Wednesday, September 30, 2026

ಒಂದು ಅಪರೂಪದ ಜೀವವೈವಿಧ್ಯ

ಜೀವನದಲ್ಲಿ ಒಂದೇ ಒಂದು ಸಲವೂ ಸ್ವತಂತ್ರವಾಗಿ ತಿರುಗಾಡುತ್ತಿರುವ ಹುಲಿಯನ್ನು ನೋಡದವರೂ “Save Tiger” ಎಂದು ಕೂಗುತ್ತಿದ್ದಾರೆ.

ಹುಲಿಯನ್ನು ಉಳಿಸುವುದು ಒಳ್ಳೆಯದೇ. ಆದರೆ ದೀಪಾವಳಿಯಲ್ಲಿ ಹುಲ್ದೇವರ ಪೂಜೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದನ್ನೂ “Save Tiger” ಅಭಿಯಾನದ ಅಡಿಯಲ್ಲಿ ಸೇರಿಸಬಹುದೇ ಎಂಬುದು ಬೇರೆ ವಿಚಾರ.

ಅಳಿವಿನ ಅಂಚಿನಲ್ಲಿರುವುದು ಹುಲಿಯೊಂದೇನಾ?

“ಸೇವ್ ಚೋರಟೆ”, “ಸೇವ್ ಇಸುಕು”, “ಸೇವ್ ಸುಂಗ್ನ್ಹುಳ” ಎಂಬ ಯಾವುದೇ ಘೋಷಣೆಗಳು ನನ್ನ ಕಿವಿಗೆ ಬಿದ್ದಿಲ್ಲ.

ಆದರೆ ನಾನು ಈಗ ಹೇಳಹೊರಟಿರುವುದು ಈ ಯಾವ ಜೀವಿಗಳ ಬಗ್ಗೆಯೂ ಅಲ್ಲ.

ನಾನು ಹೇಳುತ್ತಿರುವುದು ಇನ್ನೊಂದು ಅಪರೂಪದ ಜೀವವೈವಿಧ್ಯದ ಬಗ್ಗೆ.

ಕಂಜೂಸು.

ಹೌದು.
ಕಂಜೂಸು ಎಂಬ ಜೀವಿ.

ಒಂದು ಕಾಲದಲ್ಲಿ ನಮ್ಮ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತಿದ್ದ ಈ ಜೀವಿ ಈಗ ನಿಧಾನವಾಗಿ ಅಳಿವಿನಂಚಿಗೆ ಸರಿಯುತ್ತಿದೆ.

ಇದಕ್ಕೆ ಸರ್ಕಾರ ಯಾವುದೇ ಸಂರಕ್ಷಣಾ ಯೋಜನೆ ರೂಪಿಸಿಲ್ಲ.
ಯಾವುದೇ NGO “ಸೇವ್ ಕಂಜೂಸು” ಎಂದು ಅಭಿಯಾನ ನಡೆಸುತ್ತಿಲ್ಲ.
ಯಾವುದೇ Wildlife Sanctuaryಯಲ್ಲಿ ಇವರಿಗಾಗಿ ಪ್ರತ್ಯೇಕ ಪ್ರದೇಶ ಮೀಸಲಿಟ್ಟಿಲ್ಲ.

ಆದರೆ ಪರಿಸ್ಥಿತಿ ಗಂಭೀರವಾಗಿದೆ.

ಕಂಜೂಸಿತನವೇ ಕಾಣೆಯಾಗುತ್ತಿದೆ!

 

ಕಂಜೂಸುಗಳಲ್ಲೂ ಎಷ್ಟು ವೈವಿಧ್ಯವಿತ್ತು!

ದುಡ್ಡು ಖರ್ಚು ಮಾಡುವುದೆಂದರೆ ಶರೀರದ ಒಂದು ಭಾಗವನ್ನೇ ತುಂಡು ಮಾಡಿ ಕೊಟ್ಟಂತೆ ನೋವನ್ನು ಅನುಭವಿಸುವವರು.

ಒಂದು ರೂಪಾಯಿ ಖರ್ಚು ಮಾಡಿದರೆ ಅದರ ಲೆಕ್ಕವನ್ನು ಮೂರು ಬಾರಿ ಹಾಕುವವರು.

ಹತ್ತು ರೂಪಾಯಿ ಖರ್ಚಾದರೆ,
“ಅದು ನಿಜವಾಗಿಯೂ ಬೇಕಿತ್ತಾ?” ಎಂದು ತಮ್ಮನ್ನೇ ವಿಚಾರಣೆ ಮಾಡುವವರು.

ನೂರು ರೂಪಾಯಿ ಖರ್ಚಾದರೆ,
“ಇದನ್ನು ತೆಗೆದುಕೊಳ್ಳದೇ ಇದ್ದಿದ್ದರೆ ಈಗ ನಮ್ಮ ಬಳಿ ನೂರು ರೂಪಾಯಿ ಇರುತ್ತಿತ್ತು” ಎಂದು ಮಲಗುವವರೆಗೂ ಪಶ್ಚಾತ್ತಾಪ ಪಡುವವರು.

 

 

ಮೊದಲೆಲ್ಲ ಚೌಕಾಶಿ ಎನ್ನುವುದು ಒಂದು ಕೌಶಲ್ಯ.

ಇವತ್ತಿನ ಮಕ್ಕಳಿಗೆ negotiation skill ಕಲಿಸಲು ಹರಸಾಹಸ ಮಾಡಬೇಕು.

ನಾಲ್ಕು ಅಂಗಡಿ ಸುತ್ತುವುದು ಒಂದು ಕಾಲದಲ್ಲಿ ಸಾಮಾನ್ಯ

ಕಿರಾಣಿ ಬೇಕಾ?

ಒಂದು ಅಂಗಡಿಗೆ ಹೋಗಿ ಬೆಲೆ ಕೇಳುವುದು.

ಎರಡನೇ ಅಂಗಡಿಗೆ ಹೋಗುವುದು.

ಮೂರನೇ ಅಂಗಡಿಯಲ್ಲಿ ಮತ್ತೆ ಕೇಳುವುದು.

ನಾಲ್ಕನೇ ಅಂಗಡಿಯಲ್ಲಿ “ಇಲ್ಲಿ ರೂಪಾಯಿ ನಾಲ್ಕಾಣೆ ಕಡಿಮೆ” ಎಂದು ಗೊತ್ತಾದರೆ, ಮತ್ತೆ ಮೊದಲ ಅಂಗಡಿಗೆ ಹೋಗಿ:

“ಅಲ್ಲೇ ಇಷ್ಟು ಕಡಿಮೆ ಕೊಡ್ತಿದ್ದಾರೆ!”

ಎಂದು ಹೇಳುವುದು.

ಅಂಗಡಿಯವನು:

“ಅಲ್ಲೇ ತಗೊಳ್ಳಿ.”

ಗ್ರಾಹಕ:

“ನಿಮ್ಮಲ್ಲಿ ಎಷ್ಟು ಕೊಡ್ತೀರಾ?”

ಅಂಗಡಿಯವನು:

“ಅವರಿಗಿಂತ ಕಡಿಮೆ ಕೊಡೋಕೆ ಆಗಲ್ಲ.”

ಇದೇ ಚೌಕಾಶಿಯ ಸುವರ್ಣಯುಗ.

ಇಂದು ನಾವು ಏನು ಮಾಡುತ್ತೇವೆ?

ಮೊಬೈಲ್‌ನಲ್ಲಿ ಐದು ನಿಮಿಷ search ಮಾಡುತ್ತೇವೆ.

ಮೊದಲ websiteನಲ್ಲಿ ಸಿಕ್ಕರೆ order.

ಅದರ ಮೇಲೆ “Buy Now”.

ಅಷ್ಟೇ.

 

ಕಂಜೂಸುತನಕ್ಕೆ ಕನ್ನಡದಲ್ಲೇ ದೊಡ್ಡ ಸಾಹಿತ್ಯವಿದೆ

ನಮ್ಮ ಹಿರಿಯರು ಕಂಜೂಸುತನವನ್ನು ವಿವರಿಸಲು ಬಳಸುತ್ತಿದ್ದ ನುಡಿಗಟ್ಟುಗಳೇ ಎಷ್ಟು ಅದ್ಭುತ!

ಯಾರಾದರೂ ದಾನ ಮಾಡುವ ಮನಸ್ಸಿಲ್ಲದಿದ್ದರೆ:

“ಅವನು ಎಂಜಲು ಕೈಯಲ್ಲಿ ಕಾಗೆಯನ್ನೂ ಓಡಿಸುವವನಲ್ಲ.”

ಅಂದರೆ, ಊಟ ಮಾಡಿದ ಮೇಲೆ ಕೈಯಲ್ಲಿ ಉಳಿದ ಎಂಜಲನ್ನೂ ಕಾಗೆಗೆ ಕೊಡಲು ಮನಸ್ಸಿಲ್ಲ!

ನನ್ನ ಚೌಕಾಶಿ ಸಾಮರ್ಥ್ಯ? ಶೂನ್ಯ.

ನನಗಂತೂ ಚೌಕಾಶಿಯ ಗಂಧವೇ ಇಲ್ಲ.

ಆ ಟಿಶ್ಯೂ ಪೇಪರ್ ಘಟನೆ

ಇದೆಲ್ಲಾ ನೆನಪಾಗಿದ್ದು ಒಂದು ದಿನ ಒಬ್ಬರನ್ನು ನೋಡಿದಾಗ. ಅವರು ಒಂದು ಟಿಶ್ಯೂ ಪೇಪರ್ ತೆಗೆದುಕೊಂಡರು. ಅದನ್ನು ನಾಲ್ಕು ಚೂರು ಮಾಡಿದರು. ಒಂದು ಚೂರು ಬಳಸಿದರು. ಮತ್ತೊಂದು ಸಮಯದಲ್ಲಿ ಎರಡನೇ ಚೂರು. ಮತ್ತೆ ಮೂರನೇದು. ನಾಲ್ಕನೇ ಚೂರನ್ನೂ ಬಳಸಿದರು. ಮೊದಲಿಗೆ ನನಗೆ ಆಶ್ಚರ್ಯವಾಯಿತು. ನಂತರ ಗೌರವ ಮೂಡಿತು.

“ಅಯ್ಯೋ! ಈ ಅಪರೂಪದ ಜೀವಿ ಇನ್ನೂ ಬದುಕಿದೆಯಲ್ಲ!”

ಒಂದು ಟಿಶ್ಯೂ. ನಾಲ್ಕು ಉಪಯೋಗ.

ಇದು ಕಂಜೂಸಿತನವೋ?

ಪರಿಸರ ಸಂರಕ್ಷಣೆಯೋ?

ಸಂಪನ್ಮೂಲ ನಿರ್ವಹಣೆಯೋ?

ಅಥವಾ “ದುಡ್ಡು ಕೊಟ್ಟು ತಂದಿದ್ದೀನಿ, ಪೂರ್ತಿ ಬಳಸಿಯೇ ತೀರುತ್ತೇನೆ” ಎಂಬ ಹಳೆಯ ತತ್ವಶಾಸ್ತ್ರವೋ?

ನನಗೆ ಗೊತ್ತಿಲ್ಲ.

ಆದರೆ ಒಂದು ವಿಷಯ ಖಚಿತ.

ಈ ದೃಶ್ಯವನ್ನು ಈಗಿನ ಕಾಲದಲ್ಲಿ ನೋಡಿದರೆ ಅದು ಸಾಮಾನ್ಯ ಘಟನೆ ಅಲ್ಲ. ಅದು ಜೀವವೈವಿಧ್ಯದ ದಾಖಲೆ!

 

ಕಂಜೂಸು ಸಂರಕ್ಷಣಾ ಅಭಿಯಾನ ಬೇಕು

ಹೀಗಾಗಿ ಇನ್ನು ಮುಂದೆ ಹುಲಿಯನ್ನು ಮಾತ್ರ ಉಳಿಸುವುದಲ್ಲ.

ನಮ್ಮ ಸಂಸ್ಕೃತಿಯಲ್ಲಿದ್ದ ಕೆಲವು ಅಪರೂಪದ ಜೀವಿಗಳನ್ನೂ ಉಳಿಸಬೇಕು.

ಸೇವ್ ಕಂಜೂಸು.

ಅಂತಹವರು ಈಗಾಗಲೇ ಅಳಿವಿನಂಚಿನಲ್ಲಿದ್ದಾರೆ.

 

ಇಲ್ಲವಾದರೆ ಮುಂದಿನ ಪೀಳಿಗೆಗೆ “ಕಂಜೂಸು” ಎಂದರೇನು ಎಂದು ವಿವರಿಸಲು ನಾವು ತಡಕಾಡಬಹುದು.

ಹೀಗೆ ಹೇಳಬಹುದು:

ಕಂಜೂಸು:
ಒಂದು ಕಾಲದಲ್ಲಿ ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ, ಹಣ ಖರ್ಚು ಮಾಡುವ ಮೊದಲು ಹಲವು ಬಾರಿ ಯೋಚಿಸುತ್ತಿದ್ದ, ಚೌಕಾಶಿ ಮಾಡುವ ಅಪರೂಪದ ಮಾನವ ಉಪಜಾತಿ. ಪ್ರಸ್ತುತ ಇದರ ಸಂಖ್ಯೆ ತೀವ್ರವಾಗಿ ಕುಸಿದಿದೆ.

“ನಿಮ್ಮ ಸುತ್ತಮುತ್ತ ಇನ್ನೂ ಒಬ್ಬ ಕಂಜೂಸು ಜೀವಂತವಾಗಿದ್ದರೆ, ದಯವಿಟ್ಟು ಅವರನ್ನು ಕಾಪಾಡಿ.

ಅವರ ಜೊತೆ ಚೌಕಾಶಿ ಮಾಡಿ.
ಅವರಿಂದ ಕಲಿಯಿರಿ.