Friday, January 24, 2014

ಅರವಿಂದ

               ಇವತ್ತು ಬೆಳಿಗ್ಗೆ ಕೇಳಿದ ಸುದ್ದಿ ತುಂಬಾ ಅಘಾತಕಾರಿಯಾಗಿತ್ತು. ನನಗಿಂತ ಮೂರು ವರ್ಷ ಹಿರಿಯವನಾದ ಅರವಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ. ಅರವಿಂದನಂತಹ ಮನುಷ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನುವುದು ಸುಲಭಕ್ಕೆ ನಂಬಲಿಕ್ಕೆ ಆಗದಂತಹ ವಿಷಯ. ಅವನನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ಅಘಾತವಾಗದಿರದು. ತುಂಬಾ ಗಟ್ಟಿ ಮನಸ್ಸಿನ, ಛಲವಿರುವ, ಜೀವನ ಪ್ರೀತಿಯಿದ್ದ ಮನುಷ್ಯ. ಆತ್ಮಹತ್ಯೆ ಮಾಡಿಕೊಳ್ಳುವಸ್ಟು ದುರ್ಬಲನಾಗಿರಲಿಲ್ಲ. ಕೊನೇಪಕ್ಷ ನಾನು ಅವನನ್ನು ನೋಡುತ್ತಿರುವವರೆಗೂ ದುರ್ಬಲನಾಗಿರಲಿಲ್ಲ.

         ಅರವಿಂದನೆಡೆಗೆ ಒಂದು ತೆರನಾದ ಗೌರವವಿತ್ತು. ನನ್ನ ಅಣ್ಣನ ಸಹವರ್ತಿಯಾಗಿದ್ದ ಅವನು ನಾನು ಚಿಕ್ಕವನಿದ್ದಾಗಿಂದಲೂ ಒಡನಾಟಕ್ಕೆ ಸಿಗುತ್ತಿದ್ದ. ಓದಿನಲ್ಲಿ ಚುರುಕಾಗಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಪಿ ಯು ಸಿ ಗೆ ಓದನ್ನು ನಿಲ್ಲಿಸಿದ್ದ. ಹೈ ಸ್ಕೂಲ್ ನಲ್ಲಿ ಓದಿನ ಜೊತೆಗೆ ಉಳಿದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ. ಚದುರಂಗ ಆಟವನ್ನು ತುಂಬಾ ಚೆನ್ನಾಗಿ ಆಡುತ್ತಿದ್ದ. ಆ ಆಟದ ಆಸಕ್ತಿ ಅವನಿಗೆ ಈಗಲೂ ಇತ್ತು ಎಂಬುದು ಅವನ ಫೇಸ್ಬುಕ್ ಫೋಟೋ ಗಳಿಂದ ತಿಳಿದಿತ್ತು.

            ಚಿಕ್ಕವನಿರುವಾಗ ಉರವರು ಯಾರು ಯಾರನ್ನೋ ನಮಗೆ ಉದಾಹರಿಸಿ "ಅವನನ್ನು ನೋಡಿ ಕಲಿಯಿರಿ" ಎನ್ನುತ್ತಿದ್ದರು. ಅವರೋ ತಾನು ಊರಿನಿಂದ ಹೊರಗಿರುವುದರಿಂದ ಮನೆಯ ಅಂಗಳಕ್ಕಿಳಿಯಬೇಕಾದರೂ ಚಪ್ಪಲಿ ಮೆಟ್ಟಿ ಇಳಿಯುತ್ತಿದ್ದವರು. ತಮ್ಮನ್ನು ತಾವು ಏನಂದುಕೊಂಡಿದ್ದರೋ ಗೊತ್ತಿಲ್ಲ, ಸಿಕ್ಕಾಗ ತುಂಬಾ ವ್ಯಂಗ್ಯವಾಗಿ ಮಾತನಾಡುತ್ತಿದ್ದರು. ಅರವಿಂದನು ಕಷ್ಟಪಟ್ಟು ಹಂತ ಹಂತವಾಗಿ ಸಾಧಿಸಿದ್ದ ಯಶಸ್ಸು ಊರವರ ಕಣ್ಣಿಗೆ ಬೀಳಲಿಲ್ಲ. ಹಾಲಿನ ಡೈರಿಯಲ್ಲಿ ಕುಳಿತುಕೊಂಡು ಊದಿನಕಡ್ಡಿ, ಕರ್ಪೂರಗಳನ್ನು ಮಾರುವುದರಿಂದ ತನ್ನ ವ್ಯಾವಹಾರಿಕ ಬದುಕನ್ನು ಪ್ರಾರಂಭಿಸಿದ್ದ. ನಂತರ ಅಡಿಕೆ ವ್ಯಾಪಾರಿಯಾಗಿದ್ದ ಚಿಕ್ಕಪ್ಪನಿಂದ ಹಣವನ್ನು ಎರವಲು ಪಡೆದುಕೊಂಡು ಚಿಕ್ಕದಾಗಿ ಕೊಳೆ ಅಡಿಕೆ ವ್ಯಾಪಾರ ಪ್ರಾರಂಭಿಸಿದ. ಊರಿನ ಪ್ರತಿ ಮನೆಯ ಬಾಗಿಲಿಗೂ ಹೋಗಿ ಚೌಕಾಸಿ ಮಾಡಿ ಕೊಳೆ ಅಡಿಕೆ ಕೊಳ್ಳುತ್ತಿದ್ದ. ಊರವರು ಅವನ ಚೌಕಾಸಿಗೆ ಬಯ್ದರೂ ರೆವನಕಟ್ಟೆ ವ್ಯಾಪಾರಿಗಳಿಗೆ ಕೊಳೆ ಅಡಿಕೆ ಕೊಡದೇ ಅರವಿಂದನಿಗೆ ಕೊಡುತ್ತಿದ್ದರು.

                ಕೊಳೆ ಅಡಿಕೆ ವ್ಯಾಪಾರದಿಂದ ನಿಧಾನವಾಗಿ ಅಡಿಕೆ ವ್ಯಾಪಾರಿಯಾದ. ಚಿಕ್ಕಪ್ಪನ ನೆರಳಿನಿಂದ ಹೊರಬಂದು ಸ್ವತಹ ಟೆಂಡರ್ ಬರೆಯುವಷ್ಟು ದೊಡ್ಡ ವ್ಯಾಪಾರಿಯಾಗಿ ಬೆಳೆದಿದ್ದ. ಸಿರ್ಸಿಯಲ್ಲಿಯೆ ಮನೆ ಮಾಡಿ ಅಸ್ತಮ ರೋಗಿಯಾಗಿದ್ದ ಅಪ್ಪನನ್ನು ಅಲ್ಲಿಯೇ ಕರೆಸಿಕೊಂಡಿದ್ದ. ಊರಿನಲ್ಲಿಯೇ ಇದ್ದು, ಸಾಧಿಸಿ ತೋರಿಸಿದ್ದ. ಇದು ನಮ್ಮೂರಿನ ಅನೇಕರ ಕಣ್ಣಿಗೆ ಉದಾಹರಿಸಬಹುದಾಗಿದ್ದ ಸಾಧನೆಯೇ ಅಲ್ಲ! ಪಿ ಯು ಸಿ ಮುಗಿದಾಗ ತನ್ನ ಓರಗೆಯ ವಯಸ್ಸಿನ ಹುಡುಗರೆಲ್ಲರೂ ಮುಂದಿನ ವಿದ್ಯಾಭ್ಯಾಸಕ್ಕೆ ಬೆಂಗಳೂರು, ಧಾರವಾಡ ಎಂದು ಹೋಗುತ್ತಿರಬೇಕಾದರೆ ಅವನು ಎಷ್ಟು ನೋವನ್ನು ಅನುಭವಿಸಿದ್ದನೊ? ಊದಿನ ಕಡ್ಡಿ ವ್ಯಾಪಾರ ಪ್ರಾರಂಭಿಸಿದಾಗ ಯಾರ್ಯಾರು ಎಷ್ಟು ಹೀಯಾಳಿಸಿದ್ದರೋ? ಕೊಳೆ ಅಡಿಕೆ ಕೊಳ್ಳುವಾಗ ಮಾಡಿದ ಚೌಕಾಸಿಯಿಂದಾಗಿ ಎಷ್ಟು ಬಯ್ಸಿಕೊಂಡಿದ್ದನೋ? ಆರ್ಥಿಕ ಮುಗ್ಗಟ್ಟು, ಅವಕಾಶದ ಕೊರತೆ ಹೀಗೆ ಅನೇಕ ಅಡೆತಡೆಗಳನ್ನು ಎದುರಿಸಿಯೂ ಊರಿನಲ್ಲಿದ್ದುಕೊಂಡೇ ಸಾಧಿಸಿದ.

                ಚೆಸ್ಸಿನಾಟದ ಜೊತೆಗೆ ಸಾಹಿತ್ಯದಲ್ಲೂ ಆಸಕ್ತಿ ಇಟ್ಟುಕೊಂಡಿದ್ದ. ಕವನಗಳನ್ನು ಬರೆಯುತ್ತಿದ್ದ. ಈಗೊಂದಷ್ಟು ದಿನಗಳ ಹಿಂದೆ ಅವನು ಬರೆದಿದ್ದ ಕಥೆ, ಕಾದಂಬರಿ ಮತ್ತು ಕವನ ಸಂಕಲನಗಳ ಪುಸ್ತಕ ಬಿಡುಗಡೆಯಾಗಿದ್ದವು. ಅವನ ಕವನಗಳಿಗೆ ಕುಶಾಲು ಮಾಡುತ್ತಿದ್ದರೂ ಅವನ ಬಗ್ಗೆ ಗೌರವವಿತ್ತು. ಊರಿನ ತೇರು, ದೀಪಾವಳಿ ಹಬ್ಬ ಹೀಗೆ ಕೆಲವುಸಲ ನಾನು ಊರಿಗೆ ಹೋದಾಗ ಸಿಗುತ್ತಿದ್ದ, ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದ. ಅಣ್ಣಯ್ಯನ ಬಗ್ಗೆ ವಿಚಾರಿಸುತ್ತಿದ್ದ.

ದೇವರು ಅವನ ಆತ್ಮಕ್ಕೆ ಶಾಂತಿ ನೀಡಲಿ. ಅವನ ಮನೆಯವರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ.

1 comment:

  1. ಅರವಿಂದನ ಆತ್ಮಹತ್ಯೆ ನಿಜಕ್ಕೂ ಕಳವಳಕಾರಿ ಸಂಗತಿಯೇ ಸೈ. ಬೆಳಗ್ಗೆ ಸುದ್ದಿ ಕೇಳಿದಾಗ 'ದೇವರೇ ಇದು ಸುಳ್ಳಾಗಿರಲಿ' ಎಂದು ಬೇಡಿಕೊಂಡಿದ್ದೆ. ಆದರೆ ಬೇಡಿಕೆ ಫಲಿಸಲಿಲ್ಲ. ತಿರುಗಿ ಬಾರದ ಊರಿಗೆ ಹೇಳದೆ ಹೋದ ಬಾಲ್ಯದ ಗೆಳೆಯನ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಮನೆಯವರಿಗೆ ಈ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿ ಒದಗಲಿ.

    ReplyDelete