Tuesday, November 18, 2014

ಕರೆಯದ ತಿರುಗಾಟ

ಮಂಗಳ ಕಾರ್ಯಗಳಿಗೆ ಬಂಧು ಬಳಗವನ್ನು ಆಮಂತ್ರಿಸಲು ಹೋಗುವುದೂ ಒಂದು ಜೀವನಾನುಭವ! ಬಹಳ ಸರ್ತಿ ನಾನು ಈ ಜೀವನಾನುಭವವನ್ನು ಅನುಭವಿಸಿದ್ದಿದೆ. ಅದರ ಮಜವೇ ಬೇರೆ. ಯಾರಲ್ಲೋ ದಾರಿ ಕೇಳುವುದು, ಮನೆಯನ್ನು ಹುಡುಕಿಕೊಂಡು ಹೋಗುವುದು, ಹೋದ ಮನೆಯಲ್ಲಿ ನಮ್ಮ ಪರಿಚಯ ಹೇಳಿಕೊಳ್ಳುವುದು, ಅಲ್ಲಿ ಆಸರಿಗೆ ಊಟ ಮಾಡುವುದು ಎಲ್ಲವೂ ಒಂದೊಂದು ನಮೂನೆಗಳೇ. ಅದರಲ್ಲೂ ಕೆಲವು ಪ್ರಸಂಗಗಳು ಮೆಲುಕು ಹಾಕಿದಷ್ಟೂ ಸ್ವಾರಸ್ಯವಾಗುತ್ತಾ ಹೋಗುತ್ತವೆ.

ಮನೆಯವರು ಕೂತು ಬಳಗದ ಲಿಸ್ಟ್ ಮಾಡಿ ಕೊಡುತ್ತಾರೆ. ಅದರಲ್ಲಿ ನಮಗೆ ಪರಿಚಯ ಇರುವ ನೆಂಟರು ಬಹಳ ಕಡಿಮೆ. ಸಂಬಂಧಗಳ ಬಾವಿಯಲ್ಲಿ ಆಳಕ್ಕೆ ಇಳಿದು ದೂರ ದೂರದ ನೆಂಟರನ್ನೂ ನೆನಪು ಮಾಡಿಕೊಂಡು ಹೆಕ್ಕಿ ತೆಗೆದು ಬರೆದು ಕೊಟ್ಟಿರುತ್ತಾರೆ. ಏನಾದರೂ ಇವರು ನಮಗೆ ಹೇಗೆ ಸಂಬಂಧ ಎಂದು ಕೇಳಿದರೆ ಮುಗಿಯಿತು, ಅವರ ವಂಶವ್ರಕ್ಷವನ್ನೇ ನಮ್ಮ ಕಣ್ಣೆದುರು ಹಿಡಿದು ಅದನ್ನು ನಮ್ಮ ಮನೆಯ ವಂಶವ್ರಕ್ಷಕ್ಕೆ ತಳಿಕೆ ಹಾಕಿ ಆಧ್ಯಾತ್ಮದ ಚಿಂತನೆ ಮಾಡುವ ಅನಿವಾರ್ಯತೆ ತಂದೊಡ್ಡುತ್ತಾರೆ. ಇದು ಬಿಡಿ. ಕೆಲವು ಸಲ ನಾವು ಹೋದ ಮನೆಯವರಿಗೇ ಇವ ಅದು ಹೇಗೆ ನಮಗೆ ಸಂಬಂಧ ಎಂಬುದು ತಿಳಿಯುವುದಿಲ್ಲ.

ಗೊತ್ತಿಲ್ಲದ ಮನೆಗೆ ದಾರಿಯನ್ನು ಕೇಳುತ್ತಲೇ ಹೋಗಬೇಕು. ಕೆಲವೊಮ್ಮೆ ಕೆಲವರು ದಾರಿ ಹೇಳುವ ಮೊದಲು ನಮ್ಮ ಮನೆಯ ವಿವರ ಕೇಳುತ್ತಾರೆ. ಅದನ್ನು ಕೇಳುತ್ತಲೇ "ಓ ನೀನು ಅವನ ಮಗನ? ಅವ ನನ್ನ ನಾದಿನಿಯ ಷಡಕ ಆಗ್ತಾ" ಎಂದೋ ಅಥವಾ "ನನ್ನ ಷಡಕನ ಅಜ್ಜನ ಮನೆ ನಿನ್ನ ಅಪ್ಪನ ಅಜ್ಜನ ಮನೆ ಎರಡು ಒಂದೆಯಾ" ಎಂದೋ ಹೇಳಿ ಅವರ ಮನೆಗೆ ಕರೆದೊಯ್ಯುತ್ತಾರೆ. ಅಲ್ಲಿ ಆಸರಿಗೆ ಕುಡಿದು ಮಂಗಳ ಕಾರ್ಯಕ್ಕೆ ಆಮಂತ್ರಿಸಿ ಹೊರಟು ಹೋದಮೇಲೆ ತಿಳಿಯುತ್ತದೆ, ನಮ್ಮ ಲಿಸ್ಟಿನಲ್ಲಿ ಅವರ ಹೆಸರೇ ಇಲ್ಲ ಎಂಬುದು.

ಹೋದ ಎಲ್ಲ ಮನೆಗಳಲ್ಲೂ ಆಸರಿಗೆ ಕುಡಿಯಲೇ ಬೇಕು. ಯಾವ ಮನೆಯವರೂ ಹಾಗೆ ಕಳುಹಿಸುವುದಿಲ್ಲ. ನಮಗೆ ಬೇಕೋ ಬೇಡವೋ ಅನ್ನುವುದು ಲೆಕ್ಕಕ್ಕೆ ಇಲ್ಲ. ತುಂಬಾ ಕಡೆ ಆಸರಿಗೆ ಆಗಿದೆ ಅಂದರೆ ಅವಷ್ಟರ ಜೊತೆ ಇನ್ನೊಂದು ಅರ್ದ ಕಪ್ ಚಹ ಹೆಚ್ಚಲ್ಲ ಎಂದು ಕುಡಿಸಿಯೇ ಕಳುಹಿಸುತ್ತಾರೆ. ನಮ್ಮ ಗ್ರಹಚಾರ ಸರಿ ಇಲ್ಲದಿದರೆ ಕೆಲವರು ರವೆ ಶಿರ ಕಾಯಿಸಿ ಬಡಿಸುತ್ತಾರೆ. ಇಂತಹ ಆಸರಿಗೆಗಳ ಮಧ್ಯೆ ಊಟ ಮಾಡಲಾಗುವುದೇ? ಮಧ್ಯಾಹ್ನದ ಹೊತ್ತಲ್ಲಿ ಖಾಲಿ ಬಸ್ ಸ್ಟಾಪ್ ನಲ್ಲೋ ಅಥವಾ ಶಾಲೆ ಮನೆಯ ವರಾಂಡದಲ್ಲೋ ಕುಳಿತು ಊಟದ ಹೊತ್ತು ಮೀರಿದ ಮೇಲೆ ಮುಂದಿನ ಮನಗೆ ಹೋಗಿದ್ದಿದೆ. ಸತತ ಮೂರನೆ ದಿನ ಇಂತಹ ತಿರುಗಾಟದ ಪರಿಣಾಮ ಹೊಳೆ ಕಂಡಲ್ಲೆಲ್ಲ ಬೈಕ್ ನಿಲ್ಲಿಸುವ ತಾಪತ್ರಯವಗಿತ್ತು.

ಸಮಯದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವ ಉದ್ದೇಶದಲ್ಲಿ ಬೈಕನ್ನು ಜೋರಾಗಿ ಬಿಡುತ್ತಿದ್ದ ನನ್ನ ಜೋಸ್ತನಿಗೆ "ಟೊಪ್ಪಿ ಜಾರಿ ಹೋಯಿತು" ಎಂದು ಹೇಳಿದ್ದು "ದಾರಿ ತಪ್ಪಿ ಹೋಯಿತು" ಎಂದು ಕೇಳಿ ದೊಡ್ಡ ಭಾನಗಡೆಯೇ ಆಗಿತ್ತು. ಆಸರಿಗೆಯ ಹೊಡೆತ ತಪ್ಪಿಸಿಕೊಳ್ಳಲು ಒಬ್ಬರನ್ನು ಬೈಕಿನ ಹತ್ತಿರವೇ ನಿಲ್ಲಿಸಿ, ಅವನನ್ನು ಬಾಡಿಗೆ ಬೈಕಿನವ ಎಂದು ಹೇಳಿದ್ದೂ ಇದೆ. ಕಾರ್ಯಕ್ಕೆ ಎಲ್ಲರನ್ನೂ ಕರೆದೂ ಕರೆದು ಅದೆಷ್ಟು ಅಭ್ಯಾಸವಾಗುತ್ತದೆ ಅಂದರೆ ಯಾರಲ್ಲೋ ದಾರಿ ಕೇಳಿ ಅವನ ಹತ್ತಿರವೂ "ಬನ್ನಿ ನಮ್ಮ ಮನೆಗೆ" ಎಂದು ಕರೆದದ್ದೂ ಇದೆ. ಆಶ್ಚರ್ಯ ಇದಲ್ಲ. ದಾರಿ ಹೇಳಿದವನೂ ಸಹ "ಅಡ್ಡಿಲ್ಲೆ, ನೀವೂ ಬನ್ನಿ" ಅಂದಿದ್ದು.

ಒಂದು ಮನೆಯಲ್ಲಿ ಆಸರಿಗೆ ಕುಡಿದು ಕೈ ತೊಳೆದು ಹೊರಗೆ ಬರುತ್ತಿರುವಾಗ ಹಾಸಗೆಯಲ್ಲಿ ಮಲಗಿದ್ದ ಅಜ್ಜಿಯೊಬ್ಬಳು ಬಂದವರು ಯಾರು ಎಂದು ಕೇಳಿದಳು. ನಾನು ಸಹಜವಾಗಿಯೇ ನಮ್ಮನೆಯ ಹೆಸರು ಹೇಳಿದೆ. ಆಗ ಕಷ್ಟಪಟ್ಟು ಎದ್ದು ಕುಳಿತ ಅವಳು "ನೀನು ಗಪ್ಪಿಯ ಮೊಮ್ಮಗನ?" ಎಂದು ಕೇಳಿ, ಹತ್ತಿರ ಕೂರಿಸಿಕೊಂಡು ತಲೆ ನೆವರಿಸಿದ್ದಳು. ಒಮ್ಮೆ ನೋಡಿದರೂ ನೆನಪಿಟ್ಟುಕೊಂಡು ಆಮೇಲೆ ಎಲ್ಲಿ ಸಿಕ್ಕಿದರೂ ಪ್ರೀತಿಯಿಂದ ಮಾತನಾಡಿಸುವ ಜನರು ಬಹಳ.

ಕರೆಯದ ಈ ತಿರುಗಾಟದಲ್ಲಿ ಚಿಕ್ಕ ಪುಟ್ಟ ತೊಂದರೆ ಇದ್ದರೂ ಹೊಸ ಜನರನ್ನು, ಊರನ್ನು ನೋಡುವ ಅವಕಾಶ ಸಿಗುತ್ತದೆ. ಅದೃಷ್ಟ ಚೆನ್ನಾಗಿದ್ದರೆ ಮುಂದೆ ಯಾವಾಗಲಾದರೂ ಅವರಲ್ಲಿ ಕೆಲವರ ಕವನವನ್ನೂ ಒದಲೂಬಹುದು.


No comments:

Post a Comment