Tuesday, May 22, 2012

ಒಂದು ಅನಿಸಿಕೆ

ವಿನಾಯಕ ಭಟ್ ಮೂರೂರು ಅವರೇ,

ನಿನ್ನೆ ನಿಮ್ಮ "ಜುಗಲ್ ಬಂದಿ" ಕಾರ್ಯಕ್ರಮವನ್ನು ನೋಡಿದೆ. ನಿಮ್ಮ ಅಭಿಪ್ರಾಯವನ್ನು ನೀವು ಹೇಳಿದ ರೀತಿ ಇಷ್ಟವಾಗಲಿಲ್ಲ. ನೀವು ಹೇಳಿದಿರಿ "ಆಹಾರ ಪದ್ಧತಿ ಒಬ್ಬನ ಖಾಸಗಿ ವಿಷಯ, ಯಾವುದನ್ನು ತಿನ್ನಬೇಕು, ಬಿಡಬೇಕು ಎನ್ನುವುದನ್ನು ಅವನೇ ತೀರ್ಮಾನಿಸಿಕೊಳ್ಳುತ್ತಾನೆ. ಯಾರೂ ಕಟ್ಟು ಹಾಕುವ ಅವಶ್ಯಕತೆಯಿಲ್ಲ"  ಎಂದು.

ಹಾಗಾದರೆ "ಗೋವಧೆ"ಯನ್ನು ನಿಷೇಧಿಸಬೇಕು, ಗೋಮಾಂಸ ಭಕ್ಷಣೆಯನ್ನು  ನಿಷೇಧಿಸಬೇಕೆಂದು ಏಕೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ? ಗೋಮಾಂಸವನ್ನು ತಿನ್ನಬೇಕೋ ಬಿಡಬೇಕೋ ಎನ್ನುವುದು ಒಬ್ಬನ ಖಾಸಗಿ ವಿಷಯ, ಅದಕ್ಕೇಕೆ ಕಟ್ಟು ಹಾಕಲು ಬೊಬ್ಬೆ ಹೊಡೆಯಲಾಗುತ್ತಿದೆ?

ಮಾಧ್ಯಮಗಳಲ್ಲಿ ಯಾವುದನ್ನು ನೋಡಬೇಕು, ಬಿಡಬೇಕು ಎನ್ನುವುದನ್ನು ಖಾಸಗಿ ಮನುಷ್ಯ ತೀರ್ಮಾನಿಸಿಕೊಳ್ಳುತ್ತಾನೆ. ಅದಕ್ಕೇಕೆ ಸೆನ್ಸಾರ್ ಬೋರ್ಡ್ ಮಾಡಿಕೊಳ್ಳಲಾಗಿದೆ? ನೈತಿಕ ನಿಯಮಗಳನ್ನೇಕೆ ಹೇರಲಾಗುತ್ತಿದೆ?

ನಾನು ಸಹಪಂಕ್ತಿ ಭೋಜನದ ಪರವಾಗಿಯೂ ಮಾತನಾಡುತ್ತಿಲ್ಲ, ವಿರೋಧವಾಗಿಯೂ ಅಲ್ಲ. ನೀವು ಹೇಳಿದ ಮಾತುಗಳಿಗಷ್ಟೇ ನನ್ನ ಆಕ್ಷೇಪಣೆ. ನೀವು ಹೇಳಬೇಕೆಂದಿರುವ ವಿಷಯವನ್ನು ಬೇರೆ ರೀತಿಯಲ್ಲಿ ಹೇಳಬಹುದಾಗಿತ್ತೇನೋ? ಯೋಚಿಸಿ.

Thursday, March 22, 2012

"ಆನೆ"

ಜೀವನದಲ್ಲಿ ಎಲ್ಲರಿಗೂ "ಆನೆ" ಇರಬೇಕಂತೆ. "ಆ" ಅಂದರೆ "ಆರೋಗ್ಯ", "ನೆ" ಅಂದರೆ "ನೆಮ್ಮದಿ". ಮೊನ್ನೆ ಕನ್ನಡದ ಕೋಟ್ಯಾಧಿಪತಿ ನೋಡುವಾಗ ಯಾರೋ ಸ್ಫರ್ದಿ ಹೇಳಿದ ಮಾತಿದು. ಉಂಡು ಮಲಗಿದಾಗ ನನಗೂ ಅನ್ನಿಸಿತು, ಎಲ್ಲರಿಗೂ "ತುತು" ಇರಬೇಕೆಂದು. "ತು" ಅಂದರೆ "ತುಂಬುಹೊಟ್ಟೆ", "ತು" ಅಂದರೆ "ತುರಿಕೆ". ಯಾರಿಗಾದರೂ ಕೇಳಿನೋಡಿ ನಿನ್ನ ಸಂತೋಷದ ಕ್ಷಣ ಯಾವುದು ಎಂದು. ನಾನು ಪರೀಕ್ಷೆ ಪಾಸಾಗಿದ್ದು ಎಂತಲೋ, ಪಕ್ಕದ ಊರಿನ ಕೂಸಿನ ಮದುವೆಯಲ್ಲಿ ಮದುಮಗನ ಜೊತೆ ಫೋಟೋ ತೆಗೆಸಿಕೊಂಡದ್ದು ಎಂತಲೋ ಯೋಚನೆ ಮಾಡಿ ಹೇಳುತ್ತಾರೆ. ಆದರೆ ಬೆನ್ನಿನ ಮೇಲೆ ಕೈ ಮುಟ್ಟದ ಜಾಗ ತುರಿಸಿದಾಗ ಎರಡೂ ಕೈಯಲ್ಲಿ ಜನಿವಾರವನ್ನು ಆಡಿಸಿ, ಅಥವಾ ಗೋಡೆಯ ಅಂಚಿಗೆ ಬೆನ್ನು ತಿಕ್ಕಿ ತುರಿಕೆಯನ್ನು ನಿವಾರಿಸಿಕೊಂಡಾಗ ಆಗುವ ಸಂತೋಷವನ್ನು ಯಾರೂ ಹೇಳುವುದಿಲ್ಲ. ಆ ಕ್ಷಣ ತುಂಬಾ ಸಂತೋಷವನ್ನ ಆನಂದವನ್ನ ಅನುಭವಿಸಿರುತ್ತೇವೆ. ಹೌದೋ ಅಲ್ಲವೋ?

Friday, February 17, 2012

ಚಳಿಗಾಲದ ಸ್ನಾನ

ಚಳಿಗಾಲದ ಚುಮು ಚುಮು ಚಳಿಯಲ್ಲಿ ಬೆಳಿಗ್ಗೆ ಕತ್ತಲಲ್ಲಿ ಬಿಸಿ ನೀರು ಸ್ನಾನ ಮಾಡುವುದೆಂದರೆ  ನನಗೆ ಬಹಳ ಇಷ್ಟ. ಊರಿನಲ್ಲಿ ಬೆಳಿಗ್ಗೆ ಬೇಗ ನೀರು ಕಾಯಿಸುತ್ತಾರೆ. ಬೆಳಿಗ್ಗೆ ಬೇಗ ಎದ್ದು ಬಿಸಿ ಬಿಸಿ ನೀರನ್ನು ತಲೆಯಮೇಲೆ ಹೊಯ್ದುಕೊಂಡರೆ ಏನೋ ಒಂಥರಾ ಖುಷಿ, ಮಜಾ. ಅದೆಷ್ಟು ಬಾರಿ ನಾನು ಹೀಗೆ ಮಜಾತೆಗೆದುಕೊಳ್ಳಲು ಹೋಗಿ ಅರ್ಧ ಮುಕ್ಕಾಲು ಗಂಟೆ ಸ್ನಾನ ಮಾಡಿದ್ದಿದೆ ಮತ್ತು ಅರ್ಧ ಹಂಡೆಗಿಂತಲೂ ಜಾಸ್ತಿ ನೀರನ್ನು ಖರ್ಚು ಮಾಡಿದ್ದಿದೆ. ಚಿಕ್ಕಪ್ಪನವರು, ಬಚ್ಚಲಮನೆಯಲ್ಲೇ ನಿದ್ದೆ ಹೋದೆಯೇನೋ? ಎಂದು ಬಯ್ದದ್ದಿದೆ. ನನ್ನ ನಂತರ ಸ್ನಾನಕ್ಕೆ ಬರುವವರಿಗೆ ಬಿಸಿ ನೀರು ಖಾಲಿ ಆಯ್ತೆಂದು ಬಯ್ಸಿಕೊಂಡದ್ದಿದೆ. ಆದರೂ ಅದರ ಹುಚ್ಚು ಬಿಟ್ಟಿಲ್ಲ. ಮೊನ್ನೆ ಊರಿಗೆ ಹೋದಾಗಲೂ ಮತ್ತೆ ಹೀಗೆ ಸ್ನಾನ ಮಾಡಿ ಖುಷಿ ಪಟ್ಟೆ.


ಬಿಸಿ ನೀರು ಸ್ನಾನ ಮಾಡುವುದೆಂದರೆ ಬರ ಬರನೆ ನೀರನ್ನು ಹೊಯ್ದುಕೊಳ್ಳುವುದಲ್ಲ. ಚೊಂಬಿನಲ್ಲಿ ನೀರನ್ನು ಮೊಗೆದುಕೊಂಡು ನಿಧಾನವಾಗಿ ತಲೆಯಮೇಲೆ ಸುರಿದುಕೊಳ್ಳಬೇಕು. ನೀರು ಹೊಯ್ದುಕೊಂಡ ಶಬ್ಧವೂ ಬರಬಾರದು ಅಷ್ಟು ನಿಧಾನವಾಗಿ. ಪೂರ್ತಿ ಬೆಳಗಾಗಿರಬಾರದು, ಕತ್ತಲೆ ಕತ್ತಲೆ ಇರಬೇಕು, ಬಚ್ಚಲಮನೆಯ ದೀಪವನ್ನೂ ಹಾಕಬಾರದು. ಆಗ ಆ ನಿಶ್ಯಬ್ಧದಲ್ಲಿ ಕಣ್ಣು ಮುಚ್ಚಿಕೊಂಡು ನಿಧಾನವಾಗಿ ಬಿಸಿ ನೀರನ್ನು ಹೊಯ್ದುಕೊಂಡಾಗ ಸಿಗುವ ಮಜವಿದೆಯಲ್ಲ ಅದು ಅನಿರ್ವರ್ಣನೀಯ.


ಬೆಂಗಳೂರಿನಲ್ಲಿ ಎಷ್ಟು ಗಡಿಬಿಡಿಯಲ್ಲಿ ಸ್ನಾನಮಾಡುತ್ತೇವೆಂದರೆ ಬೆನ್ನ ಮೇಲಿನ ಕೊಳೆಯೂ ಪೂರ್ತಿ ಹೋಗಿರುವುದಿಲ್ಲ. ಇನ್ನು ಇಂತಹ ಮಜಾ ತೆಗೆದುಕೊಳ್ಳುವ ಮಾತೆಲ್ಲಿಂದ ಬಂತು. ಇದೆ ರೀತಿ ಅದೆಷ್ಟು ಚಿಕ್ಕ ಚಿಕ್ಕ ಖುಶಿಗಳನ್ನು ನಾವು ಕಳೆದು ಕೊಂಡಿದ್ದೇವೆ, ಕಳೆದುಕೊಳ್ಳುತ್ತಲಿದ್ದೇವೆ. ಚಳಿಗಾಲದ ಬೆಳಿಗ್ಗೆ ಹೊಂಬಿಸಿಲನ್ನು ಕಾಯಿಸುವುದು, ಕಣಜದ ಮೇಲೆ ಅಡಿಕೆಯನ್ನು ಹರಗುವಾಗ ಬರುವ ಜರಬರ ಶಬ್ದ, ತೊಗರೊಲೆಯ ಬೆಂಕಿ,  ಚಾಲಿ ಕಣದ ಹರಟೆ, ತೋಟದಲ್ಲಿ ಗೋಟು ಆರಿಸುವಾಗಿನ ಅಪ್ಪನ ಹಾಸ್ಯ ಚಟಾಕಿಗಳು.. ಅದೆಷ್ಟು ಅಂತ ಹೇಳಲಿ..


ಹಾಗಂತ ನಾವು ಬಹಳ ಖುಶಿಗಳನ್ನು ಕಳೆದುಕೊಂಡುಬಿಟ್ಟಿದ್ದೇವೆ ಎಂದು ಚಿಂತಿಸುತ್ತಾ ಕುಳಿತುಕೊಳ್ಳುವುದು ಸರಿಯಲ್ಲ. ಈಗ ಇಲ್ಲಿರುವ ಸಣ್ಣ ಪುಟ್ಟ ಖುಶಿಗಳನ್ನು ಹುಡುಕಬೇಕು. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಬಹಳಷ್ಟು ಕಳೆದುಕೊಳ್ಳಬೇಕಾಗುತ್ತದೆ. ನಾವು ಹೊಂದಿಕೊಳ್ಳಲೇಬೇಕು. ಹಾಗಾಗಿ ನಾವು ನಮ್ಮ ಇಲ್ಲಿನ ಸಾಧನೆಗಳ ಸಂತೋಷವನ್ನ, ಸಾರ್ಥಕ್ಯವನ್ನ ವಿಷಾದಪೂರ್ವಕವಾಗಿ ಅನುಭವಿಸಬೇಕಾಗುತ್ತದೆ, ಹಂಚಿಕೊಳ್ಳಬೇಕಾಗುತ್ತದೆ. ಏನಂತೀರಾ?

Wednesday, February 15, 2012

ವಿದ್ಯುತ್

"ವಿದ್ಯುತ್" ಎನ್ನುವುದು ನನಗೊಂದು ಆಶ್ಚರ್ಯ ಇವತ್ತಿಗೂ. ಒಂದೊಂದು ಸಲ ದೇವರು ಇದ್ದಾನೆ ಎನ್ನುವುದಕ್ಕೂ ಇದೇ ಸಾಕ್ಷ್ಯ ಅನ್ನಿಸಿಬಿಡುತ್ತದೆ. ಕಣ್ಣಿಗೆ ಕಾಣುವುದಿಲ್ಲ ಆದರೆ ಮುಟ್ಟಿದರೆ ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಶಾಕ್ ಹೊಡೆಯುತ್ತದೆ. ಕ್ಷಣಮಾತ್ರದಲ್ಲಿ ಇಲ್ಲಿ ಸ್ವಿಚ್ ಒತ್ತಿದರೆ ಅಲ್ಲೆಲ್ಲೋ ಬೆಳಕಾಗುತ್ತದೆ. ಸಣ್ಣ ತಂತಿಯಲ್ಲಿ ಏನೇನನ್ನೋ ತಿರುಗಿಸಬಹುದಾದಷ್ಟು, ಸುಡುವಷ್ಟು ಪ್ರಮಾಣದ ವಿದ್ಯುತ್ ಹರಿದು ಹೋಗುತ್ತದೆ. ತಂತಿಯಲ್ಲಿ ಹರಿಸಬಹುದಾದರೂ ಗಾಳಿಯಲ್ಲಿ ಬೆರೆಯುವುದಿಲ್ಲ, ಆರಿಹೊಗುವುದಿಲ್ಲ. ಉಪಯೋಗಿಸದಿದ್ದರೆ ಕರ್ಚು ಆಗುವುದಿಲ್ಲ. ಅದೇನೋ ವಾಹಕವಂತೆ ಅದರಲ್ಲಿ ಮಾತ್ರ ವಿದ್ಯುತ್ ಹರಿಯುತ್ತದಂತೆ. ಅದಕ್ಕೆ ಹೇಗೆ ಗೊತ್ತಾಗುತ್ತದೋ ಇದು ವಾಹಕ, ನಾನು ಇದರಲ್ಲಿ ಹರಿಯಬಹುದು. ಇದು ವಾಹಕವಲ್ಲ ಇದರಲ್ಲಿ ನಾನು ಪ್ರವಹಿಸಲಾರೆ ಎಂದು.

ವಿದ್ಯುತ್ತಿಗೆ ಕಾಗೆಗಳಮೇಲೆ ಮೃದು ಧೋರಣೆಯಿದೆ . ನಾವು ಯಾರೇ ಮುಟ್ಟಿದರೂ ಹಿಂದೂ ಮುಂದು ಯೋಚಿಸದೆ ಶಾಕ್ ಹೊಡೆಯುತ್ತದೆ ಆದರೆ ಕಾಗೆಗಳು ಸಾಲಾಗಿ ತಂತಿಯ ಮೇಲೆ ಕುಳಿತುಕೊಂಡರೂ ಏನೂ ಆಗುವುದಿಲ್ಲ. ಅವು ತಂತಿಯ ಮೇಲೆ ಕುಳಿತುಕೊಂಡು ಅವರ ಕೊಕ್ಕು ಚೂಪಾಗಿಸಿಕೊಳ್ಳುವುದೋ, ಎಲ್ಲಿಂದಲೋ ಹೊತ್ತು ತಂದ ಸತ್ತು ಕೊಳೆತು ನಾರುತ್ತಿರುವ ಇಲಿಯ ದೇಹವನ್ನು ಹಂಚಿಕೊಳ್ಳುವುದೋ ಮಾಡುತ್ತಿರುತ್ತವೆ. ಆಗ ಅವು ನಮ್ಮತ್ತ ತಿರುಗಿ ನೋಡಿದಾಗ ನಮ್ಮನ್ನು ಹೀಯಾಳಿಸಲೆಂದೇ ನೋಡುತ್ತಿರುವಂತೆನಿಸುತ್ತದೆ.

ಜನರ ಮತ್ತು ನನ್ನ ನಂಬಿಕೆ ಏನೆಂದರೆ ವಿದ್ಯುತ್ ಅಪಾಯಕಾರಿ, ಅದನ್ನು ದೂರವಿಡಬೇಕೆಂದು. ವಿಚಿತ್ರವೆಂದರೆ ವೈದ್ಯಕೀಯ ಪದ್ಧತಿಯಲ್ಲಿ ಶಾಕ್ ಕೊಡುವುದೂ ಒಂದು ರೀತಿಯ ಚಿಕಿತ್ಸೆ ಕೆಲವು ಮಾನಸಿಕ ರೋಗಗಳಿಗೆ. ಇಂತಹ ಚಿಕಿತ್ಸೆಯಲ್ಲಿ ಕಡಿಮೆ ಪ್ರಮಾಣದ ವಿದ್ಯುತ್ತನ್ನು ದೇಹದೊಳಗೆ ಹರಿಸುತ್ತಾರಂತೆ.  ಅವರಿಗೇನಾದರೂ ಮಾನಸಿಕ ಸ್ಥಿಮಿತ ಇದ್ದಿದ್ದರೆ ವಿದ್ಯುತ್ ಹಾಯಿಸಲು ಒಪ್ಪುತ್ತಿದ್ದರೆ? ಖಂಡಿತ ಇಲ್ಲ. ಮಾನಸಿಕ ಸ್ಥಿಮಿತ ಇರುವವರಿಗೆ ವೈದ್ಯರೂ ವಿದ್ಯುತ್ತನ್ನು ಹಾಯಿಸುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎನ್ನಿ.

ಬಹಳ ದಿನಗಳ ಹಿಂದೆ ನನ್ನ ಪರಮಾಪ್ತನಿಗೆ ಏನೋ ವಿವರಿಸುವಾಗ "ಉದಾಹರಣೆಗೆ ವಿದ್ಯುತ್ ತಂತಿಯನ್ನು ತೆಗೆದುಕೋ" ಅಂತ ಹೇಳಿದ್ದೆ. "ಉದಾಹರಣೆಗಲ್ಲ ಯಾವುದಕ್ಕೂ ವಿದ್ಯುತ್ ತಂತಿಯನ್ನು ತೆಗೆದುಕೊಂಡು ಹಿಡಿಯುವುದಿಲ್ಲ. ತಲೆ ಸರಿ ಇರುವವರಾರೂ ವಿದ್ಯುತ್ ತಂತಿಯನ್ನು ಹಿಡಿದುಕೊಳ್ಳುವುದಿಲ್ಲ." ಎಂದು ನನ್ನ ಕಾಲೆಳೆದಿದ್ದ. ಈಗಲೂ ಆಗಾಗ ನೆನಪಿಸುತ್ತಿರುತ್ತಾನೆ.

Saturday, January 28, 2012

ದ್ವಂದ್ವ

ನನ್ನನ್ನು ಸಮಾಜ ನಾನು ಹುಟ್ಟಿದ ಮೇಲೆ ನೋಡಲಾರಂಭಿಸಿದೆ. ನಾನು ಹುಟ್ಟಿದಾರಭ್ಯ ಸಮಾಜವನ್ನು ನೋಡುತ್ತಿದ್ದೇನೆ. ಯಾರು ಒಬ್ಬರನ್ನೊಬ್ಬರು ಜಾಸ್ತಿ ನೋಡಿದ ಹಾಗಾಯಿತು?

ಓದು

ಓದುವುದು ಏತಕ್ಕೆ? ಓದಿದ್ದನ್ನ ನೆನಪಿರಿಸಿಕೊಳ್ಳುವುದಕ್ಕೋ ಅಥವಾ ಅರ್ಥಮಾಡಿಕೊಳ್ಳುವುದಕ್ಕೋ? ಅರ್ಥಮಾಡಿಕೊಂಡರೆ ಓದಿದ್ದು ನೆನಪಿನಲ್ಲಿ ಉಳಿಯುವುದು ಸತ್ಯವಾದರೂ ನಾವು ಓದುವುದು ನೆನಪಿರಿಸಿಕೊಳ್ಳುವುದಕ್ಕೆ. ಓದಿ ನೆನಪಿರಿಸಿಕೊಂಡರೆ ವಿಷಯ ಅರ್ಥವಾಗುವುದೇ?

Tuesday, January 24, 2012

ಚಾರಣದ ಹೂರಣ - ೧

ರಾತ್ರಿ ಹೊರಡಬೇಕು ಎಂಬ ಕಾರಣಕ್ಕೆ ದಿನವಿಡೀ ಕೆಲಸಕ್ಕೆ ರಜೆ ಹಾಕಿ ಮಲಗಿದ್ದೇ ಆಯಿತು ಶುಕ್ರವಾರ. ಭಾಸ್ಕರನು ಎರಡು ಸರ್ತಿ ವಾಹನದ ಡ್ರೈವರನಿಗೆ ಫೋನಾಯಿಸು ಎಂದು ನೆನಪಿಸಿದಮೇಲೆ ಅವನಿಗೆ ಫೋನು ಮಾಡಿ ಸಂಜೆ ಅಂದರೆ ರಾತ್ರಿ ಹೊರಡುವ ಸಮಯವನ್ನು ಖಾತ್ರಿ ಪಡಿಸಿದೆ. ಯಥಾ ಪ್ರಕಾರ, ತೆಗೆದುಕೊಂಡು ಹೋಗುವ ವಸ್ತುಗಳನ್ನು ಬ್ಯಾಗ್ನಲ್ಲಿ ಗಡಿಬಿಡಿಯಲ್ಲಿ ತುರುಕಿಕೊಂಡು ಚಾರಣಕ್ಕೆ ಅವಶ್ಯವಿರುವ ಪ್ರಥಮ ಚಿಕಿತ್ಸಾ ಔಷಧಿಗಳನ್ನು ಹಿಡಿಸಲು ಪ್ರಯತ್ನಿಸಿದೆ. ಹೇಗೂ ಇರಲಿ ಎಂದು ಥಂಡಿ, ಜ್ವರ, ಜುಲಾಬು ಮುಂತಾದ ಸಣ್ಣಪುಟ್ಟ ತೊಂದರೆಗಳಿಗೆ ಗುಳಿಗೆಗಳನ್ನೂ ತೆಗೆದು ತುಂಬಿಕೊಂಡೆ.

ಇಷ್ಟೊಂದು ಕೆಲಸಗಳ ಮಧ್ಯದಲ್ಲೇ ಪಿ ಬಿ ನಾನು ಬರುತ್ತೇನೆಂದ ಎಂಬುದನ್ನು ಭಾಸ್ಕರ ಹೇಳಿದ. ಅವನಿಗೆ ಬರುವಂತೆ ತಿಳಿಸಿ ಅವನು ಬಂದರೆ ತೊಂದರೆ ಏನೂ ಇಲ್ಲವೆಂಬುದನ್ನು ಕೇಳಿ ತಿಳಿದು ಭಾಸ್ಕರನಿಗೆ ಹೇಳಿದೆ. ಇಲ್ಲೇ ಹೇಳಿಬಿಡುತ್ತೇನೆ, ಭಾಸ್ಕರ ನನ್ನ ಆಪ್ತ ಗೆಳೆಯ. ಪಿ ಬಿ ಯೂ ಸಹ ಮತ್ತೊಬ್ಬ ಆಪ್ತ. ಆಮೇಲೆ ನೀವು ಭಾಸ್ಕರ ಯಾರು? ಪಿ ಬಿ ಯಾರು ಎಂದು ಗೊಂದಲದಲ್ಲಿ ಬೀಳುವುದು ಬೇಡ. ಪಿ ಬಿ ಯು ಉಮ್ಮಚಗಿ ಸಂಸ್ಕತ ಪಾಠಶಾಲೆಯಲ್ಲಿ ವಿದ್ವತ್ತನ್ನು ಓದುತ್ತಿದ್ದಾನೆ. ಅವನು ಸಿರಸಿಯಿಂದ ಬರುವ ಇನ್ನೆರಡು ಜನರ ಜೊತೆ ಬರುವಂತೆ ಭಾಸ್ಕರ ವ್ಯವಸ್ಥೆ ಮಾಡಿದ.

ಯಾವತ್ತಿನಂತೆ ನಿಗದಿತ ವೇಳೆಗಿಂತ ತಡವಾಗಿ ಹೋಗಬಾರದೆಂದು ಬಿಸಿ ಅನ್ನಕ್ಕೆ ತಂಪು ಮಜ್ಜಿಗೆ ಹಾಕಿಕೊಂಡು ಲಗುಬಗೆಯಿಂದ ಉಂಡು ಗೊತ್ತಾದ ಸ್ಥಳಕ್ಕೆ ಹೋಗಿ ನಿಂತೆ. ಉಳಿದವರಿಗೂ ಬರುವಂತೆ ಫೋನಾಯಿಸಿದೆ. ಸ್ವಲ್ಪ ತಡವಾಗಿಯಾದರೂ ಗೊತ್ತುಮಾಡಿದ್ದ ವಾಹನ ಬಂದೆ ಬಿಟ್ಟಿತು. ನಾವು ವಾಹನವನ್ನೆರಿದ್ದು ರಾಜಾಜಿನಗರದಲ್ಲಿ. ಇನ್ನೆರಡು ಕಡೆ ಬರುವವರು ಕಾಯುತ್ತಿದ್ದರು. ಅವರೆಲ್ಲರನ್ನೂ ಕರೆದುಕೊಂಡು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಮಾತ್ರ ತಡವಾಗಿ ಅಂದರೆ ಕೇವಲ ಒಂದೂವರೆ ಗಂಟೆ ತಡವಾಗಿ ಬೆಂಗಳೂರನ್ನ ಬಿಟ್ಟು ಹೊರಟೆವು.

ಒಟ್ಟು ಹದಿನೆಂಟು ಜನ. ಅರ್ಧದಷ್ಟು ಜನರಿಗೆ ಒಬ್ಬರಿಗೊಬ್ಬರು ಪರಿಚಯವಿರಲಿಲ್ಲ. ಅದಕ್ಕೆ ನಾನು ಒಂದು ಸ್ವ ಪರಿಚಯದ ಒಂದು ಸಣ್ಣ ಕಾರ್ಯಕ್ರಮ ಮಾಡೋಣ ಎಂದು ಸೂಚಿಸಿದೆ. ವಿಡಂಬನೆಯೆಂದರೆ ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಟ್ಟಮೇಲೂ ನನ್ನ ನೆನಪಿನಲ್ಲಿದ್ದದ್ದು ಮೊದಲು ಗುರುತಿದ್ದವರ ಹೆಸರುಗಳು ಮಾತ್ರ! ಹೆಸರುಗಳನ್ನು ನೆನಪಿಟ್ಟುಕೊಳ್ಳುವುದರಲ್ಲಿ ನಾನು ಬಡವ. ಆದರೂ ನಾನೇನೂ ಹೆದರುವುದಿಲ್ಲ. ಮುಖಕ್ಕೆ ಒಂದು ಮೂರ್ನಾಲ್ಕು ಹೆಸರುಗಳನ್ನು ಇತ್ತು ನೋಡಿ ಹೊಂದಾಣಿಕೆಯಾಗುವ ಒಂದು ಹೆಸರನ್ನು ಕೂಗುವುದರಲ್ಲಿ ನಾನು ನಿಸ್ಸೀಮ. ಮುಖಕ್ಕೆ ಹೆಸರು ಹೇಗೆ ಹೊಂದಾಣಿಕೆಯಾಗುತ್ತದೆ ಎಂದು ಮಾತ್ರ ಕೇಳಬೇಡಿ. ಅದೊಂದು ಕಲೆ!

ವಾಹನದ ಮೇಲೆ ನಾನು, ಭಾಸ್ಕರ, ಗಣು ಒಟ್ಟಾಗಿ ಕುಳಿತು ಹರಟುತ್ತಾ ಇರುವುದನ್ನು ನೋಡಿದ ನನ್ನ "ಮನದನ್ನೆ"ಯಾದ ವಿನುತಾಳು ನಮ್ಮನ್ನು ಬೇರೆಪಡಿಸುವ ಪ್ರಯತ್ನಕ್ಕೆ ಮುಂದಾದಳು. ಅವಳದ್ದು ಮೊದಲೇ ಹೇಳಿಕೆಯಾಗಿತ್ತು. ಯಾರೂ ಗುಂಪುಗಾರಿಕೆ ಮಾಡಬಾರದು, ಎಲ್ಲರ ಜೊತೆಗೂ ಬೆರೆಯಬೇಕು ಎಂದು. ವಾಹನದ ಸೀಟುಗಳು ಆರಾಮದಾಯಕವಾಗಿ ಇರಲಿಲ್ಲವೆಂದು ಕೆಲವರಿಗೆ ನಿದ್ದೆಯೇ ಬರಲಿಲ್ಲ. ನಾನೋ ಸ್ವಲ್ಪ ಹೊತ್ತು ತೂಕಡಿಸಿ, ಸ್ವಲ್ಪ ಹೊತ್ತು ವಿನುತಾಳ ಜೊತೆ ಹರಟಿ, ಡ್ರೈವರನ ಜೊತೆ ಮಾತಾಡಿ ಕಾಲ ಕಳೆದೆ. ನಿದ್ದೆ ಮಾಡುವಾಗ ಬೇಗ ಮೂಡುವ ಬೆಳಕು ಅವತ್ತೇಕೋ ಜಾಸ್ತಿ ಸಮಯ ತೆಗೆದುಕೊಂಡಿತು. ಪೇಪರಿಲ್ಲದ ಬೆಳಗು ಆಗೇಬಿಟ್ಟಿತು.

ಚುಮು ಚುಮು ಚಳಿಯಲ್ಲಿ "ಮತ್ತಿಮನೆ"ಯನ್ನು ಹುಡುಕಿ ಮನೆಯ ಮುಂದೆ ಹೋದಾಗ ನೋಡುತ್ತೇನೆ, ನಮ್ಮ ಚಾರಣದ ಗೈಡ್ ಒಂದು ಬನಿಯನ್ ಹಾಕಿಕೊಂಡು ಅಂಗಳದಲ್ಲಿ ನಿಂತಿದ್ದಾನೆ. ಉರಿ ಮದ್ಯಾಹ್ನದ ಹೊತ್ತಿನಲ್ಲಿ ಬರಿಮೈನಲ್ಲಿ ಅಂದರೆ ಬರೆ ಒಂದು ಪಂಜಿ ಉಟ್ಟುಕೊಂಡು ತಲೆಗೆ ಒಂದು ಟೊಪ್ಪಿ ಹಾಕಿಕೊಂಡು ಅಂಗಿಯನ್ನೆನೂ ಹಾಕಿಕೊಳ್ಳದೆ ಸೈಕಲ್ ಹೊಡೆದುಕೊಂಡು ಹೋಗುವವನನ್ನು ನನ್ನ ಕಾಲೇಜು ದಿನಗಳಲ್ಲಿ ನೋಡಿರುವುದರಿಂದ ಮತ್ತು ಚಳಿಗಾಲದ ಬೆಳಿಗ್ಗೆ ಬರಿಮೈನಲ್ಲಿ ದೇವಸ್ತಾನಕ್ಕೆ ನಡೆದುಕೊಂಡು ಹೋಗುವವನನ್ನು ನೋಡಿರುವುದರಿಂದ ಅಷ್ಟೇನೂ ಆಶ್ಚರ್ಯವಾಗಲಿಲ್ಲ. ಮುಖತಃ ಅವನ ಜೊತೆ ಪರಿಚಯಿಸಿಕೊಂಡು ಉಭಯಕುಶಲೋಪರಿ ಆದಮೇಲೆ ಬೇಗ ಎಲ್ಲರು ಮುಖ ತೊಳೆದು ತಿಂಡಿ ತಿಂದು ತಯಾರಾಗಬೇಕೆಂದೂ, ಬೇಗ ಹೊರಟರೆ ಒಳ್ಳೆಯದೆಂದೂ ಹೇಳಿದ. ಮುಟ್ಟಿದರೆ ಶಾಕ್ ಹೊಡೆಯುವಂತ ತಣ್ಣೀರಿನಲ್ಲಿ ಮುಖತೊಳೆದು ಉಳಿದವರಿಗೆ ಗಡಬಡೆ ಮಾಡಹತ್ತಿದೆ. ಇವೆಲ್ಲದರ ಮಧ್ಯದಲ್ಲಿ ಚಾಣದಲ್ಲಿ ಮರದ ಕುಂಟೆಯ ಚಕ್ಕೆ ಒಡೆಯುವ ಕೈಚಳಕವನ್ನು ನಾನು ಭಾಸ್ಕರ ನೋಡಿ ಆನಂದಿಸಿದೆವು.


ಹೊಟ್ಟೆತುಂಬ ದೋಸೆ. ಬನ್ಸ್ ತಿಂದು ಬಿಸಿ ಬಿಸಿ ಚಹಾವನ್ನು ಆಸ್ವಾದಿಸಿ ಹುಮ್ಮಸ್ಸಿನಲ್ಲೇ ತಯಾರಾದೆವು. ಈ ಸಮಯದಲ್ಲಿ ಸಿರಸಿಯಿಂದ ಬಂದ ಸಂತೋಷಣ್ಣ, ಪ್ರಶಾಂತಣ್ಣ ಪರಿಚಯವಾದರು. ಪಿ ಬಿ ಯ ಜೊತೆಯೂ ಲೋಕಕಲ್ಯಾಣಾರ್ಥವಾಗಿ ಒಂದೆರಡು ಕುಶಾಲು ಆದವು. ಪಂಡಿತ್ ಅವರಿಂದ ಚಾರಣದ ಪ್ರಾಸ್ತಾವಿಕ ಭಾಷಣವಾದಮೇಲೆ ಎಲ್ಲರೂ ತಮ್ಮ ತಮ್ಮ ಮಧ್ಯಾಹ್ನದ ಬುತ್ತಿಯನ್ನು ಹಿಡಿದುಕೊಂಡು ಹೊರೆಟೇಬಿಟ್ಟೆವು. ಬಹುಷಃ ಆ ಸಮಯದಲ್ಲಿ ಪಂಡಿತರೇ ನಿಲ್ಲಿ ಎಂದರೂ ನಿಲ್ಲುವ ಮನಸ್ಥಿತಿ ನಮ್ಮದಾಗಿರಲಿಲ್ಲ.


 ಮುಂದಿನ ಕಥೆಯನ್ನು ಒಂದೇವಾಕ್ಯದಲ್ಲಿ ಹೇಳಿಮುಗಿಸಬಹುದಾದರೂ ಅದು ತರವಲ್ಲ. ಒಂದು ಇಡೀ ದಿನ ಕೊಡಚಾದ್ರಿ  ಬೆಟ್ಟವನ್ನು ಹತ್ತಿದೆವು, ಮರುದಿನ ಇಳಿದೆವು. ಆದರೆ ಬೆಟ್ಟ ಹತ್ತುವುದರಲ್ಲಿ, ಹತ್ತುವಾಗ ನಮ್ಮ ಮಾತುಕತೆ, ಸುತ್ತಲಿನ ಪರಿಸರ ಇವುಗಳ ಮಜವೇ ಬೇರೆ. ಅದನ್ನು ಒಂದುವಾಕ್ಯದಲ್ಲಿ ಹೇಳುವುದು ಸಾಧ್ಯವಿಲ್ಲ. ನಾಲ್ಕು ಗಾಲಿಯ ವಾಹನ ಹೋಗುವಷ್ಟು ಅಗಲದ ರಸ್ತೆಯಲ್ಲಿ (ನೆನಪಿಡಿ, ನಾಲ್ಕು ಗಾಲಿಯ ವಾಹನ ಹೋಗುವಷ್ಟು ಅಗಲದ ಎಂದು ಹೇಳಿದೆ. ಹೋಗುವಂತಹ ರಸ್ತೆ ಎಂದು ಹೇಳಿಲ್ಲ) ಪ್ರಾರಂಭವಾಗಿ, ಮನುಷ್ಯ ಮಾತ್ರದ ಜೀವ ಹೋಗುವಂತಹ ದಾರಿಯಲ್ಲಿ ನಮ್ಮ ಪ್ರಯಾಣ ಸಾಗಿತು. ಮೊದಲು ಪಂಡಿತ ಅವರ ಜೊತೆ ನಾನು, ಭಾಸ್ಕರ, ಪಿ ಬಿ, ಗಣು ಮುಂದೆ ಮುಂದೆ ಹೋದೆವು. ಹೋಗುವಾಗ ಪಂಡಿತ್ ಅವರ ಜೊತೆ ಪಿ ಬಿ ಸುಮಾರು ಹರಟಿದ. ಅವರು ಪಿ ಬಿ ಯ ಮಾತಿಗೆ ಮೋಡಿಗೊಳಗಾದರು. ಪಿ ಬಿ ಯ ಆಶೀರ್ವಚನವೋ ವರ್ಣಿಸಲಸದಳ. ಸುಮಾರು ಅಪರಾಹ್ನದ ಸಮಯಕ್ಕೆ ಹಿಡ್ಲುಮನೆ ಜಲಪಾತವನ್ನ ತಲುಪಿದೆವು.

ಸೂರ್ಯ ನೆತ್ತಿಯಮೇಲೆ ಇರುವಂತಹ ಸಮಯದಲ್ಲಿ ಬಿಸಿಲು ನೆಲ ತಾಕದಷ್ಟು ಒತ್ತೊತ್ತಾಗಿದ್ದವು ಮರಗಳು. ಅವುಗಳ ಮಧ್ಯದಲ್ಲಿ ಬಂಡೆಯ ಮೇಲಿಂದ ಜಿಗಿಯುತ್ತಿತ್ತು ನೀರಿನ ತೊರೆ. ಅಷ್ಟೇನೂ ದೊಡ್ಡ ಜಲಪಾತವಲ್ಲದಿದ್ದರೂ ಸುಂದರವಾಗಿತ್ತು. ಜಲಪಾತದ ಕೆಳಗೆ ಹೋಗಿ ನಿಲ್ಲುವ ಅವಕಾಶವಿತ್ತು. ದೂರದಿಂದ ಒಂದೆರಡು ಫೋಟೋ ಕ್ಲಿಕ್ಕಿಸಿ, ನೀರಿಗೆ ಇಳಿದೇಬಿಟ್ಟೆವು. ಜಲಪಾತದ ಕೆಳಗೆ ಹೋಗಿ ನಿಂತರೆ, ನಿಜ ಹೇಳುತ್ತೇನೆ, ಐಸ್ ಮಧ್ಯದಿಂದ ತೆಗೆದ ಕೊಡೆ ಕಡ್ಡಿ ಚುಚ್ಚಿದಂತಾಗುತ್ತಿತ್ತು, ಮಜವೂ ಆಗುತ್ತಿತ್ತು. ಭಾಸ್ಕರ ಆದರ್ಶನನ್ನು ಎಳೆದು ನೀರಿನ ಕೆಳೆಗೆ ನಿಲ್ಲಿಸಿ ಮಜವಾಗುತ್ತದೆ ಎಂದಾಗ "ಇವನಿಗೆ ಏನೋ ಕಚ್ಚಿದೆ" ಎಂದು ಆದರ್ಶನು ನಿಷ್ಪಕ್ಷವಾದ ತೀರ್ಮಾನ ತೆಗೆದುಕೊಂಡುಬಿಟ್ಟ.
 ಒದ್ದೆ ಮೈನಲ್ಲೇ ಜಲಪಾತದ ಮೇಲ್ಬದಿಗೆ ಹೋಗಿ, ಮದ್ಯಾಹ್ನದ ಬುತ್ತಿಯನ್ನು ತಿಂದೆವು. ಹಸಿವಾಗಿದ್ದಕ್ಕೋ ಏನೋ ಮತ್ತಿಮನೆಯ ಚಪಾತಿ, ಕಾಯಿ ಹೂರಣ ಬಾಯಿಗೆ, ಹೊಟ್ಟೆಗೆ ಮ್ರಷ್ಟಾನ್ನವಾಗಿತ್ತು. ಅದರ ನಿಜವಾದ ರುಚಿ ಹೇಗಿತ್ತೆಂದು ಹೇಳಲು ಸಾದಾ ದಿನ ತಿಂದು ನೋಡಬೇಕು. ಊಟವಾದ ತಕ್ಷಣ ಮತ್ತೆ ಮೇಲೆ ಹತ್ತಲು ಶುರು. ಕಡಿದಾದ ಬೆಟ್ಟದ ದಾರಿ, ಉಂಡ ಹೊಟ್ಟೆ, ಮುಷ್ಕರ ಹೂಡುತ್ತಿರುವ ಕಾಲುಗಳು, ಮುಚ್ಚದ ಪಂಡಿತರ ಬಾಯಿ, ನೆಲದಮೇಲಿರುವಾಗ ಮಲ್ಲಿಗೆಯಷ್ಟು ಹಗುರವಾಗಿಯೂ, ಬೆನ್ನಿಗೆ ಹಾಕಿಕೊಂಡಾಗ ಮಣ ಭಾರವೆನ್ನಿಸುವ ಬ್ಯಾಗ್ ಆಹಾ ಏನು ಕೇಳುತ್ತೀರಾ ಇವುಗಳ ಕೂಡುವಿಕೆಯನ್ನ.


"ಭೂಮಿ ಗುಂಡಗಿದೆ ಎಂದು ಶಾಲೆಯಲ್ಲಿ ಓದಿ ತಿಳಿದಿದ್ದೆ ಆದರೆ ಇಷ್ಟೊಂದು ಎತ್ತರವೂ ಇದೆ ಎಂಬುದು ಗೊತ್ತಿರಲಿಲ್ಲ" ಇದು ಸಂತೋಷಣ್ಣನ ಅಂಬೋಣ. ಹೇಗೋ ಹೇಗೋ ನಡೆದು ಕೊಡಚಾದ್ರಿಯ ದೇವಸ್ಥಾನದ ಹತ್ತಿರವಿರುವ ಐ ಬಿ ಗೆ ಬಂದೆವು.
ನಾಲ್ಕು ಗಂಟೆ ಸುಮಾರಿಗೇ ನಮ್ಮ ಅಳಿದುಳಿದ ಶಕ್ತಿ ನಶಿಸುತ್ತಾ ಬಂದಿತ್ತು. ಬೆನ್ನಿಗಿರುವ ಬ್ಯಾಗ್ ತಗೆದಿಟ್ಟು, ನೀರಿನಲ್ಲಿ ಮುಖ ತೊಳೆದುಕೊಂಡು, ನೀರು ಕುಡಿದು ಕುಳಿತು ಸುಧಾರಿಸಿಕೊಂಡೆವು. ಬೆಟ್ಟವೇರುವುದು ಎಷ್ಟೇ ಕಷ್ಟವಾಗಿದ್ದರೂ ಸುತ್ತಲಿನ ನೋಟ ಮಾತ್ರ ಚೇತೋಹಾರಿಯಾಗಿತ್ತು. ಮೇಲೇರಲು ಅದು ಮೌನವಾಗಿ ಕೊಟ್ಟ ಉತ್ಸಾಹವೇ ಕಾರಣ ಜೊತೆಗೆ ಸಂತೋಷಣ್ಣ, ಪ್ರಶಾಂತಣ್ಣ, ಪಿ ಬಿ ಯವರ ಸಮಯೋಚಿತ ಅಧಿಕ ಪ್ರಸಂಗಗಳು.


ಇಲ್ಲಿಗೆ ಬೆಟ್ಟವೇರುವುದು ಒಂದು ಹಂತಕ್ಕೆ ಬಂತು ಇನ್ನು ಸ್ವಲ್ಪ ಮೇಲೆ ಹೋದರೆ ಸರ್ವಜ್ಞ ಪೀಠ ಸಿಕ್ಕುತ್ತದೆ ಎಂದು ಪಂಡಿತ್ ಜಿ ಹೇಳಿದರಾದರೂ "ಸ್ವಲ್ಪ ಮೇಲೆ ಹೋದರೆ" ಎನ್ನುವುದನ್ನು ಯಾರೂ ನಂಬಲಿಲ್ಲ. ವಿನುತಾಳು ಮೊದಲು ಸರ್ವಜ್ಞ ಪೀಠವನ್ನು ನೋಡಿದ್ದಾಳೆ ಎಂದು ಅವಳ ಮುಂದಾಳತ್ವದಲ್ಲಿ ಸರ್ವಜ್ಞ ಪೀಠಕ್ಕೆ ಹೊರಟೆವು. ಕಳೆದ ವರ್ಷ ತಲಕಾವೇರಿ ಪಕ್ಕಕ್ಕಿರುವ ಬೆಟ್ಟ ಹತ್ತುತ್ತಿರುವಾಗ "ಇನ್ನೂ ಸ್ವಲ್ಪ ಮೇಲೆ ಹೋದರೆ ನಾವು ನಮ್ಮ ಪೂರ್ವಜರನ್ನು ಮಾತನಾಡಿಸಿಕೊಂಡು ಬರಬಹುದೇನೋ" ಎಂದು ಗಣು ಹೇಳಿದ್ದ. ಅದನ್ನು ನೆನಪಿಸಿಕೊಂಡು ನಕ್ಕೆವು. ಸೂರ್ಯ ಮುಳುಗಲು ಇನ್ನೇನು ಕೆಲವೇ ನಿಮಿಷಗಳಿದ್ದವು.

                                       --ಓದುಗರ ಅಭಿಪ್ರಾಯ ತಿಳಿದು ಮುಂದಿನ ಭಾಗ ಬರೆಯುವುದೋ ಬೇಡವೋ ನಿರ್ಧರಿಸುತ್ತೇನೆ.

Monday, January 23, 2012

ರೈಲ್ವೆ ಮಹಿಮೆ!

ಕಳೆದ ವರ್ಷ ನಾನು ವಾಸಿಸುತ್ತಿದ್ದ ಮನೆ ರೈಲ್ವೆ ಹಳಿಯ ಸಮೀಪದಲ್ಲಿತ್ತು. ರಾತ್ರಿ ಮಲಗಿ ಇನ್ನೇನು ನಿದ್ರೆ ಬಂತು ಎನ್ನುವಾಗ "ಕೂ" ಎಂದು ಕೂಗುತ್ತಾ ರೈಲು ಹೋಗುತ್ತಿತ್ತು. ಒಮ್ಮೊಮ್ಮೆ ಆಶ್ಚರ್ಯ ಆಗುತ್ತಿತ್ತು,ನಾನು ಮಲಗಲು ಅನುವಾಗುವುದು ಈ ರೈಲ್ವೆ ಇಲಾಖೆಯವರಿಗೆ ಹೇಗೆ ಗೊತ್ತಾಗುತ್ತದೆ? ಎಂದು. ಎದುರುಗಡೆಯಿಂದ ಇನ್ನೊಂದು ರೈಲು ಬರುವುದಿಲ್ಲ, ಮುಂದೆ ಹೋಗುತ್ತಿರುವ ರೈಲಿಗೆ ದಾರಿ ಬಿಡಿ ಎಂದು ಕೇಳುವ ಪ್ರಮೇಯವಿಲ್ಲ. ಆದರೂ ಈ ರೈಲಿಗೆಕೆ ಕರೆಗಂಟೆ ಇರುತ್ತದೆಯೋ ಎಂದು ಸಿಟ್ಟು ನೆತ್ತಿಗೆರುತ್ತಿತ್ತು. ಹೆಚ್ಚುಕಡಿಮೆ ಶಬ್ದ ಮಾಡದೆ ಓಡಾಡುವ ವಾಹನಗಳು ರಸ್ತೆಯ ಮೇಲೆ ತುಂಬಿ ತುಳುಕುತ್ತಿರುವಾಗ ಯಾವ ತಂತ್ರಜ್ಞನೂ ಶಬ್ದರಹಿತವಾದ ರೈಲನ್ನೇಕೆ ಕಂಡುಹಿಡಿಲ್ಲವೋ ದೇವರಿಗೆ ಗೊತ್ತು. ಕೆಲವೊಮ್ಮೆ ಈ "ಇಂಜಿನೀಯರುಗಳು" ವಿಪರೀತ ಭೇದ ಮಾಡುತ್ತಾರೆ ಅನಿಸುತ್ತದೆ.

ನನಗೇಕೋ ರೈಲಿನಮೇಲೆ ವಿಶ್ವಾಸವೇ ಇಲ್ಲ. ರೈಲ್ವೆ ಚಾಲಕನು ಪಕ್ಕದ ಹಳಿಯಮೇಲೆ ಎದುರಾಗಿ ಬರುತ್ತಿರುವ ರೈಲನ್ನು ನೋಡಿ ಹೆದರಿ ಗಾಬರಿಗೊಂಡು ಎಲ್ಲಾದರೂ ತಾನು ಹೋಗುತ್ತಿರುವ ರೈಲಿನ ದಿಕ್ಕನ್ನು ಬದಲಿಸಿದ ಎಂತಾದರೆ, ಪ್ರಯಾಣಿಕರೆಲ್ಲರಿಗೂ ಒಂದೇ ಸಲ ಮುಕ್ತಿ ದೊರಕುತ್ತದೆ. ರೈಲಿನ ಹಳಿ ಬೇರೆ ಕಬ್ಬಿಣದ್ದು. ರೈಲಿನ ಗಾಲಿಗಳೂ ಕಬ್ಬಿಣದ್ದು. ಎಲ್ಲಾದರೂ ಮಳೆಗಾಲದಲ್ಲಿ "ಸಿಡಿಲು" ಹೊಡೆಯಿತು ಎಂತಾದರೆ... ಬಚಾವಾಗುವ ಪ್ರಶ್ನೆಯೇ ಇಲ್ಲಾ. ಸುಟ್ಟು ಕರಕಲಾಗುವುದೊಂದೇ ದಾರಿ.

ಸಾಕಪ್ಪ ಸಾಕು ಈ ರೈಲಿನ ಸಹವಾಸ..

Thursday, January 19, 2012

ಗೋಳಾಕೃತಿ!!

ಉರುಳಿಸು ಎನ್ನುವ ಶಬ್ದ ಮೊದಲು ಹುಟ್ಟಿತೋ ಅಥವಾ ಗೋಳಾಕೃತಿ ಮೊದಲೋ ಎನ್ನುವುದು ಕೋಳಿ ಮೊದಲೋ ಮೊಟ್ಟೆಯೋ ಎನ್ನುವಷ್ಟೇ ಕ್ಲಿಷ್ಟ. ಏಕೆಂದರೆ ಆಕೃತಿಯಲ್ಲಿ ಗೊಳವಾಗಿರುವುದನ್ನು ಮಾತ್ರ ಉರುಳಿಸಲು ಸಾಧ್ಯ. ಚೌಕವೋ, ತ್ರಿಕೊನವೋ ಆದರೆ ಗೋಳವನ್ನು ಉರುಳಿಸಿದಷ್ಟು ಸಲೀಸಾಗಿ ಉರುಳಿಸಲಸಾಧ್ಯ. ಷಟ್ಭುಜ, ಅಷ್ಟಭುಜ ಆಕೃತಿಗಳು ಗೊಳಕ್ಕೆ ಹತ್ತಿರದ ಆಕ್ರುತಿಗಳೇ ಆದರೂ ಗೋಳ ಗೋಳವೇ.

ತ್ರಿಕೊನಾಕ್ರತಿಯನ್ನೂ ಸಲೀಸಾಗಿ ಉರುಳಿಸಬಹುದು ಎಂದಾಗಿದ್ದರೆ, ಕಲ್ಪಿಸಿಕೊಳ್ಳಿ, ಎತ್ತಿನಗಾಡಿಗೆ ತ್ರಿಕೋನಾಕಾರದ ಗಾಲಿ!!!

ದೇವರು ದೊಡ್ಡವನು. ದೇವರಿಗೆ ಕಲಾ ಪ್ರಜ್ಞೆಯಿದೆ.ಸಧ್ಯ!!