Sunday, April 5, 2015

ಹಾವಿನ ಪ್ರಹಸನ

ಮಳೆ ನಾಡಿನಲ್ಲಿ ಹಾವುಗಳಿಗೆ ಬರಗಾಲವೇ? ನಾನಾ ತರಹದ ಹಾವುಗಳನ್ನು ಅಲ್ಲಿ ನೋಡಬಹುದು. ಗಿಡಗಳಮೇಲೆ ಎಲೆಯಬಣ್ಣ ಇರುವ ಹಸುರು ಹಾವು, ಕೊಳೆಯುವ ವಿಷವಿರುವ ಕುದುರ್ಬೆಳ್ಳ, ಗೋಧಿ ಬಣ್ಣದಲ್ಲಿ ಸುಂದರವಾಗಿರುವ ಸರ್ಪ ಹೀಗೆ ಅನೇಕ ಜಾತಿಯ ಹಾವುಗಳು ಅಲ್ಲಿವೆ. ಕೆರೆ ಹಾವುಗಳಿಗಂತೂ ಬರಗಾಲವೇ ಇಲ್ಲ.

ನನ್ನ ವಾರಗೆಯ ನಮ್ಮೂರಿನ ಇಬ್ಬರಿಗೆ ಹಾವುಗಳೆಂದರೆ ವಿಪರೀತ ಹೆದರಿಕೆ. ಮಳೆ ನಾಡಿನವರಾದರೂ ಅಷ್ಟೊಂದು ಹೇಗೆ ಹೆದರುತ್ತಾರೋ ಗೊತ್ತಿಲ್ಲ. ಹಾವುಗಳು ಯಾವುದಕ್ಕೂ ಬೇಕಾಗದ ಅನವಶ್ಯಕ ಜೀವಜಂತುಗಳೆಂದು ಅವರಿಬ್ಬರೂ ಠರಾವು ಪಾಸು ಮಾಡಿಯಾಗಿದೆ. ಹಾವು ಎಂದರೆ ಸಾಕು ಎಲ್ಲಿ ಎಂದು ಕೇಳುತ್ತ ಮೂರು ತುಂಡುಗುಪ್ಪಣ ಹೊಡೆಯುತ್ತಾರೆ.

ಇದೇ ತರಹ ಹೆದರುಪುಕ್ಕಲನಾದ ಪಕ್ಕದಮನೆಯ ಚಿಕ್ಕಪ್ಪನ ಮನೆಗೆ ಒಮ್ಮೆ ಹಾವು ಬಂದಿತ್ತು. ಪಕ್ಕದೂರಿನಲ್ಲಿ ಒಮ್ಮೆ ಕಾಳಿಂಗ ಬಂದಾಗ ಅಜಮಾಸು ನಾಲ್ಕು ಫರ್ಲಾಂಗು ದೂರ ನಿಂತುಕೊಂಡೇ ಕೂಗಿದ ಅಸಾಮಿ ಆವಾ. ಹಳೆಯ ಕಾಲದ ಮಣ್ಣು ಗೋಡೆಯ ದೇವರ ಮನೆಯೊಳಗೆ ದೊಡ್ಡ ದೇವರ ಪೀಠ ಇದೆ. ಆ ದೇವರ ಪೀಠಕ್ಕೂ ಗೋಡೆಗೂ ಮದ್ಯೆ ಇರುವ ಸಂದಿನಲ್ಲಿ ಯಾವುದೋ ಹೊಸ ಜಾತಿಯ ಹಾವು ಸೇರಿಕೊಂಡಿತ್ತು. ಹಗಲಿನಲ್ಲೂ ಬೆಳಕಿನ ಸೆಲೆ ಇಲ್ಲದ ದೇವರ ಮನೆಯಲ್ಲಿ ಪೂಜೆ ಮಾಡುತ್ತಿದ್ದ ಚಿಕ್ಕಪ್ಪನಿಗೆ ಹಾವು ಕಣ್ಣಿಗೆ ಬಿತ್ತು. ಅರ್ಧಂಬರ್ಧ ಬಿಚ್ಚಿದ ಮಡಿಯೊಳಗೆ ಹೊರಗೆ ಓಡಿ ಬಂದು ಹಾವು ಹಾವು ಎಂದು ಕಿರುಚಿದಕೂಡಲೇ ಹೆಚ್ಚಿನ ಜನರು ಯಾವುದೋ ಕೆರೆ ಹಾವು ನೋಡಿ ಹೆದರಿದ್ದಾನೆ ಎಂದೇ ಭಾವಿಸಿದರು.

ಅವನ ಸಮಾಧಾನಕ್ಕೋಸ್ಕರ ನಾನು ಮತ್ತಿಬ್ಬರು ಚಿಕ್ಕಪ್ಪಂದಿರು ಪವರ್ ಫುಲ್ ಬ್ಯಾಟರಿ ತೆಗೆದುಕೊಂಡು ದೇವರ ಮನೆಗೆ ಹೋಗಿ ಹಾವನ್ನು ಹುಡುಕಿದಾಗ ಕಂಡಿತು. ಏನೇ ಸಪ್ಪಳ ಮಾಡಿದರೂ ಸಂದಿಯಿಂದ ಹೊರಗೆ ಬರುತ್ತಿರಲಿಲ್ಲ. ಹೊಸ ಜಾತಿಯ ಹಾವಾಗಿದ್ದರಿಂದ ಯಾರೂ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ತೀರ್ಮಾನವಾಗಿ ಅದನ್ನು ಹೊರಗೆ ಹಾಕುವುದು ಹೇಗೆ ಎಂಬ ಸಮಸ್ಯೆಗೆ ಎಲ್ಲರಿಗೂ ನೆನಪಾಗಿದ್ದು ಮಂಜಣ್ಣ.

ಮಂಜಣ್ಣ ನಮ್ಮ ಸುತ್ತಮುತ್ತಲಿನ ಊರುಗಳಲ್ಲಿ ಹಾವು ಹಿಡಿಯುವುದರಲ್ಲಿ ಎತ್ತಿದ ಕೈ. ಅಮಾವಾಸ್ಯೆಯ ಕತ್ತಲಿನಲ್ಲೂ ಕೈಯಲ್ಲಿ ಬ್ಯಾಟರಿ ಇದ್ದರೂ ಕಪ್ಪಿನಲ್ಲೇ ನಡೆದುಕೊಂಡು ಹೋಗುವಂತ ಧೈರ್ಯವಂತ. ಅವನಿಗೆ ಫೋನಾಯಿಸಿದಾಗ ಬರುತ್ತೇನೆಂದ. ಅವನು ಬರುವ ವರೆಗೆ ಹಾವು ಅಲ್ಲೇ ಇರುವಂತೆ ನೋಡಿಕೊಳ್ಳಬೇಕು. ಅದೇನಾದರೂ ಅಲ್ಲಿಂದ ಹೊರಬಿದ್ದು ನಾಗಂತಿಕೆ ಮೇಲಿದ್ದ ಕರಡಿಗೆಗಳ ಮಧ್ಯೆ ಸೇರಿಕೊಂಡು ಬಿಟ್ಟಿತೆಂದರೆ ಅದನ್ನು ಹುಡುಕುವುದು ಹವ್ಯಕ ಮಾಣಿಗೆ ಕೂಸು ಹುಡುಕುವುದಕ್ಕಿಂತ ಕಷ್ಟ. ಎಲ್ಲರೂ ಸೇರಿ ನನಗೆ ಸಂದಿಯಲ್ಲಿ ಬ್ಯಾಟರಿ ಬಿಟ್ಟು ಬೆಳಕು ಮಾಡಿಕೊಂಡಿರು ಎಂದು ಹುಕುಂ ಮಾಡಿದರು. ನನಗೆ ಏಕೆ ಹೇಳಿದರೆಂದರೆ ಅವರ್ಯಾರಿಗೂ ಅಲ್ಲಿ ನಿಂತುಕೊಳ್ಳುವಷ್ಟು ಧೈರ್ಯವಿರಲಿಲ್ಲ.

ಮಂಜಣ್ಣ ಬಂದವನೇ ಹಾವನ್ನು ನೋಡಿ "ಊ ಹು" ಎಂಬ ಉದ್ಗಾರ ತೆಗೆದ. ಅವನ ಅದ್ಗಾರಗಳಿಗೆ ಅವನೇ ಅರ್ಥ ಹೇಳಬೇಕು. ಅದೊಂದು ವಿಷವಿಲ್ಲದ ಸಾಮಾನ್ಯ ಹಾವು ಎಂದು ಆ ಉದ್ಗಾರವೋ ಅಥವಾ ಅದು ಭಯಂಕರ ವಿಷವಿರುವ ಕಾರ್ಕೋಟಕ ಎಂದು ಆ ಉದ್ಗಾರವೋ ನರ ಮನುಷ್ಯರಾದ ನಮಗೆ ಹೇಗೆ ತಿಳಿಯಬೇಕು. ಅಡುಗೆ ಮನೆಗೆ ಹೋಗಿ ಇಕ್ಕಳ ತೆಗೆದುಕೊಂಡು ಬಂದು "ನಾನು ಹಾವನ್ನು ಸಂದಿಯಿಂದ ಜಗ್ಗಿ ತೆಗೆಯುತ್ತೇನೆ. ನೀವು ದೊಣ್ಣೆಯಿಂದ ಜಪ್ಪಿ ಸಾಯಿಸಿರಿ" ಎಂದ. ನಾವು ಮೂವರೂ ಕೈಯಲ್ಲಿ ಒಂದೊಂದು ದೊಣ್ಣೆ ಹಿಡಿದುಕೊಂಡು ತಯಾರಾಗಿ ನಿಂತೆವು. ಮಂಜಣ್ಣನು ಇಕ್ಕಳವನ್ನು ಸಂದಿಯ ಹತ್ತಿರ ತೆಗೆದುಕೊಂಡು ಹೋಗಿದ್ದೇ ತಡ ದೊಣ್ಣೆ ಹಿಡಿದಿದ್ದ ಇಬ್ಬರೂ ಶೀದ ಅಂಗಳದಲ್ಲಿ. ಸಂದಿಯಿಂದ ಹಾವನ್ನು ಹೊರಗೆ ಎಳೆದು ನೆಲದ ಮೇಲೆ ಹಾಕಿ, ಮಂಜಣ್ಣನೂ ಒಂದು ದೊಣ್ಣೆ ತೆಗೆದುಕೊಂಡು ಹಾವನ್ನು ಜಪ್ಪಿದ. ನಾವಿಬ್ಬರೂ ಹಾವನ್ನು
ಸಾಯಿಸಿದಮೇಲೆ ಮಂಜಣ್ಣ ದೊಣ್ಣೆಯಲ್ಲಿ ಹಾವನ್ನು ಹೊರಗೆ ತೆಗೆದುಕೊಂಡು ಹೋದಮೇಲೆ ಚಿಕ್ಕಪ್ಪಂದಿರು ಸಹಜವಾಗಿ ಉಸಿರಾಡಿದರು. ಅದು ಯಾವ ಜಾತಿಯ ಹಾವು ಎಂದು ಕೇಳಿದ್ದಕ್ಕೆ "ಸುರಗನ್ದಡಿಯ" ಎಂದು ಹೇಳಿದ ಮಂಜಣ್ಣ. ನಾನು ಮೊದಲ ಬಾರಿಗೆ ಆ ಹೆಸರನ್ನು ಕೇಳಿದ್ದೆ. ಮರುದಿನದಿಂದ ಪೂಜೆಗೆ ಕುಳಿತುಕೊಳ್ಳುವಾಗ ದೊಡ್ಡ ಗ್ಯಾಸ್ ಲೈಟ್ ಹಚ್ಚಿಕೊಂಡೆ ಕುಳಿತುಕೊಳ್ಳುತಿದ್ದ ಚಿಕ್ಕಪ್ಪ. ಅವನ ಹೆದರಿಕೆಗೆ ಯಾರೂ ಅರ್ಧ ಅಡಕೆಯ ಕಿಮ್ಮತ್ತೂ ಕೊಡಲಿಲ್ಲ.

4 comments: