ಕೆಲವು ಸಲ ಅನಿರೀಕ್ಷಿತವಾಗಿ ಅಪರೂಪದವರು ಸಿಕ್ಕಿದರೆ ಅದೆಷ್ಟು ಗೊಂದಲವಾಗುತ್ತದೆ ಅನ್ನುವುದನ್ನು ಅನುಭವಿಸಿದ್ದೀರಾ? ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಅನ್ನುವುದು ಗೊತ್ತಾಗದೆ ಒದ್ದಾಡುವುದು, ನಗು ಬರದಿದ್ದರೂ ನಗುವುದು ಇವನ್ನೆಲ್ಲ ಅನುಭವಿಸಿಯೇ ನೋಡಬೇಕು. ಬಹುಷಃ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಇದರ ಅನುಭವ ಆಗಿಯೇ ಇರುತ್ತದೆ. ಕೆಲವರು ತಡಬಡಾಯಿಸಿದರೆ ಕೆಲವರು ಹೇಗೋ ನಿಭಾಯಿಸಿಬಿಡುತ್ತಾರೆ. ಬೇಡದ ಜಾಗದಲ್ಲಿ, ಬೇಡದ ಸಂದರ್ಭದಲ್ಲಿ ಸಿಕ್ಕರಂತು ಮುಖ ಹುಳ್ಳಗಾಗುವುದನ್ನು ತಪ್ಪಿಸಿಕೊಳ್ಳಲಾಗದು.
ನಮ್ಮ ಸುತ್ತಲಿನ ಊರಿಗೆಲ್ಲ ಹೆಸರುವಾಸಿಯಾದ ಮನೆಯೊಂದಿದೆ. ಪುಂಖಾನುಪುಂಖವಾಗಿ ಯಾವ ವಿಷಯದ ಬಗ್ಗೆಯಾದರೂ ಯಾರಿಗೆ ಬೇಕಾದರೂ ಕಂಡಕಂಡಲ್ಲಿ ಭಾಷಣ ಬಿಗಿಯುವುದರಲ್ಲಿ ಅವರು ನಿಸ್ಸೀಮರು. ಮದುವೆ ಮುಂಜಿಗೆ ಆಮಂತ್ರಣ ಕೊಡಲು ಅವರ ಮನೆಗೆ ಹೋಗೋಣವೆಂದರೆ ಕೆಲವರು ಅದನ್ನು ತಮ್ಮ ಕೊಲೆಯ ಸಂಚೆನೋ ಅನ್ನುವಂತೆ ಬೆಚ್ಚುತ್ತಾರೆ. ಯಾರಾದರೂ ಅವರ ಮನೆಗೆ ಹೋದರೆ ಸಾಕು, ಕುದಿಯುತ್ತಿರುವ ಚಹಾ ಎದುರಿಗಿಟ್ಟು ಅದು ಆರುವವರೆಗೂ ಇಡೀ ಮನೆಯವರೆಲ್ಲ ಸೇರಿ ಮೆದುಳಿಗೆ ಕೈ ಹಾಕಿ ಕಲಸಿಬಿಡುತ್ತಾರೆ. ಅಲ್ಲಿಂದ ಹೊರಬಂದಮೇಲೆ ಜಗತ್ತಿನ ವೈಶಾಲ್ಯ ಹಾಗು ಶಾಂತತೆಯ ಪರಿಚಯ ಸರಿಯಾಗಿ ಆಗಿ ಅವುಗಳ ಮಹತ್ವ ತಿಳಿಯುತ್ತದೆ.
ಹಿಂದಿನವಾರ ನನ್ನ ಗೆಳೆಯನೊಬ್ಬನಿಗೆ "ಆ" ಮನೆಯವರಿಬ್ಬರು ಬೆಂಗಳೂರಿನಲ್ಲಿ ಸಿಕ್ಕಿದ್ದರಂತೆ. ರಸ್ತೆಯಲ್ಲೆಲ್ಲೋ ಇವನು ಹೋಗುತ್ತಿರುವಾಗ ಅಚಾನಕ್ಕಾಗಿ ಅವರಿಬ್ಬರೂ ಎದುರಿಗೆ ಪ್ರತ್ಯಕ್ಷವಾದಾಗ ಎನುಮಾಡುವುದೆಂದು ತಿಳಿಯದೆ ಕಕ್ಕಾಬಿಕ್ಕಿಯಾದನಂತೆ. ಒಂದೇ ಊರಿನವರು ಆದದ್ದರಿಂದ ಎದುರಿಗೆ ಸಿಕ್ಕಾಗ ಮಾತನಾಡಿಸುವು ಸೌಜನ್ಯ. ಉಭಯಕುಶಲೋಪರಿ ಮಾತುಕತೆಯಾದಮೇಲೆ ಮನೆಯೆಲ್ಲಿ ಇದೆ ಎಂದು ಅವರು ಕೇಳಿದಾಗಲೇ ಪರಿಸ್ಥಿತಿಯ ಗಹನತೆ ಅವನ ಅರಿವಿಗೆ ಬಂದಿದ್ದು. ಯಾವುದೋ ಮಾತಿನ ಭರದಲ್ಲಿ ಮನೆಯ ವಿಳಾಸವನ್ನು ಹೇಳದೆ, ತಲೆಹೋಗುವಂತ ಕೆಲಸವನ್ನೇನೋ ಆರೋಪಿಸಿಕೊಂಡು ಅಲ್ಲಿಂದ ಕಾಲ್ಕಿತ್ತನಂತೆ. ಅಂತಹ ಸಂದರ್ಭದಲ್ಲೂ ಸಹ ಅವನಿಗೆ ನನ್ನ ಮನೆಯ ವಿಳಾಸವನ್ನು ಕೊಡುವ ಆಲೋಚನೆ ಬಂದಿತ್ತಂತೆ. ನಾನು ತೀರ್ಮಾನಿಸಿದ್ದೇನೆ, ಯಾರಿಗೂ ನನ್ನ ಮನೆಯ ವಿಳಾಸವನ್ನು ಮಾತ್ರಾ ಕೊಡಬಾರದೆಂದು.
ಕೆಲವುಸಲ ಅಪರೂಪಕ್ಕೆ ಸಿಕ್ಕವರ ಹೆಸರು ನೆನಪಿನಲ್ಲಿರುವುದಿಲ್ಲ. ಆಗ ನೆನಪಿಸಿಕೊಳ್ಳುವುದಕ್ಕೆ ಒದ್ದಾಡಬೇಕು. ಆಗ ಹೆಂಡತಿಯನ್ನು ಕರೆದು "ಇಲ್ಲಿ ನೋಡು ಯಾರು ಸಿಕ್ಕಿದ್ದಾರೆಂದು!!" ಹೇಳಿ ಅವಳಿಗೆ ಏನಾದರು ಸಿಕ್ಕವರ ಹೆಸರು ಗೊತ್ತಿದೆಯೋ ಎಂದು ಕೇಳುವುದು. "ಅರೆ ನೀನು!! ನಿನ್ನನ್ನು ಮರೆಯುವುದಕ್ಕೆ ಸಾಧ್ಯವಾ.." ಎಂದು ಹುಳಿ ಹುಳಿ ನಗೆಯಾಡುವುದು, ಇಂತಹ ಚೇಷ್ಟೆಗಳು ಸಾಮಾನ್ಯ. ನಾನಂತೂ ಸಿಕ್ಕವರ ಮುಖಕ್ಕೆ ಯಾವ ಹೆಸರು ಹೊಂದುತ್ತದೆ ಎಂದು ನೋಡಿ ಯಾವುದೋ ಒಂದು ಹೆಸರನ್ನು ಹೇಳಿಬಿಡುತ್ತೇನೆ ಅಮೇಲಾಗುವ ಪರಿಣಾಮಗಳಿಗೆ ಸಿದ್ದನಾಗಿಯೇ. ಕೆಲವರಂತೂ "ನಾನು ಯಾರು ಹೇಳು ನೋಡೋಣ" ಅಂತ ತಲೆ ಬಿಸಿ ಮಾಡುತ್ತಾರೆ. ಪಕ್ಕದ ಮನೆಯ ಚಿಕ್ಕಪ್ಪನೊಬ್ಬನಿದ್ದಾನೆ ಅವನು ಯಾರಿಗೆ ಯಾವ ಹೆಸರನ್ನು ಬೇಕಾದರೂ ಹೇಳುತ್ತಾನೆ. ಒಮ್ಮೆ ಅವರ ಮನೆಗೆ ಬಂದ ಅತ್ತಿಗೆಯೊಬ್ಬರಿಗೆ "ವಿನಾಯಕ ಅಕ್ಕ" ಅಂತ ಕರೆದುಬಿಟ್ಟಿದ್ದ. ಹತ್ತೆಂಟು ನೆಂಟರಿಷ್ಟರ ಹೆಸರೇ ನಮಗೆ ನೆನಪಿರುವುದಿಲ್ಲ, ಇನ್ನು ವೈದ್ಯರು ಹೇಗೆ ನೂರಾರು ಔಷಧಿಗಳ ಹೆಸರನ್ನು ನೆನಪಿಟ್ಟುಕೊಳ್ಳುತ್ತಾರೆ?
ಅನಿರೀಕ್ಷಿತವಾಗಿ ಅತ್ಮೀಯರೋ, ಬೇಕಾದ ಬಂಧುಗಳೋ ಸಿಕ್ಕರೆ ಆಗುವ ಸಂತೋಷವೂ ಸಹ ಅಪ್ರಮತಿಮ.
ಇಂತಹ ವೇಗದ ಜೀವನದಲ್ಲಿ ಭೇಟಿ ಮಾಡಬೇಕೆಂದು ಆಲೋಚಿಸುತ್ತಿರಬೇಕಾದರೆ ಹಠಾತ್ತಾಗಿ ಸಿಗಬೇಕಾದವರು ಸಿಕ್ಕಿ ನಮ್ಮ ಜೊತೆ ಸಮಯ ಕಳೆದರೆ ತುಂಬಾ ಆನಂದವಾಗುತ್ತದೆ.