Wednesday, December 28, 2011

ಶ್ರವಣಘಾತಕ ಕೃತ್ಯ

             ನಮ್ಮೂರಿನಲ್ಲೊಬ್ಬರಿಗೆ ಮಾತನಾಡುವಾಗ ಉದಾಹರಣೆಗಳನ್ನು ಕೊಡುವ ವಿಪರೀತ ಚಟ. ಮಾತು ಮಾತಿಗೂ ಏನಾದರೊಂದು ಉದಾಹರಿಸದಿದ್ದರೆ ಅವರಿಗೆ ಏನಾಗುವುದೋ ಗೊತ್ತಿಲ್ಲ. ಕೆಲವೊಂದು ಉದಾಹರಣೆಗಳು ಸಾಂದರ್ಭಿಕವಾಗಿದ್ದರೆ ಬಹಳಷ್ಟು ಅಸಂಬದ್ದ. ಅವರು ಸಂಸ್ಕ್ರತ, ಶಾಸ್ತ್ರ, ಪುರಾಣ ಮತ್ತು ಸಾಹಿತ್ಯಗಳನ್ನು ತುಂಬಾ ಓದಿಕೊಂಡಿರುವುದಕ್ಕೋ ಏನೋ ಬಹಳಷ್ಟು ಉದಾಹರಣೆಗಳು ಪ್ರಾರಂಭವಾಗುವುದೇ "ಮಹಾಭಾರತದ ...... ಸಮಯದಲ್ಲಿ..." ಅಂತ. ನನಗೋ, ಅವರು ರಾಮಾಯಣ, ಮಹಾಭಾರತದ ಉದಾಹರಣೆಗಳನ್ನು ಕೊಡಲು ಮುಂದಾದಾಗ ಇವರಿಗೆ ವಯಸ್ಸು ಸುಮಾರು ಎಷ್ಟು ಶತಮಾನಗಳಿರಬಹುದು ಎಂಬ "ಜಿಜ್ಞಾಸೆ" ತೊಡಗುತ್ತದೆ.

            ಊರಿನ ಬಹಳಷ್ಟು ಜನ ಅವರ ಹತ್ತಿರ ಮಾತನಾಡುವುದಕ್ಕೆ ಹೆದರುತ್ತಾರೆ ಏಕೆಂದರೆ ಅವರು ಸಮಯ ಸಂದರ್ಭ ನೋಡದೆ ಮಾತನಾಡಲು ತೊಡಗುತ್ತಾರೆ. ಮಾತನಾಡಲು ಇಂತಹ ವಿಷಯವೇ ಆಗಬೆಕೆನ್ದೆನೂ ಇಲ್ಲ, ಅನಲೇ ಕಾಯಿಂದ ಹಿಡಿದು ಭಗವದ್ಗೀತೆಯವರೆಗೂ ಎಲ್ಲೆಂದರಲ್ಲಿ ಮಾತನಾಡುವ ಚಾಕಚಕ್ಯತೆ ಅವರಿಗೆ ಮೊದಲಿಂದಲೂ ಸಿದ್ದಿಸಿದೆ ಎಂಬುದು ಹಲವು ಮದ್ಯವಯಸ್ಕರ ಅಂಬೋಣ.

        ಈಗೀಗ ಅವರಿಗೆ ಮಾತನಾಡಲು ಯಾರೂ ಸಿಗುವುದಿಲ್ಲ ಎಂತಲೇ ಅಪೂರ್ವಕ್ಕೆ ಸಿಕ್ಕ ಯಾರಿಗಾದರೂ ಎಡಬಿಡದೆ ಹಲವು ವಿಷಯಗಳನ್ನು ಊದಿ ಹುಡಿ ಹಾರಿಸಿಬಿಡುತ್ತಾರೆ. ಊರಿನ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅವರ ಪಕ್ಕ ಕೂತು ಎಲೆಯಡಿಕೆ ಹಾಕಲೂ ಅಡಿಕೆ ಮರ ಏರುವಾಗ ಹಪ್ರೇನಾವು ಕಂಡಷ್ಟು ಹೆದರುತ್ತಾರೆ.

       ಕೆಲವು ದಿನಗಳ ಹಿಂದೆ ನನ್ನೊಬ್ಬ ಗೆಳೆಯನಿಗೆ ಅದಾವುದೋ ಹಳೆಯ ಸಾಹಿತ್ಯಕಾರರ ಕೃತಿಗಳ ಬಗ್ಗೆ ಏನೋ ಸಂದೇಹವು ಉಂಟಾದಾಗ ಪರಿಹಾರ ಮಾರ್ಗ ಒಂದೇ ಒಂದಿದೆ ಎಂದ ಅದೂ ನಿನ್ನೋಬ್ಬನಿಂದ ಮಾತ್ರ ಸಾದ್ಯ ಎಂದ. ನಾನೂ ಉತ್ಸುಕನಾಗಿ ಯಾವ ಮಾರ್ಗ ಎಂದು ಕೇಳಿದಾಗಲೇ ನನಗೆ ಗೊತ್ತಾದದ್ದು, ಹೌಹಾರಿದ್ದು. ನನ್ನ ಗೆಳೆಯನಿಗೆ ಇಂತಹ ಭಯೋತ್ಪಾದಕ ಯೋಚೆನೆಗಳೂ ಇವೆ ಎಂದು. ಅವನು ಹೇಳಿದ್ದೆಂದರೆ ನಮ್ಮೂರಿನಲ್ಲಿ ವಿಶ್ವ ವಿಖ್ಯಾತರಾಗಿರುವವರ ಹತ್ತಿರ ಅವನ ಸಂದೇಹಕ್ಕೆ ಉತ್ತರ ಕೇಳು ಎಂಬುದಾಗಿತ್ತು. ಎರಡು ಕಿವಿ ಸರಿಯಾಗಿರುವವರಾರೂ ಇಂತಹ ಶ್ರವಣಘಾತಕ ಕೆಲಸಕ್ಕೆ ಕಿವಿ ಕೊಟ್ಟಾರೆ?

1 comment:

  1. aa mahonnata vyaktigala idee kutumbave ee rogadinda peeditavagide endare tappenilla!!

    ReplyDelete