Monday, December 24, 2012

ಮದುವೆ ಮನೆ

ಮದುವೆ ಮನೆ ಅಂದರೆ ಅದೇನು ಸಂಭ್ರಮ, ಸಡಗರ.. ಎರಡು ಮೂರು ದಿನ ಮುಂಚಿತವಾಗಿ ಹತ್ತಿರದ ನೆಂಟರಿಷ್ಟರೆಲ್ಲಾ ಮದುವೆ ಮನೆಯಲ್ಲಿ ಸೇರುತ್ತಿದ್ದರು. ಮನೆಯವರಿಗಷ್ಟೇ ಅಲ್ಲ ಬಂದ ಎಲ್ಲರಿಗೂ ಒಂದೇ ತೆರನಾದ ಸಡಗರದಲ್ಲಿ, ಮದುವೆ ಹೇಗಾಗುತ್ತದೋ? ಬೀಗರ ಉಪಚಾರದಲ್ಲಿ ಏನಾದರೂ ಕಡಿಮೆ ಆಗುವುದೋ? ಎಂಬ ಆತಂಕ ಇರುತ್ತಿತ್ತು. ಎಲ್ಲರೂ ತಮ್ಮ ಕೈಲಾಗುವ ಕೆಲಸಗಳನ್ನು ಗಡಿಬಿಡಿಯಲ್ಲಿ ಮಾಡುತ್ತಿದ್ದರು.

ಗಂಡಸರು ಮನೆಯ ಅಂಗಳದಲ್ಲಿ ಚಪ್ಪರ ಹಾಕುವುದು, ಅಂಗಳದ ನೆಲ ಮಟ್ಟಸ ಮಾಡುವುದು ಹೀಗೆ ಮುಂತಾಗಿ ಕೆಲಸದಲ್ಲಿ ತೊಡಗಿರುತ್ತಿದ್ದರು. ಅದು ಹೇಗೋ ಮದುವೆ ಮನೆ ಅಂದಾಕ್ಷಣ ಕೆಲಸಗಳೆಲ್ಲವೂ ಬಾಕಿ ಇದ್ದೇ ಇರುತ್ತವೆ. ಉಟಕ್ಕೆ ಬಾಳೆ ಎಲೆ ಕೊಯ್ಯುವುದು, ವೀಳ್ಯದೆಲೆ ಕೊಯ್ಯುವುದು ಮುಂತಾದ ಕೆಲಸಗಳಿಗೆ ಕೆಲವರು ನಿಷ್ಣಾತರು ಮುಂದಾಗಿ ಒಟ್ಟಾದ ಹುಡುಗರನ್ನು ಕರೆದುಕೊಂಡು ತೋಟಕ್ಕೆ ಹೋಗುತ್ತಿದ್ದರು. ಒಟ್ಟಾಗಿ ಇಂತಹ ಕೆಲಸ ಕಾರ್ಯಗಳಲ್ಲಿ ತೊಡಗಿರುವಾಗ ಹೇಳುವ ಹಾಸ್ಯ ಚಟಾಕಿಗಳು, ಕಥೆಗಳು, ಕೆಲವೊಮ್ಮೆ ಆ ಕ್ಷಣದಲ್ಲಿ ಉಂಟಾದ ಹಾಸ್ಯ ಪ್ರಸಂಗ ತುಂಬಾ ಮಜವಾಗಿರುತ್ತಿದ್ದವು. ವಯಸ್ಸಿನಲ್ಲಿ ಹಿರಿಯರಾದವರು ಅವರ ಯೌವ್ವನದಲ್ಲಿ ನಡೆದ ಯಾವುದೋ ಮದುವೆಯ ಕಥೆಯನ್ನು ಬಿಡಿಸಿ ಬಿಡಿಸಿ ಹೇಳುತ್ತಿದ್ದರು. ಇಂತಹ ಸಮಯದಲ್ಲಿ ಇಡೀ ಮನೆಯೇ ಏಕೆ ಊರೇ ಸಂತೋಷದ ಅನುಭವಕ್ಕೀಡಾಗುತ್ತಿರುತ್ತದೆ.

ಹೆಂಗಸರು ಕಜ್ಜಾಯದ ತಯಾರಿ, ಪನಿವಾರದ ತಯಾರಿಯಲ್ಲಿ ತೊಡಗಿರುತ್ತಾರೆ. ಹಲವು ಹೆಂಗಸರು ಒಟ್ಟೊಟ್ಟಿಗೆ ಮಾತನಾಡುತ್ತ, ನಗುತ್ತಿರುತ್ತಾರೆ. ಹಾಗಾಗಿ ಅಲ್ಲಿಯೂ ಸಂತೋಷ ಇದ್ದೇ ಇರುತ್ತದೆ ಎನ್ನಬಹುದು. ಸೇರಿರುವ ಮಕ್ಕಳಂತೂ ಕಂಬ ಕಂಬ ಆಟ, ಡಬ್ಬಾ ಡುಬ್ಬಿ ಆಟ ಮುಂತಾದ ಮಕ್ಕಳ ಸಂಕ್ಯೆಯನ್ನು ಬಯಸುವ ಆಟಗಳನ್ನು ಆಡುತ್ತಿದ್ದರು.

ಅಂಗಳದ ಚಪ್ಪರಕ್ಕೆ ಮೇಲ್ಗಟ್ಟು ಕಟ್ಟುವುದು ಮಾತ್ರ ಮದುವೆಯ ಹಿಂದಿನ ರಾತ್ರಿಯೇ. ಅದೊಂದು ಶಾಸ್ತ್ರವೋ ಎಂಬಷ್ಟು ಚಾಲ್ತಿಯಲ್ಲಿತ್ತು. ಮೇಲ್ಗಟ್ಟಿಗೆ ಗುಂಡು ಸೂಜಿ ಚುಚ್ಚುವುದು, ಸೀರೆಯಲ್ಲಿ ಹೂವು ಮಾಡುವುದು ಎಲ್ಲ ಸ್ವಲ್ಪ ತಾಳ್ಮೆ ಮತ್ತು ಕೌಶಲ್ಯ ಬಯಸುವ ಕಲೆ. ಅದಕ್ಕೆಂದೇ ಬಂದ ತಜ್ಞರು ಉಮೆದುವಾರರಿಗೆ ಹೇಳಿಕೊಡುತ್ತ ರಾತ್ರಿಯೆಲ್ಲಾ ಮೇಲ್ಗಟ್ಟು ಕಟ್ಟುತ್ತಿದ್ದರು. ಮೇಲ್ಗಟ್ಟು ಕಟ್ಟಲು ಸೀರೆ ಒಟ್ಟು ಮಾಡುವಾಗ ಅಂತೂ ಅನೇಕ ಮಾಂಸಹಾರಿ ಹಾಸ್ಯ ಚಟಾಕಿಗಳನ್ನು ಕೇಳಿ ಪಾವನವಾಗಬಹುದಿತ್ತು.

ಬೆಂಗಳೂರಿಗೆ ಬಂದು ೬ ವರ್ಷವಾಯಿತು. ಈ ಸಮಯದಲ್ಲಿ ನನ್ನ ಮದುವೆ ಒಂದನ್ನು ಬಿಟ್ಟು ಬೇರೆ ಯಾವ ಮದುವೆ ಮನೆಯನ್ನೂ ನೋಡಿಲ್ಲ. ಮೊನ್ನೆ ಮೊನ್ನೆ ನಡೆದ ನನ್ನ ಆತ್ಮೀಯ ಸ್ನೇಹಿತನ ಮದುವೆಗೂ ಒಂದೇ ದಿನ ನಾನು ಹೋಗಿದ್ದು, ಅದೂ ಕಲ್ಯಾಣ ಮಂಟಪಕ್ಕೆ. "ನಿನ್ನ ಮದುವೆಯಲ್ಲಿ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ" ಎಂದು ಯಾವಾಗಲೋ ಮಾತಾಡಿಕೊಂಡಿದ್ದು ಅವತ್ತು ಮದುವೆಯಲ್ಲಿ ನನ್ನ ಕಿವಿಯೊಳಗೆ ಮತ್ತೆ ಮತ್ತೆ ಕೇಳಿಸುತ್ತಿತ್ತು.

ಈಗಿನ ಮದುವೆ ಮನೆಗಳೂ ನಾನು ಮೇಲೆ ಹೇಳಿದಂತೆ ಇರದೇ ಇರಬಹುದು. ಪರಿಸ್ಥಿತಿಯ, ಈಗಿನ ಕಾಲಮಾನದ ಜಂಜಾಟಗಳ ಹೊಡೆತಕ್ಕೆ ಸಿಕ್ಕಿ ಅವೂ ಸೊರಗಿ ಹೋಗಿವೆ. ಆದರೆ ನಾನು ಹೋಗಿ ಮದುವೆ ಮನೆಯಲ್ಲಿ ಭಾಗಿಯಾಗಿದ್ದರೆ ಸಮಾಧಾನವಾದರೂ ಇರುತ್ತಿತ್ತು. ಈಗಿನ ಕಲ್ಯಾಣ ಮಂಟಪದ ಮದುವೆಗಳಲ್ಲಿ ಊಟದ ಸಮಯದಲ್ಲೊಂದು ಜನರಿರುತ್ತಾರೆ, ಮುಂಚೂ ಇರುವುದಿಲ್ಲ ಕೊನೆಗೂ ಇಲ್ಲ.

ಇನ್ನು ಹೇಗಾದರೂ ಮಾಡಿ ಪುರುಸೊತ್ತು ಮಾಡಿಕೊಂಡು ಆತ್ಮೀಯರ ಮದುವೆಗೆ ಹೋಗಬೇಕೆಂದು ನಿರ್ಧರಿಸಿದ್ದೇನೆ.

Wednesday, December 12, 2012

ಅಂಚೆ ಮತ್ತು ತಂತಿ


ಪಕ್ಕದ ಮನೆಯಲ್ಲೇ ಪೋಸ್ಟ್ ಆಫೀಸ್ ಇರುವುದರಿಂದ ಪೋಸ್ಟ್ ಆಫೀಸಿನ, ಪೋಸ್ಟ್ ಮಾಸ್ಟರ, ಪೋಸ್ಟ್ ಮ್ಯಾನ್ ನ ಗಂಭೀರತೆಗಳೇ ನನಗೆ ಅರ್ಥವಾಗಿರಲಿಲ್ಲ. ನನ್ನ ಮೂಲಭೂತ ಪ್ರಶ್ನೆಯೇನಾಗಿತ್ತು  ಅಂದರೆ "ನಮ್ಮಸುತ್ತಲಿನ ಊರಿನ  ಪೋಸ್ಟ್ ನವಿಲ್ಗಾರ ಆಗಿತ್ತು. ಆದರೆ ಪೋಸ್ಟ್ ಆಫೀಸ್ ಇರುವುದು ಸುತ್ಮನೆಯಲ್ಲಿ" ಇದು ಹೇಗೆ ಸಾಧ್ಯ? ಸಮಾಧಾನಕರ  ಉತ್ತರ ಇವತ್ತಿಗೂ ಸಿಕ್ಕಿಲ್ಲ. ಮೊದಲಿನ ಪೋಸ್ಟ್ ಮ್ಯಾನ್ ನ ಹತ್ತಿರ ಇದೇ ಪ್ರಶ್ನೆ ಕೇಳಿದಾಗ "ಹಿ ಹಿ, ಅದು ಹಾಂಗೆಯ, ನಿಂಗೆ ಗೊತ್ತಾಗ್ತಿಲ್ಲೆ" ಎಂಬ ಉತ್ತರ!!

ಪಕ್ಕದಮನೆಯ ಶಿರಬಳೆಗೆ ಪೋಸ್ಟ್ ಬಾಕ್ಸ್ ತೂಗುಹಾಕಿದ್ದರೂ, ಯಾರೂ ಅದರಲ್ಲಿ ಪತ್ರ ಹಾಕಿದ್ದನ್ನು ನೋಡಿಲ್ಲ. ಪತ್ರಗಳಿದ್ದರೆ ಅದನ್ನು ಪಕ್ಕದ ಮನೆಯವನೆ ಆದ ಪೋಸ್ಟ್ ಮಾಸ್ತರನ ಹತ್ತಿರ ಕೊಟ್ಟು ಹೋಗುವರು. ಪೋಸ್ಟ್ ಮ್ಯಾನ್ ಆಗಿದ್ದು ಈಗ ನಿವೃತ್ತಿ ಆಗಿರುವ ಹಳೆಯ ಪೋಸ್ಟ್ ಮ್ಯಾನ್, ಯಾವತ್ತೂ ಆ ಡಬ್ಬಿಯನ್ನು ತೆಗೆದು ನೋಡಿದ್ದಿಲ್ಲ. ಕೆಲವೊಮ್ಮೆ ಅನುಮಾನದಿಂದ ಅಲುಗಿಸಿ ನೋಡಿ, ಪತ್ರಗಳಿಲ್ಲವೆಂದು ಹಾಗೇ ಬಿಟ್ಟದ್ದಿದೆ. ಬೆಳಿಗ್ಗೆ ನಾವು ಶಾಲೆಗೆ ಹೊರಡುವಾಗ ಕೇಳುವ "ಟಕ್ ಟಕ್  ಟಕ್ " ಎಂಬ ಪತ್ರಗಳಿಗೆ ಚಪ್ಪೆ ಹೊಡೆಯುವ ಸದ್ದು ಏನೋ ಕುತೂಹಲ ಕೆರಳಿಸುತ್ತಿತ್ತು. ಪತ್ರಗಳ ಚೀಲಕ್ಕೆ ಅರಳಿನ ಸೀಲ್ ಹಾಕುವುದನ್ನು ನೋಡಲು ಏನೋ ಒಂತರಾ ಕುತೂಹಲ.

ಮರದ ಪೆಟ್ಟಿಗೆ, ಒಂದು ಮೇಜು, ಕುರ್ಚಿ ಇವೇ ಅಂಚೆ ಮತ್ತು ತಂತಿ ಕಛೇರಿಯ ಆಸ್ತಿ. ಮರದ ಪೆಟ್ಟಿಗೆಯಲ್ಲಿ ಒಂದು ಸಣ್ಣ ತಕ್ಕಡಿ (ಪತ್ರಗಳನ್ನು ತೂಗುವುದಕ್ಕೆ, ಅದು ಎಷ್ಟು ಸಣ್ಣದಿರಬಹುದೆಂದು ಊಹಿಸಿ), ಚಪ್ಪೆಯ ಅಕ್ಷರಗಳ ಮೊಳೆಗಳು, ಹಳೆಯ ಸಣ್ಣ ಗೋಣಿಚೀಲ ಇವು ಹಿಡಿಯಲಾರದೆ ಹಿಡಿದಿರುತ್ತಿದ್ದವು. ಪೋಸ್ಟ್ ಮಾಸ್ತರನೆನಾದರೂ ಅದನ್ನು ತೆಗೆದನೆಂದರೆ ಧೂಳಿನ ಮೋಡ ನೋಡಬಹುದಿತ್ತು.

ನಾವು ಶಾಲೆಗೆ ಹೋಗುವಾಗ ಮದ್ಯಾಹ್ನ  ೧೧.೩೦ ಕ್ಕೆ ಊಟಕ್ಕೆ ಬಿಡುತ್ತಿದ್ದರು. ಸರಿಯಾಗಿ ಆ ಸಮಯಕ್ಕೆ ಪೋಸ್ಟ್ ಮ್ಯಾನ್ ಹಾಜರಾಗಿ ಪತ್ರಗಳ ಬಟವಾಡೆ ಮಾಡುತ್ತಿದ್ದ. ಅನೇಕ ಹುಡುಗರು ನಮ್ಮೂರಿಗೆ ಪತ್ರಗಳಿವೆಯೇ ಎಂದು ಕೇಳಿ ಕೇಳಿ ತೆಗೆದುಕೊಳ್ಳುತ್ತಿದ್ದರು. ಅವರ ಊರಿಗೆ ಪತ್ರಗಳಿಲ್ಲ ಎಂದರೆ ಅದೇನೋ ಉದಾಸೀನತೆ. ಪತ್ರಗಳನ್ನು ಮನೆಗೆ ತೆಗೆದುಕೊಂಡು ಹೋಗುವುದು ಒಂದು ಜವಾಬ್ದಾರಿಯುತ ಕೆಲಸವೆಂದೇ ನಮ್ಮೆಲ್ಲರ ಭಾವನೆಯಾಗಿತ್ತು. ನನಗೆ ಪತ್ರಗಳನ್ನು ತೆಗೆದುಕೊಂಡು ಮನೆಗೆ ಹೋಗುವ ಅವಕಾಶವಿಲ್ಲವೆಂದು ಎಷ್ಟು ಸಲ ಬೇಸರ ಮಾಡಿಕೊಂಡಿದ್ದೆ. ಶಾಲೆ ಬಿಡುವ ಸಮಯಕ್ಕೆ ಪೋಸ್ಟ್ ಮ್ಯಾನ್ ಬರದಿದ್ದರೆ ಎಲ್ಲರೂ ಆಶ್ಚರ್ಯ ಪಡುತ್ತಿದ್ದರು.

ದೂರದ ಊರಿಗೆ ಪತ್ರಗಳಿದ್ದರೆ ಅದರ ಬಟವಾಡೆ ಪೋಸ್ಟ್ ಮ್ಯಾನ್ ನ ಸಂಸಾರ ತಾಪತ್ರಯಗಳನ್ನವಲಂಬಿಸಿರುತ್ತಿತ್ತು. ಅವನಿಗೆ ಪುರುಸೊತ್ತಿದ್ದಾಗ, ಸೈಕಲ್ ತುಳಿಯುವ ಶಕ್ತಿಯಿದ್ದಾಗ ಹೋಗಿ ತಲುಪುತ್ತಿತ್ತು. ಜನರೂ ಪತ್ರ ಒಂದೆರಡು ದಿನ ತಡವಾಗಿ ಬಂದಿದ್ದು ಗೊತ್ತಾದರೂ ಅದೇನೂ ವಿಶೇಷ ಅಲ್ಲವೆಂದೇ ಭಾವಿಸುತ್ತಿದ್ದರು, ಒಗ್ಗಿಹೋಗಿದ್ದರು. ಶಾಲೆಯ ಮಕ್ಕಳನ್ನು ಪತ್ರ ಬಟವಾಡೆಗೆ ಅವನು ಎಷ್ಟು ಅವಲಂಬಿಸಿದ್ದ ಎಂದರೆ, ಶಾಲೆಯೇ ಇಲ್ಲದಿದ್ದರೆ ಸ್ವಯಂ ನಿವೃತ್ತಿ ತೆಗೆದುಕೊಂಡುಬಿಡುತ್ತಿದ್ದನೇನೋ?

ಸೊಸೈಟಿಯ ನೋಟಿಸುಗಳಿಂದ, ಫೋನ್ ಬಿಲ್ಲಿನಿಂದ, ಒಂದೆರಡು ಉಳಿತಾಯ ಖಾತೆಗಳಿಂದ ಹಾಗೂ ಅಂಚೆ ವಿಮೆಗಳಿಂದ ಅದು ಹೇಗೋ ನಮ್ಮೂರಿನ ಅಂಚೆ ಮತ್ತು ತಂತಿ ಕಛೇರಿ ಬದುಕುಳಿದಿದೆ. ಈಗಂತೂ ಯಾರೂ ಪತ್ರವನ್ನು ಬರೆಯುವುದೂ ಇಲ್ಲ, ಬರೆದರೆ ತಲೆ ಸೋಜಿಲ್ಲ ಎಂದೇ ಪರಿಭಾವಿಸುತ್ತಾರೆ.

ಈಗಿನ ಕಂಪ್ಯೂಟರ್ ಯುಗದಲ್ಲೂ ಉದ್ದುದ್ದ ಪಟ್ಟಿಯಲ್ಲಿ ಏನೇನೋ ಬರೆದು, ಅದನ್ನು ಪರಮ ರಹಸ್ಯದಂತೆ ಕಾಪಾಡುವುದನ್ನು ನೋಡುವುದೇ ಒಂದು ಸೋಜಿಗ. ಕೆಂಪು ಶಾಯಿಯ ಪೆನ್ನಿನಲ್ಲಿ ಒಂದಿಷ್ಟು, ನೀಲಿ ಶಾಯಿಯ ಪೆನ್ನಿನಲ್ಲಿ ಒಂದಿಷ್ಟು ಬರೆದು, ಬರೆದುದನ್ನು ಕನ್ನಡಕದ ಅಂಚಿನಲ್ಲಿ ನೋಡಿ, ತಪ್ಪಾಗಿದ್ದರೆ, ಮಗಳಿಗೋ ಮಗನಿಗೋ ಕಿಲಾಡಿ ಮಾಡ್ತೀರಿ ಎಂದು ಒಂದು ಸಲ ಬಯ್ದು ತಿದ್ದುವುದನ್ನು ನೋಡಿದರೆ ನೀವು ನಗದೆ ಇರಲಾರಿರಿ.

ಊರಿಗೊಂದು ಪೋಸ್ಟ್ ಆಫೀಸು ಇರುವುದನ್ನು ನೋಡಿ ಸುಮ್ಮನಿರುವುದು ಬಿಟ್ಟು ಹೀಗೆ ಟೀಕೆ ಮಾಡುವುದು ಸರಿಯೇ?