ಸ್ವಲ್ಪ ದಿನದ ಹಿಂದೆ ಪಲ್ಲವಿ ಹೇಳಿದಳು, ಮಗನಿಗೆ ಶಾಲೆಯ ಪುಸ್ತಕಕ್ಕೆ ಬೈಂಡ್ ಹಾಕುವಾಗ "ಬಪ್ಪ"ನನ್ನ ರಾಶಿ ಮಿಸ್ ಮಾಡಿಕೊಂಡೆ ಎಂದು. ಅವಳಿಗೆ ಹಾಗನ್ನಿಸ್ಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ನಾವು ಶಾಲೆಗೆ ಹೋಗುವಾಗ ನಮ್ಮ ಪಟ್ಟಿ ಪುಸ್ತಕಗಳಿಗೆ ಹಳೆಯ ಕ್ಯಾಲೆಂಡರ್ ನ ದಪ್ಪ ಹಾಳೆಯಲ್ಲಿ
ಶಿಸ್ತಾಗಿ ಬೈಂಡ್ ಹಾಕಿ ಕೊಡುತ್ತಿದ್ದವನೇ ಪಲ್ಲವಿಯ "ಬಪ್ಪ" ಹಾಗು ನಮ್ಮನೆಯ ಅಜ್ಜ ಅಜ್ಜಿಯರನ್ನು ಬಿಟ್ಟರೆ ಉಳಿದವರೆಲ್ಲರಿಗೂ "ಅಣ್ಣ". ಹೌದು ನಾನು ಹೇಳುತ್ತಿರುವುದು ನನ್ನ ಅಪ್ಪನ ಸುದ್ದಿಯೇ. ಅದು ಹೇಗೋ ಅವನ ಮಕ್ಕಳಾದ ನಾವು ಮೂವರೂ ಅವನಿಗೆ "ಅಣ್ಣ" ಎಂದೇ ಕರೆಯುವುದು. ಹಳೆಯ ಕ್ಯಾಲೆಂಡರ್ಗಳನ್ನೂ, ದಪ್ಪ ಹಾಳೆಯ ಯಾವುದೇ ಪೇಪರ್ ಅನ್ನೂ ಬೈಂಡ್ ಹಾಕಲೆಂದೇ ಎತ್ತಿಟ್ಟು, ಬೇಸಿಗೆ ರಜೆ ಕಳೆದು ಶಾಲೆ ಪ್ರಾರಂಭವಾಗುವ ದಿನಗಳಲ್ಲಿ ಪಟ್ಟಿ ಪುಸ್ತಕಗಳಿಗೆ ಅಚ್ಚುಕಟ್ಟಾಗಿ ಬೈಂಡ್ ಹಾಕಿ ಕೊಡುತ್ತಿದ್ದುದಲ್ಲದೇ, ನಮಗೆ ಬೈಂಡ್ ಹಾಕುವುದು ಹೇಗೆ ಎಂದು ಹೇಳಿಕೊಟ್ಟ್ಟಿದ್ದ. ಬೈಂಡ್ ಹಾಕುವ ಅವನ ರೀತಿಯೋ, ಅವನು ಕೊಡುತ್ತಿದ್ದ ವಿವರಣೆಯೋ ಒಟ್ಟಿನಲ್ಲಿ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತಿದೆ.
ಅಣ್ಣನ ಹತ್ತಿರದಿಂದ ಒಡನಾಡಿದ ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಅವನ ಪ್ರಭಾವ ಬಿದ್ದೆ ಬಿದ್ದಿರುತ್ತದೆ ಎಂಬುದು ನನ್ನ ಗಾಢವಾದ ನಂಬಿಕೆ. ಅವನನ್ನ ಹತ್ತಿರದಿಂದ ಬಲ್ಲವರೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಅವನನ್ನ ನೆನಪಿಸಿಕೊಳ್ಳದೆ ಇರಲಿಕ್ಕಿಲ್ಲ. ಅವನೇನೂ ಅಪ್ರತಿಮ ಮಾತುಗಾರನಾಗಿರಲಿಲ್ಲ, ತುಂಬಿದ ಹಾಸ್ಯ ಪ್ರಜ್ಞೆಯುಳ್ಳವನೂ ಆಗಿರಲಿಲ್ಲ, ಅಸಾಮಾನ್ಯ ಬುದ್ಧಿವಂತನೂ, ಮಹಾ ಪ್ರತಿಭಾ ಸಂಪನ್ನನೂ ಆಗಿರಲಿಲ್ಲ. ಆದರೆ ಅವನು ಜೀವನ ನಡೆಸಿದ ರೀತಿ, ಅವನ ಆಲೋಚನಾ ವಿಧಾನ, ನೈತಿಕತೆಗೆ ಕೊಡುತ್ತಿದ್ದ ಮಹತ್ವ ಹಾಗೂ ನೈತಿಕ ಜವಾಬ್ದಾರಿಯಿಂದ ಕೂಡಿದ ಬಾಳು ಎಂತವರನ್ನೂ ಪ್ರಭಾವಿಸಿದ್ದರಲ್ಲಿ ಆಶ್ಚರ್ಯವಿಲ್ಲ. ನಿಧಾನಿಯೂ, ಮಿತಭಾಷಿಯೂ, ಎಲ್ಲರನೂ,ಎಲ್ಲವನ್ನೂ ಪ್ರೀತಿಸುವವನೂ ಆದ ಅವನು ನನಗೆ
ಆದರ್ಶಪ್ರಾಯ. ಆದರೆ ಅವನಂತೆ ಬದುಕುವುದು ಕಷ್ಟ.
ಅವನಿಗೆ ಸಿಟ್ಟು ಬಂದದ್ದನ್ನ ನಾನು ನೋಡಿಲ್ಲ. ಅವನ ಕೊನೆಯ ದಿನಗಳಲ್ಲಿ ಅವನಿಗೆ ವ್ಯಾಯಾಮ ಮಾಡಿಸುತ್ತಿದ್ದೇನೆಂದೋ, ಅವನಿಗೆ ಅನವಶ್ಯಕ ಪ್ರಶ್ನೆಗಳನ್ನು ಕೇಳಿ ಮಾತನಾಡಿಸಬೇಕೆಂದು ಪ್ರಯತ್ನಿಸುತ್ತಿದ್ದೇನೆಂದೋ ಸಿಟ್ಟು ಮಾಡಿದ್ದಿದೆ. ಆದರೆ ಅವನ ಚಟುವಟಿಕೆಯ ಜೀವನದಲ್ಲಿ ಸಿಟ್ಟನ್ನು ಬಹಳ ದೂರವಿಟ್ಟಿದ್ದ. ನನ್ನ ಸಿಟ್ಟು ಕಡಿಮೆಯಾಗಿದ್ದೆ ಆದರೆ ಅದಕ್ಕೆ ಅವನ ತಿದ್ದುವಿಕೆಯೇ ಕಾರಣ. ಕಾಗೆ ಕಾಲು ಗುಬ್ಬಿ ಕಾಲಿನಂತೆ ಇರುತ್ತಿದ್ದ ನನ್ನ ಹಸ್ತಾಕ್ಷರ ಸುಧಾರಿಸಲು ಅವನು ಮೂಲ ಕಾರಣ. ನಾನು ಬರೆಯುವಾಗ ನನ್ನ ಪಕ್ಕದಲ್ಲಿ ಕೂತು ಶಬ್ದಗಳ ಮಧ್ಯೆ ಜಾಗ ಬಿಡುವಂತೆಯೂ, ಅಕ್ಷರಗಳು ಸುಂದರವಾಗಿಯಲ್ಲದೆ ಹೋದರೂ ಸ್ಪಷ್ಟವಾಗಿರಬೇಕು ಎಂದು ತಿದ್ದುತ್ತಿದ್ದ. ಅವನು ಬಿಳಿ ಹಾಳೆಯ ಮೇಲೆ ಬರೆದರೆ ಅಕ್ಷರದ ಸಾಲು ಅಂಕು ಡೊಂಕಾಗಿರುತ್ತಿರಲಿಲ್ಲ, ಅವನು ಬರೆದಾದ ಮೇಲೆ ಅಕ್ಷರದ ಮೇಲೆ ಕೆಳಗೆ ಜೋಡುಗೆರೆ ಹಾಕಬಹುದಾದಷ್ಟು ಒಂದೇ ಅಗಲ ಎತ್ತರದ ಅಕ್ಷರಗಳು. ಸುಂದರವಾದ
ದುಂಡಗಿನ ಅಕ್ಷರಗಳು. ಅವನ ಅಕ್ಷರದ ರೀತಿಯಲ್ಲೇ ಸುದರ್ಶನ ಅಣ್ಣಯ್ಯ, ಸುಧತ್ತೆ ಬರೆಯುತ್ತಾರೆ.
ಅಂಗಳ ಗುಡಿಸುವ ಪದ್ಧತಿ ಹೇಗೆ? ಅಡಿಕೆ ಹೆಕ್ಕುವ ಪರಿಪಾಠ ಹೇಗೆ? ಸಂನೆಂಪೊ ಕೊಯ್ಯುವುದು ಹೇಗೆ? ಹೇಳಿದರೆ ಕೆಲವರಿಗೆ ಅತಿಶಯೋಕ್ತಿ ಅನಿಸಬಹುದು, ಸಗಣಿಯಲ್ಲಿ ಸೇರಿರುವ ಹುಲ್ಲು ಬಿಡಿಸುವುದು ಹೇಗೆ? ಹಾಗೆ ಬೇರೆ ಮಾಡಿಕೊಂಡರೆ ಸಗಣಿ ಕರಡುವಾಗ ಎಷ್ಟು ಸಲೀಸಾಗುತ್ತದೆ, ಕಾಯಿ ಸುಲಿಯುವುದು ಹೇಗೆ? ಕಾಯಿಯ ಜುಟ್ಟನ್ನು ಹೇಗೆ ಬಿಡಿಸುವುದು ಹೀಗೆ ಏನೇನೆಲ್ಲ ಕಲಿಸಿಕೊಟ್ಟೆ ನೀನು. ಪಟ್ಟಿ ಮಾಡುತ್ತಾ ಹೋದರೆ ಮಾಡುತ್ತಾ ಹೋಗಬಹುದು.
ದಿನನಿತ್ಯದ ಜೀವನದಲ್ಲಿ, ಮಾಡುವ ಕೆಲಸಗಳಲ್ಲಿ ಅಣ್ಣಾ ನಿನ್ನ ನೆನಪುಗಳು ಹಾಸುಹೊಕ್ಕಾಗಿವೆ. ನಿನ್ನ ನೆನಪಾಗದ ದಿನಗಳಿಲ್ಲ. ಇನ್ನು ಆಯಿಯ ಪರಿಸ್ಥಿತಿ ಹೇಗಿರಬಹುದು? ಶಾರೀಕವಾಗಿ ನೀನಿಲ್ಲದಿದ್ದರೂ ಮಾನಸಿಕಾವಾಗಿ ನಿನ್ನ ಉಪಸ್ಥಿತಿ ನನ್ನಲ್ಲಿದೆ. ಆದರೂ ಅಣ್ಣಾ...