Sunday, November 9, 2025

ಕಾಯುವಿಕೆಗಿಂತ ತಪವು ಇಲ್ಲ..

ತಾಳ್ಮೆಯ ಪಾಠ.. ಕಾಯುವ ಕಾಲದ ಕಥೆ..


ಬಹುಷಃ ನಾವು ಕಾಯುವ ತಾಳ್ಮೆಯನ್ನ ಕಳೆದುಕೊಳ್ಳುತ್ತಿದ್ದೇವೆ. ಏನಕ್ಕೂ ಯಾವುದಕ್ಕೂ ಕಾಯುವ ತಾಳ್ಮೆ ನಮ್ಮಲ್ಲಿ ಕಡಿಮೆ ಆಗ್ತಾ ಇದೆ. ಜೀವನ ಶೈಲಿಯೋ, ತಾಂತ್ರಿಕ ಬೆಳವಣಿಗೆಯೋ ಒಟ್ಟಿನಲ್ಲಿ ನಮಗೆ ತಾಳ್ಮೆ ಕಡಿಮೆ ಆಗ್ತಾ ಇರೋದ್ರಲ್ಲಿ ಅನುಮಾನವಿಲ್ಲ. ಕಾಯುವುದೆಂದರೆ ನಮ್ಮನ್ನು ಯಾರೋ, ಯಾವುದೋ ನಿರ್ಲಕ್ಷ್ಯ ಮಾಡ್ತಾ ಇದೆ ಅಂತ ನಾವು ಅಂದಾಜಿಸುತ್ತಿದ್ದೇವೋ ಏನೋ? ಏನಾದರೂ ತಡವಾದರೆ ಸಹಿಸಲು ಆಗದ ಮನೋಭಾವ ಬೇರೂರ್ತಾ ಇದೆ.

 

ಕಾಯುವುದೆಂದರೆ ಹತಾಶೆಯಿಂದ ಕಾಲಹರಣವಲ್ಲ. ಅದು ನಿರೀಕ್ಷೆ, ವಿಶ್ವಾಸ ಮತ್ತು ಶಾಂತಿಯ ಪರ್ಯಾಯ. ಹಿಂದಿನ ಪೀಳಿಗೆಯವರು ಇದನ್ನು ಬದುಕಿನ ಭಾಗವಾಗಿ ತೆಗೆದುಕೊಂಡಿದ್ದರು. ಅದರ ಒಂದು ಅದ್ಭುತ ಉದಾಹರಣೆ ಎಂದರೆ ಹತ್ತರಗಿ ಬಸ್ಸು. "ಹತ್ತರಗಿ ಬಸ್ಸು" ಎಂಬ ವಿಚಿತ್ರ ನಮ್ಮೂರವರಿಗೆ ಎಲ್ಲರಿಗೂ ಅನುಭವಕ್ಕೆ ಬಂದಿದೆ. ವರ್ಷಗಳ ಹಿಂದೆ ಬೆಳಿಗ್ಗೆ 8.30 ಕೆ ಹತ್ತರಗಿ ಬಸ್ಸು ಬರುತ್ತದೆ ಎಂಬ ಭ್ರಮೆ ಅಲ್ಲಿನವರಿಗೆಲ್ಲರಿಗೂ. ಮೋಟಾರ್ ಸೈಕಲ್, ಕಾರು ಬಹಳ ಅಪರೂಪ. ಎಲ್ಲಿಗಾದರೂ ಹೋಗಬೇಕೆಂದರೆ ಹತ್ತರಗಿ ಬಸ್ಸೊಂದೇ, ಟೆಂಪೋ (ಖಾಸಗಿ ಸಾರ್ವಜನಿಕ ಬಸ್ಸು) ಸಹ ಇಲ್ಲದ ಕಾಲ. ಸೊಸೈಟಿ ಕೆಲಸಕ್ಕಿರಲಿ, ನೆಂಟರ ಮನೆಗೆ ಹೋಗುವುದಿರಲಿ, ವಿಶೇಷಕ್ಕೆ ಹೋಗುವುದಿರಲಿ, ಸಿರ್ಸಿಇಂದ ಮುಂದೆ ಹೋಗುವ ಬಸ್ಸು ಬೇಕಾದ್ರೆ 11 ಗಂಟೆಗೆ ಇರ್ಲಿ, ಬೆಳಿಗ್ಗೆ ಹತ್ತರಗಿ ಬಸ್ಸಿಗೆ ಹೋಗುವುದೊಂದೇ ಮಾರ್ಗ, ಇಲ್ಲದಿದ್ದರೆ 3-4 ಕಿಲೋಮೀಟರು ನಡೆದು ಕುಮಟಾ ರೋಡಿಗೆ ಹೋಗಿ ಬೇರೊಂದು ಬಸ್ಸು ಹಿಡಿಯಬೇಕು.

 

ಹತ್ತರಗಿ ಬಸ್ಸೋ, ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ನಾವು ಹೈಸ್ಕೂಲ್ ಗೆ ಹೋಗುವಾಗ ಬಸ್ಸು ಬರುತ್ತದೋ ಇಲ್ಲವೋ ಎಂದು ಬಾಜಿ ಕಟ್ಟುತ್ತಿದ್ದೆವು. ಜನರೋ ಹತ್ತು ನಿಮಿಷ ಮುಂಚೆಯೇ ಬಂದು ಅಲ್ಲಲ್ಲಿರುವ ಬಸ್ಸ್ಟಾಪಿನಲ್ಲಿ ಕಾಯುತ್ತ ಕೂರುತ್ತಿದ್ದರು. 8.30 ಗೆ ಬರುವ ಬಸ್ಸು 9 ಆದರೂ ಬರಲಿಲ್ಲವೆಂದರೆ, "ಇನ್ನು ಐದು ನಿಮಿಷ ಕಾಯುವ, ಬಸ್ಸು ಬಂದರೆ ಸರಿ, ಇಲ್ಲಾಂದರೆ ಇನ್ನೈದು ನಿಮಿಷ ಕಾಯುವ" ಎಂಬ ತಾಳ್ಮೆಯಲ್ಲಿರುತ್ತಿದ್ದರು. ಕೊನೆಗೆ 9.30 ವರೆಗೆ ಕಾದು, ತುರ್ತು ಕೆಲಸವಿರುವವರು ಕುಮಟಾ ರಸ್ತೆಯ ಕಡೆಗೆ, ತೇಜಿ ಮೇಲಿರುವವರು ಮನೆಯ ಕಡೆಗೆ ಹೆಜ್ಜೆ ಹಾಕುವುದು ವಾಡಿಕೆ. ಇವರಿಗೆಲ್ಲ ತಾಳ್ಮೆಯ, ಕಾಯುವಿಕೆಯ ಪಾಠವನ್ನು ಇನ್ಯಾರು ಚೆನ್ನಾಗಿ ಹೇಳಿಕೊಡಬಲ್ಲರು. ಬಸ್ಸು ಬಂದರೂ, ಬರದಿದ್ದರೂ ಜನ ಸಮಾನಚಿತ್ತರಾಗಿ, ಯಾವುದೇ ಉದ್ವೇಗಕ್ಕೊಳಗಾಗದೇ ಮರುದಿನ ಬಸ್ಸಿಗೆ ಕಾಯುವುದನ್ನು ಬಿಡುತ್ತಿರಲಿಲ್ಲ.

 

ನಾವು ಕಾಲೇಜಿಗೆ ಹೋಗಬೇಕಾದರೆ ಹತ್ತರಗಿ ಬಸ್ಸನ್ನೇ ನೆಚ್ಚಿದ್ದೆವು. ನಾವೂ ಬಸ್ಸಿನ ಯಾವತ್ತಿನ ಸಮಯಕ್ಕಿಂತ ಒಂದು ಗಂಟೆ ಕಾಯುವುದನ್ನ ರೂಢಿಸಿಕೊಂಡಿದ್ದೆವು. ಒಂದು ಗಂಟೆ ಕಾದು, ಬಸ್ಸು ಬರದಿದ್ದರೆ ಕುಮಟಾ ರಸ್ತೆಯ ಕಡೆ ಹೆಜ್ಜೆ ಹಾಕುತ್ತಿದ್ದೆವು. ನಮ್ಮೊಡನೆ ಬರುವ ಒಬ್ಬಳಿಗಂತೂ "ನಡೆದು ಹೋಗುವುದು ತುಂಬಾ ಸುಲಭ, ಸೀದಾ ರಸ್ತೆಯಲ್ಲಿ, ಘಟ್ಟದಲ್ಲಿ ಮಾತ್ರ ನಾವು ಶಕ್ತಿ ಉಪಯೋಗಿಸಿ ನಡೆದರಾಯಿತು, ಇಳುಕಲಿನಲ್ಲಿ "ನ್ಯೂಟ್ರಲ್" ಹಾಕಿದರೆ ತನ್ನಾರೆ ಮುಂದೆ ಹೋಗಬಹುದು" ಎಂದು ನಂಬಿಸಿದ್ದೆವು.

 

ಮಳೆಗಾಲದಲ್ಲಂತೂ ಬಸ್ಸು ಬಂದ ದಿನ ಮನರಂಜನೆಯೂ ಇರುತ್ತಿತ್ತು. ಮಣ್ಣಿನ ರಸ್ತೆಯಲ್ಲಿ ಕೆಲವು ಕಡೆ ಒರತೆ ಎದ್ದು ರಸ್ತೆಯಲ್ಲ ಜವುಗಿನ ನೆಲವಾಗಿರುತ್ತಿತ್ತು. ಬಸ್ಸಿನ ಡ್ರೈವರ್ ತನ್ನ ಚಾಕ ಚಕ್ಯತೆ ಉಪಯೋಗಿಸಿ ಬಸ್ಸು ಓಡಿಸಿದರೂ ಒಂದೊಂದು ದಿನ ಬಸ್ಸಿನ ಟೈಯರ್ ಮಣ್ಣಿನಲ್ಲಿ ಹುದುಗಿಹೋಗುತ್ತಿತ್ತು. ಅವತ್ತು ಹುಗಿದ ಬಸ್ಸನ್ನು ತಳ್ಳಿ ಮುಂದೆ ಸಾಗಿಸುವ ಕೆಲಸಕ್ಕೆ ಉರಾನೂರು ಒಟ್ಟಾಗುತ್ತಿತ್ತು. ಜಾನ್ಮನೆ ಪಂಚಾಯತದ ಒಂದೂರಿನ ಜನ ಸೇರಿದರೆ ಮನರಂಜನೆಗೆ ಕೊರತೆಯೇ? ಅಂದಿನ ಕಾಲದಲ್ಲಿ ನಮ್ಮವರಿಗೆ ಮನರಂಜನೆಯ ಕೊರತೆಯಿದೆಯೆಂದೇ KSRTC ಯವರು ಹತ್ತರಗಿ ಬಸ್ಸು ಬಿಡುತ್ತಿದ್ದರೇನೋ ಎಂಬ ಅನುಮಾನವೂ ಇದೆ.

 

ಸಂಜೆ 6 ಗಂಟೆಗೆ ಸಿರ್ಸಿ ಬಸ್ ಸ್ಟ್ಯಾಂಡಿನಿಂದ ಹತ್ತರಗಿ ಬಸ್ಸು ಹೊರಡುವುದು ಎಂಬ ಗುಲ್ಲು ಹರಡಿತ್ತು. ತಿರುಗಾಟಕ್ಕೆ ಹೋದವರು ಅದೇ ಬಸ್ಸಿಗೆ ತಿರುಗಿ ಮನೆಗೆ ಬರುವುದು. ಯಥಾ ಪ್ರಕಾರ ಒಂದು ಗಂಟೆ ಕಾದು, ಬಸ್ಸು ಹೊರಡಲಿಲ್ಲ ಅಂದರೆ KSRTC ಕಾರ್ಯನಿರ್ವಾಹಕನ ಹತ್ತಿರ "6 ಗಂಟೆಗೆ ಬಿಡುವ ಹತ್ತರಗಿ ಬಸ್ಸನ್ನ ಎಷ್ಟು ಗಂಟೆಗೆ ಬಿಡ್ತೀರಿ?" ಎಂದೇ ಕೇಳುತ್ತಿದ್ದರು.

 

ನಮ್ಮಲ್ಲಿ ಸ್ವಲ್ಪವಾದರೂ ತಾಳ್ಮೆ, ಕಾಯುವ ಗುಣ ಇದೆ ಎಂದಾದರೆ, ಅದರಲ್ಲಿ ಹತ್ತರಗಿ ಬಸ್ಸಿನ ಕೊಡುಗೆ ಬಹಳವಿದೆ.

 

ಇಷ್ಟು ಹೇಳಿದ್ರು ನಿಮಗೆ ನಿರೀಕ್ಷೆಯ, ತಾಳ್ಮೆಯ ಅರ್ಥ ಆಗ್ಲಿಲ್ಲ ಅಂದರೆ... ಥೋ!

 


Friday, October 31, 2025

 ಪ್ರಾಸಗಳ ಅಪ್ರಸ್ತುತ ಪ್ರಸಂಗ

ಚಹಾ ಕಪ್‌ ಮತ್ತು ಕವನಗಳ ತಾಪ!

ಕವನಗಳೆಂದರೆ ಹೆದರಲು ನನಗೆ ಸಕಾರಣಗಳಿವೆ. ವಿನಾಕಾರಣ ಹೆದರಲು ನಾನೇನು ಇವನಲ್ಲ. ಮೇಲಿಂದ ಮೇಲೆ ಹಲವು ಅನುಭವಗಳಾಗಿವೆ. ಇದೊಂದು ನನ್ನ ಮದುವೆಯ ನಂತರ ನಡೆದದ್ದು. ಮದುವೆಯ ಮರುದಿನ ಸಂಬಂಧಿಕರು, ಗೆಳೆಯರು ಎಲ್ಲರು ಅವರ ಮನೆಗೆ ಜೋಡಿ ಸಮೇತ ಬಾ ಎಂದು ಕರೆಯುತ್ತಾರೆ ಹಾಗು ಮದುವಣಿಗರು ಅವರವರ ಶಕ್ತ್ಯಾನುಸಾರ ಉಟಕ್ಕೋ, ಚಹಾ ತಿಂಡಿಗೋ ಒಮ್ಮೆ ಹತ್ತಿರದವರ ಮನೆಗೆ ಭೇಟಿ ಕೊಡುತ್ತಾರೆ. ನಾನೂ ಸಹ ನನ್ನ ಮದುವೆಯ ಮರುದಿನಗಳಲ್ಲಿ ನೆಂಟರಿಷ್ಟರ ಮನೆಗಳಿಗೆ ಹೋಗಿಬಂದಾದಮೇಲೆ ಒಬ್ಬರು ಹತ್ತಿರದವರ ಮನೆಗೆ ಭೇಟಿ ಕೊಡದೆಹೋದರೆ ತರವಲ್ಲ ಎಂದು ಯೋಚಿಸಿದೆ ಮತ್ತು ಒಂದು ಚಹಾ ಕುಡಿದು ಅವರ ದಾಕ್ಷಿಣ್ಯ ತೀರಿಸಿಬಿಡುವುದೆಂದು ವಿನುತಾಳೊಂದಿಗೆ ಅವರ ಮನೆಗೆ ಹೋದೆ.

ಮನೆಯ ಯಜಮಾನ ತಾನು ಅಂದುಕೊಂಡಿರುವ ಸಂಬಂಧಿಕ ಮನೆಯಲ್ಲಿರಲಿಲ್ಲ. ಅಷ್ಟರ ಮಟ್ಟಿಗೆ ಬಚಾವಾದೆ ಎಂದು ತಿಳಿದು ಒಳಗೆ ಹೋದೆವು. ಒಳಗೆ ಮನೆಯ ಯಜಮಾನಿ ಏನೋ ಹೊಲಿಗೆ ಕೆಲಸ ಮಾಡುತ್ತಿದ್ದಳು. ನಮ್ಮನ್ನು ನೋಡಿ ಮಾತನಾಡಿಸಿ ಕುಳಿತುಕೊಳ್ಳಲು ಹೇಳಿದಳು. ನಾನು ಬೇಗನೆ ವಾಪಸಾಗುವ ಇಚ್ಛೆಯಿಂದ ಚಹಾ ಮಾಡಲು ಹೇಳಿದೆ. ಸುಮ್ಮನಿರಲಾರದೆ ಏನೋ ಬಿಟ್ಟುಕೊಂಡ ಅಂತೇನೋ ಗಾದೆ ಮಾತಿದೆಯಲ್ಲ ಹಾಗೆಯೇ ನಾನು ವಿನುತಾಳೊಂದಿಗೆ ಯಜಮಾನಿಯ ಪ್ರತಿಭೆಗಳ ಬಗ್ಗೆ ದೊಡ್ಡದಾಗಿ ಹೇಳಿದೆ.

ಅಷ್ಟು ಹೇಳಿದೆ ತಡ ಯಜಮಾನಿ ವಿನುತಾಳ ಎದುರಿಗೆ ಅವಳ ಪ್ರತಿಭೆಗಳ ಅನಾವರಣ ಮಾಡಬೇಕೆಂದು ತಿಳಿದಳೋ ಏನೋ ಚಹಾ ಮಾಡುವುದನ್ನು ನಿಲ್ಲಿಸಿ ಒಂದು ಕವನಗಳನ್ನು ಬರೆದಿರುವ ಪಟ್ಟಿಯನ್ನು ನಮ್ಮ ಮುಂದೆ ಹಿಡಿದಳು. ಆಗ ನನಗೆ ನನ್ನ ತಪ್ಪಿನ ಅರಿವಾಯಿತು. ನಾವು ಒಂದೊಂದೇ ಕವನ ಓದಿದಂತೆ ಆ ಕವನದ ದ್ವನ್ಯಾರ್ಥ, ಅವು ಹುಟ್ಟಿದ ರೀತಿ, ಹಾಗು ಅದರ ವಿಶೇಷತೆ ಮುಂತಾದವನ್ನು ಯಜಮಾನಿ ಹೇಳುತ್ತಿದ್ದಳು. ಆ ಕವನಗಳೋ ಹಲಕೆಲವು ಪ್ರಾಸಗಳ ಅಸಂಬದ್ದ ಜೋಡಣೆಗಳಂತೆ ನನಗೆ ಕಂಡವು. ಅವುಗಳನ್ನು ಓದುವುದು ಒಂದು ತೆರನಾದ ಹಿಂಸೆಯಾದರೆ ಕವನಗಳ ಬಗ್ಗೆ ರಚಿಸಿದವಳ ವಿಶ್ಲೇಷಣೆ ಇನ್ನೊಂದು ತೆರನಾದದು. ಆ ಕವನದ ಪಟ್ಟಿಯನ್ನು ತೆಗೆದು ಹರಿದು ಬಿಸಾಡಬೇಕೆಂಬ ಬಯಕೆಯನ್ನು ಹೀಗೆ ತಡೆದು ಕೊಂಡೆನೋ ದೇವರೇ ಬಲ್ಲ. ವಿನುತಾಳೋ ನನ್ನ ನೋಡಿ ಮುಸಿ ಮುಸಿ ನಗುತ್ತಿದ್ದಳು, ಮಾಡಿದ ತಪ್ಪಿಗೆ ಈಗ ಅನುಭವಿಸು ಎನ್ನುವ ರೀತಿಯಲ್ಲಿ.

ಯಜಮಾನಿಯು ನಮ್ಮೂರಿನ ಇನ್ನೊಬ್ಬ ಪ್ರತಿಭಾನ್ವಿತ ಕವಿಗಳೊಂದಿಗೆ ಸೇರಿ ಒಂದೆರಡು ಕವನಗಳನ್ನು ಬರೆದಿದ್ದಳಂತೆ. ಅವನ್ನು ತರುತ್ತೇನೆಂದು ಆಕೆ ಮೆತ್ತು ಹತ್ತಿ ಹೋದಳು. ದೇವರು ಅವನೇ ಪ್ರತ್ಯಕ್ಷನಾಗುವುದಿಲ್ಲವಂತೆ ಯಾರದೋ ರೂಪದಲ್ಲಿ ಬರುತ್ತಾನಂತೆ. ಈ ಮಾತು ಆ ದಿನ ಅಕ್ಷರಶಃ ಸತ್ಯವಾಯಿತು, ಯಜಮಾನನೆಂದು ಅಂದುಕೊಂಡಿರುವ ಕವಯಿತ್ರಿಯಾದವಳ  ಗಂಡ ದೇವರ ರೂಪದಲ್ಲಿ ಬಂದು ನಮ್ಮನ್ನು ಕವನಗಳ ಕೂಪದಿಂದ ಮುಕ್ತಿಕೊಡಿಸಿದ. ಮೊದಲು ಚಹಾ ಮಾಡು ಉಳಿದದ್ದೆಲ್ಲ ಆಮೇಲೆ ಎಂದು ಯಜಮಾನಿಗೆ ಹೇಳಿ ಅವನು ನಮ್ಮ ಪ್ರಾಣ ಕಾಪಾಡಿದ.

ಇದೆ ತರಹ ಕವನಗಳ ವಿಷಯದಲ್ಲಿ ನನಗೆ ಹಲವು ಅನುಭವಗಳಾಗಿವೆ. ಇನ್ನೊಂದೆರಡು ಆದರೆ ಬಹುಷಃ ಫೋಬಿಯಾಗಳ ಸಾಲಿಗೆ "ಕವನ ಫೋಬಿಯಾ" ಎಂಬೊಂದು ಹೊಸದನ್ನು ಸೇರಿಸಬೇಕಾಗಬಹುದು. ಪ್ರಾಸ ಪದಗಳನ್ನು ಅಸಂಬದ್ಧವಾಗಿ ಜೋಡಿಸಿದರೆ ಕವನ ಆಗುವುದೇ? ಅದೊಂದು ರೀತಿಯಲ್ಲಿ ನವ್ಯ ಚಿತ್ರಕಲೆಯಂತೆಯೇ. ಅರ್ಥವಿಲ್ಲದ ಬಣ್ಣದ ಎರಚಾಟ.
ಕೆ ಎಸ್ ನರಸಿಂಹ ಸ್ವಾಮಿಗಳು ಬರೆದ ಮೈಸೂರು ಮಲ್ಲಿಗೆ, ಕುವೆಂಪುರವರು ಬರೆದ ಕೆಲವು ಕವನಗಳು ಎಲ್ಲ ಓದಿದ್ದೇನೆ. ಅವು ಅದೆಷ್ಟು ಸುದರವಾಗಿ ಮೂಡಿಬಂದಿವೆ, ಅರ್ಥಪೂರ್ಣವಾಗಿವೆ.

ಇವರು ಒಂದಷ್ಟು ಕವನಗಳನ್ನು ಗೀಚಿ, ಮನೆಗೆ ಯಾರಾದರು ಬರುವುದನ್ನೇ ಕಾಯುತ್ತಿರುತ್ತಾರೇನೋ ಎಂಬಂತೆ ಬಂದವರಿಗೆ ಕೊರೆಯುತ್ತಾರೆ. ಬಿಸಿ ಬಿಸಿ ಚಹಾ ಕೊಟ್ಟು ಕುಳ್ಳಿರಿಸಿ ತಮ್ಮ ಬತ್ತಳಿಕೆಯಿಂದ ಕವನಗಳನ್ನು ಹೊರತೆಗೆಯುತ್ತಾರೆ. ಚಹಾ ಕುಡಿಯದೆ ಎದ್ದೇಳುವಂತೆಯೂ ಇಲ್ಲ ಇವರ ಕೊರೆತ ಸಹಿಸಲೂ ಸಾಧ್ಯವಿಲ್ಲ.

 ನಲವತ್ತಕ್ಕೆ ಪಾದಾರ್ಪಣೆ - ಒಂದು ನಗು, ಒಂದು ಅರಿವು


ಅಯ್ಯೋ, ನಂಬಲಾಗ್ತಾ ಇಲ್ಲ ಅಲ್ವಾ. ನಾವು ಈಗ ನಲವತ್ತುದಾಟಿದ್ದೇವೆ ಅಥವಾ ನಲವತ್ತರಲ್ಲಿದ್ದೇವೆ! ಮನಸ್ಸಿನೊಳಗೆ ಇನ್ನೂ 20–25 ವರ್ಷದ ಉತ್ಸಾಹ ಇದೆ. ಹೊಸ ಕನಸುಗಳು, ಹೊಸ ಯೋಜನೆಗಳು. ಎಲ್ಲವೂ ಹಾಗೆ ಇದೆ. ಕೆಲವೊಮ್ಮೆ ಒಂದು ದಿನದ ಭಾರಿ ಕೆಲಸದ ನಂತರ ಸುಸ್ತಾಗುತ್ತೆ, ವಿಶ್ರಾಂತಿ ಬೇಕಾಗುತ್ತದೆ. ಇದು ಒಂದು ವಿಚಿತ್ರ ಹಂತ. ನೆನಪುಗಳು, ಹೆಮ್ಮೆ, ಸ್ವಲ್ಪ ಆಲೋಚನೆ - ಎಲ್ಲವೂ ಸೇರಿ ಒಂದು ಮಿಶ್ರ ಭಾವನೆ.


ನಮ್ಮ ಪೀಳಿಗೆ ನಿಜಕ್ಕೂ ಅದೃಷ್ಟಶಾಲಿ. ನಾವು ಡಿಜಿಟಲ್ ಕ್ರಾಂತಿ ಮೊದಲು ಜನಿಸಿದ ಕೊನೆಯ ತಲೆಮಾರು. ನಮ್ಮ ಬಾಲ್ಯದಲ್ಲಿ ಸ್ನೇಹ ಅಂದ್ರೆ ಎದುರು ನೋಡಿಕೊಂಡು ಮಾತಾಡೋದು, ಪತ್ರ ಬರೆಯೋದು, ಕೂಗಿ ಕರೆಯೋದು. ಆಟ ಅಂದ್ರೆ ಗೋಲಿ, ಬುಗುರಿ, ಬೆಂಕಿ ಪೊಟ್ಟಣದ ಆಟ... 


ಆ ದಿನಗಳು ಅದೆಷ್ಟು ಸುಂದರವಾಗಿದ್ದವು ಅಲ್ವಾ! ಮಳೆ, ಉಂಬಳ, ಸೈಕಲ್, ಚಿಟಿ ಬಿಲ್ಲು, ತೇರು, ವಿ ಡಿ ಅಂಗಡಿಯ ಶೇಂಗಾ ಇವು ನಮ್ಮ ಜೀವನದ ಭಾಗ. ಸ್ಮಾರ್ಟ್‌ಫೋನ್ ಇರಲಿಲ್ಲ, ಫೇಸ್ಬುಕ್ ಇರಲಿಲ್ಲ, ಆದರೆ ಮೋಜು ಮಸ್ತಿಗೆ ಬರಗಾಲವಿರಲಿಲ್ಲ.


ನಾವು ಅನುಭವಿಸಿದ ಬದಲಾವಣೆ ನೋಡಿದರೆ ಆಶ್ಚರ್ಯವಾಗುತ್ತದೆ, ಕಪ್ಪು-ಬಿಳಿ ಟಿವಿಯಿಂದ ಹಿಡಿದು ಕೈಯಲ್ಲೇ ಮೊಬೈಲ್ ಸ್ಕ್ರೀನ್. ಇನ್‌ಲ್ಯಾಂಡ್ ಪತ್ರದಿಂದ ಇಂದಿನ ವಾಟ್ಸಪ್ ಮೆಸೇಜ್ ತನಕ, ಗೋಲಿ ಆಟದಿಂದ ಇಂದಿನ ವೀಡಿಯೋ ಕಾಲ್ ತನಕ - ಎರಡು ಯುಗಗಳನ್ನು ಬದುಕಿದ್ದೇವೆ ನಾವು! ಇದು ದೊಡ್ಡ ಭಾಗ್ಯ.


ಇಗೀಗ ನಲವತ್ತರಲ್ಲಿ ನಿಂತು ನೋಡಿದರೆ, ಜೀವನ ಎಷ್ಟು ವೇಗವಾಗಿ ಹೋಗಿ ಬಿಟ್ತೊ ಅನ್ನಿಸುತ್ತೆ. ಕೆಲಸ, ಮನೆ, ಜವಾಬ್ದಾರಿ.. ಇವುಗಳ ನಡುವೆ ನಾವು ಹಿಂದೆ ನೋಡೋ ಸಮಯವೇ ಇಲ್ಲ. ಆದರೆ  ನಾವೆಲ್ಲಾ ಸ್ನೇಹಿತರು ಮತ್ತೆ ಸೇರಿದಾಗ, ಆ ಹಳೆಯ ಕಾಲ ಮತ್ತೆ ಜೀವಂತವಾಗುತ್ತದೆ. ಅದೇ ನಗು, ಅದೇ ಟೀಕೆ.. ಮತ್ತೆ ಪ್ರಯತ್ನಿಸೋಣ..


ನಲವತ್ತು ಅಂದ್ರೆ ಮಧ್ಯ ವಯಸ್ಸಲ್ಲ , ಅದು ಹೊಸ ಆರಂಭ. ಈಗ ಬದುಕನ್ನು ನಾವು ಹೊಸ ದೃಷ್ಟಿಯಿಂದ ನೋಡ್ತೀವಿ. ಹಿಂದೆ ವೇಗ ಮುಖ್ಯವಾಗಿತ್ತು; ಈಗ ಶಾಂತಿ ಮುಖ್ಯವಾಗ್ತಾ ಇದೆ. ಈಗ ಸಮಯದ ಮೌಲ್ಯ ಗೊತ್ತಾಗ್ತಾ ಇದೆ, ಅದನ್ನ ಹೇಗೆ ಬಳಸಬೇಕು ಎಂಬುದು ಅರಿವಾಗ್ತಾ ಇದೆ. 


ನಲವತ್ತು ಹೇಳುತ್ತದೆ, ಸ್ವಲ್ಪ ನಿಲ್ಲು, ಉಸಿರೆಳೆ, ಬದುಕು ಅನುಭವಿಸು. ಆರೋಗ್ಯದ ಕಡೆ ಗಮನ ಕೊಡು, ಮನಸ್ಸಿಗೆ ಶಾಂತಿ ಕೊಡು, ಹತ್ತಿರದವರ ಜೊತೆ ಸಮಯ ಕಳೆ. ಯಶಸ್ಸು ಮುಖ್ಯ, ಆದರೆ ಮನಸ್ಸಿಗೆ ಶಾಂತಿ ಕೊಡುವ ಕ್ಷಣಗಳು ಅದಕ್ಕಿಂತ ಬೆಲೆಬಾಳುತ್ತವೆ.


ಕುಟುಂಬ, ಸಂಬಂಧ, ಸ್ನೇಹ, ನೆನಪುಗಳು - ಇವು ನಮ್ಮ ನಿಜವಾದ ಸಂಪತ್ತು. ಹೃದಯದಿಂದ ಬಂದ ನಗು, ಒಟ್ಟಿಗೆ ಕಳೆದ ಸಮಯ, ಪರಸ್ಪರದ ಬೆಂಬಲ ಇವು ಶಾಶ್ವತ.


ನಲವತ್ತು ಒಂದು ತಿರುವು. ಜೀವನದ ಹೊಸ ಅಧ್ಯಾಯಕ್ಕೆ ಇದು ದಾರಿ. ಈ ಹಂತದಲ್ಲಿ ನಾವು ಅನುಭವವನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ. ಇದು ಬದುಕನ್ನು ಹೊಸ ದೃಷ್ಟಿಯಿಂದ ನೋಡುವ ಅವಕಾಶ.


ನಲವತ್ತು ನಮ್ಮೊಳಗೆ ಹೊಸ ಶಾಂತಿ, ಹೊಸ ಉತ್ಸಾಹ, ಹೊಸ ದೃಷ್ಟಿ ತರುತ್ತದೆ.


ಹೀಗಾಗಿ ನಲವತ್ತನ್ನ ಆಚರಿಸೋಣ - ಮನಸ್ಸು ಸದಾ ಉತ್ಸಾಹದಿಂದ ತುಂಬಿರಲಿ


ಮತ್ತೆ ಸಿಗೋಣ, ಸಿಕ್ಕಿ ಹರಟೋಣ..


Wednesday, May 22, 2019

ಸಗಣಿ ಕರಡುವ ಪ್ರಹಸನ!!

         ಮೊದ ಮೊದಲು ದೊಡ್ಡ ಕಲ್ಲಿನ ಕೊಟ್ಟಿಗೆಯನ್ನು ಕೊರ್ಲು ಹಿಡಿಯಿಂದ ಬಗ್ಗಿ ಕೆರೆಯುವುದನ್ನು ತಪ್ಪಿಸಿಕೊಳ್ಳಲು ಸಗಣಿ ಕರುಡುವುದಕ್ಕೆ ಹೋಗಲು ಪ್ರಾರಂಭಿಸಿದ್ದೆ. ಕ್ರಮೇಣ ಸಗಣಿ ಕರುಡುವುದು ಇಷ್ಟದ ಕೆಲಸವಾಯಿತು. ಹಿನ್ನೆಲೆ ಹೇಳಿಕೊಂಡು ಮುಂದೆ ಹೋಗುವುದು ಒಳಿತು. ಅವಿಭಕ್ತ ಸುತ್ಮನೆ ಅಂಗಡಿ ಅಜ್ಜನಮನೆಯ ಕೊಟ್ಟಿಗೆ ದೊಡ್ಡದಿತ್ತು. ಎರಡು ಸಾಲುಗಳಲ್ಲಿ ಆಕಳು ಎಮ್ಮೆ ಕಟ್ಟುವುದಕ್ಕೆ ಕಲ್ಲು ಹಾಸಿ ದೊಣಕಲು ಕಟ್ಟಿ ಸುಸಜ್ಜಿತವಾದ ಕೊಟ್ಟಿಗೆಯಿತ್ತು. ಸಮಸ್ಯೆಯೆಂದರೆ ಪ್ರತಿ ದಿನ ಕೊಟ್ಟಿಗೆ ತೊಳೆಯುವದಕ್ಕೆ ಕನಿಷ್ಠ ಇಬ್ಬರಿಗೆ ಒಂದು ಒಪ್ಪೊತ್ತಿನ ಕೆಲಸವಾಗುತ್ತಿತ್ತು. ಕೆಳಗಿನ ಸಾಲಿನಲ್ಲಿ ಹಾಸಿದ ಕಲ್ಲಿನಮೇಲೆ ಒಟ್ಟುಮಾಡಿಟ್ಟಿದ್ದ ಸಗಣಿಯನ್ನು ಬುಟ್ಟಿ ತುಂಬಿ ಸಗಣಿ ಕರಡುವ ಟ್ಯಾಂಕ್ ಗೆ ಸಾಗಿಸುವ ಕೆಲಸದಿಂದ ಮೊದಲ್ಗೊಂಡು, ದೊಣಕಲು ಗುಡಿಸಿ, ಕೊಟ್ಟಿಗೆ ನೆಲವನ್ನು ಉದ್ದ ಕಡ್ಡಿ ಹಿಡಿಯಿಂದ ಗುಡಿಸಿ, ಗುಡಿಸಿ ಒಟ್ಟಾದ ಹುಲ್ಲಿನ ಕಸವನ್ನು ಗೊಬ್ಬರ ಗುಂಡಿಗೆ ಎಸೆದು, ನೀರು ಹಾಕಿ ಕೊರ್ಲು ಹಿಡಿಯಿಂದ ಕೆರೆದು ಕೊನೆಗೆ ನೀರು ಹಾಕಿ ನೆಲವನ್ನು ತೊಳೆದು, ಸಗಣಿ ಕರಡಿ, ತುಂಬಿದ ಗ್ಯಾಸ್ ಡ್ರಮ್ ನಿಂದ ಬಂದ ರಾಡಿಯನ್ನು ಗೊಬ್ಬರಗುಂಡಿಗೆ ಸೋಕುವುದರೊಂದಿಗೆ ಕೊಟ್ಟಿಗೆ ಕೆಲಸ ಮುಗಿಯುತ್ತಿತ್ತು.


                 ಸಗಣಿಯನ್ನು ಬುಟ್ಟಿ ತುಂಬುವುದೋ, ದೊಣಕಲು ಗುಡಿಸುವುದೋ  ಅಂತಹ ಕಷ್ಟದ ಕೆಲಸ ಎನಿಸುತ್ತಿರಲಿಲ್ಲ. ಕೊರ್ಲು ಹಿಡಿಯಿಂದ ಕಲ್ಲಿನ ನೆಲವನ್ನು ಕೆರೆಯುವುದಿತ್ತಲ್ಲ ಅದು ಪರಮ ಶಕ್ತಿಯ ಅಪವ್ಯಯದಂತೆ ಕಾಣುತ್ತಿತ್ತು. ಬೇರೆ ಬೇರೆ ಕಡೆ ಗುಡಿಸಲು ಹಾಗೂ ಬೇರೆ ಬೇರೆ ರೀತಿಯ ಗುಡಿಸುವಿಕೆಗೆ ಬೇರೆ ಬೇರೆ ಹತ್ಯಾರಗಳನ್ನೇ ತಯಾರು ಮಾಡಿಟ್ಟಿದ್ದರು ತಜ್ಞರಾದ "ಅಣ್ಣ" ಹಾಗೂ "ಕಾಕಾ". ದೊಣಕಲು ಗುಡಿಸಲು ಈಚಲು ಹಿಡಿ, ಸಗಣಿ ತೆಗೆದ ತಕ್ಷಣ ಕೊಟ್ಟಿಗೆ ಗುಡಿಸಲು ಉದ್ದನೆಯ ಕಡ್ಡಿ ಹಿಡಿ, ಕೊಟ್ಟಿಗೆ ನೆಲವನ್ನು ಕೆರೆಯಲು ಮೊಂಡಾದ ಕೊರ್ಲು ಹಿಡಿ ಹೀಗೆ. ಕೊರ್ಲು ಹಿಡಿಯೋ ಕಟ್ಟಿನಿಂದ ಒಂದು ಗೇಣು ಉದ್ದವಿರುತ್ತಿತ್ತು. ಅದನ್ನು ಹಿಡಿದು ನೆಲ ಕೆರೆಯಬೇಕೆಂದರೆ ಪ್ರಾಯಶ ಮಲಗಿದ ರೀತಿಯಲ್ಲಿ ಬಗ್ಗಬೇಕಾಗುತ್ತಿತ್ತು. ಪ್ರತಿ ದಿನವೂ ಬೀಳುವ ಮೂತ್ರದ ಧಾರೆಯಿಂದ ನೆಲ ಜಾರಿಯಾಗದಂತೆ ತಿಕ್ಕಬೇಕಾಗಿತ್ತು. ನೆಲಕ್ಕೆ ಹಿಡಿದ ಸಗಣಿ, ಕಲ್ಲಿನ ಪಡಕುಗಳಲ್ಲಿ ಕುಳಿತ ಅದರ ಅವಶೇಷ ಮಲಗಿದ ಹೈನುಗಳ ಮೈಗೆ ಬಡಿಯದಂತೆ ಚೊಕ್ಕ ಮಾಡಬೇಕಾಗಿತ್ತು. ಮೇಲೆ ಹೇಳಿದ ತಜ್ಞರ ಅಭಿಪ್ರಾಯವನ್ನೇ ಮಾನದಂಡವೆಂದು ಒಪ್ಪಿಕೊಂಡರೆ ನನ್ನಂತವನಿಗೆ ಚೊಕ್ಕ ಮಾಡಲು ಇಡೀ ದಿನ ಬೇಕಾಗುವುದರಲ್ಲಿ ಸಂದೇಹವಿರಲಿಲ್ಲ.


          ಉಳಿದೆಲ್ಲವುಗಳಿಗಿಂತ ಸಗಣಿ ಕರಡುವುದು ಸಸಾರವೆಂದು ಪ್ರಾರಂಭಿಸಿದ ಕೆಲಸ ಇಷ್ಟು ಪ್ರಿಯವಾಗಿದ್ದು ಖುಷಿ. ಇದೇನೂ ನೋಡುವವರ ಕಣ್ಣಿಗೆ ಕಾಣಿಸುವಷ್ಟು ಸುಲಭ ಸಾಧ್ಯವಾದದ್ದಲ್ಲ. ಟ್ಯಾಂಕಿನಲ್ಲಿ ತುಂಬಿದ ಸಾಗಣಿಗೆ ಬೇಕಾಗುವಷ್ಟು ಮಾತ್ರದ ನೀರನ್ನು ಸೇರಿಸಿ ಒಂದೂ ಉಂಡೆ ಉಳಿಯದಂತೆ ಕರಡುವುದು ಅಪ್ಪೆಹುಳಿಯಲ್ಲಿ ಸಾಸಿವೆ ಕಾಳನ್ನು ಹೆಕ್ಕಿ ಬಾಳೆ ಎಲೆಯ ತುದಿಗೆ ಇಡುವಷ್ಟೇ ಕಷ್ಟದ ಕೆಲಸ. ನಾಡ ಆಕಳ ಸಗಣಿಯಂತೂ ಗಟ್ಟಿ ಉಂಡೆಯಂತಿರುವುದರಿಂದ ಅವನ್ನು ಹುಡುಕಿ ಕಾಲ ಕೆಳಗೆ ಇಟ್ಟು ಅರೆದು ಕರಡಬೇಕು. ಎಲ್ಲ ಉಂಡೆಗಳೂ ಅರೆದು ಕರಡಿದಮೇಲೆ ತೇಲುವ ಹುಲ್ಲಿನ ಕಸವನ್ನು ತೆಗೆಯಬೇಕು. ಚೊಕ್ಕವಾಗಿ ಕಸವನ್ನು ಆರಿಸಿಯಾದಮೇಲೆ ಹದವಾದ ರಾಡಿಯನ್ನು ಗ್ಯಾಸ್ ಡ್ರಮ್ ನ ಹೊಂಡಕ್ಕೆ ಬಿಡಬೇಕು. ಗ್ಯಾಸ್ ಡ್ರಮ್ ನ ಹೊಂಡಕ್ಕೆ ರಾಡಿ ಬಿಡುವ ಪೈಪ್ ಗೆ ಮುಚ್ಚುವ ಬಿರಡೆಗೆ ಗಟ್ಟಿ ಸಗಣಿಯನ್ನು ಮೆತ್ತಿ ಟ್ಯಾಂಕ್ ಗೆ ಬಂದು ಬೀಳುವ ನೀರು ಅಥವಾ ಮೂತ್ರ ಸೋರಿಕೆಯಾಗುವುದಿಲ್ಲ ಎಂದು ಖಾತ್ರಿಪಡಿಸಿಕೊಂಡು ಟ್ಯಾಂಕ್ ನಿಂದ ಆಚೆ ಬರಬೇಕು. ಅಜಮಾಸು ಮುಕ್ಕಾಲು ಗಂಟೆ ಬೇಕಾಗುವ ಈ ಕೆಲಸ ಧ್ಯಾನದಂತೆ ಅನಿಸುತ್ತಿತ್ತು.


                   ಕೊಟ್ಟಿಗೆ ಕೆಲಸದಲ್ಲಿ ತಜ್ಞರಾದ ಅಣ್ಣನೋ ಕಾಕನೋ ಸಗಣಿ ಕರಡುವುದು ನೋಡಲು ಚಂದ. ಟ್ಯಾಂಕ್ ಗೆ ಇಳಿಯುವುದಕ್ಕಿಂತ ಮುಂಚಿನ ತಯಾರಿ ನೋಡಿದರೆ ಯಾರಿಗಾದರೂ ತಿಳಿಯುತ್ತಿತ್ತು, ಇವ ಸಗಣಿ ಕರಡಲು ಹೊರಟನೆಂದು. ಬಗ್ಗಿ ಕರಡುವಾಗ ಜನಿವಾರ ನೆನೆಯಬಾರದೆಂದು ಬಿಗಿ ಮಾಡಿಕೊಳ್ಳುವುದರಿಂದ ಹಿಡಿದು, ಹಾಕಿಕೊಂಡ ಬಿಳಿ ಪಂಚೆಯೊ, ವಸ್ತ್ರವೋ ರಾಡಿಗೆ ತಾಗಬಾರದೆಂದು ಮಡಚಿ ಕಟ್ಟಿಕೊಳ್ಳುವುದು ಹೀಗೆ ಬಹಳ ತಯಾರಿ ಇರುತ್ತಿತ್ತು. ಕೆಲವೊಮ್ಮೆ ವಾಸನೆ ಬರಬಾರದೆಂದು ಕೈ ಕಾಲಿಗೆ ತೆಂಗಿನೆಣ್ಣೆ ಹಚ್ಚಿಕೊಂಡು ಟ್ಯಾಂಕ್ ಗೆ ಇಳಿಯುತ್ತಿದ್ದರು. ಕಾಕನಂತೂ ಹೊಸದಾದ ಕವಳ ಹಾಕಿಕೊಂಡೇ ಟ್ಯಾಂಕ್ ಗೆ ಇಳಿಯುತ್ತಿದ್ದ. ಅವರ ತಾಳ್ಮೆ, ಶ್ರದ್ಧೆ ಕೆಲಸದ ಬಗೆಗಿನ ಪ್ರೀತಿ ನೋಡಿದವರಿಗೆ ಪ್ರೇರೇಪಣೆ ನೀಡುವುದರಲ್ಲಿ ಸಂದೇಹವಿಲ್ಲ.


           ಈಗಲೂ ಮನೆಗೆ ಹೋದಾಗ ಅವಕಾಶ ಸಿಕ್ಕರೆ ಸಗಣಿ ಕರಡಲು ಹೋಗುತ್ತೇನೆ. ಈಗ ಮೊದಲಿನಷ್ಟು ಕಾಲ್ನಡೆ ಇಲ್ಲ, ಸಗಣಿಯೂ ಒಟ್ಟಾಗುವುದಿಲ್ಲ. 

Sunday, September 17, 2017

ಲಿಗಾಡಿ!!

ಬಹಳ ದಿನಗಳ ನಂತರ, ದಿನಗಳೇನು ವರ್ಷಗಳ ನಂತರ ನನ್ನ ಹಳೆಯ ಹವ್ಯಾಸವಾದ ಚಿತ್ರ ಬಿಡಿಸುವುದು, ಕರಕುಶಲ ವಸ್ತು ಮಾಡುವುದು ಪ್ರಾರಂಭಿಸಿದೆ. ಮತ್ತೆ ಪ್ರಾರಂಭಿಸುವುದಕ್ಕೆ ವಿನುತಾಳ ಒತ್ತಾಯ ಮೂಲ ಕಾರಣ. ಅವಳ ಸಲಹೆ, ಮೂಲ ಯೋಚನೆಯೊಂದಿಗೆ ಪುನಃ ಪ್ರಾರಂಭವಾದ ಹವ್ಯಾಸ ಈಗ ದಿನಾ ಮುಂದುವರೆದಿದೆ. ಪೂರ್ತಿಯಾಯಾಗಿ ಹವ್ಯಾಸಗಳನ್ನೆಲ್ಲ ಮರೆತು ಸಂಪೂರ್ಣವಾಗಿ ದಿನಗೆಲಸ ಮಾಡುವ ಯಂತ್ರಮಾನವನೇ ಆಗಿಹೋಗಿದ್ದೇನೆ ಎಂಬ ನನ್ನ ಭ್ರಮೆಯನ್ನು ನಿವಾಳಿಸಿದ ಶ್ರೇಯ ವಿನುತಾಳಿಗೆ.

ಯಾರೋ ಮಾಡಿದ ರಾತ್ರಿ ದೀಪವನ್ನು ನೋಡಿ "ನೀನೂ ಯಾಕೆ ಅದನ್ನೊಂದು ಮಾಡಬಾರದು?" ಎಂಬ ಮೊದಲ ಒತ್ತಾಯ ಸುಮಾರು ದಿನ ಅಪ್ಪಳಿಸಿದ ಮೇಲೆ ನಾನೂ ಮನಸ್ಸು ಮಾಡಿದೆ. youtube.com ನೋಡಿ ಹೇಗೆ ಮಾಡುವುದೆಂದು ತಿಳಿದೆ. ಒಂದು ಕಟ್ಟು ಸೊಣಬೇದಾರ, ಬಲೂನು, ಅಂಟನ್ನು ತಂದು "ರಾತ್ರಿ ದೀಪ" ಮಾಡಿದ ಮೇಲೆ, ಅದನ್ನು ನೋಡಿ ಭ್ರಮ ನಿರಾಸನವಾಗುವ ಪ್ರಸಂಗವನ್ನು ಸ್ವಲ್ಪದರಲ್ಲಿ ತಪ್ಪಿಸಿದೆ. ಬಲೂನಿಗೆ ಸುತ್ತಿದ ಸೊಣಬೇದಾರವನ್ನು ಹಕ್ಕಿಯ ಗೂಡನ್ನಾಗಿ ಪರಿವರ್ತಿಸಿ ಮಾನ ಉಳಿಸಿಕೊಂಡೆ


ಒಂದು ಪ್ರಯತ್ನವಾದ ಮೇಲೆ ಮಾಡಬಹುದೆಂಬ ಆತ್ಮವಿಶ್ವಾಸದಲ್ಲಿ ಕೈಗೆ ಸಿಕ್ಕ ದಾರವನ್ನೆಲ್ಲ ಉಪಯೋಗಿಸಿ ಒಂದು ರಾತ್ರಿ ದೀಪವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ. ಮನೆಯಲ್ಲಿ ಔಷಧಿಗೆ ಬೇಕು ಅಂದರೂ ಒಂದು ದಾರವೂ ಉಳಿಯಲಿಲ್ಲ. ಯಶಸ್ವಿಯಾದ ದೀಪ ಸರಿಯಾದ ಆಕಾರದಲ್ಲಿ ನಿಲ್ಲದೇ ಹೋದದ್ದರಿಂದ ಒಂದು ದೊಡ್ಡ ಪ್ಲಾಸ್ಟಿಕ್ ಬಾಲ್ ತಂದು ಅದಕ್ಕೆ ದಾರವನ್ನು ಸುತ್ತಿ ಒಂದು ಸರಿಯಾದ ದೀಪ ಮಾಡಿದೆ, ಇದು ಸಮಾಧಾನ ಕೊಟ್ಟಿತು, ನನಗೋ? ವಿನುತಾಳಿಗೋ?



youtube.com ನೋಡುವಾಗ ಕಾಗದದ ಕಲಾಕೃತಿ ನೋಡಿದೆ. ಅದನ್ನೂ ಮಾಡಿದೆ. ಆದರೆ ಬಣ್ಣ ಬಳಿಯುವಾಗ ಎಡವಿದೆ. ಹಳೆಯ ಬಣ್ಣದ ಖಜಾನೆ ತೆಗೆದು ನೋಡಿದರೆ ಎಲ್ಲ ಬಣ್ಣಗಳೂ ಒಣಗಿ ತೊಗರು ಬಾನಿಯ ತಳದಲ್ಲಿ ಕೂತ ಗಶಿಯಂತೆ ಕಂಡಿತು. ಅದಕ್ಕೆ ನೀರು ಹಾಕಿ ಕರಡಿ ಕಲಾಕೃತಿಗೆ ಬಳಿದೆ. ತೀರೇ ಚೆಂದ ಕಾಣದಿದ್ದರೂ ತಕ್ಕಮಟ್ಟಿಗೆ ಗೋಡೆಗೆ ತೂಗು ಹಾಕಬಹುದು







ಯಕ್ಷಗಾನದ ಕಿರೀಟ ಯಾವತ್ತಿಗೂ ಒಂದು ಆಕರ್ಷಣೆಯ ಕಲಾಕೃತಿ ನನಗೆ. ಅದನ್ನು ಮಾಡುವ ಪ್ರಯತ್ನದಲ್ಲಿ ಬಾಶಿಂಗ ಮಾಡಿದೆ. ರಟ್ಟಿನ ಬಾಕ್ಸ್, ಪ್ಲಾಸ್ಟಿಕ್ ಕರಡಿಗೆ, ಕಾಗದ, ಹೊಳೆಯುವ ಬಟ್ಟೆ ಎಲ್ಲ ಉಪಯೋಗಿಸಿ ಕಿರೀಟದಂತಹ ಬಾಶಿಂಗವನ್ನೇನೋ ಮಾಡಿದೆ. ಆದರೆ ಕಿರೀಟದ ಮೇಲಿನ ಭಾಗದಲ್ಲಿ ಅಳವಡಿಸುವ ನವಿಲುಗರಿ ಹೇಗೆ ಹೊಂದಿಸಲಿ ಎಂದು ಯೋಚಿಸುತ್ತಿರುವಾಗ ಒಂದಷ್ಟು ನವಿಲುಗರಿಯನ್ನು ವಿನುತಾ ಕೊಟ್ಟಳು. ಅವಳು ಶಾಲೆಗೆ ಹೋಗುವಾಗ ಆರಿಸಿಟ್ಟ ನವಿಲುಗರಿಗಳಂತೆ. ವಯಸ್ಸಿನ ಪ್ರಭಾವವೋ, ಆನುವಂಶಿಕವೋ ಅಂತೂ ಹಲವು ನವಿಲುಗರಿಗಳು ಮುಪ್ಪಾಗಿದ್ದವು. ಕೊಟ್ಟಷ್ಟರಲ್ಲಿ ಮೂರು ಗರಿ ಉಪಯೋಗಕ್ಕೆ ಬಂತು. ಅಷ್ಟು ಸಾಲದಲ್ಲ, ಅದಕ್ಕೆ ಪ್ಲಾಸಿಕ್ ಪೊರಕೆಯ ಕಡ್ಡಿಗೆ ಬಣ್ಣ ಬಳಿದು ಕಿರೀಟಕ್ಕೆ ಸಿಕ್ಕಿಸಿದೆ. ನೋಡಿದರೆ ಗೊತ್ತಾಗುವುದಿಲ್ಲ, ಬಚಾವು






ಎತ್ತಿನ ಗಾಡಿ, ಊರ ಕಡೆಯ ಮನೆಯ ಪ್ರತಿಕೃತಿ ಹೀಗೆ ಏನೇನನ್ನೋ ಮಾಡಿದ್ದೇನೆ. ಇನ್ನೂ ಏನನ್ನಾದರೂ ಮಾಡುವ ಉಮೇದಿಯಲ್ಲಿಯೂ ಇದ್ದೇನೆ.



ಕಳೆದ ಕೆಲವು ದಿನಗಳಿಂದ ಚಿತ್ರ ಬಿಡಿಸುವ ನನ್ನ ಹಳೆಯ ಹವ್ಯಾಸಕ್ಕೆ ತಿರುಗಿದ್ದೇನೆ. ಪ್ರಾರಂಭಿಕ ಪ್ರಯತ್ನಗಳಿಂದ ತಿಳಿದಿರುವುದು "ಕಲಿಯುವುದು ಬಹಳಷ್ಟಿದೆ" ಎಂಬುದು. ಪ್ರಯತ್ನ ಸಾಗಿದೆ.




Thursday, March 9, 2017

ಶೃತ ನಮನ


ಸ್ವಲ್ಪ ದಿನದ ಹಿಂದೆ ಪಲ್ಲವಿ ಹೇಳಿದಳು, ಮಗನಿಗೆ ಶಾಲೆಯ ಪುಸ್ತಕಕ್ಕೆ ಬೈಂಡ್ ಹಾಕುವಾಗ "ಬಪ್ಪ"ನನ್ನ ರಾಶಿ ಮಿಸ್ ಮಾಡಿಕೊಂಡೆ ಎಂದು. ಅವಳಿಗೆ ಹಾಗನ್ನಿಸ್ಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ನಾವು ಶಾಲೆಗೆ ಹೋಗುವಾಗ ನಮ್ಮ ಪಟ್ಟಿ ಪುಸ್ತಕಗಳಿಗೆ ಹಳೆಯ ಕ್ಯಾಲೆಂಡರ್ ದಪ್ಪ ಹಾಳೆಯಲ್ಲಿ ಶಿಸ್ತಾಗಿ ಬೈಂಡ್ ಹಾಕಿ ಕೊಡುತ್ತಿದ್ದವನೇ ಪಲ್ಲವಿಯ "ಬಪ್ಪ" ಹಾಗು ನಮ್ಮನೆಯ ಅಜ್ಜ ಅಜ್ಜಿಯರನ್ನು ಬಿಟ್ಟರೆ ಉಳಿದವರೆಲ್ಲರಿಗೂ "ಅಣ್ಣ". ಹೌದು ನಾನು ಹೇಳುತ್ತಿರುವುದು ನನ್ನ ಅಪ್ಪನ ಸುದ್ದಿಯೇ. ಅದು ಹೇಗೋ ಅವನ ಮಕ್ಕಳಾದ ನಾವು ಮೂವರೂ ಅವನಿಗೆ "ಅಣ್ಣ" ಎಂದೇ ಕರೆಯುವುದು. ಹಳೆಯ ಕ್ಯಾಲೆಂಡರ್ಗಳನ್ನೂ, ದಪ್ಪ ಹಾಳೆಯ ಯಾವುದೇ ಪೇಪರ್ ಅನ್ನೂ ಬೈಂಡ್ ಹಾಕಲೆಂದೇ ಎತ್ತಿಟ್ಟು, ಬೇಸಿಗೆ ರಜೆ ಕಳೆದು ಶಾಲೆ ಪ್ರಾರಂಭವಾಗುವ ದಿನಗಳಲ್ಲಿ ಪಟ್ಟಿ ಪುಸ್ತಕಗಳಿಗೆ ಅಚ್ಚುಕಟ್ಟಾಗಿ ಬೈಂಡ್ ಹಾಕಿ ಕೊಡುತ್ತಿದ್ದುದಲ್ಲದೇ, ನಮಗೆ ಬೈಂಡ್ ಹಾಕುವುದು ಹೇಗೆ ಎಂದು ಹೇಳಿಕೊಟ್ಟ್ಟಿದ್ದ. ಬೈಂಡ್ ಹಾಕುವ ಅವನ ರೀತಿಯೋ, ಅವನು ಕೊಡುತ್ತಿದ್ದ ವಿವರಣೆಯೋ ಒಟ್ಟಿನಲ್ಲಿ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತಿದೆ.

ಅಣ್ಣನ ಹತ್ತಿರದಿಂದ ಒಡನಾಡಿದ ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಅವನ ಪ್ರಭಾವ ಬಿದ್ದೆ ಬಿದ್ದಿರುತ್ತದೆ ಎಂಬುದು ನನ್ನ ಗಾಢವಾದ ನಂಬಿಕೆ. ಅವನನ್ನ ಹತ್ತಿರದಿಂದ ಬಲ್ಲವರೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಅವನನ್ನ ನೆನಪಿಸಿಕೊಳ್ಳದೆ ಇರಲಿಕ್ಕಿಲ್ಲ. ಅವನೇನೂ ಅಪ್ರತಿಮ ಮಾತುಗಾರನಾಗಿರಲಿಲ್ಲ, ತುಂಬಿದ ಹಾಸ್ಯ ಪ್ರಜ್ಞೆಯುಳ್ಳವನೂ ಆಗಿರಲಿಲ್ಲ, ಅಸಾಮಾನ್ಯ ಬುದ್ಧಿವಂತನೂ, ಮಹಾ ಪ್ರತಿಭಾ ಸಂಪನ್ನನೂ ಆಗಿರಲಿಲ್ಲ. ಆದರೆ ಅವನು ಜೀವನ ನಡೆಸಿದ ರೀತಿ, ಅವನ ಆಲೋಚನಾ ವಿಧಾನ, ನೈತಿಕತೆಗೆ ಕೊಡುತ್ತಿದ್ದ ಮಹತ್ವ ಹಾಗೂ ನೈತಿಕ ಜವಾಬ್ದಾರಿಯಿಂದ ಕೂಡಿದ ಬಾಳು ಎಂತವರನ್ನೂ ಪ್ರಭಾವಿಸಿದ್ದರಲ್ಲಿ ಆಶ್ಚರ್ಯವಿಲ್ಲ. ನಿಧಾನಿಯೂ, ಮಿತಭಾಷಿಯೂ, ಎಲ್ಲರನೂ,ಎಲ್ಲವನ್ನೂ ಪ್ರೀತಿಸುವವನೂ ಆದ ಅವನು ನನಗೆ ಆದರ್ಶಪ್ರಾಯ. ಆದರೆ ಅವನಂತೆ ಬದುಕುವುದು ಕಷ್ಟ.

ಅವನಿಗೆ ಸಿಟ್ಟು ಬಂದದ್ದನ್ನ ನಾನು ನೋಡಿಲ್ಲ. ಅವನ ಕೊನೆಯ ದಿನಗಳಲ್ಲಿ ಅವನಿಗೆ ವ್ಯಾಯಾಮ ಮಾಡಿಸುತ್ತಿದ್ದೇನೆಂದೋ, ಅವನಿಗೆ ಅನವಶ್ಯಕ ಪ್ರಶ್ನೆಗಳನ್ನು ಕೇಳಿ ಮಾತನಾಡಿಸಬೇಕೆಂದು ಪ್ರಯತ್ನಿಸುತ್ತಿದ್ದೇನೆಂದೋ ಸಿಟ್ಟು ಮಾಡಿದ್ದಿದೆ. ಆದರೆ ಅವನ ಚಟುವಟಿಕೆಯ ಜೀವನದಲ್ಲಿ ಸಿಟ್ಟನ್ನು ಬಹಳ ದೂರವಿಟ್ಟಿದ್ದ. ನನ್ನ ಸಿಟ್ಟು ಕಡಿಮೆಯಾಗಿದ್ದೆ ಆದರೆ ಅದಕ್ಕೆ ಅವನ ತಿದ್ದುವಿಕೆಯೇ ಕಾರಣ. ಕಾಗೆ ಕಾಲು ಗುಬ್ಬಿ ಕಾಲಿನಂತೆ ಇರುತ್ತಿದ್ದ ನನ್ನ ಹಸ್ತಾಕ್ಷರ ಸುಧಾರಿಸಲು ಅವನು ಮೂಲ ಕಾರಣ. ನಾನು ಬರೆಯುವಾಗ ನನ್ನ ಪಕ್ಕದಲ್ಲಿ ಕೂತು ಶಬ್ದಗಳ ಮಧ್ಯೆ ಜಾಗ ಬಿಡುವಂತೆಯೂ, ಅಕ್ಷರಗಳು ಸುಂದರವಾಗಿಯಲ್ಲದೆ ಹೋದರೂ ಸ್ಪಷ್ಟವಾಗಿರಬೇಕು ಎಂದು ತಿದ್ದುತ್ತಿದ್ದ. ಅವನು ಬಿಳಿ ಹಾಳೆಯ ಮೇಲೆ ಬರೆದರೆ ಅಕ್ಷರದ ಸಾಲು ಅಂಕು ಡೊಂಕಾಗಿರುತ್ತಿರಲಿಲ್ಲ, ಅವನು ಬರೆದಾದ ಮೇಲೆ ಅಕ್ಷರದ ಮೇಲೆ ಕೆಳಗೆ ಜೋಡುಗೆರೆ ಹಾಕಬಹುದಾದಷ್ಟು ಒಂದೇ ಅಗಲ ಎತ್ತರದ ಅಕ್ಷರಗಳುಸುಂದರವಾದ ದುಂಡಗಿನ ಅಕ್ಷರಗಳು. ಅವನ ಅಕ್ಷರದ ರೀತಿಯಲ್ಲೇ ಸುದರ್ಶನ ಅಣ್ಣಯ್ಯ, ಸುಧತ್ತೆ ಬರೆಯುತ್ತಾರೆ.
               
ಅಂಗಳ ಗುಡಿಸುವ ಪದ್ಧತಿ ಹೇಗೆ? ಅಡಿಕೆ ಹೆಕ್ಕುವ ಪರಿಪಾಠ ಹೇಗೆ? ಸಂನೆಂಪೊ ಕೊಯ್ಯುವುದು ಹೇಗೆ? ಹೇಳಿದರೆ ಕೆಲವರಿಗೆ ಅತಿಶಯೋಕ್ತಿ ಅನಿಸಬಹುದು, ಸಗಣಿಯಲ್ಲಿ ಸೇರಿರುವ ಹುಲ್ಲು ಬಿಡಿಸುವುದು ಹೇಗೆ? ಹಾಗೆ ಬೇರೆ ಮಾಡಿಕೊಂಡರೆ ಸಗಣಿ ಕರಡುವಾಗ ಎಷ್ಟು ಸಲೀಸಾಗುತ್ತದೆ, ಕಾಯಿ ಸುಲಿಯುವುದು ಹೇಗೆ? ಕಾಯಿಯ ಜುಟ್ಟನ್ನು ಹೇಗೆ ಬಿಡಿಸುವುದು ಹೀಗೆ ಏನೇನೆಲ್ಲ ಕಲಿಸಿಕೊಟ್ಟೆ ನೀನು. ಪಟ್ಟಿ ಮಾಡುತ್ತಾ ಹೋದರೆ ಮಾಡುತ್ತಾ ಹೋಗಬಹುದು.


ದಿನನಿತ್ಯದ ಜೀವನದಲ್ಲಿ, ಮಾಡುವ ಕೆಲಸಗಳಲ್ಲಿ ಅಣ್ಣಾ ನಿನ್ನ ನೆನಪುಗಳು ಹಾಸುಹೊಕ್ಕಾಗಿವೆ. ನಿನ್ನ ನೆನಪಾಗದ ದಿನಗಳಿಲ್ಲ. ಇನ್ನು ಆಯಿಯ ಪರಿಸ್ಥಿತಿ ಹೇಗಿರಬಹುದು? ಶಾರೀಕವಾಗಿ ನೀನಿಲ್ಲದಿದ್ದರೂ ಮಾನಸಿಕಾವಾಗಿ ನಿನ್ನ ಉಪಸ್ಥಿತಿ ನನ್ನಲ್ಲಿದೆ. ಆದರೂ ಅಣ್ಣಾ...

Tuesday, October 20, 2015

ಓದು!!

ನಮ್ಮನೆಗಿಂತ ಮೊದಲು ಟಿವಿ ಬಂದಿದ್ದು ಪಕ್ಕದಮನೆಯಲ್ಲಿ. ಹೊಸತರಲ್ಲಿ ಅದೇನು ಆಶ್ಚರ್ಯ, ಉತ್ಸಾಹ.. ಆಗ ಬರುತ್ತಿದ್ದದ್ದು ಡಿಡಿ೧ ಮಾತ್ರ. ಎತ್ತರದ ಮರದ ತುದಿಗೆ ಎಂಟೆನಾ ಕಟ್ಟಿದ್ದರು. ಸ್ವಲ್ಪ ಗಾಳಿ ಬೀಸಿದರೆ ಅದು ತಿರುಗಿ ಹೋಗುತ್ತಿತ್ತು. ಆಗ ಮರ ಹತ್ತಿ ಎಂಟೆನಾ ಸರಿ ಮಾಡಿ ಟಿವಿ ಯಲ್ಲಿ ಚಿತ್ರ ಬರುವಂತೆ ಮಾಡುವ ಪ್ರಹಸನ ಬಲು ಮಜವಾಗಿರುತ್ತಿತ್ತು. ಒಬ್ಬನು ಮರ ಹತ್ತಿ ಎಂಟೆನಾವನ್ನು ಸ್ವಲ್ಪ ಸ್ವಲ್ಪವಾಗಿ ತಿರುಗಿಸುತ್ತಾ ಹೋಗುವುದು, ಇನ್ನೊಬ್ಬವ ಟಿವಿ ಯಲ್ಲಿ ಚಿತ್ರ ಬರುತ್ತಿದೆಯಾ ಎಂದು ನೋಡಿ ಕೂಗಿ ಹೇಳುವುದು. ಮರದ ಮೆಲಿರುವವನ ಹಾಗು ಟಿವಿ ಮುಂದಿರುವವನ ಮದ್ಯೆ ಸಂವಹನ ನಡೆಸಲು ನಾಕಾರು ಹುಡುಗರು.

ಪ್ರತಿ ಆದಿತ್ಯವಾರ ಮದ್ಯಾಹ್ನದ ಮೇಲೆ ೪ ಗಂಟೆಗೆ ಕನ್ನಡ ಸಿನಿಮಾ ಬರುತ್ತಿತ್ತು. ಹಾಗಾಗಿ ಬೆಳಿಗ್ಗೆಯೇ ಮರ ಹತ್ತಿ ಎಂಟೆನಾವನ್ನು ಪರೀಕ್ಷಿಸಿ, ಟಿವಿಯಲ್ಲಿ ಚಿತ್ರ ಸರಿಯಾಗಿ ಬರುತ್ತಿರುವಂತೆ ನೋಡಿಕೊಳ್ಳುತ್ತಿದ್ದರು. ೪ ಗಂಟೆಗೆ ಸರಿಯಾಗಿ ಎರಡು ಮನೆಯ ಹುಡುಗರು, ಹೆಂಗಸರಾದಿಯಾಗಿ ಎಲ್ಲರು ಟಿವಿಯ ಮುಂದೆ ಹಾಜರು. ಪಕ್ಕದಮನೆಯ ಉದ್ದ ಜಗುಲಿಯ ತುಂಬಾ ಜನರು. ಮುಂದೆ ಕುಳಿತ ಹುಡುಗರ ಗಲಾಟೆಯಲ್ಲಿ, ಹೆಂಗಸರ ಸುದ್ದಿಯ ಗೌಜಿನ ಮಧ್ಯೆ ಹಿಂದೆ ಇದ್ದವರು ಚಿತ್ರ ನೋಡುವುದೊಂದೇ ಆಗುತ್ತಿತ್ತು. ಆದಿತ್ಯವಾರ ಬಂತೆಂದರೆ ಸಿನಿಮಾ ನೋಡುವ ಉತ್ಸಾಹ ಈಗ ಸೋಜಿಗವೆನಿಸುತ್ತದೆ.

ಭಾರತದಲ್ಲಿ ನಡೆಯುವ ಕ್ರಿಕೆಟ್ ಮ್ಯಾಚ್ಗಳನ್ನು ಡಿ ಡಿ ೧ ರಲ್ಲಿ ನೋಡಬಹುದಾಗಿತ್ತು. ಅದ್ಯಾವುದೋ ಮಾಯದಲ್ಲಿ ಮ್ಯಾಚ್ ಇದ್ದ ದಿನ ಎಂಟೆನಾ ತಿರುಗಿಯೇ ಹೋಗುತ್ತಿತ್ತು. ಎಂಟೆನಾ ಸರಿ ಮಾಡುವ ಪ್ರಹಸನದ ನಂತರ ಎಲ್ಲರೂ ಒಟ್ಟಾಗಿ ಮ್ಯಾಚ್ ನೋಡುವುದೇ ಒಂದು ಸುಂದರ ಅನುಭವ. ನಾಗವಳ್ಳಿ ಎಲೆಯ ರಸಗವಳ ಬಾಯಿ ತುಂಬಿ ಹೋದರೂ ತುಪ್ಪಲು ಎದ್ದುಹೊದರೆ ಕುಳಿತಿರುವ ಜಾಗವನ್ನು ಇನ್ನೊಬ್ಬರು ಒಬಳಿಸಿಯಾರು ಎಂದು ಕುಳಿತಲ್ಲಿಂದ ಹಂದಾಡುತ್ತಿರಲಿಲ್ಲ ಚಿಕ್ಕಪ್ಪಂದಿರು. ಅದ್ಯಾವುದೋ ಪಾಕಿಸ್ತಾನದ ವಿರುದ್ಧದ ಮ್ಯಾಚ್ ನಲ್ಲಿ ಭಾರತ ಗೆದ್ದಾಗ ಚಿಕ್ಕಪ್ಪನೊಬ್ಬ ಜಾಗಟೆ ಬಾರಿಸಿ ಅಜ್ಜನಿಂದ ಬೈಸಿಕೊಂಡಿದ್ದ.

ನಮ್ಮನೆಯಲ್ಲಿ ಟಿವಿ ಬರುವವರುಗೂ ಪಕ್ಕದಮನೆಯಲ್ಲಿ ನೋಡುತ್ತಿದ್ದೆ. ನಮ್ಮನೆಗೆ ಟಿವಿ ಬಂದಮೇಲೆ ಟಿವಿಯ ಹುಚ್ಚು ಜೋರಾಯಿತು. ಶಾಲೆಯಿಂದ ಬರುತ್ತಿದ್ದಂತೆ ಸಾಧನೆ ಎಂಬ ಧಾರವಾಹಿ ನೋಡುತ್ತಿದ್ದೆ. ಹೀಗೆ ಟಿವಿಯಲ್ಲಿ ಏನೇನು ಬರುತ್ತಿತೋ ಎಲ್ಲವನ್ನು ನೋಡುತ್ತಿದ್ದೆ. ನನ್ನ ಟಿವಿ ಹುಚ್ಚನ್ನು ನೋಡಿದ "ಅಣ್ಣ" ನನಗೆ ತಿಳಿ ಹೇಳಲು ಪ್ರಾರಂಭಿಸಿದ. ಸುಮ್ಮನೆ ಟಿವಿಯಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ನೋಡಬೇಡ. ಚೆನ್ನಾಗಿರುವ ಒಂದೋ ಎರಡೋ ಕಾರ್ಯಕ್ರಮಗಳನ್ನು ನೋಡು. ಟಿವಿ ನೋಡುವ ಸಮಯದಲ್ಲಿ ಏನಾದರೂ ಓದು. ಓದುವುದರಿಂದ ಏನೋ ವಿಷಯ ತಿಳಿಯುತ್ತದೆ. ದಿನಪತ್ರಿಕೆಯಾದರೂ ಸರಿ, ಸುಧಾ ತರಂಗ ಗಳಾದರೂ ಸರಿ ಒಟ್ಟಿನಲ್ಲಿ ಓದು. ಎಂದು ನನಗೆ ಹೇಳಿ ಹೇಳಿ ನನ್ನ ಟಿವಿಯ ಹುಚ್ಚನ್ನು ಕಡಿಮೆ ಮಾಡಿ ಓದುವ ಹವ್ಯಾಸವನ್ನು ಅಭ್ಯಾಸ ಮಾಡಿಸಿದ್ದೆ ಅವಾ.

ಅವನು ದಿನಾ ಪೇಪರ್ ಓದುವುದನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ಮೊದಲ ಅಕ್ಷರದಿಂದ ಹಿಡಿದು ಕೊನೆಯ ಅಕ್ಷರದವರೆಗೂ ಓದುತ್ತಿದ್ದ. ನಮ್ಮನೆಯಲ್ಲಿ ಒಟ್ಟು ಕುಟುಂಬವಾಗಿದ್ದರಿಂದ ಅವನ ಕೈಗೆ ಅವತ್ತಿನ ಪೇಪರ್ ಮರುದಿನ ಸಿಗುತ್ತಿತ್ತು. ಹಾಗಾಗಿ ಅವನು ಪ್ರತಿದಿನ ಹಿಂದಿನ ದಿನದ ಪೇಪರ್ ಓದುತ್ತಿದ್ದ. ನಾನು ಕಾಲೇಜ್ಗೆ ಹೋಗುವಾಗ ಲೈಬ್ರರಿಯಿಂದ ಕಾದಂಬರಿಗಳನ್ನು ತಂದು ಓದುತ್ತಿದ್ದೆ. ಎಷ್ಟೋ ಕಾದಂಬರಿಗಳನ್ನು ಅವನೂ ಓದುತ್ತಿದ್ದ. ಓದುವುದರ ಮಹತ್ವ ಗೊತ್ತಿದ್ದ ಅವನು ಅಜ್ಜನ ಕೊನೆಯ ಕಾಲದಲ್ಲಿ, ಹಾಸಿಗೆಯ ಮೇಲೇ ಇರುತ್ತಿದ ಅಜ್ಜನ ಹತ್ತಿರ ಏನಾದರೂ ಓದಲು ಹೇಳುತ್ತಿದ್ದ.

ಈಗ ಅವನಿಗೇ ಓದುವ ಮನಸ್ಸಿಲ್ಲ...

Sunday, April 5, 2015

ಹಾವಿನ ಪ್ರಹಸನ

ಮಳೆ ನಾಡಿನಲ್ಲಿ ಹಾವುಗಳಿಗೆ ಬರಗಾಲವೇ? ನಾನಾ ತರಹದ ಹಾವುಗಳನ್ನು ಅಲ್ಲಿ ನೋಡಬಹುದು. ಗಿಡಗಳಮೇಲೆ ಎಲೆಯಬಣ್ಣ ಇರುವ ಹಸುರು ಹಾವು, ಕೊಳೆಯುವ ವಿಷವಿರುವ ಕುದುರ್ಬೆಳ್ಳ, ಗೋಧಿ ಬಣ್ಣದಲ್ಲಿ ಸುಂದರವಾಗಿರುವ ಸರ್ಪ ಹೀಗೆ ಅನೇಕ ಜಾತಿಯ ಹಾವುಗಳು ಅಲ್ಲಿವೆ. ಕೆರೆ ಹಾವುಗಳಿಗಂತೂ ಬರಗಾಲವೇ ಇಲ್ಲ.

ನನ್ನ ವಾರಗೆಯ ನಮ್ಮೂರಿನ ಇಬ್ಬರಿಗೆ ಹಾವುಗಳೆಂದರೆ ವಿಪರೀತ ಹೆದರಿಕೆ. ಮಳೆ ನಾಡಿನವರಾದರೂ ಅಷ್ಟೊಂದು ಹೇಗೆ ಹೆದರುತ್ತಾರೋ ಗೊತ್ತಿಲ್ಲ. ಹಾವುಗಳು ಯಾವುದಕ್ಕೂ ಬೇಕಾಗದ ಅನವಶ್ಯಕ ಜೀವಜಂತುಗಳೆಂದು ಅವರಿಬ್ಬರೂ ಠರಾವು ಪಾಸು ಮಾಡಿಯಾಗಿದೆ. ಹಾವು ಎಂದರೆ ಸಾಕು ಎಲ್ಲಿ ಎಂದು ಕೇಳುತ್ತ ಮೂರು ತುಂಡುಗುಪ್ಪಣ ಹೊಡೆಯುತ್ತಾರೆ.

ಇದೇ ತರಹ ಹೆದರುಪುಕ್ಕಲನಾದ ಪಕ್ಕದಮನೆಯ ಚಿಕ್ಕಪ್ಪನ ಮನೆಗೆ ಒಮ್ಮೆ ಹಾವು ಬಂದಿತ್ತು. ಪಕ್ಕದೂರಿನಲ್ಲಿ ಒಮ್ಮೆ ಕಾಳಿಂಗ ಬಂದಾಗ ಅಜಮಾಸು ನಾಲ್ಕು ಫರ್ಲಾಂಗು ದೂರ ನಿಂತುಕೊಂಡೇ ಕೂಗಿದ ಅಸಾಮಿ ಆವಾ. ಹಳೆಯ ಕಾಲದ ಮಣ್ಣು ಗೋಡೆಯ ದೇವರ ಮನೆಯೊಳಗೆ ದೊಡ್ಡ ದೇವರ ಪೀಠ ಇದೆ. ಆ ದೇವರ ಪೀಠಕ್ಕೂ ಗೋಡೆಗೂ ಮದ್ಯೆ ಇರುವ ಸಂದಿನಲ್ಲಿ ಯಾವುದೋ ಹೊಸ ಜಾತಿಯ ಹಾವು ಸೇರಿಕೊಂಡಿತ್ತು. ಹಗಲಿನಲ್ಲೂ ಬೆಳಕಿನ ಸೆಲೆ ಇಲ್ಲದ ದೇವರ ಮನೆಯಲ್ಲಿ ಪೂಜೆ ಮಾಡುತ್ತಿದ್ದ ಚಿಕ್ಕಪ್ಪನಿಗೆ ಹಾವು ಕಣ್ಣಿಗೆ ಬಿತ್ತು. ಅರ್ಧಂಬರ್ಧ ಬಿಚ್ಚಿದ ಮಡಿಯೊಳಗೆ ಹೊರಗೆ ಓಡಿ ಬಂದು ಹಾವು ಹಾವು ಎಂದು ಕಿರುಚಿದಕೂಡಲೇ ಹೆಚ್ಚಿನ ಜನರು ಯಾವುದೋ ಕೆರೆ ಹಾವು ನೋಡಿ ಹೆದರಿದ್ದಾನೆ ಎಂದೇ ಭಾವಿಸಿದರು.

ಅವನ ಸಮಾಧಾನಕ್ಕೋಸ್ಕರ ನಾನು ಮತ್ತಿಬ್ಬರು ಚಿಕ್ಕಪ್ಪಂದಿರು ಪವರ್ ಫುಲ್ ಬ್ಯಾಟರಿ ತೆಗೆದುಕೊಂಡು ದೇವರ ಮನೆಗೆ ಹೋಗಿ ಹಾವನ್ನು ಹುಡುಕಿದಾಗ ಕಂಡಿತು. ಏನೇ ಸಪ್ಪಳ ಮಾಡಿದರೂ ಸಂದಿಯಿಂದ ಹೊರಗೆ ಬರುತ್ತಿರಲಿಲ್ಲ. ಹೊಸ ಜಾತಿಯ ಹಾವಾಗಿದ್ದರಿಂದ ಯಾರೂ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ತೀರ್ಮಾನವಾಗಿ ಅದನ್ನು ಹೊರಗೆ ಹಾಕುವುದು ಹೇಗೆ ಎಂಬ ಸಮಸ್ಯೆಗೆ ಎಲ್ಲರಿಗೂ ನೆನಪಾಗಿದ್ದು ಮಂಜಣ್ಣ.

ಮಂಜಣ್ಣ ನಮ್ಮ ಸುತ್ತಮುತ್ತಲಿನ ಊರುಗಳಲ್ಲಿ ಹಾವು ಹಿಡಿಯುವುದರಲ್ಲಿ ಎತ್ತಿದ ಕೈ. ಅಮಾವಾಸ್ಯೆಯ ಕತ್ತಲಿನಲ್ಲೂ ಕೈಯಲ್ಲಿ ಬ್ಯಾಟರಿ ಇದ್ದರೂ ಕಪ್ಪಿನಲ್ಲೇ ನಡೆದುಕೊಂಡು ಹೋಗುವಂತ ಧೈರ್ಯವಂತ. ಅವನಿಗೆ ಫೋನಾಯಿಸಿದಾಗ ಬರುತ್ತೇನೆಂದ. ಅವನು ಬರುವ ವರೆಗೆ ಹಾವು ಅಲ್ಲೇ ಇರುವಂತೆ ನೋಡಿಕೊಳ್ಳಬೇಕು. ಅದೇನಾದರೂ ಅಲ್ಲಿಂದ ಹೊರಬಿದ್ದು ನಾಗಂತಿಕೆ ಮೇಲಿದ್ದ ಕರಡಿಗೆಗಳ ಮಧ್ಯೆ ಸೇರಿಕೊಂಡು ಬಿಟ್ಟಿತೆಂದರೆ ಅದನ್ನು ಹುಡುಕುವುದು ಹವ್ಯಕ ಮಾಣಿಗೆ ಕೂಸು ಹುಡುಕುವುದಕ್ಕಿಂತ ಕಷ್ಟ. ಎಲ್ಲರೂ ಸೇರಿ ನನಗೆ ಸಂದಿಯಲ್ಲಿ ಬ್ಯಾಟರಿ ಬಿಟ್ಟು ಬೆಳಕು ಮಾಡಿಕೊಂಡಿರು ಎಂದು ಹುಕುಂ ಮಾಡಿದರು. ನನಗೆ ಏಕೆ ಹೇಳಿದರೆಂದರೆ ಅವರ್ಯಾರಿಗೂ ಅಲ್ಲಿ ನಿಂತುಕೊಳ್ಳುವಷ್ಟು ಧೈರ್ಯವಿರಲಿಲ್ಲ.

ಮಂಜಣ್ಣ ಬಂದವನೇ ಹಾವನ್ನು ನೋಡಿ "ಊ ಹು" ಎಂಬ ಉದ್ಗಾರ ತೆಗೆದ. ಅವನ ಅದ್ಗಾರಗಳಿಗೆ ಅವನೇ ಅರ್ಥ ಹೇಳಬೇಕು. ಅದೊಂದು ವಿಷವಿಲ್ಲದ ಸಾಮಾನ್ಯ ಹಾವು ಎಂದು ಆ ಉದ್ಗಾರವೋ ಅಥವಾ ಅದು ಭಯಂಕರ ವಿಷವಿರುವ ಕಾರ್ಕೋಟಕ ಎಂದು ಆ ಉದ್ಗಾರವೋ ನರ ಮನುಷ್ಯರಾದ ನಮಗೆ ಹೇಗೆ ತಿಳಿಯಬೇಕು. ಅಡುಗೆ ಮನೆಗೆ ಹೋಗಿ ಇಕ್ಕಳ ತೆಗೆದುಕೊಂಡು ಬಂದು "ನಾನು ಹಾವನ್ನು ಸಂದಿಯಿಂದ ಜಗ್ಗಿ ತೆಗೆಯುತ್ತೇನೆ. ನೀವು ದೊಣ್ಣೆಯಿಂದ ಜಪ್ಪಿ ಸಾಯಿಸಿರಿ" ಎಂದ. ನಾವು ಮೂವರೂ ಕೈಯಲ್ಲಿ ಒಂದೊಂದು ದೊಣ್ಣೆ ಹಿಡಿದುಕೊಂಡು ತಯಾರಾಗಿ ನಿಂತೆವು. ಮಂಜಣ್ಣನು ಇಕ್ಕಳವನ್ನು ಸಂದಿಯ ಹತ್ತಿರ ತೆಗೆದುಕೊಂಡು ಹೋಗಿದ್ದೇ ತಡ ದೊಣ್ಣೆ ಹಿಡಿದಿದ್ದ ಇಬ್ಬರೂ ಶೀದ ಅಂಗಳದಲ್ಲಿ. ಸಂದಿಯಿಂದ ಹಾವನ್ನು ಹೊರಗೆ ಎಳೆದು ನೆಲದ ಮೇಲೆ ಹಾಕಿ, ಮಂಜಣ್ಣನೂ ಒಂದು ದೊಣ್ಣೆ ತೆಗೆದುಕೊಂಡು ಹಾವನ್ನು ಜಪ್ಪಿದ. ನಾವಿಬ್ಬರೂ ಹಾವನ್ನು
ಸಾಯಿಸಿದಮೇಲೆ ಮಂಜಣ್ಣ ದೊಣ್ಣೆಯಲ್ಲಿ ಹಾವನ್ನು ಹೊರಗೆ ತೆಗೆದುಕೊಂಡು ಹೋದಮೇಲೆ ಚಿಕ್ಕಪ್ಪಂದಿರು ಸಹಜವಾಗಿ ಉಸಿರಾಡಿದರು. ಅದು ಯಾವ ಜಾತಿಯ ಹಾವು ಎಂದು ಕೇಳಿದ್ದಕ್ಕೆ "ಸುರಗನ್ದಡಿಯ" ಎಂದು ಹೇಳಿದ ಮಂಜಣ್ಣ. ನಾನು ಮೊದಲ ಬಾರಿಗೆ ಆ ಹೆಸರನ್ನು ಕೇಳಿದ್ದೆ. ಮರುದಿನದಿಂದ ಪೂಜೆಗೆ ಕುಳಿತುಕೊಳ್ಳುವಾಗ ದೊಡ್ಡ ಗ್ಯಾಸ್ ಲೈಟ್ ಹಚ್ಚಿಕೊಂಡೆ ಕುಳಿತುಕೊಳ್ಳುತಿದ್ದ ಚಿಕ್ಕಪ್ಪ. ಅವನ ಹೆದರಿಕೆಗೆ ಯಾರೂ ಅರ್ಧ ಅಡಕೆಯ ಕಿಮ್ಮತ್ತೂ ಕೊಡಲಿಲ್ಲ.