ಜೋರಾಗಿ ಮಳೆ ಬರುತ್ತಿತ್ತು, ಆಕಾಶ ಕಪ್ಪಾಗಿ ಮನೆಯೊಳಗೂ ಕತ್ತಲು ಇರುವಂತೆ ಮಾಡಿತ್ತು. ಯಾಕೋ ಬಹಳ ದಿನಗಳ ನಂತರ ಒಬ್ಬನೇ ಕೂತು ಏಕಾಂತವನ್ನು ಅನುಭವಿಸುವ ಆಸೆಯಾಗಿತ್ತು. ಏನು ಇಲ್ಲ ಸುಮ್ಮನೆ ನಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವುದು, ಮುಂದಿನ ಕನಸುಗಳಿಗೆ ತೇಪೆ ಹಚ್ಚುವುದೇ ನನ್ನ ಆಸೆಯಾಗಿತ್ತು. ಯಾವ್ಯಾವುದೋ ನೆನಪುಗಳು, ಯಾರದೋ ಮಾತುಗಳು ಎಲ್ಲವು ಒಟ್ಟಿಗೆ ತಲೆಯಲ್ಲಿ ಬಂದು ಜಡಕಾಗಿ ಹೋಯಿತು. ಸರಿ, ಕ್ರಮಬಧ್ಧವಾಗಿ ಬಾಲ್ಯದಿಂದ ನೆನಪಿಸಿಕೊಳ್ಳೋಣ ಎಂದು ಪ್ರಾರಂಭಿಸಿದೆ. ಅನುಕ್ರಮವಾಗಿ ಬರಲು ಅದೇನು ತಿಂಗಳ ಸಂಬಳವಾ?
ನನಗೆ ನಿದ್ದೆ ಬರುವವರೆಗೂ ಪಕ್ಕದಲ್ಲೇ ಮಲಗಿ ನನ್ನ "ಎಂತಕ್ಕೆ" ಎನ್ನುವ ಅಸಂಬಧ್ಧ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಕೊಡುತ್ತಿದ್ದ "ಅಣ್ಣ". ನನಗೆ ಕತ್ತಲೆಯೆಂದರೆ ಭಯಂಕರ ಹೆದರಿಕೆಯಿತ್ತು. ರಾತ್ರಿ ಮೂತ್ರ ಬಂದು ಎಚ್ಚರವಾದಾಗ ಅಣ್ಣನ ಕೋಣೆಯ ಬಾಗಿಲ ಬಳಿ ನಿಂತು "ಅಣ್ಣಾ ಓ ಅಣ್ಣಾ" ಎಂದು ಕರೆದಾಗ ಅಲ್ಲೇ ಮಲಗಿರುವ ಅಣ್ಣಯ್ಯ, ಭಾವ ಎಲ್ಲರೂ ಬಯ್ಯುತ್ತಿದ್ದರು. ಈಗ ಮಲಗಿರುವಾಗ ಯಾರದ್ದಾದರೂ ಫೋನ್ ಬಂದರೆ ಅದೇನು ಅಲವರಿಕೆ ನನಗೆ. ಒಂದು ದಿನವೂ ಅಣ್ಣ "ನೀನೆ ಹೋಗಿ ಮೂತ್ರ ಮಾಡಿ ಬಾ, ನನ್ನ ಎಬ್ಬಿಸಬೇಡ" ಎಂದದ್ದಿದೆಯೇ?
ಆಗ ಸಣ್ಣವನಿದ್ದೆ. ನಮ್ಮೂರಿನ ಪ್ರೌಢ ಶಾಲೆಯ ವಾರ್ಷಿಕೋತ್ಸವಕ್ಕೆ ನೀನು ಹೋಗುವುದು ಬೇಡ ಎಂದು ಮನೆಯವರೆಲ್ಲರೂ ಹೇಳುತ್ತಿದ್ದರೂ, ದೊಡ್ಡಣ್ಣ, ಹತ್ತನೇ ತರಗತಿಯಲ್ಲಿ ಓದುತ್ತಿದ್ದ, ಬೆನ್ನಿನ ಮೇಲೆ "ಉಪ್ಪಿನ ಮೊಟ್ಟೆ" ಮಾಡಿಕೊಂಡು ಕರೆದುಕೊಂಡು ಹೋಗಿದ್ದ. ಮೂರೂವರೆ ಕಿ ಮಿ ಹೊತ್ತುಕೊಂಡು ಹೋಗಿದ್ದ. ಆಗಿನ ಸಂತೋಷ ತಿರುಗಿ ಬರಬಹುದಾ? ಬಹುಷಃ ಅಣ್ಣನಿಗೂ ಈ ಘಟನೆ ನೆನಪಿರಲಿಕ್ಕಿಲ್ಲ.
ಶಾಲೆಯ ರಜಾ ದಿನಗಳಲ್ಲಿ ಮನೆಗೆ ಬಂದ ಅತ್ತೆಯರ ಮಕ್ಕಳೊಡನೆ ಹೊಳೆಗೆ ಹೋಗಿ ಪಂಜಿಯ ತುಂಡಿನಲ್ಲಿ ಅವಲಕ್ಕಿ ಹಾಕಿಕೊಂಡು ಮೀನು ಹಿಡಿಯುವ ಸಂಭ್ರಮವನ್ನು ಹೇಗೆ ವರ್ಣಿಸಲಿ. ಹದಿನೈದಿಪ್ಪತ್ತು ದಿನ ವಯಸ್ಸಿನ ನಾಯಿ ಮರಿಗಳನ್ನು ಈಜು ಕಲಿಸೋಣವೆಂದು ಹೊಳೆಗೆ ತೆಗೆದುಕೊಂಡು ಹೋಗಿ ತೇಲಿಬಿಡುವುದರಲ್ಲಿದ್ದಾಗ ಕಂಡ ಅಜ್ಜನ ಹತ್ತಿರ ಬೈಸಿಕೊಂಡಾಗ ಅದ ಅವಮಾನ ಲೆಕ್ಕಕ್ಕೆ ಸಿಗುವುದೇ? ಆಯಿ ಹಾಲು ಹಿಂಡುವಾಗ ದೊಣಕಲಿನಲ್ಲಿ ನಿಂತುಕೊಂಡು ಮಾತನಾಡುತ್ತಾ ಆಕಳ ಕಿವಿ ತಿರುಪಿ ಅದು ಆಯಿಗೆ ಒದ್ದಾಗ ಆದ ಭಯ ಪುನರಾವರ್ತನೆ ಆಗುವುದೇ?
ಏಳನೇ ತರಗತಿಯಲ್ಲಿದ್ದಾಗ ಕೇಂದ್ರ ಮಟ್ಟದ ಭಾಷಣ ಸ್ಫರ್ದೆಯಲ್ಲಿ ಪ್ರಥಮ ಬಹುಮಾನ ಗೆದ್ದಾಗ ಆದ ಖುಷಿ, ಹತ್ತನೇ ತರಗತಿಯಲ್ಲಿ ಇದ್ದಾಗ ವಾರ್ಷಿಕೋತ್ಸವದ ದಿನ ಮಾಡಿದ ನಾಟಕದ ಪಾತ್ರ ನಿರೀಕ್ಷೆಗೂ ಮೀರಿ ಜನಪ್ರಿಯವಾದಾಗ ಆದ ಹೆಮ್ಮೆ ನೆನಪಿನಲ್ಲಿ ಕಚಗುಳಿ ಇಡುತ್ತವೆ. ಪ್ರೌಢಶಾಲೆಯಲ್ಲಿರುವಾಗಿನ ಕ್ರಿಕೆಟ್ ಹುಚ್ಚು ಬಾಲಿಶ ಎನಿಸುತ್ತದೆ. ಕುಳ್ಳಗಿದ್ದುದರಿಂದ ಪ್ರಾರ್ಥನೆ ಮಾಡುವಾಗ ಸಾಲಿನಲ್ಲಿ ಎದುರಿಗೆ ನಿಲ್ಲುವಾಗ ಬರುತ್ತಿದ್ದ ಆಕ್ರೋಶ ಯಾರಮೇಲಿನದೋ? ಹೈ ಸ್ಕೂಲ್ ನಿಂದ ಮನೆಗೆ ಹೋಗುವಾಗ ಕೆಲವೊಮ್ಮೆ ವಿ ಡಿ ಅಂಗಡಿಯಿಂದ ಕೊಳ್ಳುತ್ತಿದ್ದ ಶೇಂಗಾ, ಶುಂಟಿ ಪೆಪ್ಪರಮೆಂಟ್ ರುಚಿ ಮರೆಯಲಾಗುವುದೇ?
ವಿಜ್ಹ್ನಾನವೆಂದರೇನು ವಾಣಿಜ್ಯವೆಂದರೇನು ಗೊತ್ತಿಲ್ಲದೇ ಪಿ ಯು ಸಿ ಯಲ್ಲಿ ವಿಜ್ಹ್ನಾನ ಆರಿಸಿಕೊಂಡು ಮೊದಲ ವರ್ಷ ನಪಾಸಾದಾಗ ಆದ ಅವಮಾನ, ಕೀಳರಿಮೆ, ಭವಿಷ್ಯದ ಬಗೆಗಿನ ಹೆದರಿಕೆ ಏಕೆ ನೆನಪಾಗುತ್ತದೋ? ನಂತರ ವಾಣಿಜ್ಯವನ್ನು ತೆಗೆದುಕೊಂಡು ಪ್ರಥಮ ವರ್ಷ ಪ್ರತಿಶತ ೮೦ ಅಂಕಗಳನ್ನು ತೆಗೆದುಕೊಂಡಾಗ ಏನೋ ಪ್ರತಿಕಾರ ತೀರಿಸಿಕೊಂಡ ಭಾವ, ಬೇಕಿತ್ತಾ ಅನಿಸುತ್ತದೆ.
ಸಣ್ಣವನಿದ್ದಾಗಿನಿಂದ ಇಲ್ಲಿಯವರೆಗೂ ಪಡೆದುಕೊಂಡ ಸಹಾಯಗಳೆಷ್ಟೋ.. ಅತ್ತೆಯ ಮಗಳು ಅತ್ತಿಗೆಯಿಂದ ಗಂಟೆ ನೋಡುವುದು ಕಲಿತೆ, ಭಾವನಿಂದ ಮಗ್ಗಿ ಕಲಿತೆ, ಅಣ್ಣಯ್ಯನಿಂದ ಲೆಕ್ಕ ಕಲಿತೆ... ಇನ್ನೂ ಎಷ್ಟೆಷ್ಟೋ ಜನರಿಂದ ನಾ ನಾ ರೀತಿಯಿಂದ ಉಪಕೃತನಾಗಿದ್ದೇನೆ. ಅವರೆಲ್ಲರಿಗೂ ಧನ್ಯವಾದ ಹೇಳುವ ಮನಸ್ಸಾಗಿದೆ...
ಏನೇ ಹೇಳಿ "ಬೀಚಿ"ಯ ಮಾತು ನಿಜವೆನ್ನಿಸುತ್ತದೆ. ಸಂತೋಷ ಎನ್ನುವುದು "ನೆನಪುಗಳಲ್ಲಿರುತ್ತದೆ". ನೆನಪುಗಳ ಜೊತೆ ಹೊತ್ತು ಕಳೆದಮೇಲೆ ಎಷ್ಟು ಮುದವೆನ್ನಿಸುತ್ತದೆ.. ಅಲ್ಲವೇ?