ಕಾಯುವಿಕೆಗಿಂತ ತಪವು ಇಲ್ಲ..
ತಾಳ್ಮೆಯ ಪಾಠ.. ಕಾಯುವ ಕಾಲದ ಕಥೆ..
ಬಹುಷಃ
ನಾವು ಕಾಯುವ ತಾಳ್ಮೆಯನ್ನ ಕಳೆದುಕೊಳ್ಳುತ್ತಿದ್ದೇವೆ. ಏನಕ್ಕೂ ಯಾವುದಕ್ಕೂ ಕಾಯುವ ತಾಳ್ಮೆ ನಮ್ಮಲ್ಲಿ ಕಡಿಮೆ ಆಗ್ತಾ ಇದೆ. ಜೀವನ ಶೈಲಿಯೋ,
ತಾಂತ್ರಿಕ ಬೆಳವಣಿಗೆಯೋ ಒಟ್ಟಿನಲ್ಲಿ ನಮಗೆ ತಾಳ್ಮೆ ಕಡಿಮೆ
ಆಗ್ತಾ ಇರೋದ್ರಲ್ಲಿ ಅನುಮಾನವಿಲ್ಲ. ಕಾಯುವುದೆಂದರೆ ನಮ್ಮನ್ನು ಯಾರೋ, ಯಾವುದೋ ನಿರ್ಲಕ್ಷ್ಯ ಮಾಡ್ತಾ ಇದೆ ಅಂತ ನಾವು
ಅಂದಾಜಿಸುತ್ತಿದ್ದೇವೋ ಏನೋ? ಏನಾದರೂ ತಡವಾದರೆ
ಸಹಿಸಲು ಆಗದ ಮನೋಭಾವ ಬೇರೂರ್ತಾ
ಇದೆ.
ಕಾಯುವುದೆಂದರೆ
ಹತಾಶೆಯಿಂದ ಕಾಲಹರಣವಲ್ಲ. ಅದು ನಿರೀಕ್ಷೆ, ವಿಶ್ವಾಸ
ಮತ್ತು ಶಾಂತಿಯ ಪರ್ಯಾಯ. ಹಿಂದಿನ ಪೀಳಿಗೆಯವರು ಇದನ್ನು ಬದುಕಿನ ಭಾಗವಾಗಿ ತೆಗೆದುಕೊಂಡಿದ್ದರು. ಅದರ ಒಂದು ಅದ್ಭುತ
ಉದಾಹರಣೆ ಎಂದರೆ ಹತ್ತರಗಿ ಬಸ್ಸು. "ಹತ್ತರಗಿ ಬಸ್ಸು" ಎಂಬ ವಿಚಿತ್ರ ನಮ್ಮೂರವರಿಗೆ
ಎಲ್ಲರಿಗೂ ಅನುಭವಕ್ಕೆ ಬಂದಿದೆ. ವರ್ಷಗಳ ಹಿಂದೆ ಬೆಳಿಗ್ಗೆ 8.30 ಕೆ ಹತ್ತರಗಿ
ಬಸ್ಸು ಬರುತ್ತದೆ ಎಂಬ ಭ್ರಮೆ ಅಲ್ಲಿನವರಿಗೆಲ್ಲರಿಗೂ.
ಮೋಟಾರ್ ಸೈಕಲ್, ಕಾರು ಬಹಳ ಅಪರೂಪ.
ಎಲ್ಲಿಗಾದರೂ ಹೋಗಬೇಕೆಂದರೆ ಹತ್ತರಗಿ ಬಸ್ಸೊಂದೇ, ಟೆಂಪೋ (ಖಾಸಗಿ ಸಾರ್ವಜನಿಕ ಬಸ್ಸು) ಸಹ ಇಲ್ಲದ ಕಾಲ.
ಸೊಸೈಟಿ ಕೆಲಸಕ್ಕಿರಲಿ, ನೆಂಟರ ಮನೆಗೆ ಹೋಗುವುದಿರಲಿ, ವಿಶೇಷಕ್ಕೆ ಹೋಗುವುದಿರಲಿ, ಸಿರ್ಸಿಇಂದ ಮುಂದೆ ಹೋಗುವ ಬಸ್ಸು ಬೇಕಾದ್ರೆ 11 ಗಂಟೆಗೆ ಇರ್ಲಿ,
ಬೆಳಿಗ್ಗೆ ಹತ್ತರಗಿ ಬಸ್ಸಿಗೆ ಹೋಗುವುದೊಂದೇ ಮಾರ್ಗ, ಇಲ್ಲದಿದ್ದರೆ 3-4 ಕಿಲೋಮೀಟರು ನಡೆದು
ಕುಮಟಾ ರೋಡಿಗೆ ಹೋಗಿ ಬೇರೊಂದು ಬಸ್ಸು
ಹಿಡಿಯಬೇಕು.
ಆ ಹತ್ತರಗಿ ಬಸ್ಸೋ, ಬಂದರೆ ಬಂತು ಇಲ್ಲದಿದ್ದರೆ ಇಲ್ಲ.
ನಾವು ಹೈಸ್ಕೂಲ್ ಗೆ ಹೋಗುವಾಗ ಬಸ್ಸು
ಬರುತ್ತದೋ ಇಲ್ಲವೋ ಎಂದು ಬಾಜಿ ಕಟ್ಟುತ್ತಿದ್ದೆವು.
ಜನರೋ ಹತ್ತು ನಿಮಿಷ ಮುಂಚೆಯೇ ಬಂದು ಅಲ್ಲಲ್ಲಿರುವ ಬಸ್ಸ್ಟಾಪಿನಲ್ಲಿ
ಕಾಯುತ್ತ ಕೂರುತ್ತಿದ್ದರು. 8.30 ಗೆ ಬರುವ
ಬಸ್ಸು 9 ಆದರೂ ಬರಲಿಲ್ಲವೆಂದರೆ,
"ಇನ್ನು ಐದು ನಿಮಿಷ ಕಾಯುವ,
ಬಸ್ಸು ಬಂದರೆ ಸರಿ, ಇಲ್ಲಾಂದರೆ ಇನ್ನೈದು
ನಿಮಿಷ ಕಾಯುವ" ಎಂಬ ತಾಳ್ಮೆಯಲ್ಲಿರುತ್ತಿದ್ದರು. ಕೊನೆಗೆ 9.30
ವರೆಗೆ ಕಾದು, ತುರ್ತು ಕೆಲಸವಿರುವವರು ಕುಮಟಾ ರಸ್ತೆಯ ಕಡೆಗೆ, ತೇಜಿ ಮೇಲಿರುವವರು ಮನೆಯ
ಕಡೆಗೆ ಹೆಜ್ಜೆ ಹಾಕುವುದು ವಾಡಿಕೆ. ಇವರಿಗೆಲ್ಲ ತಾಳ್ಮೆಯ, ಕಾಯುವಿಕೆಯ ಪಾಠವನ್ನು ಇನ್ಯಾರು ಚೆನ್ನಾಗಿ ಹೇಳಿಕೊಡಬಲ್ಲರು. ಬಸ್ಸು ಬಂದರೂ, ಬರದಿದ್ದರೂ ಜನ ಸಮಾನಚಿತ್ತರಾಗಿ, ಯಾವುದೇ
ಉದ್ವೇಗಕ್ಕೊಳಗಾಗದೇ ಮರುದಿನ ಬಸ್ಸಿಗೆ ಕಾಯುವುದನ್ನು ಬಿಡುತ್ತಿರಲಿಲ್ಲ.
ನಾವು
ಕಾಲೇಜಿಗೆ ಹೋಗಬೇಕಾದರೆ ಹತ್ತರಗಿ ಬಸ್ಸನ್ನೇ ನೆಚ್ಚಿದ್ದೆವು. ನಾವೂ ಬಸ್ಸಿನ ಯಾವತ್ತಿನ
ಸಮಯಕ್ಕಿಂತ ಒಂದು ಗಂಟೆ ಕಾಯುವುದನ್ನ
ರೂಢಿಸಿಕೊಂಡಿದ್ದೆವು. ಒಂದು ಗಂಟೆ ಕಾದು,
ಬಸ್ಸು ಬರದಿದ್ದರೆ ಕುಮಟಾ ರಸ್ತೆಯ ಕಡೆ ಹೆಜ್ಜೆ ಹಾಕುತ್ತಿದ್ದೆವು.
ನಮ್ಮೊಡನೆ ಬರುವ ಒಬ್ಬಳಿಗಂತೂ "ನಡೆದು
ಹೋಗುವುದು ತುಂಬಾ ಸುಲಭ, ಸೀದಾ ರಸ್ತೆಯಲ್ಲಿ, ಘಟ್ಟದಲ್ಲಿ
ಮಾತ್ರ ನಾವು ಶಕ್ತಿ ಉಪಯೋಗಿಸಿ
ನಡೆದರಾಯಿತು, ಇಳುಕಲಿನಲ್ಲಿ "ನ್ಯೂಟ್ರಲ್" ಹಾಕಿದರೆ ತನ್ನಾರೆ ಮುಂದೆ ಹೋಗಬಹುದು" ಎಂದು ನಂಬಿಸಿದ್ದೆವು.
ಮಳೆಗಾಲದಲ್ಲಂತೂ
ಬಸ್ಸು ಬಂದ ದಿನ ಮನರಂಜನೆಯೂ
ಇರುತ್ತಿತ್ತು. ಮಣ್ಣಿನ ರಸ್ತೆಯಲ್ಲಿ ಕೆಲವು ಕಡೆ ಒರತೆ ಎದ್ದು
ರಸ್ತೆಯಲ್ಲ ಜವುಗಿನ ನೆಲವಾಗಿರುತ್ತಿತ್ತು. ಬಸ್ಸಿನ ಡ್ರೈವರ್ ತನ್ನ ಚಾಕ ಚಕ್ಯತೆ
ಉಪಯೋಗಿಸಿ ಬಸ್ಸು ಓಡಿಸಿದರೂ ಒಂದೊಂದು ದಿನ ಬಸ್ಸಿನ ಟೈಯರ್
ಮಣ್ಣಿನಲ್ಲಿ ಹುದುಗಿಹೋಗುತ್ತಿತ್ತು. ಅವತ್ತು ಹುಗಿದ ಬಸ್ಸನ್ನು ತಳ್ಳಿ ಮುಂದೆ ಸಾಗಿಸುವ ಕೆಲಸಕ್ಕೆ ಉರಾನೂರು ಒಟ್ಟಾಗುತ್ತಿತ್ತು. ಜಾನ್ಮನೆ ಪಂಚಾಯತದ ಒಂದೂರಿನ ಜನ ಸೇರಿದರೆ ಮನರಂಜನೆಗೆ
ಕೊರತೆಯೇ? ಅಂದಿನ ಕಾಲದಲ್ಲಿ ನಮ್ಮವರಿಗೆ ಮನರಂಜನೆಯ ಕೊರತೆಯಿದೆಯೆಂದೇ KSRTC ಯವರು ಹತ್ತರಗಿ ಬಸ್ಸು
ಬಿಡುತ್ತಿದ್ದರೇನೋ ಎಂಬ ಅನುಮಾನವೂ ಇದೆ.
ಸಂಜೆ 6 ಗಂಟೆಗೆ ಸಿರ್ಸಿ ಬಸ್ ಸ್ಟ್ಯಾಂಡಿನಿಂದ ಹತ್ತರಗಿ
ಬಸ್ಸು ಹೊರಡುವುದು ಎಂಬ ಗುಲ್ಲು ಹರಡಿತ್ತು.
ತಿರುಗಾಟಕ್ಕೆ ಹೋದವರು ಅದೇ ಬಸ್ಸಿಗೆ ತಿರುಗಿ
ಮನೆಗೆ ಬರುವುದು. ಯಥಾ ಪ್ರಕಾರ ಒಂದು
ಗಂಟೆ ಕಾದು, ಬಸ್ಸು ಹೊರಡಲಿಲ್ಲ ಅಂದರೆ KSRTC ಕಾರ್ಯನಿರ್ವಾಹಕನ ಹತ್ತಿರ "6 ಗಂಟೆಗೆ ಬಿಡುವ
ಹತ್ತರಗಿ ಬಸ್ಸನ್ನ ಎಷ್ಟು ಗಂಟೆಗೆ ಬಿಡ್ತೀರಿ?" ಎಂದೇ ಕೇಳುತ್ತಿದ್ದರು.
ನಮ್ಮಲ್ಲಿ
ಸ್ವಲ್ಪವಾದರೂ ತಾಳ್ಮೆ, ಕಾಯುವ ಗುಣ ಇದೆ ಎಂದಾದರೆ,
ಅದರಲ್ಲಿ ಹತ್ತರಗಿ ಬಸ್ಸಿನ ಕೊಡುಗೆ ಬಹಳವಿದೆ.
ಇಷ್ಟು
ಹೇಳಿದ್ರು ನಿಮಗೆ ನಿರೀಕ್ಷೆಯ, ತಾಳ್ಮೆಯ ಅರ್ಥ ಆಗ್ಲಿಲ್ಲ ಅಂದರೆ...
ಥೋ!