕ್ಕವರ ಮುಖಕ್ಕೆ ಯಾವ ಹೆಸರು ಹೊಂದುತ್ತದೆ ಎಂದು ನೋಡಿ ಯಾವುದೋ ಒಂದು ಹೆಸರನ್ನು ಹೇಳಿಬಿಡುತ್ತೇನೆ ಅಮೇಲಾಗುವ ಪರಿಣಾಮಗಳಿಗೆ ಸಿದ್ದನಾಗಿಯೇ. ಕೆಲವರಂತೂ "ನಾನು ಯಾರು ಹೇಳು ನೋಡೋಣ" ಅಂತ ತಲೆ ಬಿಸಿ ಮಾಡುತ್ತಾರೆ. ಪಕ್ಕದ ಮನೆಯ ಚಿಕ್ಕಪ್ಪನೊಬ್ಬನಿದ್ದಾನೆ ಅವನು ಯಾರಿಗೆ ಯಾವ ಹೆಸರನ್ನು ಬೇಕಾದರೂ ಹೇಳುತ್ತಾನೆ. ಒಮ್ಮೆ ಅವರ ಮನೆಗೆ ಬಂದ ಅತ್ತಿಗೆಯೊಬ್ಬರಿಗೆ "ವಿನಾಯಕ ಅಕ್ಕ" ಅಂತ ಕರೆದುಬಿಟ್ಟಿದ್ದ. ಹತ್ತೆಂಟು ನೆಂಟರಿಷ್ಟರ ಹೆಸರೇ ನಮಗೆ ನೆನಪಿರುವುದಿಲ್ಲ, ಇನ್ನು ವೈದ್ಯರು ಹೇಗೆ ನೂರಾರು ಔಷಧಿಗಳ ಹೆಸರನ್ನು ನೆನಪಿಟ್ಟುಕೊಳ್ಳುತ್ತಾರೆ?

ಅನಿರೀಕ್ಷಿತವಾಗಿ ಅತ್ಮೀಯರೋ, ಬೇಕಾದ ಬಂಧುಗಳೋ ಸಿಕ್ಕರೆ ಆಗುವ ಸಂತೋಷವೂ ಸಹ ಅಪ್ರಮತಿಮ. 
ಇಂತಹ ವೇಗದ ಜೀವನದಲ್ಲಿ ಭೇಟಿ ಮಾಡಬೇಕೆಂದು ಆಲೋಚಿಸುತ್ತಿರಬೇಕಾದರೆ ಹಠಾತ್ತಾಗಿ ಸಿಗಬೇಕಾದವರು ಸಿಕ್ಕಿ ನಮ್ಮ ಜೊತೆ ಸಮಯ ಕಳೆದರೆ ತುಂಬಾ ಆನಂದವಾಗುತ್ತದೆ.

Thursday, August 22, 2013

ಮೂರ್ತಿ


ಮೂರ್ತಿ ತುಂಬಾ ಒಳ್ಳೆಯ ಮನುಷ್ಯ. ಅವನು ಚಿಕ್ಕವನಿರುವಾಗಿನಿಂದ ನನಗೆ ಗೊತ್ತು. ಚಿಕ್ಕವನಿರುವಾಗ ಅವನು ಎಷ್ಟು ಮುದ್ದಾಗಿದ್ದನೆಂದರೆ ಯಾರೂ ಅವನ ಕೆನ್ನೆ ಚಿವುಟದೆ ಮಾತನಾಡಿಸುತ್ತಿರಲಿಲ್ಲ. ಗುಣದಲ್ಲೂ ಸಹ ತುಂಬಾ ಸೌಮ್ಯ ಸ್ವಭಾವದ ಮಾಣಿಯಾಗಿದ್ದ. ಉಳಿದ ಮಕ್ಕಳಂತೆ ವಿನಾಕಾರಣ ಹಠ, ರಗಳೆ ಯಾವುದೂ ಇರಲಿಲ್ಲ. ಲಿಗಾಡಿ ಅನ್ನುವುದನ್ನಂತೂ ಮಾಡಿಯೇ ಇಲ್ಲ ಅನ್ನಬಹುದು.

ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ. ಹೈ ಸ್ಕೂಲ್ ಮುಗಿಯುವವರೆಗೂ ಶಾಲೆಗೇ ಅವನೇ ಮೊದಲಿಗ. ಓರಗೆಯ ಹುಡುಗರಂತೆ ಶಾಲೆಯಿಂದ ಬಂದ ತಕ್ಷಣ ಪಾಟಿಚೀಲವನ್ನು ಎಲ್ಲೋ ಒಗೆದು ಆಡಲು ಓಡುವ ಹುಡುಗನಾಗಿರಲಿಲ್ಲ. ಸ್ವಲ್ಪ ಏನನ್ನಾದರೂ ತಿಂದು, ಶಾಲೆಯಲ್ಲಿ ಕೊಟ್ಟ ಬರವಣಿಗೆಯನ್ನೂ, ಕೆಲಸವನ್ನೂ ಮುಗಿಸಿಯೇ ಏಳುತ್ತಿದ್ದ. ನೆಂಟರಿಷ್ಟರು ತಮ್ಮ ಮಕ್ಕಳಿಗೆ ಬಯ್ಯುವಾಗ "ಮೂರ್ತಿಯನ್ನು ನೋಡಿ ಕಲಿತುಕೋ" ಎನ್ನುವುದು ಮಾಮೂಲಾಗಿತ್ತು.

ಪಿ ಯು ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾಗಿ, ಇಂಜಿನಿಯರಿಂಗ್ ಕೋರ್ಸ್ ಗೆ ಸೇರಿ ಯಶಸ್ವಿಯಾಗಿ ಮುಗಿಸಿ ಈಗ ವಿದೇಶದ ಯಾವುದೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಳ್ಳೆಯ ಸಂಬಳ ತೆಗೆದುಕೊಳ್ಳುತ್ತಿದ್ದಾನೆ. ಮನೆ ಕಾರು ಎಲ್ಲ ಇದೆ. ತಂದೆ ತಾಯಿಗೆ ಇದಕ್ಕಿಂತ ಖುಷಿ ಬೇಕೇ? ಒಂದು ಒಳ್ಳೆಯ ಕೂಸು ಹುಡುಕಿ ಅವನ ಮದುವೆ ಮಾಡಿಬಿಟ್ಟರೆ ತಂದೆ ತಾಯಿ ಆರಾಮಾಗಿರಬಹುದು. ನಿಮಗೆ ಗೊತ್ತಿದ್ದ ಹಾಗೆ ಯಾವುದಾದರೂ ಕೂಸು ಇದೆಯೇ?



Thursday, July 11, 2013

ಬುತ್ತಿ

ಜೋರಾಗಿ ಮಳೆ ಬರುತ್ತಿತ್ತು, ಆಕಾಶ ಕಪ್ಪಾಗಿ ಮನೆಯೊಳಗೂ ಕತ್ತಲು ಇರುವಂತೆ ಮಾಡಿತ್ತು. ಯಾಕೋ ಬಹಳ ದಿನಗಳ ನಂತರ ಒಬ್ಬನೇ ಕೂತು ಏಕಾಂತವನ್ನು ಅನುಭವಿಸುವ ಆಸೆಯಾಗಿತ್ತು. ಏನು ಇಲ್ಲ ಸುಮ್ಮನೆ ನಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವುದು, ಮುಂದಿನ ಕನಸುಗಳಿಗೆ ತೇಪೆ ಹಚ್ಚುವುದೇ ನನ್ನ ಆಸೆಯಾಗಿತ್ತು. ಯಾವ್ಯಾವುದೋ ನೆನಪುಗಳು, ಯಾರದೋ ಮಾತುಗಳು ಎಲ್ಲವು ಒಟ್ಟಿಗೆ ತಲೆಯಲ್ಲಿ ಬಂದು ಜಡಕಾಗಿ ಹೋಯಿತು. ಸರಿ, ಕ್ರಮಬಧ್ಧವಾಗಿ ಬಾಲ್ಯದಿಂದ ನೆನಪಿಸಿಕೊಳ್ಳೋಣ ಎಂದು ಪ್ರಾರಂಭಿಸಿದೆ. ಅನುಕ್ರಮವಾಗಿ ಬರಲು ಅದೇನು ತಿಂಗಳ ಸಂಬಳವಾ?

ನನಗೆ ನಿದ್ದೆ ಬರುವವರೆಗೂ ಪಕ್ಕದಲ್ಲೇ ಮಲಗಿ ನನ್ನ "ಎಂತಕ್ಕೆ" ಎನ್ನುವ ಅಸಂಬಧ್ಧ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಕೊಡುತ್ತಿದ್ದ "ಅಣ್ಣ". ನನಗೆ ಕತ್ತಲೆಯೆಂದರೆ ಭಯಂಕರ ಹೆದರಿಕೆಯಿತ್ತು. ರಾತ್ರಿ ಮೂತ್ರ ಬಂದು ಎಚ್ಚರವಾದಾಗ ಅಣ್ಣನ ಕೋಣೆಯ ಬಾಗಿಲ ಬಳಿ ನಿಂತು "ಅಣ್ಣಾ ಓ ಅಣ್ಣಾ" ಎಂದು ಕರೆದಾಗ ಅಲ್ಲೇ ಮಲಗಿರುವ ಅಣ್ಣಯ್ಯ, ಭಾವ ಎಲ್ಲರೂ ಬಯ್ಯುತ್ತಿದ್ದರು. ಈಗ ಮಲಗಿರುವಾಗ ಯಾರದ್ದಾದರೂ ಫೋನ್ ಬಂದರೆ ಅದೇನು ಅಲವರಿಕೆ ನನಗೆ. ಒಂದು ದಿನವೂ ಅಣ್ಣ "ನೀನೆ ಹೋಗಿ ಮೂತ್ರ ಮಾಡಿ ಬಾ, ನನ್ನ ಎಬ್ಬಿಸಬೇಡ" ಎಂದದ್ದಿದೆಯೇ?

ಆಗ ಸಣ್ಣವನಿದ್ದೆ. ನಮ್ಮೂರಿನ ಪ್ರೌಢ ಶಾಲೆಯ ವಾರ್ಷಿಕೋತ್ಸವಕ್ಕೆ ನೀನು ಹೋಗುವುದು ಬೇಡ ಎಂದು ಮನೆಯವರೆಲ್ಲರೂ ಹೇಳುತ್ತಿದ್ದರೂ, ದೊಡ್ಡಣ್ಣ, ಹತ್ತನೇ ತರಗತಿಯಲ್ಲಿ ಓದುತ್ತಿದ್ದ, ಬೆನ್ನಿನ ಮೇಲೆ "ಉಪ್ಪಿನ ಮೊಟ್ಟೆ" ಮಾಡಿಕೊಂಡು ಕರೆದುಕೊಂಡು ಹೋಗಿದ್ದ. ಮೂರೂವರೆ ಕಿ ಮಿ ಹೊತ್ತುಕೊಂಡು ಹೋಗಿದ್ದ. ಆಗಿನ ಸಂತೋಷ ತಿರುಗಿ  ಬರಬಹುದಾ? ಬಹುಷಃ ಅಣ್ಣನಿಗೂ ಈ ಘಟನೆ ನೆನಪಿರಲಿಕ್ಕಿಲ್ಲ.

ಶಾಲೆಯ ರಜಾ ದಿನಗಳಲ್ಲಿ ಮನೆಗೆ ಬಂದ ಅತ್ತೆಯರ ಮಕ್ಕಳೊಡನೆ ಹೊಳೆಗೆ ಹೋಗಿ ಪಂಜಿಯ ತುಂಡಿನಲ್ಲಿ ಅವಲಕ್ಕಿ ಹಾಕಿಕೊಂಡು ಮೀನು ಹಿಡಿಯುವ ಸಂಭ್ರಮವನ್ನು ಹೇಗೆ ವರ್ಣಿಸಲಿ. ಹದಿನೈದಿಪ್ಪತ್ತು ದಿನ ವಯಸ್ಸಿನ ನಾಯಿ ಮರಿಗಳನ್ನು ಈಜು ಕಲಿಸೋಣವೆಂದು ಹೊಳೆಗೆ ತೆಗೆದುಕೊಂಡು ಹೋಗಿ ತೇಲಿಬಿಡುವುದರಲ್ಲಿದ್ದಾಗ ಕಂಡ ಅಜ್ಜನ ಹತ್ತಿರ ಬೈಸಿಕೊಂಡಾಗ ಅದ ಅವಮಾನ ಲೆಕ್ಕಕ್ಕೆ ಸಿಗುವುದೇ? ಆಯಿ ಹಾಲು ಹಿಂಡುವಾಗ ದೊಣಕಲಿನಲ್ಲಿ ನಿಂತುಕೊಂಡು ಮಾತನಾಡುತ್ತಾ ಆಕಳ ಕಿವಿ ತಿರುಪಿ ಅದು ಆಯಿಗೆ ಒದ್ದಾಗ ಆದ ಭಯ ಪುನರಾವರ್ತನೆ ಆಗುವುದೇ?

ಏಳನೇ ತರಗತಿಯಲ್ಲಿದ್ದಾಗ ಕೇಂದ್ರ ಮಟ್ಟದ ಭಾಷಣ ಸ್ಫರ್ದೆಯಲ್ಲಿ ಪ್ರಥಮ ಬಹುಮಾನ ಗೆದ್ದಾಗ ಆದ ಖುಷಿ, ಹತ್ತನೇ ತರಗತಿಯಲ್ಲಿ ಇದ್ದಾಗ ವಾರ್ಷಿಕೋತ್ಸವದ ದಿನ ಮಾಡಿದ ನಾಟಕದ ಪಾತ್ರ ನಿರೀಕ್ಷೆಗೂ ಮೀರಿ ಜನಪ್ರಿಯವಾದಾಗ ಆದ ಹೆಮ್ಮೆ ನೆನಪಿನಲ್ಲಿ ಕಚಗುಳಿ ಇಡುತ್ತವೆ. ಪ್ರೌಢಶಾಲೆಯಲ್ಲಿರುವಾಗಿನ ಕ್ರಿಕೆಟ್ ಹುಚ್ಚು ಬಾಲಿಶ ಎನಿಸುತ್ತದೆ. ಕುಳ್ಳಗಿದ್ದುದರಿಂದ ಪ್ರಾರ್ಥನೆ ಮಾಡುವಾಗ ಸಾಲಿನಲ್ಲಿ ಎದುರಿಗೆ ನಿಲ್ಲುವಾಗ ಬರುತ್ತಿದ್ದ ಆಕ್ರೋಶ ಯಾರಮೇಲಿನದೋ? ಹೈ ಸ್ಕೂಲ್ ನಿಂದ ಮನೆಗೆ ಹೋಗುವಾಗ ಕೆಲವೊಮ್ಮೆ ವಿ ಡಿ ಅಂಗಡಿಯಿಂದ ಕೊಳ್ಳುತ್ತಿದ್ದ ಶೇಂಗಾ, ಶುಂಟಿ ಪೆಪ್ಪರಮೆಂಟ್ ರುಚಿ ಮರೆಯಲಾಗುವುದೇ?

ವಿಜ್ಹ್ನಾನವೆಂದರೇನು ವಾಣಿಜ್ಯವೆಂದರೇನು ಗೊತ್ತಿಲ್ಲದೇ ಪಿ ಯು ಸಿ ಯಲ್ಲಿ ವಿಜ್ಹ್ನಾನ ಆರಿಸಿಕೊಂಡು ಮೊದಲ ವರ್ಷ ನಪಾಸಾದಾಗ ಆದ ಅವಮಾನ, ಕೀಳರಿಮೆ, ಭವಿಷ್ಯದ ಬಗೆಗಿನ ಹೆದರಿಕೆ ಏಕೆ ನೆನಪಾಗುತ್ತದೋ? ನಂತರ ವಾಣಿಜ್ಯವನ್ನು ತೆಗೆದುಕೊಂಡು ಪ್ರಥಮ ವರ್ಷ ಪ್ರತಿಶತ ೮೦ ಅಂಕಗಳನ್ನು ತೆಗೆದುಕೊಂಡಾಗ ಏನೋ ಪ್ರತಿಕಾರ ತೀರಿಸಿಕೊಂಡ ಭಾವ, ಬೇಕಿತ್ತಾ ಅನಿಸುತ್ತದೆ.

ಸಣ್ಣವನಿದ್ದಾಗಿನಿಂದ ಇಲ್ಲಿಯವರೆಗೂ ಪಡೆದುಕೊಂಡ ಸಹಾಯಗಳೆಷ್ಟೋ.. ಅತ್ತೆಯ ಮಗಳು ಅತ್ತಿಗೆಯಿಂದ ಗಂಟೆ ನೋಡುವುದು ಕಲಿತೆ, ಭಾವನಿಂದ ಮಗ್ಗಿ ಕಲಿತೆ, ಅಣ್ಣಯ್ಯನಿಂದ ಲೆಕ್ಕ ಕಲಿತೆ... ಇನ್ನೂ ಎಷ್ಟೆಷ್ಟೋ ಜನರಿಂದ ನಾ ನಾ ರೀತಿಯಿಂದ ಉಪಕೃತನಾಗಿದ್ದೇನೆ. ಅವರೆಲ್ಲರಿಗೂ ಧನ್ಯವಾದ ಹೇಳುವ ಮನಸ್ಸಾಗಿದೆ...

ಏನೇ ಹೇಳಿ "ಬೀಚಿ"ಯ ಮಾತು ನಿಜವೆನ್ನಿಸುತ್ತದೆ. ಸಂತೋಷ ಎನ್ನುವುದು "ನೆನಪುಗಳಲ್ಲಿರುತ್ತದೆ". ನೆನಪುಗಳ ಜೊತೆ ಹೊತ್ತು ಕಳೆದಮೇಲೆ ಎಷ್ಟು ಮುದವೆನ್ನಿಸುತ್ತದೆ.. ಅಲ್ಲವೇ?

Thursday, February 7, 2013

ಟೀನೇಜ್ ಸಂಸ್ಕೃತಿ


"ನಿನ್ನ ವಯಸ್ಸಿಗೆ ನಾನು ಮನೆಯ ಯಜಮಾನನಾಗಿ ಜವಾಬ್ದಾರಿ ವಹಿಸಿಕೊಂಡಿದ್ದೆ" ಎಂದು ಅನೇಕ ಅಪ್ಪಂದಿರು ಈಗಿನ "ಟೀನೇಜ್" ವಯಸ್ಸಿನ ಹುಡುಗರಿಗೆ ಹೇಳುವ ಮಾತು. ನಾನೂ ಕೇಳಿಸಿಕೊಂಡಿದ್ದೇನೆ. ಅದು ಹೇಗೆ ನಮ್ಮ ಹಿಂದಿನ ತಲೆಮಾರಿನವರು ಈಗಿನ "ಟೀನೇಜ್" ವಯಸ್ಸಿಗೇ ಹುಡುಗಾಟವನ್ನು ಬಿಟ್ಟು ಜವಾಬ್ದಾರಿಗಳನ್ನು ಹೊರುವಷ್ಟು ಪ್ರೌಢರಾಗುತ್ತಿದ್ದರು? ತಮ್ಮ ೧೯-೨೦ ನೇ ವಯಸ್ಸಿನಲ್ಲಿ ಮನೆಯ ಯಜಮಾನಿಕೆ ವಹಿಸಿಕೊಂಡಿರುವವರ ಬಗ್ಗೆ ಕೇಳಿದ್ದೇನೆ, ೧೯ ನೇ ವಯಸ್ಸಿಗೇ ಅನಿವಾರ್ಯ ಕಾರಣಗಳಿಂದ ಮದುವೆಯಾಗಿ ಸಂಸಾರದ, ಇನ್ನೊಂದು ಜೀವದ ಜವಾಬ್ದಾರಿಯನ್ನು ತೆಗೆದುಕೊಂಡವರ ಬಗ್ಗೆ ಕೇಳಿದ್ದೇನೆ. ಆದರೆ ಈಗಿನ ತಲೆಮಾರಿನವರು ೨೫ ನೇ ವಯಸಿನಲ್ಲೂ ಭವಿಷ್ಯದ, ಮುಂದಿನ ಜೀವನದ ಬಗ್ಗೆ ಸ್ಪಷ್ಟವಾದ ಯೋಚನೆಯಿಲ್ಲದೆ "ಟೀನೇಜ್" ಎಂಬ ಮುಸುಕು ಹಾಕಿಕೊಂಡು ವ್ಯರ್ಥವಾಗಿ ಕಾಲಹರಣ ಮಾಡುತ್ತಿರುವುದು ವಿಷಾದನೀಯ.

ನಮ್ಮ ಹಿಂದಿನ ತಲೆಮಾರಿನವರಿಗೆ ಪ್ರೌಢತ್ವ ಬೇಗನೆ ಬರುತ್ತಿತ್ತು ಕಾರಣ ಅನಿವಾರ್ಯತೆ. ಅವರಿಗೆ ಈಗಿನಂತೆ ತಮ್ಮ ೨೨-೨೩ ನೇ ವಯಸ್ಸಿನವರೆಗೆ ಶಾಲೆ ಕಾಲೇಜ್ ಎಂದು ಹೋಗುವ ಆರ್ಥಿಕ ಸ್ವಾತಂತ್ರ್ಯವಿರಲಿಲ್ಲ. ತಮ್ಮ ೧೩-೧೪ ನೇ ವಯಸ್ಸಿಗೇ ದುಡಿಮೆ ಪ್ರಾರಂಭವಾಗುತ್ತಿತ್ತು. ೧೯-೨೦ ನೇ ವಯಸ್ಸಿಗೆ ಸ್ವಲ್ಪ ಮಟ್ಟಿಗೆ ಹೊರಜಗತ್ತನ್ನ ನೋಡಿರುತ್ತಿದ್ದರು. ದುಡಿಮೆ, ಆದಾಯ, ಖರ್ಚು ಹೀಗೆ ವ್ಯವಹಾರ ಜ್ಞಾನ ಸಿಕ್ಕಿರುತ್ತಿತ್ತು. ಹಾಗಾದರೆ ಅವರಿಗೆ ಈಗಿನ "ಟೀನೇಜ್" ನವರಂತೆ ಭಾವನೆಗಳು ಇರುತ್ತಿರಲಿಲ್ಲವೇ? ಇರುತ್ತಿತ್ತು ಆದರೆ ಇವತ್ತು ದುಡಿದರೆ ನಾಳಿನ ಖರ್ಚಿಗೆ ಆದಾಯ ಅನ್ನುವಂತಿದ್ದರೆ ಭಾವನೆಗಳಿಗೆಲ್ಲಿ ಜಾಗ? ಅದನ್ನು ವ್ಯಕ್ತಪಡಿಸುವ ದಾರಿ ಇರಲಿಲ್ಲ.

ಈಗ ಬೆಂಗಳೂರು, ಮುಂಬೈ ಇಂತಹ ಶಹರದಲ್ಲಿರುವ ೪೦-೫೦ ವಯಸ್ಸಿನವರಲ್ಲಿ ಕೇಳಿ ನೋಡಿ, ಬಹಳಷ್ಟು ಜನ ತಮ್ಮ ಯೌವನದಲ್ಲಿ ಕಷ್ಟ ಪಟ್ಟೇ ಓದಿ, ಓದುತ್ತಾ ದುಡಿದು, ದುಡಿದು ಓದುತ್ತಾ ಈಗ ಒಳ್ಳೆಯ ರೀತಿಯಲ್ಲಿ ಜೀವನ ಮಾಡುತ್ತಿರುವವರೇ. ಪಾಕೆಟ್ ಮನಿ ಅಂದರೇನು ಅನ್ನುವುದೇ ಗೊತ್ತಿರದಿದ್ದ ಕಾಲವದು. "ನಾನು ಏನನ್ನಾದರೂ ಸಾಧಿಸಬೇಕು" ಅನ್ನುವುದೊಂದೇ ಆಗಿನವರ ತಲೆಯಲ್ಲಿರುತ್ತಿತ್ತು.

ಈಗ ಟೀನೇಜ್ ಪ್ರಾಯದವರು ಗೊತ್ತುಗುರಿಯಿಲ್ಲದೆ ಕಾಲೇಜ್ ಗೆ ಹೋಗಲು ಪ್ರಾರಂಭಿಸಿ ನಂತರ ಸ್ವಲ್ಪ ದಿನದಲ್ಲೇ ಬೇಜಾರಾಗಿ ಚಕ್ಕರ್ ಹೊಡೆಯುತ್ತಾರೆ. ಈ ಮೊಬೈಲ್ ಅಂತೂ ಎಲ್ಲರ ಕೈಯಲ್ಲಿ ಕುಣಿಯುತ್ತಿದೆ. ಅವಶ್ಯಕತೆಯಿದೆಯೋ ಇಲ್ಲವೋ ಎಲ್ಲರಿಗೂ ಮೊಬೈಲ್ ಬೇಕು. ಅದರಲ್ಲಿ ಮಾತು ಹರಟೆ ಮುಗಿಯುವುದೇ ಇಲ್ಲ. ಇನ್ನು ಗಂಭೀರವಾಗಿ ಓದಲು ಸಮಯವೆಲ್ಲಿ? ನಮಗೆ ನಮ್ಮ ಅಪ್ಪಂದಿರು ಯಾವುದೇ ಜವಾಬ್ದಾರಿಗಳನ್ನು ನೀಡದೆ ಕೇಳಿದಷ್ಟು ಹಣವನ್ನು ಕೊಟ್ಟು ಓದಲು ಕಾಲೇಜ್ ಗೆ ಕಳಿಸುತ್ತಿದ್ದರೆ ನಾವು ಮಾಡುತ್ತಿರುವುದೇನು? ಫ್ರೆಂಡ್ಸ್ ಅಂತ ಹೇಳಿ ಯಾರ್ಯಾರದೋ ಹತ್ತಿರ ದಿನಗಟ್ಟಲೆ ಹರಟುವುದು, ತಂದೆ ತಾಯಿ ಸ್ವಲ್ಪ ವಿಚಾರಿಸಿದರೆ ದಿನಗಟ್ಟಲೆ ಊಟ ಬಿಟ್ಟು ಕೂರುವುದು.

ಟೀನೇಜ್ ಗೆಳೆಯರೇ ನಾವೂ ಪ್ರೌಢರಾಗೋಣ. ಯಾರದೋ ಮುಗುಳ್ನಗೆಯನ್ನು, ಗೆಳೆಯ/ಗೆಳತಿ ಕೊಟ್ಟ ಫ್ರೆಂಡ್ಶಿಪ್ ಕಾರ್ಡನ್ನು ಅಥವಾ ಇಂತಹ ಸನ್ನಿವೇಷಗಳನ್ನು ವೈಭವೀಕರಿಸುವುದನ್ನು ನಿಲ್ಲಿಸೋಣ. ಅಪ್ಪ ಕೊಡುವ ಪಾಕೆಟ್ ಮನಿಯನ್ನು ಅಪ್ಪ ಹೇಗೆ ದುಡಿದ ಎಂದು ಯೋಚಿಸೋಣ. ನಮ್ಮ ಭವಿಷ್ಯದ ಬಗ್ಗೆ ಸ್ಪಷ್ಟಪಡಿಸಿಕೊಳ್ಳೋಣ. ನಮ್ಮ ಅಪ್ಪ ಅಮ್ಮಂದಿರ ಬಗ್ಗೆ ಗೌರವಯುತವಾಗಿ ವರ್ತಿಸೋಣ. ನಾವು ಚಿಟ್ಟೆಯಾಗಿ ಬೆಳೆದಿದೇವೆ, ಇನ್ನು ಹಾರಾಡೋಣ. "ಟೀನೇಜ್", "ಮನಸುಗಳ ಪಿಸು ಮಾತು" ಇವೇ ಮುಂತಾದ ಶಬ್ಧಗಳನ್ನು ಬಳಸಿ ಸುಂದರ ಲೇಖನ ಬರೆಯಬಹುದು. ಸಾಧನೆ ವ್ರತ್ತಿಪರತೆಯನ್ನು ಬಯಸುತ್ತದೆ, ಏಕಾಗ್ರತೆಯನ್ನು ಬಯಸುತ್ತದೆ. ಗೆಳೆಯರೇ ಬನ್ನಿ ವ್ರತ್ತಿಪರರಾಗೋಣ. ಇದೇ ರೀತಿ ಇದ್ದರೆ ನಮ್ಮ ಅಪ್ಪ ಯೌವನದಲ್ಲಿ ಸಾಧಿಸಿದ್ದನ್ನು ನಮ್ಮ ಇಡಿ ಜೀವಮಾನದಲ್ಲಿ ಸಾಧಿಸಲಾಗುವುದಿಲ್ಲ.

Monday, December 24, 2012

ಮದುವೆ ಮನೆ

ಮದುವೆ ಮನೆ ಅಂದರೆ ಅದೇನು ಸಂಭ್ರಮ, ಸಡಗರ.. ಎರಡು ಮೂರು ದಿನ ಮುಂಚಿತವಾಗಿ ಹತ್ತಿರದ ನೆಂಟರಿಷ್ಟರೆಲ್ಲಾ ಮದುವೆ ಮನೆಯಲ್ಲಿ ಸೇರುತ್ತಿದ್ದರು. ಮನೆಯವರಿಗಷ್ಟೇ ಅಲ್ಲ ಬಂದ ಎಲ್ಲರಿಗೂ ಒಂದೇ ತೆರನಾದ ಸಡಗರದಲ್ಲಿ, ಮದುವೆ ಹೇಗಾಗುತ್ತದೋ? ಬೀಗರ ಉಪಚಾರದಲ್ಲಿ ಏನಾದರೂ ಕಡಿಮೆ ಆಗುವುದೋ? ಎಂಬ ಆತಂಕ ಇರುತ್ತಿತ್ತು. ಎಲ್ಲರೂ ತಮ್ಮ ಕೈಲಾಗುವ ಕೆಲಸಗಳನ್ನು ಗಡಿಬಿಡಿಯಲ್ಲಿ ಮಾಡುತ್ತಿದ್ದರು.

ಗಂಡಸರು ಮನೆಯ ಅಂಗಳದಲ್ಲಿ ಚಪ್ಪರ ಹಾಕುವುದು, ಅಂಗಳದ ನೆಲ ಮಟ್ಟಸ ಮಾಡುವುದು ಹೀಗೆ ಮುಂತಾಗಿ ಕೆಲಸದಲ್ಲಿ ತೊಡಗಿರುತ್ತಿದ್ದರು. ಅದು ಹೇಗೋ ಮದುವೆ ಮನೆ ಅಂದಾಕ್ಷಣ ಕೆಲಸಗಳೆಲ್ಲವೂ ಬಾಕಿ ಇದ್ದೇ ಇರುತ್ತವೆ. ಉಟಕ್ಕೆ ಬಾಳೆ ಎಲೆ ಕೊಯ್ಯುವುದು, ವೀಳ್ಯದೆಲೆ ಕೊಯ್ಯುವುದು ಮುಂತಾದ ಕೆಲಸಗಳಿಗೆ ಕೆಲವರು ನಿಷ್ಣಾತರು ಮುಂದಾಗಿ ಒಟ್ಟಾದ ಹುಡುಗರನ್ನು ಕರೆದುಕೊಂಡು ತೋಟಕ್ಕೆ ಹೋಗುತ್ತಿದ್ದರು. ಒಟ್ಟಾಗಿ ಇಂತಹ ಕೆಲಸ ಕಾರ್ಯಗಳಲ್ಲಿ ತೊಡಗಿರುವಾಗ ಹೇಳುವ ಹಾಸ್ಯ ಚಟಾಕಿಗಳು, ಕಥೆಗಳು, ಕೆಲವೊಮ್ಮೆ ಆ ಕ್ಷಣದಲ್ಲಿ ಉಂಟಾದ ಹಾಸ್ಯ ಪ್ರಸಂಗ ತುಂಬಾ ಮಜವಾಗಿರುತ್ತಿದ್ದವು. ವಯಸ್ಸಿನಲ್ಲಿ ಹಿರಿಯರಾದವರು ಅವರ ಯೌವ್ವನದಲ್ಲಿ ನಡೆದ ಯಾವುದೋ ಮದುವೆಯ ಕಥೆಯನ್ನು ಬಿಡಿಸಿ ಬಿಡಿಸಿ ಹೇಳುತ್ತಿದ್ದರು. ಇಂತಹ ಸಮಯದಲ್ಲಿ ಇಡೀ ಮನೆಯೇ ಏಕೆ ಊರೇ ಸಂತೋಷದ ಅನುಭವಕ್ಕೀಡಾಗುತ್ತಿರುತ್ತದೆ.

ಹೆಂಗಸರು ಕಜ್ಜಾಯದ ತಯಾರಿ, ಪನಿವಾರದ ತಯಾರಿಯಲ್ಲಿ ತೊಡಗಿರುತ್ತಾರೆ. ಹಲವು ಹೆಂಗಸರು ಒಟ್ಟೊಟ್ಟಿಗೆ ಮಾತನಾಡುತ್ತ, ನಗುತ್ತಿರುತ್ತಾರೆ. ಹಾಗಾಗಿ ಅಲ್ಲಿಯೂ ಸಂತೋಷ ಇದ್ದೇ ಇರುತ್ತದೆ ಎನ್ನಬಹುದು. ಸೇರಿರುವ ಮಕ್ಕಳಂತೂ ಕಂಬ ಕಂಬ ಆಟ, ಡಬ್ಬಾ ಡುಬ್ಬಿ ಆಟ ಮುಂತಾದ ಮಕ್ಕಳ ಸಂಕ್ಯೆಯನ್ನು ಬಯಸುವ ಆಟಗಳನ್ನು ಆಡುತ್ತಿದ್ದರು.

ಅಂಗಳದ ಚಪ್ಪರಕ್ಕೆ ಮೇಲ್ಗಟ್ಟು ಕಟ್ಟುವುದು ಮಾತ್ರ ಮದುವೆಯ ಹಿಂದಿನ ರಾತ್ರಿಯೇ. ಅದೊಂದು ಶಾಸ್ತ್ರವೋ ಎಂಬಷ್ಟು ಚಾಲ್ತಿಯಲ್ಲಿತ್ತು. ಮೇಲ್ಗಟ್ಟಿಗೆ ಗುಂಡು ಸೂಜಿ ಚುಚ್ಚುವುದು, ಸೀರೆಯಲ್ಲಿ ಹೂವು ಮಾಡುವುದು ಎಲ್ಲ ಸ್ವಲ್ಪ ತಾಳ್ಮೆ ಮತ್ತು ಕೌಶಲ್ಯ ಬಯಸುವ ಕಲೆ. ಅದಕ್ಕೆಂದೇ ಬಂದ ತಜ್ಞರು ಉಮೆದುವಾರರಿಗೆ ಹೇಳಿಕೊಡುತ್ತ ರಾತ್ರಿಯೆಲ್ಲಾ ಮೇಲ್ಗಟ್ಟು ಕಟ್ಟುತ್ತಿದ್ದರು. ಮೇಲ್ಗಟ್ಟು ಕಟ್ಟಲು ಸೀರೆ ಒಟ್ಟು ಮಾಡುವಾಗ ಅಂತೂ ಅನೇಕ ಮಾಂಸಹಾರಿ ಹಾಸ್ಯ ಚಟಾಕಿಗಳನ್ನು ಕೇಳಿ ಪಾವನವಾಗಬಹುದಿತ್ತು.

ಬೆಂಗಳೂರಿಗೆ ಬಂದು ೬ ವರ್ಷವಾಯಿತು. ಈ ಸಮಯದಲ್ಲಿ ನನ್ನ ಮದುವೆ ಒಂದನ್ನು ಬಿಟ್ಟು ಬೇರೆ ಯಾವ ಮದುವೆ ಮನೆಯನ್ನೂ ನೋಡಿಲ್ಲ. ಮೊನ್ನೆ ಮೊನ್ನೆ ನಡೆದ ನನ್ನ ಆತ್ಮೀಯ ಸ್ನೇಹಿತನ ಮದುವೆಗೂ ಒಂದೇ ದಿನ ನಾನು ಹೋಗಿದ್ದು, ಅದೂ ಕಲ್ಯಾಣ ಮಂಟಪಕ್ಕೆ. "ನಿನ್ನ ಮದುವೆಯಲ್ಲಿ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ" ಎಂದು ಯಾವಾಗಲೋ ಮಾತಾಡಿಕೊಂಡಿದ್ದು ಅವತ್ತು ಮದುವೆಯಲ್ಲಿ ನನ್ನ ಕಿವಿಯೊಳಗೆ ಮತ್ತೆ ಮತ್ತೆ ಕೇಳಿಸುತ್ತಿತ್ತು.

ಈಗಿನ ಮದುವೆ ಮನೆಗಳೂ ನಾನು ಮೇಲೆ ಹೇಳಿದಂತೆ ಇರದೇ ಇರಬಹುದು. ಪರಿಸ್ಥಿತಿಯ, ಈಗಿನ ಕಾಲಮಾನದ ಜಂಜಾಟಗಳ ಹೊಡೆತಕ್ಕೆ ಸಿಕ್ಕಿ ಅವೂ ಸೊರಗಿ ಹೋಗಿವೆ. ಆದರೆ ನಾನು ಹೋಗಿ ಮದುವೆ ಮನೆಯಲ್ಲಿ ಭಾಗಿಯಾಗಿದ್ದರೆ ಸಮಾಧಾನವಾದರೂ ಇರುತ್ತಿತ್ತು. ಈಗಿನ ಕಲ್ಯಾಣ ಮಂಟಪದ ಮದುವೆಗಳಲ್ಲಿ ಊಟದ ಸಮಯದಲ್ಲೊಂದು ಜನರಿರುತ್ತಾರೆ, ಮುಂಚೂ ಇರುವುದಿಲ್ಲ ಕೊನೆಗೂ ಇಲ್ಲ.

ಇನ್ನು ಹೇಗಾದರೂ ಮಾಡಿ ಪುರುಸೊತ್ತು ಮಾಡಿಕೊಂಡು ಆತ್ಮೀಯರ ಮದುವೆಗೆ ಹೋಗಬೇಕೆಂದು ನಿರ್ಧರಿಸಿದ್ದೇನೆ.

Wednesday, December 12, 2012

ಅಂಚೆ ಮತ್ತು ತಂತಿ


ಪಕ್ಕದ ಮನೆಯಲ್ಲೇ ಪೋಸ್ಟ್ ಆಫೀಸ್ ಇರುವುದರಿಂದ ಪೋಸ್ಟ್ ಆಫೀಸಿನ, ಪೋಸ್ಟ್ ಮಾಸ್ಟರ, ಪೋಸ್ಟ್ ಮ್ಯಾನ್ ನ ಗಂಭೀರತೆಗಳೇ ನನಗೆ ಅರ್ಥವಾಗಿರಲಿಲ್ಲ. ನನ್ನ ಮೂಲಭೂತ ಪ್ರಶ್ನೆಯೇನಾಗಿತ್ತು  ಅಂದರೆ "ನಮ್ಮಸುತ್ತಲಿನ ಊರಿನ  ಪೋಸ್ಟ್ ನವಿಲ್ಗಾರ ಆಗಿತ್ತು. ಆದರೆ ಪೋಸ್ಟ್ ಆಫೀಸ್ ಇರುವುದು ಸುತ್ಮನೆಯಲ್ಲಿ" ಇದು ಹೇಗೆ ಸಾಧ್ಯ? ಸಮಾಧಾನಕರ  ಉತ್ತರ ಇವತ್ತಿಗೂ ಸಿಕ್ಕಿಲ್ಲ. ಮೊದಲಿನ ಪೋಸ್ಟ್ ಮ್ಯಾನ್ ನ ಹತ್ತಿರ ಇದೇ ಪ್ರಶ್ನೆ ಕೇಳಿದಾಗ "ಹಿ ಹಿ, ಅದು ಹಾಂಗೆಯ, ನಿಂಗೆ ಗೊತ್ತಾಗ್ತಿಲ್ಲೆ" ಎಂಬ ಉತ್ತರ!!

ಪಕ್ಕದಮನೆಯ ಶಿರಬಳೆಗೆ ಪೋಸ್ಟ್ ಬಾಕ್ಸ್ ತೂಗುಹಾಕಿದ್ದರೂ, ಯಾರೂ ಅದರಲ್ಲಿ ಪತ್ರ ಹಾಕಿದ್ದನ್ನು ನೋಡಿಲ್ಲ. ಪತ್ರಗಳಿದ್ದರೆ ಅದನ್ನು ಪಕ್ಕದ ಮನೆಯವನೆ ಆದ ಪೋಸ್ಟ್ ಮಾಸ್ತರನ ಹತ್ತಿರ ಕೊಟ್ಟು ಹೋಗುವರು. ಪೋಸ್ಟ್ ಮ್ಯಾನ್ ಆಗಿದ್ದು ಈಗ ನಿವೃತ್ತಿ ಆಗಿರುವ ಹಳೆಯ ಪೋಸ್ಟ್ ಮ್ಯಾನ್, ಯಾವತ್ತೂ ಆ ಡಬ್ಬಿಯನ್ನು ತೆಗೆದು ನೋಡಿದ್ದಿಲ್ಲ. ಕೆಲವೊಮ್ಮೆ ಅನುಮಾನದಿಂದ ಅಲುಗಿಸಿ ನೋಡಿ, ಪತ್ರಗಳಿಲ್ಲವೆಂದು ಹಾಗೇ ಬಿಟ್ಟದ್ದಿದೆ. ಬೆಳಿಗ್ಗೆ ನಾವು ಶಾಲೆಗೆ ಹೊರಡುವಾಗ ಕೇಳುವ "ಟಕ್ ಟಕ್  ಟಕ್ " ಎಂಬ ಪತ್ರಗಳಿಗೆ ಚಪ್ಪೆ ಹೊಡೆಯುವ ಸದ್ದು ಏನೋ ಕುತೂಹಲ ಕೆರಳಿಸುತ್ತಿತ್ತು. ಪತ್ರಗಳ ಚೀಲಕ್ಕೆ ಅರಳಿನ ಸೀಲ್ ಹಾಕುವುದನ್ನು ನೋಡಲು ಏನೋ ಒಂತರಾ ಕುತೂಹಲ.

ಮರದ ಪೆಟ್ಟಿಗೆ, ಒಂದು ಮೇಜು, ಕುರ್ಚಿ ಇವೇ ಅಂಚೆ ಮತ್ತು ತಂತಿ ಕಛೇರಿಯ ಆಸ್ತಿ. ಮರದ ಪೆಟ್ಟಿಗೆಯಲ್ಲಿ ಒಂದು ಸಣ್ಣ ತಕ್ಕಡಿ (ಪತ್ರಗಳನ್ನು ತೂಗುವುದಕ್ಕೆ, ಅದು ಎಷ್ಟು ಸಣ್ಣದಿರಬಹುದೆಂದು ಊಹಿಸಿ), ಚಪ್ಪೆಯ ಅಕ್ಷರಗಳ ಮೊಳೆಗಳು, ಹಳೆಯ ಸಣ್ಣ ಗೋಣಿಚೀಲ ಇವು ಹಿಡಿಯಲಾರದೆ ಹಿಡಿದಿರುತ್ತಿದ್ದವು. ಪೋಸ್ಟ್ ಮಾಸ್ತರನೆನಾದರೂ ಅದನ್ನು ತೆಗೆದನೆಂದರೆ ಧೂಳಿನ ಮೋಡ ನೋಡಬಹುದಿತ್ತು.

ನಾವು ಶಾಲೆಗೆ ಹೋಗುವಾಗ ಮದ್ಯಾಹ್ನ  ೧೧.೩೦ ಕ್ಕೆ ಊಟಕ್ಕೆ ಬಿಡುತ್ತಿದ್ದರು. ಸರಿಯಾಗಿ ಆ ಸಮಯಕ್ಕೆ ಪೋಸ್ಟ್ ಮ್ಯಾನ್ ಹಾಜರಾಗಿ ಪತ್ರಗಳ ಬಟವಾಡೆ ಮಾಡುತ್ತಿದ್ದ. ಅನೇಕ ಹುಡುಗರು ನಮ್ಮೂರಿಗೆ ಪತ್ರಗಳಿವೆಯೇ ಎಂದು ಕೇಳಿ ಕೇಳಿ ತೆಗೆದುಕೊಳ್ಳುತ್ತಿದ್ದರು. ಅವರ ಊರಿಗೆ ಪತ್ರಗಳಿಲ್ಲ ಎಂದರೆ ಅದೇನೋ ಉದಾಸೀನತೆ. ಪತ್ರಗಳನ್ನು ಮನೆಗೆ ತೆಗೆದುಕೊಂಡು ಹೋಗುವುದು ಒಂದು ಜವಾಬ್ದಾರಿಯುತ ಕೆಲಸವೆಂದೇ ನಮ್ಮೆಲ್ಲರ ಭಾವನೆಯಾಗಿತ್ತು. ನನಗೆ ಪತ್ರಗಳನ್ನು ತೆಗೆದುಕೊಂಡು ಮನೆಗೆ ಹೋಗುವ ಅವಕಾಶವಿಲ್ಲವೆಂದು ಎಷ್ಟು ಸಲ ಬೇಸರ ಮಾಡಿಕೊಂಡಿದ್ದೆ. ಶಾಲೆ ಬಿಡುವ ಸಮಯಕ್ಕೆ ಪೋಸ್ಟ್ ಮ್ಯಾನ್ ಬರದಿದ್ದರೆ ಎಲ್ಲರೂ ಆಶ್ಚರ್ಯ ಪಡುತ್ತಿದ್ದರು.

ದೂರದ ಊರಿಗೆ ಪತ್ರಗಳಿದ್ದರೆ ಅದರ ಬಟವಾಡೆ ಪೋಸ್ಟ್ ಮ್ಯಾನ್ ನ ಸಂಸಾರ ತಾಪತ್ರಯಗಳನ್ನವಲಂಬಿಸಿರುತ್ತಿತ್ತು. ಅವನಿಗೆ ಪುರುಸೊತ್ತಿದ್ದಾಗ, ಸೈಕಲ್ ತುಳಿಯುವ ಶಕ್ತಿಯಿದ್ದಾಗ ಹೋಗಿ ತಲುಪುತ್ತಿತ್ತು. ಜನರೂ ಪತ್ರ ಒಂದೆರಡು ದಿನ ತಡವಾಗಿ ಬಂದಿದ್ದು ಗೊತ್ತಾದರೂ ಅದೇನೂ ವಿಶೇಷ ಅಲ್ಲವೆಂದೇ ಭಾವಿಸುತ್ತಿದ್ದರು, ಒಗ್ಗಿಹೋಗಿದ್ದರು. ಶಾಲೆಯ ಮಕ್ಕಳನ್ನು ಪತ್ರ ಬಟವಾಡೆಗೆ ಅವನು ಎಷ್ಟು ಅವಲಂಬಿಸಿದ್ದ ಎಂದರೆ, ಶಾಲೆಯೇ ಇಲ್ಲದಿದ್ದರೆ ಸ್ವಯಂ ನಿವೃತ್ತಿ ತೆಗೆದುಕೊಂಡುಬಿಡುತ್ತಿದ್ದನೇನೋ?

ಸೊಸೈಟಿಯ ನೋಟಿಸುಗಳಿಂದ, ಫೋನ್ ಬಿಲ್ಲಿನಿಂದ, ಒಂದೆರಡು ಉಳಿತಾಯ ಖಾತೆಗಳಿಂದ ಹಾಗೂ ಅಂಚೆ ವಿಮೆಗಳಿಂದ ಅದು ಹೇಗೋ ನಮ್ಮೂರಿನ ಅಂಚೆ ಮತ್ತು ತಂತಿ ಕಛೇರಿ ಬದುಕುಳಿದಿದೆ. ಈಗಂತೂ ಯಾರೂ ಪತ್ರವನ್ನು ಬರೆಯುವುದೂ ಇಲ್ಲ, ಬರೆದರೆ ತಲೆ ಸೋಜಿಲ್ಲ ಎಂದೇ ಪರಿಭಾವಿಸುತ್ತಾರೆ.

ಈಗಿನ ಕಂಪ್ಯೂಟರ್ ಯುಗದಲ್ಲೂ ಉದ್ದುದ್ದ ಪಟ್ಟಿಯಲ್ಲಿ ಏನೇನೋ ಬರೆದು, ಅದನ್ನು ಪರಮ ರಹಸ್ಯದಂತೆ ಕಾಪಾಡುವುದನ್ನು ನೋಡುವುದೇ ಒಂದು ಸೋಜಿಗ. ಕೆಂಪು ಶಾಯಿಯ ಪೆನ್ನಿನಲ್ಲಿ ಒಂದಿಷ್ಟು, ನೀಲಿ ಶಾಯಿಯ ಪೆನ್ನಿನಲ್ಲಿ ಒಂದಿಷ್ಟು ಬರೆದು, ಬರೆದುದನ್ನು ಕನ್ನಡಕದ ಅಂಚಿನಲ್ಲಿ ನೋಡಿ, ತಪ್ಪಾಗಿದ್ದರೆ, ಮಗಳಿಗೋ ಮಗನಿಗೋ ಕಿಲಾಡಿ ಮಾಡ್ತೀರಿ ಎಂದು ಒಂದು ಸಲ ಬಯ್ದು ತಿದ್ದುವುದನ್ನು ನೋಡಿದರೆ ನೀವು ನಗದೆ ಇರಲಾರಿರಿ.

ಊರಿಗೊಂದು ಪೋಸ್ಟ್ ಆಫೀಸು ಇರುವುದನ್ನು ನೋಡಿ ಸುಮ್ಮನಿರುವುದು ಬಿಟ್ಟು ಹೀಗೆ ಟೀಕೆ ಮಾಡುವುದು ಸರಿಯೇ?

Friday, November 23, 2012

ನಿದ್ರೆ


"ನಿದ್ರೆ" ಇದು ಎಷ್ಟು ಆಪ್ಯಾಯಮಾನ. ಯಾರಾದರೂ ನನಗೆ ನಿದ್ರೆ ಬೇಡವೇ ಬೇಡ ಎಂದವರಿದ್ದಾರೆಯೇ? ವೈದ್ಯರೂ ಹೇಳುತ್ತಾರೆ "ಊಟ, ನಿದ್ರೆ, ಬಹಿರ್ದೆಸೆ" ಸರಿಯಾಗಿ ಆದರೆ ಮನುಷ್ಯ ಆರೋಗ್ಯವಾಗಿರುತ್ತಾನೆ ಎಂದು. ನಿದ್ರೆಗೆ ಅದರದ್ದೇ ಆದ ಪ್ರಾಮುಖ್ಯತೆ ಇದ್ದೇ ಇದೆ. ಎರಡು ದಿನ ನಿದ್ದೆಗೆಟ್ಟರೆ ಮನುಷ್ಯನ ವ್ಯಕ್ತಿತ್ವವೇ ಬದಲಾಗಿ ಹೋಗುತ್ತದೆ. ಓಣಿವಿಘ್ನೇಶ್ವರ ತೇರಿನ ಓಕಳಿ ದಿನ ಸಾಧು ಶಾಂತ ಸ್ವಭಾವದ ಗಣಪತಿ ಅಣ್ಣನೂ ಅಲವರಿಕೆಯ ತುತ್ತ ತುದಿಯಲ್ಲಿರುತ್ತಾನೆ.

ಪುರಾಣ ಕಾಲದಿಂದಲೂ ಪ್ರತಿಮೆಗಳ ಮೂಲಕ ನಿದ್ರೆಯ, ಮಲಗುವುದರ ಮಹತ್ವವನ್ನ ನಾನಾರೀತಿಯಲ್ಲಿ ಹೇಳುತ್ತಾ ಬಂದಿದ್ದಾರೆ. ವಿಷ್ಣುವು ಸರ್ಪದ ಮೇಲೆ ಮಲಗಿರುತ್ತಾನೆ. ಭೀಷ್ಮನು ಬಾಣದ ಹಾಸಿಗೆಯಮೆಲೂ ಮಲಗೇ ಇರುತ್ತಾನೆ, ಕುಳಿತಿರುವುದಿಲ್ಲ. ಪಾಂಡವರು ಮಲಗಿರುವಾಗಲೇ ಅರಗಿನ ಮನೆಗೆ ಬೆಂಕಿಯನ್ನಿಡಲಾಗುತ್ತದೆ. ಇವೆಲ್ಲವುಗಳಿಂದ ನಾವು ನಿದ್ರೆಯ ಮಹತ್ವವನ್ನ ಮನಗಾಣಬೇಕು.

ನಿದ್ರೆಯಲ್ಲಿರುವಾಗ ಬೀಳುವ ಕನಸುಗಳು ಅತಿರೋಚಕವಾಗಿರುತ್ತವೆ. ಕೆಲವರಿಗೆ ತಾವು ಮೇಲಿನಿಂದ ಬೀಳುತ್ತಿರುವಂತೆಯೂ, ದೊಡ್ಡ ಬಂಡೆ ಉರುಳಿ ಬರುತ್ತಿರುವಂತೆಯೂ, ಹಾವು ಕಚ್ಚಲು ಬಂದಂತೆಯೂ, ದೊಡ್ಡ ಮರುಭೂಮಿಯಲ್ಲಿ ಒಬ್ಬನೇ ಕಳೆದು ಹೋದಂತೆಯೂ ಕನಸುಗಳು ಬೀಳುತ್ತವೆ. ನನಗೆ ಎತ್ತರದಿಂದ ಕೆಳಗೆ ನೋಡಿದರೆ ಹೆದರಿಕೆ ಆಗುತ್ತದೆ. ಕನಸಿನಲ್ಲೂ ಮೇಲಿಂದ ಕೆಳಗೆ ನೋಡಿದಂತೆ ಕನಸು ಬೀಳಬೇಕೆ. ಒಂದು ರಾತ್ರಿಯಂತೂ ಬೆಳೆನಳ್ಳಿ ಶಾಲೆಗೆ ಉಪನ್ಯಾಸ ಕೊಡಲು ಹೋದಂತೆ ಕನಸು ಬಿದ್ದಿತ್ತು.

ಕೆಲವು ಸಲ ಈ ನಿದ್ರೆ ವಂಶಪಾರಂಪರ್ಯವೇ ಎಂಬ ಗುಮಾನಿಯೂ ಬಂದದ್ದಿದೆ. ನೋಡಿ ನಮ್ಮ ಪೂರ್ವಜರೆಲ್ಲರೂ ಮಲಗುತ್ತಿದ್ದರು ಹಾಗೂ ನಿದ್ರೆ ಮಾಡುತ್ತಿದ್ದರು. ಬಹುಷಃ ಹಾಗಾಗೆ ನಾವೂ ಮಾಡುತ್ತಿದ್ದೇವೆಯೋ? ಕೆಲವುಸಲ ಇದು  ಸಾಂಕ್ರಾಮಿಕ ಇರಬಹುದೇ ಎಂದೂ ಅನಿಸುತ್ತದೆ. ಯಾರಾದರೂ ಮಲಗಿದ್ದರೆ ಕುಳಿತಿರುವವರಿಗೆ ನಿದ್ರೆ ಬರುತ್ತದೆ. ಒಂದೋ ಅವರೂ ಮಲಗುತ್ತಾರೆ ಇಲ್ಲವೇ ಮಲಗಿದವರನ್ನು ಎಬ್ಬಿಸುತ್ತಾರೆ. ಕೆಲವರಿಗೆ ನಿದ್ರೆಯಿಂದ ಎಚ್ಚರ ಆದ ತಕ್ಷಣ ಎಬ್ಬಿಸಿದವರನ್ನು ಒದ್ದು ಹಾರಿಸಿಬಿಡಬೇಕೆಂಬ ಸಿಟ್ಟು ಬರುತ್ತದೆ.

ನಿದ್ರೆ ಮಾಡುವುದರಲ್ಲಿಯೂ ವೈಶಿಷ್ಟ್ಯವಿದೆ. ಕೆಲವರಿಗೆ ನಿದ್ದೆ ಸೂಕ್ಷ್ಮ, ಇವರಿಗೆ ಸಣ್ಣ ಶಬ್ದವಾದರೂ ಎಚ್ಚರ ಆಗಿಬಿಡುತ್ತದೆ. ಇನ್ನು ಕೆಲವರಿಗೆ ಗಾಢ ನಿದ್ರೆ, ಕೊನೆಗೌಡನ ದೋಟಿಯಿಂದ ಎಳೆದರೂ ಎಚ್ಚರ ಆಗುವುದಿಲ್ಲ. ಕೆಲವರು ಕೂತಲ್ಲೇ ತೂಕಡಿಸಿ ತೂಕಡಿಸಿ ನಿದ್ರೆ ಮುಗಿಸಿಬಿಡುತ್ತಾರೆ. ಕೆಲವರಿಗೆ ಮಲಗುವ ವ್ಯವಸ್ಥೆಗಳೇ ಸರಿ ಆಗುವುದಿಲ್ಲ. ಬೆಳಕು ಬರಬಾರದು, ಗಾಳಿ ಪಶ್ಚಿಮದಿಂದ ದಕ್ಷಿಣಕ್ಕೆ ಬೀಸುತ್ತಿದೆ ಹೀಗೆ ಹತ್ತು ಹಲವು ತೊಂದರೆಗಳು. ನಮ್ಮೂರಿನಲ್ಲೊಬ್ಬರು ಹತ್ತರಗಿ ಬಸ್ಸು ಹತ್ತಿ ಟಿಕೆಟ್ ತೆಗೆದುಕೊಂಡು ಕಣ್ಣು ಮುಚ್ಚಿದರೆ ಸಿರಸಿಯ ಐದು ಕತ್ರಿಯಲ್ಲಿ ಪಿಳಕ್ಕನೆ ಕಣ್ಣು ಬಿಡುತ್ತಾರೆ. ಇಂತಹವರಿಗೆ ನಿದ್ರೆಯೆಂದರೆ ವೀಳ್ಯದೆಲೆ ಶರಿ ತೆಗೆದಷ್ಟು ಸಲೀಸು.

ಒಂದು ಮನುಷ್ಯನಿಗೆ ಎಷ್ಟು ಗಂಟೆ ನಿದ್ರೆ ಬೇಕು ಎಂಬ ವಿಷಯದಲ್ಲಿ ಯಾವಾಗಲೂ ಒಮ್ಮತ ಮೂಡಿದ್ದಿಲ್ಲ ನಮ್ಮೊಳಗಿನ ಚರ್ಚೆಗಳಲ್ಲಿ. ಕೆಲವರು ಆರು ಗಂಟೆ, ಕೆಲವರು ಎಂಟು ಗಂಟೆ ಹೀಗೆ ಅವರವರ ಅಭ್ಯಾಸವನ್ನು ಹೇಳುತ್ತಾರೆ. ನನ್ನ ಕೇಳಿದರೆ ರಾತ್ರಿಯಿಂದ ಬೆಳಗಿನವರೆಗೆ ಎನ್ನುತ್ತೇನೆ. ಕೆಲವರಿಗೆ ಹತ್ತುಗಂಟೆಗೆ ರಾತ್ರಿಯಾಗುತ್ತದೆ, ನನ್ನಂತವರಿಗೆ ಮತ್ತೂ ಸ್ವಲ್ಪ ತಡ. ಬೆಳಗೂ ಹಾಗೆಯೇ. ಕೆಲವರಿಗೆ ಐದು ಗಂಟೆ, ಹಲವರಿಗೆ ಸ್ವಲ್ಪ ತಡ. ಹಾಗಾಗಿ ರಾತ್ರಿಯಿಂದ ಬೆಳಗಿನವರೆಗೆ ನಿದ್ರೆ ಅನಿವಾರ್ಯ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ನಾವು ನಿದ್ರೆಯ ಪ್ರಾಮುಖ್ಯತೆಯನ್ನು ಅರಿತುಕೊಂಡು ನಮ್ಮ ಮುಂದಿನ ಪೀಳಿಗೆಗೆ ಜೋಪಾನವಾಗಿ ವರ್ಗಾಯಿಸಬೇಕೆಂದು ಹೇಳುತ್ತಾ... ಆಹ್!! ಆಕಳಿಕೆ.. ಆಹ್!! ಒವೊವ್.. ಆಹ್!!

Wednesday, November 21, 2012

ಆಸರಿಗೆ ಅವಾಂತರ


ನೆಂಟರ ಮನೆಗೆ ಹೋಗಿ ಆಸರಿಗೆ ಕುಡಿಯುವುದೆಂದರೆ ಸಲೀಸು ಎಂದು ತಿಳಿದುಕೊಂಡಿದ್ದರೆ ಅದು ಮೂರ್ಖತನ ಆದೀತು. ನನಗೂ ಈಗಿತ್ತಲಾಗಿ ಸತ್ಯದ ಅರಿವಾಯಿತು. ಮಂಗಳ ಕಾರ್ಯಗಳಿಗೆ ಆಮಂತ್ರಣ ನೀಡಲು ಹೋದಾಗ ಎಲ್ಲರ ಮನೆಯಲ್ಲೂ ಆಸರಿಗೆ ಕೆಳುವರಾದರೂ ತಪ್ಪಿಸಿಕೊಳ್ಳುವ ಅವಕಾಶವಿರುತ್ತದೆ. ಪರಿಚಯವಿಲ್ಲದವರ ಮನೆಯಲ್ಲಂತೂ ಸುಲಭವಾಗಿ ಆಸರಿಗೆ ಕುಡಿಯದೆ ಮನೆಯಿಂದ ಹೊರಬೀಳಬಹುದು. ಕೆಲವುಕಡೆ ಎಲೆ ಅಡಿಕೆ ಹಾಕಿ, ಸಕ್ಕರೆ ಬಾಯಿಗೆ ಹಾಕಿಕೊಂಡು, ನೀರುಕುಡಿದು ಬಚಾವಾಗಬಹುದು.

ಮದುವೆಯಾದಮೇಲೆ ಪತ್ನಿಸಮೇತನಾಗಿ ಆಸರಿಗೆ ಕುಡಿಯುವುದನ್ನು ತಪ್ಪಿಸಿಕೊಳ್ಳುವುದು ಬಹುಷಃ ಅಸಾಧ್ಯ. ಬಿಸಿ ಬಿಸಿ ಕಷಾಯ ತಣಿಯುವುದೂ ಇಲ್ಲ ಕುಡಿದು ಲೋಟವನ್ನು ಒಗೆಯುವ ಹಾಗೂ ಇಲ್ಲ. ಹೋದಲ್ಲೆಲ್ಲ ವಿಶೇಷ ಅಡುಗೆ ಅಂತೂ ಇದ್ದೆ ಇರುತ್ತದೆ. ಎಷ್ಟು ಅಂತ ತಿನ್ನಬಹುದು?

ಅವರ ಮನೆಗೆ ಹೋಗಿ ಒಂದು ಬಿಡಿಯ ತೀರಿತಲ್ಲ ಅಂದುಕೊಳ್ಳುವುದರೊಳಗೆ "ನಮ್ಮನೆಯಲ್ಲಿ ಉಳಿದುಕೊಂಡೇ ಇಲ್ಲ" ಎಂಬ ಪುಕಾರು, ಸರಿಯಾಗಿ ಊಟ, ಆಸರಿಗೆ ಮಾಡಿಲ್ಲ ಎಂಬ ಇನ್ನೊಂದು ಪುಕಾರು. ಒತ್ತಾಯದ ಪರಮಾವಧಿ ನೋಡಬಹುದು.

ಹಬ್ಬಕ್ಕೆ ಒಂದು ವಾರ ರಜಾ ಸಿಕ್ಕ ಸಂತೋಷ, ಊರಿಗೆ ಹೋಗಿ ಬರುವುದರೊಳಗೆ ಟುಸ್ಸ್ ಆಗುವುದನ್ನು ಕಣ್ಣಾರೆ ನೋಡಬಹುದು. ಮನೆಯಲ್ಲಿರಲು ಒಂದು ಹೊತ್ತಿನ ಪುರುಸೊತ್ತು ಇಲ್ಲದ ಹಾಗೆ ಓಡಾಟದ ಪಟ್ಟಿ. ಹೋದ ಎಂಟು ದಿನದಲ್ಲಿ ಏನಿಲ್ಲವೆಂದರೂ ೧೦ ಮನೆಯಲ್ಲಿ ಊಟ ಮಾಡಿದ್ದೇವೆ ಆಸರಿಗೆ ಅಂತೂ ಬಿಡಿ.

ಮದುವೆಯಾದವರ ಮೇಲೂ ಈ ರೀತಿಯ ಉಭಯಸಂಕಟವನ್ನು ತಂದೊಡ್ಡುವುದನ್ನು ನಾನು ವಿರೋಧಿಸುತ್ತೇನೆ. ಕೆಲವು ಜನ ಅದು ಹೇಗೆ ಎರಡನೇ ಮದುವೆ ಆಗುತ್ತಾರೋ? ಅವರಿಗೆ "ಕಬ್ನಳ್ಳಿ ರತ್ನ"ವನ್ನು ಕೊಡಬೇಕೆಂದು ಬಲವಾಗಿ ಪ್ರತಿಪಾದಿಸುತ್ತೇನೆ.

Tuesday, May 22, 2012

ಒಂದು ಅನಿಸಿಕೆ

ವಿನಾಯಕ ಭಟ್ ಮೂರೂರು ಅವರೇ,

ನಿನ್ನೆ ನಿಮ್ಮ "ಜುಗಲ್ ಬಂದಿ" ಕಾರ್ಯಕ್ರಮವನ್ನು ನೋಡಿದೆ. ನಿಮ್ಮ ಅಭಿಪ್ರಾಯವನ್ನು ನೀವು ಹೇಳಿದ ರೀತಿ ಇಷ್ಟವಾಗಲಿಲ್ಲ. ನೀವು ಹೇಳಿದಿರಿ "ಆಹಾರ ಪದ್ಧತಿ ಒಬ್ಬನ ಖಾಸಗಿ ವಿಷಯ, ಯಾವುದನ್ನು ತಿನ್ನಬೇಕು, ಬಿಡಬೇಕು ಎನ್ನುವುದನ್ನು ಅವನೇ ತೀರ್ಮಾನಿಸಿಕೊಳ್ಳುತ್ತಾನೆ. ಯಾರೂ ಕಟ್ಟು ಹಾಕುವ ಅವಶ್ಯಕತೆಯಿಲ್ಲ"  ಎಂದು.

ಹಾಗಾದರೆ "ಗೋವಧೆ"ಯನ್ನು ನಿಷೇಧಿಸಬೇಕು, ಗೋಮಾಂಸ ಭಕ್ಷಣೆಯನ್ನು  ನಿಷೇಧಿಸಬೇಕೆಂದು ಏಕೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ? ಗೋಮಾಂಸವನ್ನು ತಿನ್ನಬೇಕೋ ಬಿಡಬೇಕೋ ಎನ್ನುವುದು ಒಬ್ಬನ ಖಾಸಗಿ ವಿಷಯ, ಅದಕ್ಕೇಕೆ ಕಟ್ಟು ಹಾಕಲು ಬೊಬ್ಬೆ ಹೊಡೆಯಲಾಗುತ್ತಿದೆ?

ಮಾಧ್ಯಮಗಳಲ್ಲಿ ಯಾವುದನ್ನು ನೋಡಬೇಕು, ಬಿಡಬೇಕು ಎನ್ನುವುದನ್ನು ಖಾಸಗಿ ಮನುಷ್ಯ ತೀರ್ಮಾನಿಸಿಕೊಳ್ಳುತ್ತಾನೆ. ಅದಕ್ಕೇಕೆ ಸೆನ್ಸಾರ್ ಬೋರ್ಡ್ ಮಾಡಿಕೊಳ್ಳಲಾಗಿದೆ? ನೈತಿಕ ನಿಯಮಗಳನ್ನೇಕೆ ಹೇರಲಾಗುತ್ತಿದೆ?

ನಾನು ಸಹಪಂಕ್ತಿ ಭೋಜನದ ಪರವಾಗಿಯೂ ಮಾತನಾಡುತ್ತಿಲ್ಲ, ವಿರೋಧವಾಗಿಯೂ ಅಲ್ಲ. ನೀವು ಹೇಳಿದ ಮಾತುಗಳಿಗಷ್ಟೇ ನನ್ನ ಆಕ್ಷೇಪಣೆ. ನೀವು ಹೇಳಬೇಕೆಂದಿರುವ ವಿಷಯವನ್ನು ಬೇರೆ ರೀತಿಯಲ್ಲಿ ಹೇಳಬಹುದಾಗಿತ್ತೇನೋ? ಯೋಚಿಸಿ.