Friday, February 17, 2012

ಚಳಿಗಾಲದ ಸ್ನಾನ

ಚಳಿಗಾಲದ ಚುಮು ಚುಮು ಚಳಿಯಲ್ಲಿ ಬೆಳಿಗ್ಗೆ ಕತ್ತಲಲ್ಲಿ ಬಿಸಿ ನೀರು ಸ್ನಾನ ಮಾಡುವುದೆಂದರೆ  ನನಗೆ ಬಹಳ ಇಷ್ಟ. ಊರಿನಲ್ಲಿ ಬೆಳಿಗ್ಗೆ ಬೇಗ ನೀರು ಕಾಯಿಸುತ್ತಾರೆ. ಬೆಳಿಗ್ಗೆ ಬೇಗ ಎದ್ದು ಬಿಸಿ ಬಿಸಿ ನೀರನ್ನು ತಲೆಯಮೇಲೆ ಹೊಯ್ದುಕೊಂಡರೆ ಏನೋ ಒಂಥರಾ ಖುಷಿ, ಮಜಾ. ಅದೆಷ್ಟು ಬಾರಿ ನಾನು ಹೀಗೆ ಮಜಾತೆಗೆದುಕೊಳ್ಳಲು ಹೋಗಿ ಅರ್ಧ ಮುಕ್ಕಾಲು ಗಂಟೆ ಸ್ನಾನ ಮಾಡಿದ್ದಿದೆ ಮತ್ತು ಅರ್ಧ ಹಂಡೆಗಿಂತಲೂ ಜಾಸ್ತಿ ನೀರನ್ನು ಖರ್ಚು ಮಾಡಿದ್ದಿದೆ. ಚಿಕ್ಕಪ್ಪನವರು, ಬಚ್ಚಲಮನೆಯಲ್ಲೇ ನಿದ್ದೆ ಹೋದೆಯೇನೋ? ಎಂದು ಬಯ್ದದ್ದಿದೆ. ನನ್ನ ನಂತರ ಸ್ನಾನಕ್ಕೆ ಬರುವವರಿಗೆ ಬಿಸಿ ನೀರು ಖಾಲಿ ಆಯ್ತೆಂದು ಬಯ್ಸಿಕೊಂಡದ್ದಿದೆ. ಆದರೂ ಅದರ ಹುಚ್ಚು ಬಿಟ್ಟಿಲ್ಲ. ಮೊನ್ನೆ ಊರಿಗೆ ಹೋದಾಗಲೂ ಮತ್ತೆ ಹೀಗೆ ಸ್ನಾನ ಮಾಡಿ ಖುಷಿ ಪಟ್ಟೆ.


ಬಿಸಿ ನೀರು ಸ್ನಾನ ಮಾಡುವುದೆಂದರೆ ಬರ ಬರನೆ ನೀರನ್ನು ಹೊಯ್ದುಕೊಳ್ಳುವುದಲ್ಲ. ಚೊಂಬಿನಲ್ಲಿ ನೀರನ್ನು ಮೊಗೆದುಕೊಂಡು ನಿಧಾನವಾಗಿ ತಲೆಯಮೇಲೆ ಸುರಿದುಕೊಳ್ಳಬೇಕು. ನೀರು ಹೊಯ್ದುಕೊಂಡ ಶಬ್ಧವೂ ಬರಬಾರದು ಅಷ್ಟು ನಿಧಾನವಾಗಿ. ಪೂರ್ತಿ ಬೆಳಗಾಗಿರಬಾರದು, ಕತ್ತಲೆ ಕತ್ತಲೆ ಇರಬೇಕು, ಬಚ್ಚಲಮನೆಯ ದೀಪವನ್ನೂ ಹಾಕಬಾರದು. ಆಗ ಆ ನಿಶ್ಯಬ್ಧದಲ್ಲಿ ಕಣ್ಣು ಮುಚ್ಚಿಕೊಂಡು ನಿಧಾನವಾಗಿ ಬಿಸಿ ನೀರನ್ನು ಹೊಯ್ದುಕೊಂಡಾಗ ಸಿಗುವ ಮಜವಿದೆಯಲ್ಲ ಅದು ಅನಿರ್ವರ್ಣನೀಯ.


ಬೆಂಗಳೂರಿನಲ್ಲಿ ಎಷ್ಟು ಗಡಿಬಿಡಿಯಲ್ಲಿ ಸ್ನಾನಮಾಡುತ್ತೇವೆಂದರೆ ಬೆನ್ನ ಮೇಲಿನ ಕೊಳೆಯೂ ಪೂರ್ತಿ ಹೋಗಿರುವುದಿಲ್ಲ. ಇನ್ನು ಇಂತಹ ಮಜಾ ತೆಗೆದುಕೊಳ್ಳುವ ಮಾತೆಲ್ಲಿಂದ ಬಂತು. ಇದೆ ರೀತಿ ಅದೆಷ್ಟು ಚಿಕ್ಕ ಚಿಕ್ಕ ಖುಶಿಗಳನ್ನು ನಾವು ಕಳೆದು ಕೊಂಡಿದ್ದೇವೆ, ಕಳೆದುಕೊಳ್ಳುತ್ತಲಿದ್ದೇವೆ. ಚಳಿಗಾಲದ ಬೆಳಿಗ್ಗೆ ಹೊಂಬಿಸಿಲನ್ನು ಕಾಯಿಸುವುದು, ಕಣಜದ ಮೇಲೆ ಅಡಿಕೆಯನ್ನು ಹರಗುವಾಗ ಬರುವ ಜರಬರ ಶಬ್ದ, ತೊಗರೊಲೆಯ ಬೆಂಕಿ,  ಚಾಲಿ ಕಣದ ಹರಟೆ, ತೋಟದಲ್ಲಿ ಗೋಟು ಆರಿಸುವಾಗಿನ ಅಪ್ಪನ ಹಾಸ್ಯ ಚಟಾಕಿಗಳು.. ಅದೆಷ್ಟು ಅಂತ ಹೇಳಲಿ..


ಹಾಗಂತ ನಾವು ಬಹಳ ಖುಶಿಗಳನ್ನು ಕಳೆದುಕೊಂಡುಬಿಟ್ಟಿದ್ದೇವೆ ಎಂದು ಚಿಂತಿಸುತ್ತಾ ಕುಳಿತುಕೊಳ್ಳುವುದು ಸರಿಯಲ್ಲ. ಈಗ ಇಲ್ಲಿರುವ ಸಣ್ಣ ಪುಟ್ಟ ಖುಶಿಗಳನ್ನು ಹುಡುಕಬೇಕು. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಬಹಳಷ್ಟು ಕಳೆದುಕೊಳ್ಳಬೇಕಾಗುತ್ತದೆ. ನಾವು ಹೊಂದಿಕೊಳ್ಳಲೇಬೇಕು. ಹಾಗಾಗಿ ನಾವು ನಮ್ಮ ಇಲ್ಲಿನ ಸಾಧನೆಗಳ ಸಂತೋಷವನ್ನ, ಸಾರ್ಥಕ್ಯವನ್ನ ವಿಷಾದಪೂರ್ವಕವಾಗಿ ಅನುಭವಿಸಬೇಕಾಗುತ್ತದೆ, ಹಂಚಿಕೊಳ್ಳಬೇಕಾಗುತ್ತದೆ. ಏನಂತೀರಾ?

Wednesday, February 15, 2012

ವಿದ್ಯುತ್

"ವಿದ್ಯುತ್" ಎನ್ನುವುದು ನನಗೊಂದು ಆಶ್ಚರ್ಯ ಇವತ್ತಿಗೂ. ಒಂದೊಂದು ಸಲ ದೇವರು ಇದ್ದಾನೆ ಎನ್ನುವುದಕ್ಕೂ ಇದೇ ಸಾಕ್ಷ್ಯ ಅನ್ನಿಸಿಬಿಡುತ್ತದೆ. ಕಣ್ಣಿಗೆ ಕಾಣುವುದಿಲ್ಲ ಆದರೆ ಮುಟ್ಟಿದರೆ ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಶಾಕ್ ಹೊಡೆಯುತ್ತದೆ. ಕ್ಷಣಮಾತ್ರದಲ್ಲಿ ಇಲ್ಲಿ ಸ್ವಿಚ್ ಒತ್ತಿದರೆ ಅಲ್ಲೆಲ್ಲೋ ಬೆಳಕಾಗುತ್ತದೆ. ಸಣ್ಣ ತಂತಿಯಲ್ಲಿ ಏನೇನನ್ನೋ ತಿರುಗಿಸಬಹುದಾದಷ್ಟು, ಸುಡುವಷ್ಟು ಪ್ರಮಾಣದ ವಿದ್ಯುತ್ ಹರಿದು ಹೋಗುತ್ತದೆ. ತಂತಿಯಲ್ಲಿ ಹರಿಸಬಹುದಾದರೂ ಗಾಳಿಯಲ್ಲಿ ಬೆರೆಯುವುದಿಲ್ಲ, ಆರಿಹೊಗುವುದಿಲ್ಲ. ಉಪಯೋಗಿಸದಿದ್ದರೆ ಕರ್ಚು ಆಗುವುದಿಲ್ಲ. ಅದೇನೋ ವಾಹಕವಂತೆ ಅದರಲ್ಲಿ ಮಾತ್ರ ವಿದ್ಯುತ್ ಹರಿಯುತ್ತದಂತೆ. ಅದಕ್ಕೆ ಹೇಗೆ ಗೊತ್ತಾಗುತ್ತದೋ ಇದು ವಾಹಕ, ನಾನು ಇದರಲ್ಲಿ ಹರಿಯಬಹುದು. ಇದು ವಾಹಕವಲ್ಲ ಇದರಲ್ಲಿ ನಾನು ಪ್ರವಹಿಸಲಾರೆ ಎಂದು.

ವಿದ್ಯುತ್ತಿಗೆ ಕಾಗೆಗಳಮೇಲೆ ಮೃದು ಧೋರಣೆಯಿದೆ . ನಾವು ಯಾರೇ ಮುಟ್ಟಿದರೂ ಹಿಂದೂ ಮುಂದು ಯೋಚಿಸದೆ ಶಾಕ್ ಹೊಡೆಯುತ್ತದೆ ಆದರೆ ಕಾಗೆಗಳು ಸಾಲಾಗಿ ತಂತಿಯ ಮೇಲೆ ಕುಳಿತುಕೊಂಡರೂ ಏನೂ ಆಗುವುದಿಲ್ಲ. ಅವು ತಂತಿಯ ಮೇಲೆ ಕುಳಿತುಕೊಂಡು ಅವರ ಕೊಕ್ಕು ಚೂಪಾಗಿಸಿಕೊಳ್ಳುವುದೋ, ಎಲ್ಲಿಂದಲೋ ಹೊತ್ತು ತಂದ ಸತ್ತು ಕೊಳೆತು ನಾರುತ್ತಿರುವ ಇಲಿಯ ದೇಹವನ್ನು ಹಂಚಿಕೊಳ್ಳುವುದೋ ಮಾಡುತ್ತಿರುತ್ತವೆ. ಆಗ ಅವು ನಮ್ಮತ್ತ ತಿರುಗಿ ನೋಡಿದಾಗ ನಮ್ಮನ್ನು ಹೀಯಾಳಿಸಲೆಂದೇ ನೋಡುತ್ತಿರುವಂತೆನಿಸುತ್ತದೆ.

ಜನರ ಮತ್ತು ನನ್ನ ನಂಬಿಕೆ ಏನೆಂದರೆ ವಿದ್ಯುತ್ ಅಪಾಯಕಾರಿ, ಅದನ್ನು ದೂರವಿಡಬೇಕೆಂದು. ವಿಚಿತ್ರವೆಂದರೆ ವೈದ್ಯಕೀಯ ಪದ್ಧತಿಯಲ್ಲಿ ಶಾಕ್ ಕೊಡುವುದೂ ಒಂದು ರೀತಿಯ ಚಿಕಿತ್ಸೆ ಕೆಲವು ಮಾನಸಿಕ ರೋಗಗಳಿಗೆ. ಇಂತಹ ಚಿಕಿತ್ಸೆಯಲ್ಲಿ ಕಡಿಮೆ ಪ್ರಮಾಣದ ವಿದ್ಯುತ್ತನ್ನು ದೇಹದೊಳಗೆ ಹರಿಸುತ್ತಾರಂತೆ.  ಅವರಿಗೇನಾದರೂ ಮಾನಸಿಕ ಸ್ಥಿಮಿತ ಇದ್ದಿದ್ದರೆ ವಿದ್ಯುತ್ ಹಾಯಿಸಲು ಒಪ್ಪುತ್ತಿದ್ದರೆ? ಖಂಡಿತ ಇಲ್ಲ. ಮಾನಸಿಕ ಸ್ಥಿಮಿತ ಇರುವವರಿಗೆ ವೈದ್ಯರೂ ವಿದ್ಯುತ್ತನ್ನು ಹಾಯಿಸುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎನ್ನಿ.

ಬಹಳ ದಿನಗಳ ಹಿಂದೆ ನನ್ನ ಪರಮಾಪ್ತನಿಗೆ ಏನೋ ವಿವರಿಸುವಾಗ "ಉದಾಹರಣೆಗೆ ವಿದ್ಯುತ್ ತಂತಿಯನ್ನು ತೆಗೆದುಕೋ" ಅಂತ ಹೇಳಿದ್ದೆ. "ಉದಾಹರಣೆಗಲ್ಲ ಯಾವುದಕ್ಕೂ ವಿದ್ಯುತ್ ತಂತಿಯನ್ನು ತೆಗೆದುಕೊಂಡು ಹಿಡಿಯುವುದಿಲ್ಲ. ತಲೆ ಸರಿ ಇರುವವರಾರೂ ವಿದ್ಯುತ್ ತಂತಿಯನ್ನು ಹಿಡಿದುಕೊಳ್ಳುವುದಿಲ್ಲ." ಎಂದು ನನ್ನ ಕಾಲೆಳೆದಿದ್ದ. ಈಗಲೂ ಆಗಾಗ ನೆನಪಿಸುತ್ತಿರುತ್ತಾನೆ.