Wednesday, May 22, 2019

ಸಗಣಿ ಕರಡುವ ಪ್ರಹಸನ!!

         ಮೊದ ಮೊದಲು ದೊಡ್ಡ ಕಲ್ಲಿನ ಕೊಟ್ಟಿಗೆಯನ್ನು ಕೊರ್ಲು ಹಿಡಿಯಿಂದ ಬಗ್ಗಿ ಕೆರೆಯುವುದನ್ನು ತಪ್ಪಿಸಿಕೊಳ್ಳಲು ಸಗಣಿ ಕರುಡುವುದಕ್ಕೆ ಹೋಗಲು ಪ್ರಾರಂಭಿಸಿದ್ದೆ. ಕ್ರಮೇಣ ಸಗಣಿ ಕರುಡುವುದು ಇಷ್ಟದ ಕೆಲಸವಾಯಿತು. ಹಿನ್ನೆಲೆ ಹೇಳಿಕೊಂಡು ಮುಂದೆ ಹೋಗುವುದು ಒಳಿತು. ಅವಿಭಕ್ತ ಸುತ್ಮನೆ ಅಂಗಡಿ ಅಜ್ಜನಮನೆಯ ಕೊಟ್ಟಿಗೆ ದೊಡ್ಡದಿತ್ತು. ಎರಡು ಸಾಲುಗಳಲ್ಲಿ ಆಕಳು ಎಮ್ಮೆ ಕಟ್ಟುವುದಕ್ಕೆ ಕಲ್ಲು ಹಾಸಿ ದೊಣಕಲು ಕಟ್ಟಿ ಸುಸಜ್ಜಿತವಾದ ಕೊಟ್ಟಿಗೆಯಿತ್ತು. ಸಮಸ್ಯೆಯೆಂದರೆ ಪ್ರತಿ ದಿನ ಕೊಟ್ಟಿಗೆ ತೊಳೆಯುವದಕ್ಕೆ ಕನಿಷ್ಠ ಇಬ್ಬರಿಗೆ ಒಂದು ಒಪ್ಪೊತ್ತಿನ ಕೆಲಸವಾಗುತ್ತಿತ್ತು. ಕೆಳಗಿನ ಸಾಲಿನಲ್ಲಿ ಹಾಸಿದ ಕಲ್ಲಿನಮೇಲೆ ಒಟ್ಟುಮಾಡಿಟ್ಟಿದ್ದ ಸಗಣಿಯನ್ನು ಬುಟ್ಟಿ ತುಂಬಿ ಸಗಣಿ ಕರಡುವ ಟ್ಯಾಂಕ್ ಗೆ ಸಾಗಿಸುವ ಕೆಲಸದಿಂದ ಮೊದಲ್ಗೊಂಡು, ದೊಣಕಲು ಗುಡಿಸಿ, ಕೊಟ್ಟಿಗೆ ನೆಲವನ್ನು ಉದ್ದ ಕಡ್ಡಿ ಹಿಡಿಯಿಂದ ಗುಡಿಸಿ, ಗುಡಿಸಿ ಒಟ್ಟಾದ ಹುಲ್ಲಿನ ಕಸವನ್ನು ಗೊಬ್ಬರ ಗುಂಡಿಗೆ ಎಸೆದು, ನೀರು ಹಾಕಿ ಕೊರ್ಲು ಹಿಡಿಯಿಂದ ಕೆರೆದು ಕೊನೆಗೆ ನೀರು ಹಾಕಿ ನೆಲವನ್ನು ತೊಳೆದು, ಸಗಣಿ ಕರಡಿ, ತುಂಬಿದ ಗ್ಯಾಸ್ ಡ್ರಮ್ ನಿಂದ ಬಂದ ರಾಡಿಯನ್ನು ಗೊಬ್ಬರಗುಂಡಿಗೆ ಸೋಕುವುದರೊಂದಿಗೆ ಕೊಟ್ಟಿಗೆ ಕೆಲಸ ಮುಗಿಯುತ್ತಿತ್ತು.


                 ಸಗಣಿಯನ್ನು ಬುಟ್ಟಿ ತುಂಬುವುದೋ, ದೊಣಕಲು ಗುಡಿಸುವುದೋ  ಅಂತಹ ಕಷ್ಟದ ಕೆಲಸ ಎನಿಸುತ್ತಿರಲಿಲ್ಲ. ಕೊರ್ಲು ಹಿಡಿಯಿಂದ ಕಲ್ಲಿನ ನೆಲವನ್ನು ಕೆರೆಯುವುದಿತ್ತಲ್ಲ ಅದು ಪರಮ ಶಕ್ತಿಯ ಅಪವ್ಯಯದಂತೆ ಕಾಣುತ್ತಿತ್ತು. ಬೇರೆ ಬೇರೆ ಕಡೆ ಗುಡಿಸಲು ಹಾಗೂ ಬೇರೆ ಬೇರೆ ರೀತಿಯ ಗುಡಿಸುವಿಕೆಗೆ ಬೇರೆ ಬೇರೆ ಹತ್ಯಾರಗಳನ್ನೇ ತಯಾರು ಮಾಡಿಟ್ಟಿದ್ದರು ತಜ್ಞರಾದ "ಅಣ್ಣ" ಹಾಗೂ "ಕಾಕಾ". ದೊಣಕಲು ಗುಡಿಸಲು ಈಚಲು ಹಿಡಿ, ಸಗಣಿ ತೆಗೆದ ತಕ್ಷಣ ಕೊಟ್ಟಿಗೆ ಗುಡಿಸಲು ಉದ್ದನೆಯ ಕಡ್ಡಿ ಹಿಡಿ, ಕೊಟ್ಟಿಗೆ ನೆಲವನ್ನು ಕೆರೆಯಲು ಮೊಂಡಾದ ಕೊರ್ಲು ಹಿಡಿ ಹೀಗೆ. ಕೊರ್ಲು ಹಿಡಿಯೋ ಕಟ್ಟಿನಿಂದ ಒಂದು ಗೇಣು ಉದ್ದವಿರುತ್ತಿತ್ತು. ಅದನ್ನು ಹಿಡಿದು ನೆಲ ಕೆರೆಯಬೇಕೆಂದರೆ ಪ್ರಾಯಶ ಮಲಗಿದ ರೀತಿಯಲ್ಲಿ ಬಗ್ಗಬೇಕಾಗುತ್ತಿತ್ತು. ಪ್ರತಿ ದಿನವೂ ಬೀಳುವ ಮೂತ್ರದ ಧಾರೆಯಿಂದ ನೆಲ ಜಾರಿಯಾಗದಂತೆ ತಿಕ್ಕಬೇಕಾಗಿತ್ತು. ನೆಲಕ್ಕೆ ಹಿಡಿದ ಸಗಣಿ, ಕಲ್ಲಿನ ಪಡಕುಗಳಲ್ಲಿ ಕುಳಿತ ಅದರ ಅವಶೇಷ ಮಲಗಿದ ಹೈನುಗಳ ಮೈಗೆ ಬಡಿಯದಂತೆ ಚೊಕ್ಕ ಮಾಡಬೇಕಾಗಿತ್ತು. ಮೇಲೆ ಹೇಳಿದ ತಜ್ಞರ ಅಭಿಪ್ರಾಯವನ್ನೇ ಮಾನದಂಡವೆಂದು ಒಪ್ಪಿಕೊಂಡರೆ ನನ್ನಂತವನಿಗೆ ಚೊಕ್ಕ ಮಾಡಲು ಇಡೀ ದಿನ ಬೇಕಾಗುವುದರಲ್ಲಿ ಸಂದೇಹವಿರಲಿಲ್ಲ.


          ಉಳಿದೆಲ್ಲವುಗಳಿಗಿಂತ ಸಗಣಿ ಕರಡುವುದು ಸಸಾರವೆಂದು ಪ್ರಾರಂಭಿಸಿದ ಕೆಲಸ ಇಷ್ಟು ಪ್ರಿಯವಾಗಿದ್ದು ಖುಷಿ. ಇದೇನೂ ನೋಡುವವರ ಕಣ್ಣಿಗೆ ಕಾಣಿಸುವಷ್ಟು ಸುಲಭ ಸಾಧ್ಯವಾದದ್ದಲ್ಲ. ಟ್ಯಾಂಕಿನಲ್ಲಿ ತುಂಬಿದ ಸಾಗಣಿಗೆ ಬೇಕಾಗುವಷ್ಟು ಮಾತ್ರದ ನೀರನ್ನು ಸೇರಿಸಿ ಒಂದೂ ಉಂಡೆ ಉಳಿಯದಂತೆ ಕರಡುವುದು ಅಪ್ಪೆಹುಳಿಯಲ್ಲಿ ಸಾಸಿವೆ ಕಾಳನ್ನು ಹೆಕ್ಕಿ ಬಾಳೆ ಎಲೆಯ ತುದಿಗೆ ಇಡುವಷ್ಟೇ ಕಷ್ಟದ ಕೆಲಸ. ನಾಡ ಆಕಳ ಸಗಣಿಯಂತೂ ಗಟ್ಟಿ ಉಂಡೆಯಂತಿರುವುದರಿಂದ ಅವನ್ನು ಹುಡುಕಿ ಕಾಲ ಕೆಳಗೆ ಇಟ್ಟು ಅರೆದು ಕರಡಬೇಕು. ಎಲ್ಲ ಉಂಡೆಗಳೂ ಅರೆದು ಕರಡಿದಮೇಲೆ ತೇಲುವ ಹುಲ್ಲಿನ ಕಸವನ್ನು ತೆಗೆಯಬೇಕು. ಚೊಕ್ಕವಾಗಿ ಕಸವನ್ನು ಆರಿಸಿಯಾದಮೇಲೆ ಹದವಾದ ರಾಡಿಯನ್ನು ಗ್ಯಾಸ್ ಡ್ರಮ್ ನ ಹೊಂಡಕ್ಕೆ ಬಿಡಬೇಕು. ಗ್ಯಾಸ್ ಡ್ರಮ್ ನ ಹೊಂಡಕ್ಕೆ ರಾಡಿ ಬಿಡುವ ಪೈಪ್ ಗೆ ಮುಚ್ಚುವ ಬಿರಡೆಗೆ ಗಟ್ಟಿ ಸಗಣಿಯನ್ನು ಮೆತ್ತಿ ಟ್ಯಾಂಕ್ ಗೆ ಬಂದು ಬೀಳುವ ನೀರು ಅಥವಾ ಮೂತ್ರ ಸೋರಿಕೆಯಾಗುವುದಿಲ್ಲ ಎಂದು ಖಾತ್ರಿಪಡಿಸಿಕೊಂಡು ಟ್ಯಾಂಕ್ ನಿಂದ ಆಚೆ ಬರಬೇಕು. ಅಜಮಾಸು ಮುಕ್ಕಾಲು ಗಂಟೆ ಬೇಕಾಗುವ ಈ ಕೆಲಸ ಧ್ಯಾನದಂತೆ ಅನಿಸುತ್ತಿತ್ತು.


                   ಕೊಟ್ಟಿಗೆ ಕೆಲಸದಲ್ಲಿ ತಜ್ಞರಾದ ಅಣ್ಣನೋ ಕಾಕನೋ ಸಗಣಿ ಕರಡುವುದು ನೋಡಲು ಚಂದ. ಟ್ಯಾಂಕ್ ಗೆ ಇಳಿಯುವುದಕ್ಕಿಂತ ಮುಂಚಿನ ತಯಾರಿ ನೋಡಿದರೆ ಯಾರಿಗಾದರೂ ತಿಳಿಯುತ್ತಿತ್ತು, ಇವ ಸಗಣಿ ಕರಡಲು ಹೊರಟನೆಂದು. ಬಗ್ಗಿ ಕರಡುವಾಗ ಜನಿವಾರ ನೆನೆಯಬಾರದೆಂದು ಬಿಗಿ ಮಾಡಿಕೊಳ್ಳುವುದರಿಂದ ಹಿಡಿದು, ಹಾಕಿಕೊಂಡ ಬಿಳಿ ಪಂಚೆಯೊ, ವಸ್ತ್ರವೋ ರಾಡಿಗೆ ತಾಗಬಾರದೆಂದು ಮಡಚಿ ಕಟ್ಟಿಕೊಳ್ಳುವುದು ಹೀಗೆ ಬಹಳ ತಯಾರಿ ಇರುತ್ತಿತ್ತು. ಕೆಲವೊಮ್ಮೆ ವಾಸನೆ ಬರಬಾರದೆಂದು ಕೈ ಕಾಲಿಗೆ ತೆಂಗಿನೆಣ್ಣೆ ಹಚ್ಚಿಕೊಂಡು ಟ್ಯಾಂಕ್ ಗೆ ಇಳಿಯುತ್ತಿದ್ದರು. ಕಾಕನಂತೂ ಹೊಸದಾದ ಕವಳ ಹಾಕಿಕೊಂಡೇ ಟ್ಯಾಂಕ್ ಗೆ ಇಳಿಯುತ್ತಿದ್ದ. ಅವರ ತಾಳ್ಮೆ, ಶ್ರದ್ಧೆ ಕೆಲಸದ ಬಗೆಗಿನ ಪ್ರೀತಿ ನೋಡಿದವರಿಗೆ ಪ್ರೇರೇಪಣೆ ನೀಡುವುದರಲ್ಲಿ ಸಂದೇಹವಿಲ್ಲ.


           ಈಗಲೂ ಮನೆಗೆ ಹೋದಾಗ ಅವಕಾಶ ಸಿಕ್ಕರೆ ಸಗಣಿ ಕರಡಲು ಹೋಗುತ್ತೇನೆ. ಈಗ ಮೊದಲಿನಷ್ಟು ಕಾಲ್ನಡೆ ಇಲ್ಲ, ಸಗಣಿಯೂ ಒಟ್ಟಾಗುವುದಿಲ್ಲ.