ಬಹಳ
ದಿನಗಳ ನಂತರ, ದಿನಗಳೇನು ವರ್ಷಗಳ ನಂತರ ನನ್ನ ಹಳೆಯ ಹವ್ಯಾಸವಾದ ಚಿತ್ರ ಬಿಡಿಸುವುದು, ಕರಕುಶಲ ವಸ್ತು ಮಾಡುವುದು ಪ್ರಾರಂಭಿಸಿದೆ. ಮತ್ತೆ ಪ್ರಾರಂಭಿಸುವುದಕ್ಕೆ ವಿನುತಾಳ ಒತ್ತಾಯ ಮೂಲ ಕಾರಣ. ಅವಳ ಸಲಹೆ, ಮೂಲ ಯೋಚನೆಯೊಂದಿಗೆ ಪುನಃ ಪ್ರಾರಂಭವಾದ ಹವ್ಯಾಸ ಈಗ ದಿನಾ ಮುಂದುವರೆದಿದೆ.
ಪೂರ್ತಿಯಾಯಾಗಿ ಹವ್ಯಾಸಗಳನ್ನೆಲ್ಲ ಮರೆತು ಸಂಪೂರ್ಣವಾಗಿ ದಿನಗೆಲಸ ಮಾಡುವ ಯಂತ್ರಮಾನವನೇ ಆಗಿಹೋಗಿದ್ದೇನೆ ಎಂಬ ನನ್ನ ಭ್ರಮೆಯನ್ನು ನಿವಾಳಿಸಿದ ಶ್ರೇಯ ವಿನುತಾಳಿಗೆ.
ಯಾರೋ
ಮಾಡಿದ ರಾತ್ರಿ ದೀಪವನ್ನು ನೋಡಿ "ನೀನೂ ಯಾಕೆ ಅದನ್ನೊಂದು ಮಾಡಬಾರದು?" ಎಂಬ ಮೊದಲ ಒತ್ತಾಯ ಸುಮಾರು ದಿನ ಅಪ್ಪಳಿಸಿದ ಮೇಲೆ ನಾನೂ ಮನಸ್ಸು ಮಾಡಿದೆ. youtube.com ನೋಡಿ ಹೇಗೆ ಮಾಡುವುದೆಂದು ತಿಳಿದೆ. ಒಂದು ಕಟ್ಟು ಸೊಣಬೇದಾರ, ಬಲೂನು, ಅಂಟನ್ನು ತಂದು "ರಾತ್ರಿ ದೀಪ" ಮಾಡಿದ ಮೇಲೆ, ಅದನ್ನು ನೋಡಿ ಭ್ರಮ ನಿರಾಸನವಾಗುವ ಪ್ರಸಂಗವನ್ನು ಸ್ವಲ್ಪದರಲ್ಲಿ ತಪ್ಪಿಸಿದೆ. ಬಲೂನಿಗೆ ಸುತ್ತಿದ ಸೊಣಬೇದಾರವನ್ನು ಹಕ್ಕಿಯ ಗೂಡನ್ನಾಗಿ ಪರಿವರ್ತಿಸಿ ಮಾನ ಉಳಿಸಿಕೊಂಡೆ.
ಒಂದು
ಪ್ರಯತ್ನವಾದ ಮೇಲೆ ಮಾಡಬಹುದೆಂಬ ಆತ್ಮವಿಶ್ವಾಸದಲ್ಲಿ ಕೈಗೆ ಸಿಕ್ಕ ದಾರವನ್ನೆಲ್ಲ ಉಪಯೋಗಿಸಿ ಒಂದು ರಾತ್ರಿ ದೀಪವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ. ಮನೆಯಲ್ಲಿ ಔಷಧಿಗೆ ಬೇಕು ಅಂದರೂ ಒಂದು ದಾರವೂ ಉಳಿಯಲಿಲ್ಲ. ಯಶಸ್ವಿಯಾದ ದೀಪ ಸರಿಯಾದ ಆಕಾರದಲ್ಲಿ ನಿಲ್ಲದೇ ಹೋದದ್ದರಿಂದ ಒಂದು ದೊಡ್ಡ ಪ್ಲಾಸ್ಟಿಕ್ ಬಾಲ್ ತಂದು ಅದಕ್ಕೆ ದಾರವನ್ನು ಸುತ್ತಿ ಒಂದು ಸರಿಯಾದ ದೀಪ ಮಾಡಿದೆ, ಇದು ಸಮಾಧಾನ ಕೊಟ್ಟಿತು, ನನಗೋ? ವಿನುತಾಳಿಗೋ?


ಎತ್ತಿನ
ಗಾಡಿ, ಊರ ಕಡೆಯ ಮನೆಯ
ಪ್ರತಿಕೃತಿ ಹೀಗೆ ಏನೇನನ್ನೋ ಮಾಡಿದ್ದೇನೆ. ಇನ್ನೂ ಏನನ್ನಾದರೂ ಮಾಡುವ ಉಮೇದಿಯಲ್ಲಿಯೂ ಇದ್ದೇನೆ.
ಕಳೆದ
ಕೆಲವು ದಿನಗಳಿಂದ ಚಿತ್ರ ಬಿಡಿಸುವ ನನ್ನ ಹಳೆಯ ಹವ್ಯಾಸಕ್ಕೆ ತಿರುಗಿದ್ದೇನೆ. ಪ್ರಾರಂಭಿಕ ಪ್ರಯತ್ನಗಳಿಂದ ತಿಳಿದಿರುವುದು "ಕಲಿಯುವುದು ಬಹಳಷ್ಟಿದೆ" ಎಂಬುದು. ಪ್ರಯತ್ನ ಸಾಗಿದೆ.